Site icon Vistara News

ವಿಸ್ತಾರ ನ್ಯೂಸ್‌ನ ನಮ್ಮೂರ ಶಾಲೆ-ನಮ್ಮೆಲ್ಲರ ಶಾಲೆ ಅಭಿಯಾನ: ಶಿಕ್ಷಣ ಇಲಾಖೆ ಜತೆ ಮಹತ್ವದ ಒಡಂಬಡಿಕೆ

Vistara Campaign

ಬೆಂಗಳೂರು: ವಿಸ್ತಾರ ನ್ಯೂಸ್‌ ಆರಂಭಿಸಿರುವ ‘ನಮ್ಮೂರ ಶಾಲೆ-ನಮ್ಮೆಲ್ಲರ ಶಾಲೆ’ ಸರ್ಕಾರಿ ಶಾಲಾ ದತ್ತು ಅಭಿಯಾನವನ್ನು (Vistara Campaign) ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ವಿಸ್ತಾರ ನ್ಯೂಸ್​ ಮತ್ತು ಬಾಲ ಉತ್ಸವ ಸಂಸ್ಥೆ ಒಡಂಬಡಿಕೆ ಮಾಡಿಕೊಂಡಿವೆ.

ವಿಧಾನಸೌಧದಲ್ಲಿ ಮಂಗಳವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ.ನಾಗೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಇಲಾಖೆಯ ಅಧಿಕಾರಿಗಳ ಮತ್ತು ವಿಸ್ತಾರ ನ್ಯೂಸ್​ ಹಾಗೂ ಬಾಲ ಉತ್ಸವ ಸಂಸ್ಥೆಯ ಪ್ರತಿನಿಧಿಗಳ ಉನ್ನತ ಮಟ್ಟದ ಸಭೆಯಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಒಪ್ಪಂದ ಪತ್ರವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರಾದ ಬಿ.ಬಿ.ಕಾವೇರಿ ಮತ್ತು ಬಾಲ ಉತ್ಸವ ಸಂಸ್ಥೆಯ ಮುಖ್ಯಸ್ಥ ರಮೇಶ್​ ಬಾಲಸುಂದರಂ ಹಸ್ತಾಂತರಿಸಿಕೊಂಡರು.

‘ನಮ್ಮೂರಶಾಲೆ-ನಮ್ಮೆಲ್ಲರ ಶಾಲೆ’ ಸರ್ಕಾರಿ ಶಾಲಾ ದತ್ತು ಅಭಿಯಾನಕ್ಕೆ ರಾಯಭಾರಿ ಆಗಿದ್ದು ನನಗೆ ಸಂತಸ ತಂದಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಹೆಣ್ಣು ಮಕ್ಕಳು ಶಾಲೆಗೆ ಹೋಗುವಂತವ ವಾತಾವರಣ ನಿರ್ಮಾಣ ಮಾಡಬೇಕು. ಈ ಕಾರ್ಯದಲ್ಲಿ ನಾನು ಕೂಡ ಭಾಗಿಯಾಗುತ್ತಿದ್ದೇನೆ ಎಂಬುದು ನನಗೆ ಹೆಮ್ಮೆಯ ವಿಷಯ.
ಪ್ರಣೀತಾ ಸುಭಾಷ್‌, ಖ್ಯಾತ ನಟಿ

ಈ ಸಂದರ್ಭದಲ್ಲಿ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಕುರಿತು ಶಿಕ್ಷಣ ಕ್ಷೇತ್ರದ ಗಣ್ಯರು, ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಯಿತು. ಸಚಿವರು ಮತ್ತು ಇಲಾಖೆಯ ಅಧಿಕಾರಿಗಳು ಈ ಸಮಾಲೋಚನೆಯಲ್ಲಿ ಭಾಗವಹಿಸಿ, ಅಭಿಯಾನವನ್ನು ಯಶಸ್ವಿಯಾಗಿಸಲು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಘೋಷಿಸಿದರು.

