Site icon Vistara News

Vistara News Polling Booth: ಕೊಪ್ಪಳದಲ್ಲಿ ಅಭ್ಯರ್ಥಿ ಬದಲಾದರೂ ಬಿಜೆಪಿ ಬದಲಿಸದ ಮತದಾರ! ಯಾರಿಗೆಷ್ಟು ಮತ?

koppal lok sabha constituency candidates

ಕೊಪ್ಪಳ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ವಿಸ್ತಾರ ನ್ಯೂಸ್‌ (Vistara News) ಸೋಮವಾರ (ಮಾ. 25) ನಡೆಸಿದ ಪೋಲಿಂಗ್‌ ಬೂತ್‌ (Vistara news polling booth) ಸಮೀಕ್ಷೆಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ‌ ಮತ್ತೊಮ್ಮೆ ಬಿಜೆಪಿಗೆ ಜನಬೆಂಬಲ ವ್ಯಕ್ತವಾಗಿದೆ. ಕ್ಷೇತ್ರದಿಂದ ಸಾವಿರಾರು ಕರೆಗಳು ಬಂದಿದ್ದು, ಇವುಗಳ ಪೈಕಿ ಒಟ್ಟು 6223 ಕರೆಗಳನ್ನು ಸ್ವೀಕರಿಸಲಾಗಿದೆ. ಇದರಲ್ಲಿ ಶೇ.59ರಷ್ಟು ಮಂದಿ ಬಿಜೆಪಿಯನ್ನು ಬೆಂಬಲಿಸಿದ್ದರೆ, ಶೇ.41ರಷ್ಟು ಜನರು ಕಾಂಗ್ರೆಸ್‌ ಪರ ಒಲವು ತೋರಿದ್ದಾರೆ.

ವಿಸ್ತಾರ ನ್ಯೂಸ್‌ ನಡೆಸಿದ ಈ ಸಮೀಕ್ಷೆಗೆ ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಾವಿರಾರು ಕರೆಗಳು ಬಂದಿವೆ. ಅದರಲ್ಲಿ ಸ್ವೀಕರಿಸಿದ ಒಟ್ಟು 6223 ಕರೆಗಳ ಪೈಕಿ ಬಿಜೆಪಿಗೆ 3715 ಮತ, ಕಾಂಗ್ರೆಸ್‌ಗೆ 2508 ಮತ ಬಂದಿವೆ. ಇದರಿಂದ ಬಿಜೆಪಿ- ಕಾಂಗ್ರೆಸ್‌ ನಡುವಿನ ಸ್ಪರ್ಧೆಯಲ್ಲಿ ಮತ್ತೊಮ್ಮೆ ಬಿಜೆಪಿಯೇ ಜಯಭೇರಿ ಬಾರಿಸಲಿದೆ ಎಂಬುವುದು ಹೆಚ್ಚಿನ ಜನರ ಅಭಿಪ್ರಾಯವಾಗಿದೆ.

ಕರೆಗಳ ಶೇಕಡಾವಾರು ವಿವರ

ಸ್ವೀಕರಿಸಿದ ಕರೆಗಳು: 6223
ಬಿಜೆಪಿ : 3715 (ಶೇ.59 )
ಕಾಂಗ್ರೆಸ್ : 2508 (ಶೇ.41)
ಇತರೆ : 00

ಇದನ್ನೂ ಓದಿ | Vistara News Polling Booth: ವಿಜಯಪುರದಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ ಕದನ ನಿಶ್ಚಿತ; ಅಂತರ ಕೇವಲ 1%!

ಕ್ಷೇತ್ರದಲ್ಲಿ ಈ ಬಾರಿ ಹಾಲಿ ಸಂಸದ ಸಂಗಣ್ಣ ಕರಡಿಗೆ ಬಿಜೆಪಿ ಟಿಕೆಟ್‌ ಕೈ ತಪ್ಪಿದ್ದು, ಅವರ ಬದಲಿಗೆ ಡಾ.ಬಸವರಾಜ ಕ್ಯಾವಟರ್‌ ಕಣಕ್ಕಿಳಿಯುತ್ತಿದ್ದಾರೆ. ಕಾಂಗ್ರೆಸ್‌ನಿಂದ ಕೆ.ರಾಜಶೇಖರ್‌ ಹಿಟ್ನಾಳ್‌ ಸ್ಪರ್ಧಿಸುತ್ತಿದ್ದಾರೆ. ಕ್ಷೇತ್ರದಲ್ಲಿ 2004ರಲ್ಲಿ ಕಾಂಗ್ರೆಸ್‌ ಗೆಲುವು ಕಂಡಿದ್ದರೆ, 2009, 2014, 2019ರಲ್ಲಿ ಬಿಜೆಪಿ ವಿಜಯಿಯಾಗಿದೆ. ಕಳೆದ ಎರಡು ಬಾರಿ ಬಿಜೆಪಿ ಹಾಲಿ ಸಂಸದ ಸಂಗಣ್ಣ ಕರಡಿ ಅವರು ಜಯಭೇರಿ ಬಾರಿಸಿದ್ದಾರೆ. ಈ ಬಾರಿ ಅವರಿಗೆ ಟಿಕೆಟ್‌ ಮಿಸ್‌ ಆಗಿ ಆಕ್ರೋಶವನ್ನು ಹೊರ ಹಾಕಿದ್ದರೂ ಬಿಜೆಪಿಗೆ ಗೆಲುವು ಸುಲಭ ಎಂದು ಮತದಾರರು ಹೇಳುತ್ತಿದ್ದಾರೆ.

