ಕಾರವಾರ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಮತದಾರನ ಮನದಾಳ ಅರಿಯಲು ನಡೆಸುತ್ತಿರುವ ವಿಸ್ತಾರ ನ್ಯೂಸ್ ಪೋಲಿಂಗ್ ಬೂತ್ (Vistara News Polling Booth) ಸಮೀಕ್ಷೆಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮಂಗಳವಾರ (ಮಾ. 26) ಉತ್ತರ ಕನ್ನಡ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಮೀಕ್ಷೆ ನಡೆದಿದ್ದು, ಈ ಬಾರಿ ಎಲ್ಲ ಕ್ಷೇತ್ರಗಳಿಗಿಂತ ರೋಚಕ ಫಲಿತಾಂಶ ಹೊರಬಿದ್ದಿದೆ. ಮತ್ತೊಮ್ಮೆ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆಯಾದರೂ, ಜೆಡಿಎಸ್ ಬಂಡಾಯ ಅಭ್ಯರ್ಥಿಗೆ ಶೇ.28 ಮತ ಬಂದಿರುವುದು ಕುತೂಹಲ ಮೂಡಿಸಿದೆ. ಈ ಅಭ್ಯರ್ಥಿ ಕಣಕ್ಕಿಳಿದರೆ ಯಾವ ಪಕ್ಷಕ್ಕೆ ಲಾಭ-ನಷ್ಟ ಆಗಬಹುದು ಎಂಬ ಲೆಕ್ಕಾಚಾರಕ್ಕೆ ಕಾರಣವಾಗಿದೆ.
ಉತ್ತರ ಕನ್ನಡ ಕ್ಷೇತ್ರದಿಂದ ಸಹಸ್ರಾರು ಕರೆಗಳು ಬಂದಿದ್ದು, ಇವುಗಳ ಪೈಕಿ ಒಟ್ಟು 4564 ಕರೆಗಳನ್ನು ಸ್ವೀಕರಿಸಲಾಗಿದೆ. ಇದರಲ್ಲಿ ಶೇ.39ರಷ್ಟು ಮಂದಿ ಬಿಜೆಪಿಯನ್ನು ಬೆಂಬಲಿಸಿದ್ದರೆ, ಶೇ.33ರಷ್ಟು ಜನ ಕಾಂಗ್ರೆಸ್ ಪರ ಒಲವು ತೋರಿದ್ದಾರೆ. ಇನ್ನು ಶೇ.28ರಷ್ಟು ಮಂದಿ ಇತರೆ ಅಭ್ಯರ್ಥಿಯನ್ನು (ಜೆಡಿಎಸ್ ಬಂಡಾಯ ಅಭ್ಯರ್ಥಿ ಸೂರಜ್ ನಾಯ್ಕ್ ಸೋನಿ) ಬೆಂಬಲಿಸಿದ್ದಾರೆ.
ವಿಸ್ತಾರ ನ್ಯೂಸ್ ಪೋಲಿಂಗ್ ಬೂತ್ ಸಮೀಕ್ಷೆಯಲ್ಲಿ ಬಿಜೆಪಿಗೆ 1778 ಮತ ಬಂದಿದ್ದು, ಕಾಂಗ್ರೆಸ್‌ಗೆ 1496 ಮಂದಿ ಬೆಂಬಲ ಸೂಚಿಸಿದ್ದು, ಜೆಡಿಎಸ್ ಬಂಡಾಯ ಅಭ್ಯರ್ಥಿ ಪರ 1290 ಮತದಾರರು ಒಲವು ತೋರಿದ್ದಾರೆ. ಇದರಿಂದ ಬಿಜೆಪಿ, ಕಾಂಗ್ರೆಸ್, ಬಂಡಾಯ ನಾಯಕನ ನಡುವೆ ರೋಚಕ ಹಣಾಹಣಿಗೆ ಕ್ಷೇತ್ರವು ಸಾಕ್ಷಿಯಾಗಲಿದೆ ಎನ್ನುವುದು ಖಚಿತವಾಗಿದೆ. ಜೆಡಿಎಸ್ ನಾಯಕ ಪಕ್ಷೇತರವಾಗಿ ಸ್ಪರ್ಧಿಸಿದರೆ ಬಿಜೆಪಿಗೂ ಹೊಡೆತ ಬೀಳಬಹುದು ಅಥವಾ ಕಾಂಗ್ರೆಸ್‌ಗೂ ನಷ್ಟ ತರಬಹುದಾಗಿದೆ.