ಸಭೆಯಲ್ಲಿ ಮಾತನಾಡಿದ ಸಚಿವ ಬಿ.ಸಿ. ನಾಗೇಶ್‌, ರಾಜ್ಯದ ಶೇ.60 ಶಾಲೆಗಳಲ್ಲಿ ಮೂಲಸೌಕರ್ಯ ಉತ್ತಮವಾಗಿದೆ. ಆದರೆ ನಿರ್ವಹಣೆಯಲ್ಲಿ ಸಮಸ್ಯೆಯಿದೆ. ಸರ್ಕಾರದ ಶಾಲೆಗಳ ಜೊತೆಗೆ ಖಾಸಗಿಯವರು, ಶಾಸಕರು, ಜನಪ್ರತಿ ನಿಧಿಗಳು ಸಂಪರ್ಕ ಹೊಂದಿರುವ ಶಾಲೆಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಹಿನ್ನೆಲೆಯಲ್ಲಿ ವಿಸ್ತಾರ ನ್ಯೂಸ್‌ ನಡೆಸುತ್ತಿರುವ ಈ ಅಭಿಯಾನ ಬಹಳ ಮಹತ್ವದ್ದು ಎಂದರು.

ಅಂಗವಿಕಲ ಮಕ್ಕಳು ಕೂಡ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವಂತಾಗಬೇಕು. ಅತ್ಯುತ್ತಮ ಶಿಕ್ಷಣ ನೀಡುವ ಮೂಲಕ ನಾವು ನಮ್ಮ ಭಾಷೆಯನ್ನ ಬೆಳೆಸಬೇಕು. ರಾಜಕಾರಣಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಓದಿಸಬೇಕು. ಆಗ ತನ್ನಿಂದ ತಾನೇ ಅಲ್ಲಿಯ ಪರಿಸ್ಥಿತಿ ಬದಲಾಗುತ್ತದೆ. ವಿಸ್ತಾರ ನ್ಯೂಸ್ ನ ಈ ಅಭಿಯಾನಕ್ಕೆ ಉಪ್ಪಿ ಫೌಂಡೇಷನ್ ಸಂಪೂರ್ಣ ಸಹಕಾರ ನೀಡುತ್ತದೆ.
ಪ್ರಿಯಾಂಕ ಉಪೇಂದ್ರ, ಖ್ಯಾತ ನಟಿ

ಕೆಲವೆಡೆ ಒಂದೆರೆಡು ಮಕ್ಕಳಿರುವ ಶಾಲೆಗಳನ್ನು ಕೂಡ ಸರ್ಕಾರ ನಡೆಸುತ್ತಿದೆ. ಎಲ್ಲರಿಗೂ ಶಿಕ್ಷಣ ದೊರೆಯುವಂತೆ ಮಾಡುವುದು ಸರ್ಕಾರದ ಜವಾಬ್ದಾರಿ. ನಮ್ಮ ರಾಜ್ಯದ ಕೆಲವು ಶಾಲೆಗಳ ಗುಣಮಟ್ಟ ರಾಷ್ಟ್ರೀಯ ಸರಾಸರಿಗಿಂತ ಮೇಲ್ದರ್ಜೆಯಲ್ಲಿದೆ ಎಂದು ವಿವರಿಸಿದ ನಾಗೇಶ್‌, ಶಾಲೆಗಳನ್ನು ಜನಸಮುದಾಯದೊಂದಿಗೆ ಸೇರಿಕೊಂಡು ಸಮಗ್ರವಾಗಿ ಅಭಿವೃದ್ಧಿಪಡಿಸುವ ವಿಸ್ತಾರ ನ್ಯೂಸ್‌ನ ಈ ಅಭಿಯಾನದ ಉದ್ದೇಶ ಶ್ರೇಷ್ಠವಾದದ್ದು. ಇದಕ್ಕಾಗಿ ಶಿಕ್ಷಣ ಸಚಿವನಾಗಿ ವಿಸ್ತಾರ ಮಾಧ್ಯಮಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದರು.