2009ಕ್ಕೂ ಮೊದಲು ಕ್ಷೇತ್ರವು ಕಾಂಗ್ರೆಸ್‌ ಭದ್ರಕೋಟೆಯಾಗಿತ್ತು. ನಂತರ 15 ವರ್ಷದಿಂದ ಇಲ್ಲಿ ಬಿಜೆಪಿ ಪಾರುಪತ್ಯವಿದೆ. ಇಲ್ಲಿ ಒಟ್ಟು 18,51,700 ಮತದಾರರು ಇದ್ದು, ಜಾತಿವಾರು ಲೆಕ್ಕಾಚಾರ ನೋಡುವುದಾದರೆ ಲಿಂಗಾಯತರು 5.5 ಲಕ್ಷ, ಕುರುಬರು 2.5 ಲಕ್ಷ, ಎಸ್‌ಸಿ 2.25 ಲಕ್ಷ, ಎಸ್‌ಟಿ 2.5, ಮುಸ್ಲಿಂ 2.20, ಇತರೆ 2.5 ಲಕ್ಷ ಮತದಾರರು ಇದ್ದಾರೆ. ಇದೀಗ ವಿಸ್ತಾರ ಪೋಲಿಂಗ್‌ ಬೂತ್‌ ಫಲಿತಾಂಶದ ಪ್ರಕಾರ ಕ್ಷೇತ್ರದಲ್ಲಿ ಮತ್ತೊಮ್ಮೆ ಬಿಜೆಪಿ ಪರ ಜನರು ಒಲವು ತೋರಿರುವುದು ಕಂಡುಬಂದಿದೆ.

ಮಾ.26, ಮಂಗಳವಾರ ಯಾವ ಕ್ಷೇತ್ರ?

ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಉತ್ತರ ಕನ್ನಡ ಮತ್ತು ಮಧ್ಯಾಹ್ನ 2ರಿಂದ ಸಂಜೆ 6 ಗಂಟೆಯವರೆಗೆ ಕಲಬುರಗಿ ಕ್ಷೇತ್ರದ ಜನ ಫೋನ್‌ ಮಾಡಿ ಓಟ್‌ ಮಾಡಬಹುದು. ಮಧ್ಯಾಹ್ನ 2 ಮತ್ತು ರಾತ್ರಿ 8 ಗಂಟೆಗೆ ಎರಡೂ ಕ್ಷೇತ್ರಗಳ ಫಲಿತಾಂಶ ಹೊರಬೀಳಲಿದೆ.

ಏನಿದು ಪೋಲಿಂಗ್‌ ಬೂತ್‌?

ಬೆಂಗಳೂರಿನಲ್ಲಿರುವ ವಿಸ್ತಾರ ನ್ಯೂಸ್‌ ಮುಖ್ಯ ಕಚೇರಿಯಲ್ಲಿ ತೆರೆಯಲಾಗಿರುವ ಪೋಲಿಂಗ್‌ ಬೂತ್‌ಗೆ ಸಾರ್ವಜನಿಕರು ನಿಗದಿತ ಸಮಯದಲ್ಲಿ ಪೋನ್‌ ಮಾಡುವ ಮೂಲಕ ತಮ್ಮ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಯಾರಾಗಬೇಕು, ಯಾವ ಪಕ್ಷ ಈ ಬಾರಿ ಗೆಲ್ಲಬೇಕು ಎಂದು ತಿಳಿಸಬಹುದು.

ಇದನ್ನೂ ಓದಿ | Vistara News Polling Booth: ಚಿಕ್ಕೋಡಿ ಕ್ಷೇತ್ರದಲ್ಲಿ ಮತ್ತೊಮ್ಮೆ ಬಿಜೆಪಿ; ಮತದಾರನ ಮನದಾಳದಲ್ಲೇನಿದೆ?

ಪೋಲಿಂಗ್‌ ಬೂತ್‌ನಲ್ಲಿ ಮಾಹಿತಿ ಸಂಗ್ರಹ ಹೇಗೆ?

ವಿಸ್ತಾರ ನ್ಯೂಸ್‌ ಪೋಲಿಂಗ್‌ ಬೂತ್‌ಗೆ ಒಂದೇ ದೂರವಾಣಿ ಸಂಖ್ಯೆಯನ್ನು ನೀಡಲಾಗಿದೆ. ಆದರೆ, ಈ ಒಂದೇ ದೂರವಾಣಿ ಸಂಖ್ಯೆ ಸುಮಾರು 20ಕ್ಕೂ ಅಧಿಕ ಫೋನ್‌ಗಳಿಗೆ ಕನೆಕ್ಟ್‌ ಆಗುತ್ತದೆ. ಏಕಕಾಲದಲ್ಲಿ 20ಕ್ಕೂ ಅಧಿಕ ಮಂದಿ ಕರೆಯನ್ನು ಸ್ವೀಕರಿಸಿ ಮಾಹಿತಿಯನ್ನು ಸಂಗ್ರಹ ಮಾಡಲಾಗುತ್ತದೆ. ಯಾರು ಅಭ್ಯರ್ಥಿಯಾಗಬೇಕು? ಯಾರು ಗೆಲ್ಲಬೇಕು? ಯಾರಿಗೆ ಮತ ಎಂಬಿತ್ಯಾದಿ ಮಾಹಿತಿಗಳನ್ನು ಈ ವೇಳೆ ದಾಖಲಿಸಿಕೊಳ್ಳಲಾಗುತ್ತದೆ. ಬಳಿಕ ಅವುಗಳನ್ನು ಸಮೀಕರಿಸಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.

ನೀವು ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ: 080-69554488

Exit mobile version