ಕರೆಗಳ ಶೇಕಡಾವಾರು ವಿವರ
ಸ್ವೀಕರಿಸಿದ ಕರೆಗಳು: 4564
ಬಿಜೆಪಿ: 1778 (ಶೇ.39)
ಕಾಂಗ್ರೆಸ್: 1496 (ಶೇ.33)
ಇತರೆ: 1290 (ಶೇ.28) (ಸೂರಜ್ ನಾಯ್ಕ ಸೋನಿ)
ಇದನ್ನೂ ಓದಿ | Lok Sabha Election 2024: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವೆ ಎಂದ ಎಚ್.ಡಿ. ಕುಮಾರಸ್ವಾಮಿ
ಕ್ಷೇತ್ರದಲ್ಲಿ ಬಿಜೆಪಿಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಣಕ್ಕಿಳಿಯುತ್ತಿದ್ದಾರೆ. ಕಾಂಗ್ರೆಸ್‌ನಿಂದ ಖಾನಾಪುರ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಈ ಬಾರಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುತ್ತಿಲ್ಲ. ಹಾಗಾಗಿ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಸೂರಜ್ ನಾಯ್ಕ ಸೋನಿ ಅಸಮಾಧಾನಗೊಂಡಿದ್ದಾರೆ. ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ.
ಅಂಜಲಿ ನಿಂಬಾಳ್ಕರ್ ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ 2018ರಲ್ಲಿ ಗೆದ್ದಿದ್ದರು. ವಿಶ್ವೇಶ್ವರ ಹೆಗಡೆ ಕಾಗೇರಿ ಮೊದಲು ಅಂಕೋಲಾ ಹಾಗೂ ನಂತರ ಶಿರಸಿ ವಿಧಾನಸಭಾ ಕ್ಷೇತ್ರದ ಮೂಲಕ ಒಟ್ಟು ಆರು ಬಾರಿ ಶಾಸಕರಾಗಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ಟಿ ನಾಯ್ಕ ಎದುರು ಪರಾಭವಗೊಂಡಿದ್ದರು. ಈ ಬಾರಿ 6 ಬಾರಿಯ ಸಂಸದ ಅನಂತ್ ಕುಮಾರ್ ಹೆಗಡೆ ಬದಲಿಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಕ್ಕಿದೆ.
ಇದನ್ನೂ ಓದಿ | Vistara News Polling Booth: ಕೊಪ್ಪಳದಲ್ಲಿ ಅಭ್ಯರ್ಥಿ ಬದಲಾದರೂ ಬಿಜೆಪಿ ಬದಲಿಸದ ಮತದಾರ! ಯಾರಿಗೆಷ್ಟು ಮತ?
ಇನ್ನು ಬೆಳಗಾವಿ ಜಿಲ್ಲೆಯ ಕಿತ್ತೂರು ಮತ್ತು ಖಾನಾಪುರ ವಿಧಾನಸಭಾ ಕ್ಷೇತ್ರಗಳು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿವೆ. ಆದರೆ ಇದುವರೆಗೂ ಪ್ರಮುಖ ಪಕ್ಷಗಳಿಂದ ಅಲ್ಲಿಯವರಿಗೆ ಟಿಕೆಟ್ ಸಿಕ್ಕಿರಲಿಲ್ಲ. ಇದೇ ಮೊದಲ ಬಾರಿಗೆ ಕಾಂಗ್ರೆಸ್ ಖಾನಾಪುರದ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಅವರನ್ನು ಅಭ್ಯರ್ಥಿ ಎಂದು ಘೋಷಿಸುವ ಮೂಲಕ ಆ ಭಾಗದ ಮತದಾರರ ಗಮನ ಸೆಳೆದಿದೆ.