ಗುಣಮಟ್ಟದ ಶಿಕ್ಷಣವೇ ಗುರಿ
ಸಭೆಯ ಆರಂಭದಲ್ಲಿ ನಮ್ಮೂರ ಶಾಲೆ-ನಮ್ಮೆಲ್ಲರ ಶಾಲೆ ಸರ್ಕಾರಿ ಶಾಲಾ ದತ್ತು ಅಭಿಯಾನದ ಕುರಿತು ಮಾತನಾಡಿದ ಈ ಅಭಿಯಾನದ ರೂವಾರಿ, ವಿಸ್ತಾರ ನ್ಯೂಸ್​ನ ಸಿಇಒ-ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ, ದೇಶದಲ್ಲಿಯೇ ನಮ್ಮ ರಾಜ್ಯದ ಶಿಕ್ಷಣ ವ್ಯವಸ್ಥೆ ಉತ್ತಮವಾಗಿದೆ. ಇದನ್ನು ಇನ್ನಷ್ಟು ಬಲಪಡಿಸುವ ಮೂಲಕ ಪ್ರತಿಯೊಬ್ಬರಿಗೂ ಗಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ.
ಸರ್ಕಾರಿ ಶಾಲೆಗಳು ಸಾರ್ವಜನಿಕರ ಶಾಲೆಗಳಾಗಿರುವುದರಿಂದ ಸಾರ್ವಜನಿಕರೇ ಒಳಗೊಂಡು ಇವುಗಳನ್ನು ಮಾದರಿ ಶಾಲೆಗಳಾಗಿ ರೂಪಿಸುವುದು ಹಾಗೂ ಗುಣಮಟ್ಟದ ಶಿಕ್ಷಣ ಒದಗಿಸುವಂತಾಗಬೇಕು ಎಂಬುದು ಈ ಅಭಿಯಾನದ ಉದ್ದೇಶವಾಗಿದೆ. ದಾನಿಗಳ ನೆರವಿನಿಂದ ಬಾಲ ಉತ್ಸವ ಸಂಸ್ಥೆ ಇದನ್ನು ತಳಮಟ್ಟದಲ್ಲಿ ಕಾರ್ಯಗತಗೊಳಿಸುತ್ತದೆ ಎಂದರು.

ಈ ಅಭಿಯಾನಕ್ಕೆ 2022ರ ನವೆಂಬರ್​ 19ರಂದು ವಿಸ್ತಾರ ನ್ಯೂಸ್‌ ಸ್ಟುಡಿಯೋದಲ್ಲಿ ಸಚಿವರಾದ ನಾಗೇಶ್‌ ಅವರೇ ಉದ್ಘಾಟಿಸಿದ್ದರು. ಇದುವರೆಗೆ 60ಕ್ಕೂ ಹೆಚ್ಚು ಗಣ್ಯರು ಪ್ರತಿದಿನ ಬೆಳಗ್ಗೆ “ನ್ಯೂಸ್​ ಮಾರ್ನಿಂಗ್ʼʼ​ ಕಾರ್ಯಕ್ರಮದ ನೇರ ಪ್ರಸಾರದಲ್ಲಿ ಆಗಮಿಸಿ ಸರ್ಕಾರಿ ಶಾಲೆ ಅಭಿವೃದ್ಧಿಪಡಿಸಲು, ದತ್ತು ಪಡೆದುಕೊಳ್ಳಲು ಬದ್ಧತೆ ಪ್ರದರ್ಶಿಸಿದ್ದಾರೆ ಎಂದು ವಿವರಿಸಿದರು.

