ಬೆಂಗಳೂರು: ಕನ್ನಡ ಸಾರಸ್ವತ ಲೋಕವನ್ನು ಒಳಗೊಳ್ಳುವ ಯತ್ನ, ನೋಡುಗನನ್ನು ಓದುಗನನ್ನಾಗಿಸುವ ಪ್ರಯತ್ನ ವಿಸ್ತಾರ ನ್ಯೂಸ್ ಟಿವಿ ಮಾಧ್ಯಮದಿಂದ ಆಗುತ್ತಿರುವುದು ಸ್ತುತ್ಯರ್ಹ ಎಂದು ಖ್ಯಾತ ಕತೆಗಾರ, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.
ದಾಖಲೆ ಮೊತ್ತದ ʼವಿಸ್ತಾರ ನ್ಯೂಸ್ ಯುಗಾದಿ ಕಥಾಸ್ಪರ್ಧೆ-2023’ರ ಬಹುಮಾನ ವಿಜೇತರನ್ನು ಘೋಷಿಸಿದ ಬಳಿಕ ಅವರು ಮಾತನಾಡಿದರು. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಹೋಟೆಲ್ ಮ್ಯಾಸ್ಟಿಫ್‌ನಲ್ಲಿ ಸಮಾರಂಭ ನೆರವೇರಿತು. ಮೊದಲ ಬಹುಮಾನವನ್ನು ಚಂದ್ರಶೇಖರ ಡಿ.ಆರ್., ಎರಡನೇ ಬಹುಮಾನವನ್ನು ದಾದಾಪೀರ್ ಜೈಮನ್, ಮೂರನೇ ಬಹುಮಾನವನ್ನು ಪೂರ್ಣಿಮಾ ಮಾಳಗಿಮನಿ ತಮ್ಮದಾಗಿಸಿಕೊಂಡರು.
ಕಥೆಗಳಿಗೆ ದೃಶ್ಯ ಮಾಧ್ಯಮ ಸದಾ ಉಪಕೃತವಾಗಿರುತ್ತದೆ. ಕಥೆಗಳೇ ಮನರಂಜನೆಯ ಜೀವಾಳ. ಕಥೆ ಹಾಗೂ ಟಿವಿ ಮಾಧ್ಯಮ ಎರಡರ ವ್ಯಾಕರಣವೂ ಭಿನ್ನ. ದೃಶ್ಯ ಮಾಧ್ಯಮ ಅಬ್ಬರದಿಂದ ಹೇಳುವುದನ್ನು ಕಥೆ ಸೌಮ್ಯವಾಗಿ, ಪಿಸುಮಾತಿನಲ್ಲಿ, ದೃಶ್ಯ ಮಾಧ್ಯಮದ ತೋರಿಕೆಯ ನಡುವೆ ಕಥೆ ಸಂಕೋಚ ಹಾಗೂ ಧ್ಯಾನದಲ್ಲಿ ಹೇಳುತ್ತದೆ. ದೃಶ್ಯ ಮಾಧ್ಯಮ ಪ್ರಕಟಿಸಿದರೆ ಸಾಹಿತ್ಯ ಏಕಾಂತದಲ್ಲಿ ಅರಳುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಪ್ರೇಕ್ಷಕನನ್ನು ಓದುಗನನ್ನಾಗಿಸಿ, ಓದುಗನನ್ನು ಪ್ರೇಕ್ಷಕನನ್ನಾಗಿಸುವ ಕಠಿಣ ಕಾಯಕದ ಸುವರ್ಣ ಸೇತುವೆಯಾಗಿ ವಿಸ್ತಾರ ನ್ಯೂಸ್ ಕೆಲಸ ಮಾಡುತ್ತಿದೆ. ಸಾರಸ್ವತ ಲೋಕವನ್ನು ಟಿವಿ ಮಾಧ್ಯಮದಲ್ಲಿ ಒಳಗೊಳ್ಳುವ ಈ ಯತ್ನ ಸಫಲವಾಗಲಿ ಎಂದು ನಾಗತಿಹಳ್ಳಿ ಹಾರೈಸಿದರು.