ಕುಡಚಿ ಶಾಸಕ ಪಿ.ರಾಜೀವ್​ ಅವರು ಓದಿದ, ಸೊರಬ ತಾಲೂಕಿನ ಕುಪ್ಪಗಡ್ಡೆ ಪ್ರಾಥಮಿಕ ಶಾಲೆಯನ್ನು ಮಾದರಿ ಶಾಲೆಯಾಗಿ ರೂಪಿಸುವ ಪಣತೊಟ್ಟಿದ್ದು, ಈ ಶಾಲೆಯನ್ನು ಈಗಾಗಲೇ ಅವರು ದತ್ತು ಪಡೆದುಕೊಂಡಿದ್ದಾರೆ. ಮಾದರಿ ಶಾಲೆ ರೂಪಿಸುವ ನಿಟ್ಟಿನಲ್ಲಿ ಶಾಲೆಯನ್ನು ಗುರುತಿಸಿ ಆಗಬೇಕಿರುವ ಕೆಲಸಗಳ ಪಟ್ಟಿ ಸಿದ್ಧಪಡಿಸುವುದು, ಸಮಗ್ರ ಅಭಿವೃದ್ಧಿ ನೀಲಿನಕ್ಷೆ ತಯಾರಿಸುವುದು, ಸಂಪನ್ಮೂಲ ಕ್ರೋಡೀಕರಣ ಹಾಗೂ ಯೋಜನೆಯನ್ನು ಅನುಷ್ಠಾನಕ್ಕೆ ತರುವಕಾರ್ಯವನ್ನು ವಿಸ್ತಾರ ನ್ಯೂಸ್​ನ ಮಾರ್ಗದರ್ಶನದಲ್ಲಿ ಬಾಲ ಉತ್ಸವ ಸಂಸ್ಥೆ ಮಾಡಲಿದೆ ಎಂದರು.

ಬಾಲ ಉತ್ಸವ ಸಂಸ್ಥೆ ಮುಖ್ಯಸ್ಥ ರಮೇಶ್​ ಬಾಲಸುಂದರಂ, ರಾಜ್ಯದಲ್ಲಿ ಸುಧಾರಣೆ ಆಗಬೇಕಿರುವ ಶಾಲೆಗಳು ಹಾಗೂ ಪ್ರಸ್ತುತ ಅಭಿಯಾನದಡಿ ಅಭಿವೃದ್ಧಿಯಾಗಲಿರುವ ಶಾಲೆಗಳ ವಿವರವನ್ನು ಪಿಪಿಟಿ ಮೂಲಕ ಸಭೆಗೆ ನೀಡಿದರು.
ಸಭೆಯಲ್ಲಿ ಪಿಇಎಸ್​ ​ಗ್ರೂಪ್ ನ ಕುಲಾಧಿಪತಿ ಡಾ. ದೊರೆಸ್ವಾಮಿ ಎಂ.ಆರ್., ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಚೇರ್ಮನ್‌ ಡಾ. ಕೆ. ಹರೀಶ್‌, ಮಂಡ್ಯದ ಎಂ ಆರ್ ​ಗ್ರೂಪ್ ಆಫ್‌ ಕಂಪನಿಯ ಸಿಎಂಡಿ ಮಹಾಲಿಂಗೇಗೌಡ, ಬೆಂಗಳೂರಿನ ಡಿ.ಎಸ್‌. ಮ್ಯಾಕ್ಸ್‌ನ ಕಾರ್ಯನಿರ್ವಹಕ ನಿರ್ದೇಶಕ ಎಸ್‌.ಪಿ.ದಯಾನಂದ್‌, ಬೈಜುಸ್‌ನ ಉಪಾಧ್ಯಕ್ಷ ಮಾನ್ಸಿ ಕಸ್ಲಿವಾಲ್‌, ಸೌಂದರ್ಯ ಗ್ರೂಪ್‌ ಆಫ್‌ ಕಂಪನಿಗಳ ಸಿಇಓ ಕೀರ್ತನ್‌ ಕುಮಾರ್‌, ವೇದ ಆಯುರ್ವೇದದ ವ್ಯವಸ್ಥಾಪಕ ನಿರ್ದೇಶಕ ಡಾ. ರವಿರಾಜ್‌, ಮೈಸೂರಿನ ನೈಪುಣ್ಯ ಸ್ಕೂಲ್‌ ಆಫ್‌ ಎಕ್ಸಲೆನ್ಸ್‌ನ ಅಧ್ಯಕ್ಷ ಆರ್‌. ರಘು, ವಿಸ್ಟಾಸ್‌ ಲರ್ನಿಂಗ್ ಆ್ಯಪ್ ನ ಸಂಸ್ಥಾಪಕರು ಮತ್ತು ಸಿಇಒ ಅರ್ಜುನ್‌ ಸಾಮ್ರಾಟ್‌ ಉಪಸ್ಥಿತರಿದ್ದು ಅಮೂಲ್ಯ ಸಲಹೆ ನೀಡಿದರು.

ನನ್ನದೇ ಖಾಸಗಿ ಶಾಲೆಗಳು ಇವೆ. ಆದರೂ ನಾನು ವಿಸ್ತಾರ ನ್ಯೂಸ್‌ನ ಈ ಅಭಿಯಾನದಲ್ಲಿ ಭಾಗಿಯಾಗಿ ಸರ್ಕಾರಿ ಶಾಲೆಗಳ್ನು ದತ್ತು ಪಡೆದುಕೊಂಡಿದ್ದೇನೆ. ಈ ಬಾರಿ ನಾಲ್ಕು ಶಾಲೆಗಳನ್ನು ದತ್ತು ಪಡೆಯಲು ಈಗಾಗಲೇ ತೀರ್ಮಾನ ತೆಗೆದುಕೊಂಡಿದ್ದೇನೆ. ಮುಂದೆ ಹತ್ತು ಶಾಲೆಗಳನ್ನು ದತ್ತು ಪಡೆದುಕೊಳ್ಳುತ್ತೇನೆ.
ಡಾ. ಟಿ. ವೇಣುಗೋಪಾಲ್, ಚೇರ್ಮನ್, ನ್ಯೂ ಬಾಲ್ಡ್​​ವಿನ್‌ ಇಂಟರ್​​ನ್ಯಾಷನಲ್‌ ಸ್ಕೂಲ್‌, ಆನೇಕಲ್

ವಿಸ್ತಾರ ಮೀಡಿಯಾ ಪ್ರೈವೆಟ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಎಚ್‌.ವಿ. ಧರ್ಮೇಶ್‌, ವಿಸ್ತಾರ ನ್ಯೂಸ್‌ನ ನಿರ್ದೇಶಕ (ಬಿಸ್ನೆಸ್‌) ವಿನಯ್‌ ಶೇಷಗಿರಿ, ಮಾರ್ಕೆಟಿಂಗ್‌ ವಿಭಾಗದ ಉಪಾಧ್ಯಕ್ಷ ನವನೀತ್‌, ವಿಸ್ತಾರ ನ್ಯೂಸ್‌ ಸ್ಪೆಷಲ್‌ ಆಪರೇಷನ್ಸ್‌ ಸಂಪಾದಕ ಕಿರಣ್‌ಕುಮಾರ್‌ ಡಿ.ಕೆ., ಬಾಲ ಉತ್ಸವದ ಸಹ ಸಂಸ್ಥಾಪಕಿ ಬಿನು ವರ್ಮಾ ಉಪಸ್ಥಿತರಿದ್ದರು.