ವಿಸ್ತಾರ ನ್ಯೂಸ್ ಟಿವಿ ವಾಹಿನಿಯ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಕಥಾಸ್ಪರ್ಧೆಯ ಆಶಯವನ್ನು ವಿವರಿಸಿದರು. ಸಾಹಿತ್ಯ, ಸಂಸ್ಕೃತಿ ಇವುಗಳಿಗೆ ಆಧುನಿಕ ಮಾಧ್ಯಮದಲ್ಲಿ ಮನ್ನಣೆ ದೊರೆಯುತ್ತಿಲ್ಲ ಎಂದು ಕೂಗು ಕೇಳಿಬರುತ್ತಿರುವುದರ ನಡುವೆಯೇ ನಾವು ಅವುಗಳಿಗೆ ಪ್ರಾಧಾನ್ಯ ನೀಡುವ, ಹಲವು ಅಭಿಪ್ರಾಯಗಳಿಗೆ ಧ್ವನಿಯಾಗುವ ಕಾಯಕವನ್ನು ಮಾಡುತ್ತಿದ್ದೇವೆ. ಮುದ್ರಣ ಹಾಗೂ ಡಿಜಿಟಲ್- ಟಿವಿ ಇವೆರಡರ ಹಿತವಾದ ಸಮ್ಮಿಶ್ರಣ ಮಾಡಿ ಓದುಗ- ನೋಡುಗರಿಗೆ ನೀಡಬೇಕು ಎಂಬ ಆಶಯದಿಂದ ನಾವು ಕಥಾಸ್ಪರ್ಧೆಯನ್ನು ನಡೆಸಿದ್ದೇವೆ. ನಿಷ್ಪಕ್ಷಪಾತ ಹಾಗೂ ಪಾರದರ್ಶಕವಾದ ಕಥಾಸ್ಪರ್ಧೆಯ ಫಲಿತಾಂಶವು ಹಲವು ತಿಂಗಳ ಪರಿಶ್ರಮದ ಫಲವಾಗಿದೆ ಎಂದು ಅವರು ವಿವರಿಸಿದರು.
ಕಥೆ ಬರೆಯುವುದಕ್ಕಿಂತಲೂ ದೊಡ್ಡ ಸಮುದಾಯಕ್ಕೆ ಕತೆ ಹೇಳುವುದನ್ನು ಹೆಚ್ಚು ಇಷ್ಟಪಡುತ್ತೇನೆ. ಕಥೆಗಾರನಾಗುವುದರ ಜತೆಗೆ ಉತ್ತಮ ಮನುಷ್ಯನಾಗಿರಲೂ ಪ್ರಯತ್ನಿಸುತ್ತಿದ್ದೇನೆ ಎಂದು ಪ್ರಥಮ ಬಹುಮಾನಿತ ಕಥೆಗಾರ ಚಂದ್ರಶೇಖರ ಡಿ.ಆರ್ ನುಡಿದರು. ಕಥೆಗಳನ್ನು ಹಂಚಿಕೊಳ್ಳುವ ಮೂಲಕ ನಾವು ಇನ್ನಷ್ಟು ಕ್ರಿಯಾಶೀಲವಾಗುತ್ತೇವೆ. ಈ ಕ್ರಿಯಾಶೀಲತೆಗೆ ವಿಸ್ತಾರ ಸ್ಪರ್ಧೆ ಮತ್ತಷ್ಟು ಹುರುಪು ತುಂಬಿದೆ ಎಂದು ದ್ವಿತೀಯ ಬಹುಮಾನಿತ ದಾದಾಪೀರ್ ಜೈಮನ್ ನುಡಿದರು. ವಿಸ್ತಾರ ಸ್ಪರ್ಧೆಗೆ ಬಂದ ಸಾವಿರ ಕಥೆಗಳು ಸಾವಿರ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ. ಅಷ್ಟು ವೈವಿಧ್ಯಮಯವಾದ ಕಥಾಲೋಕ ಕನ್ನಡದಲ್ಲಿದೆ ಎಂದು ತೃತೀಯ ಬಹುಮಾನಿತ ಕಥೆಗಾರ್ತಿ ಪೂರ್ಣಿಮಾ ಮಾಳಗಿಮನಿ ನುಡಿದರು.
ಹೊಸ ಕತೆಗಾರರನ್ನು ಗುರುತಿಸುವಲ್ಲಿ ಕನ್ನಡ ಸಾಹಿತ್ಯಲೋಕ ಹಿಂದೆ ಬಿದ್ದಿಲ್ಲ. ಉತ್ತಮ ಸಾಹಿತ್ಯ ಪ್ರಕಟಿಸುವಾಗ ನಾವು ಹಣ ಖರ್ಚಾಗುತ್ತದೆಂದು ಹಿಂದುಳಿದಿಲ್ಲ. ಯುವ ಸಾಹಿತಿಗಳು ಬೆಳೆಯಬೇಕು ಎಂಬುದು ನಮ್ಮ ಆಶಯ ಎಂದು ಬಹುಮಾನ ಆಯೋಜಕರಲ್ಲಿ ಒಬ್ಬರಾದ ಶ್ರೀ ಸಿದ್ದಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನದ ಮಾಲಿಕ ಬಸವರಾಜ ಕೊನೇಕ ಹೇಳಿದರು. ಬಹುಮಾನ ಪ್ರಾಯೋಜಕರುಗಳಾದ ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಆರ್ ವೆಂಕಟೇಶ್, ವಿ2 ಹೋಲ್ಡಿಂಗ್ಸ್ ಹೌಸಿಂಗ್ ಡೆವಲಪ್‌ಮೆಂಟ್ ಪ್ರೈ. ಲಿ. ಎಂ.ಡಿ ಡಾ.ಪಿ.ಎಲ್ ವೆಂಕಟರಾಮ ರೆಡ್ಡಿ ಸ್ಪರ್ಧೆಯ ಯಶಸ್ಸಿಗೆ ಶುಭ ಹಾರೈಸಿದರು.