ಅಭಿಯಾನ ಯಶಸ್ಸುಗೊಳಿಸಲು ಕಾರ್ಯತಂತ್ರದ ಬಗ್ಗೆ ಸ್ಪಷ್ಟತೆ ಇರಬೇಕು. ನಾವೇ ಒಂದಿಷ್ಟು ಶಾಲೆಗಳನ್ನು ಆಯ್ಕೆಮಾಡಿಕೊಂಡು ಶಾಲೆಗೆ ಏನು ಬೇಕು ಅನ್ನುವುದನ್ನು ಮೊದಲು ನಿರ್ಧಾರ ಮಾಡೋಣ. ಇದನ್ನು ಪ್ರಚಾರ ಮಾಡಿದರೆ, ಕಾರ್ಯಕ್ರಮ ನೋಡಿದವರು ನಾವು ಒಂದು ಶಾಲೆ ದತ್ತು ತೆಗೆದುಕೊಳ್ಳೋಣ ಎಂದು ಮುಂದೆ ಬರುತ್ತಾರೆ. ಈ ರೀತಿಯ ವಿಶೇಷವಾದ ಕಾರ್ಯಕ್ರಮ ಮಾಡುತ್ತಿರುವ ವಿಸ್ತಾರ ನ್ಯೂಸ್‌ನ ವಿನೂತನ ಪ್ರಯತ್ನ ಖಂಡಿತಾ ಯಶಸ್ವಿಯಾಗುತ್ತದೆ.
ಪಿ. ರಾಜೀವ್ , ಶಾಸಕರು, ಕುಡಚಿ

2023ನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಾಲೆಗಳ ಶೌಚಾಲಯ ವರ್ಷವಾಗಿ ಘೋಷಣೆ ಮಾಡುವುದರ ಮೂಲಕ ಶೌಚಾಲಯಗಳ ನಿರ್ಮಾಣ, ನಿರ್ವಹಣೆಗೆ ಗಮನ ನೀಡಬೇಕು. ತರಗತಿ ಕೊಠಡಿಗಳ ನಿರ್ಮಾಣಕ್ಕೂ ನರೇಗಾ ಅನುದಾನ ದೊರೆಯುವಂತೆ ತಿದ್ದುಪಡಿ ಮಾಡಬೇಕು. ಸಿಎಸ್‌ಆರ್ ಮತ್ತು ಶಾಸಕರ ನಿಧಿಯನ್ನು ಶಾಲೆಗಳ ಅಭಿವೃದ್ಧಿಗೆ ಬಳಸುವಂತಾಗಲು ಸೂಕ್ರ ಕ್ರಮ ತೆಗೆದುಕೊಳ್ಳಬೇಕು.
ಶ್ರೀನಿವಾಸ ಮಾನೆ, ಶಾಸಕರು, ಹಾನಗಲ್

ನಾನು ಚಾಮರಾಜನಗರ ಜಿಲ್ಲೆಯ ಒಂದು ಶಾಲೆ ದತ್ತು ತೆಗೆದುಕೊಂಡಿದ್ದೇನೆ. ಬೆಂಗಳೂರು ಸಮೀಪ ಒಂದು ಶಾಲೆಯನ್ನು ದತ್ತು ಪಡೆದುಕೊಂಡು. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಹೆಸರನಲ್ಲಿ ಉನ್ನತಿಕರಣ ಮಾಡುತ್ತಿದ್ದೇವೆ. ವಿಸ್ತಾರ ನ್ಯೂಸ್‌ನ ಈ ಆಂದೋಲನದಲ್ಲಿ ಭಾಗಿಯಾಗುತ್ತಿರುವುದಕ್ಕೆ ನನಗೆ ಹೆಮ್ಮೆ ಎನಿಸುತ್ತದೆ.
ಎಂ. ಆರ್. ರುದ್ರೇಶ್, ಅಧ್ಯಕ್ಷರು, ಕೆಆರ್​​ಐಡಿಎಲ್, ಬೆಂಗಳೂರು

ಇದನ್ನೂ ಓದಿ : ನಮ್ಮೂರ ಶಾಲೆ ನಮ್ಮೆಲ್ಲರ ಶಾಲೆ | ಗುಣಮಟ್ಟದ ಶಿಕ್ಷಣಕ್ಕೆ ದಿಟ್ಟ ಹೆಜ್ಜೆ, ವಿಸ್ತಾರ ನ್ಯೂಸ್‌ ಅಭಿಯಾನಕ್ಕೆ ಅದ್ಧೂರಿ ಚಾಲನೆ

Exit mobile version