ಮೊದಲ ಬಹುಮಾನದ ಮೊತ್ತ ರೂ. 55,000, ಎರಡನೇ ಬಹುಮಾನ ರೂ. 25,000 ರೂ., ಮೂರನೇ ಬಹುಮಾನ 10,000 ರೂ. ಹಾಗೂ ತಲಾ 2,000 ರೂ. ಮೊತ್ತದ ಮೆಚ್ಚುಗೆ ಬಹುಮಾನಗಳನ್ನು 5 ಮಂದಿಗೆ ವಿತರಿಸಲಾಯಿತು. ಕವಿ, ವಿಮರ್ಶಕಿ ಲಲಿತಾ ಸಿದ್ದಬಸವಯ್ಯ, ಕಾದಂಬರಿಕಾರ ಹಾಗೂ ವಿಮರ್ಶಕ ಬಿ. ಜನಾರ್ದನ ಭಟ್ ಅವರು ಈ ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದ್ದರು. ಟಾಪ್ 25 ಪಟ್ಟಿಗೆ ಆಯ್ಕೆಯಾದ ಕತೆಗಾರರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಸಂಸ್ಥೆಯ ಆಡಳಿತ ನಿರ್ದೇಶಕ ಹಾಗೂ ಚೇರ್‌ಮನ್ ಎಚ್.ವಿ. ಧರ್ಮೇಶ್, ವಿಸ್ತಾರ ಟಿವಿಯ ಎಕ್ಸಿಕ್ಯೂಟಿವ್ ಎಡಿಟರ್ ಶರತ್ ಎಂ.ಎಸ್, ವಿಸ್ತಾರ ನ್ಯೂಸ್‌ನ ನಿರ್ದೇಶಕ (ಬ್ಯುಸಿನೆಸ್) ವಿನಯ್ ಶೇಷಗಿರಿ, ಸಿಒಒ ಪರಶುರಾಮ್, ವಿಸ್ತಾರ ನ್ಯೂಸ್ ಡಿಜಿಟಲ್ ವಿಭಾಗದ ಸಂಪಾದಕ ರಮೇಶ್ ಕುಮಾರ್ ನಾಯಕ್, ಸ್ಪೆಷಲ್ ಆಪರೇಷನ್ ಎಡಿಟರ್ ಕಿರಣ್ ಕುಮಾರ್ ಡಿ.ಕೆ, ವಿಸ್ತಾರ ಮನರಂಜನಾ ವಾಹಿನಿ ಕಂಟೆಂಟ್ ಹೆಡ್ ಕುಸುಮಾ ಆಯರಹಳ್ಳಿ ಉಪಸ್ಥಿತರಿದ್ದರು. ಎ.ಕೃಷ್ಣ ಭಟ್ ಕಾರ್ಯಕ್ರಮ ನಿರ್ವಹಿಸಿದರು.
ಕಥಾಸ್ಪರ್ಧೆ ಬಹುಮಾನಿತರು:
ಪ್ರಥಮ: ಸೋಮನ ಕುಣಿತ- ಚಂದ್ರಶೇಖರ ಡಿ.ಆರ್
ದ್ವಿತೀಯ: ಅಂತಃಕಾರಣದ ಟಿಪ್ಪಣಿಗಳು- ದಾದಾಪೀರ್ ಜೈಮನ್
ತೃತೀಯ: ಅದು ಅವರ ಪ್ರಾಬ್ಲಮ್- ಪೂರ್ಣಿಮಾ ಮಾಳಗಿಮನಿ
ಮೆಚ್ಚುಗೆ: ಹುಣಿಸೆ ಹೂವು- ದೀಪದ ಮಲ್ಲಿ
ಮೆಚ್ಚುಗೆ: ಪಿಂಕ್ ಟ್ರಂಪೆಟ್- ಚೈತ್ರಿಕಾ ಹೆಗಡೆ
ಮೆಚ್ಚುಗೆ: ಪರವೇಶ್ಮಸ್ಥನ ಫಿಕ್ಹ್ ಪ್ರಸಂಗ- ಬಿ.ಎಂ ಹನೀಫ್
ಮೆಚ್ಚುಗೆ: ಕಿತ್ತಳೆ ಚಿಟ್ಟೆ- ಮಂಜುನಾಯಕ್ ಚೆಳ್ಳೂರು
ಮೆಚ್ಚುಗೆ: ನೆಲೆ- ದೀಪಾ ಹಿರೇಗುತ್ತಿ