ಬೆಂಗಳೂರು: ಕಳೆದ ವರ್ಷದ ನವೆಂಬರ್‌ನಲ್ಲಿ ʼವಿಸ್ತಾರ ಕನ್ನಡ ಸಂಭ್ರಮʼ ಕಾರ್ಯಕ್ರಮದ ಮೂಲಕ ಜನಮನ ಗೆದ್ದಿದ್ದ ವಿಸ್ತಾರ ನ್ಯೂಸ್ ಈಗ ಎರಡು ದಿನಗಳ ವಿಸ್ತಾರ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಿದೆ. ಸಾಹಿತ್ಯ, ಹಾಡು, ಸಂಗೀತ, ನಾಟಕ, ಯಕ್ಷಗಾನ, ಉಪಯುಕ್ತ ಗೋಷ್ಠಿ, ಹಾಸ್ಯ, ಪುಸ್ತಕ ಮೇಳ, ಆಹಾರ ಮೇಳ, ಫ್ಯಾಷನ್ ಶೋ, ಮಕ್ಕಳಿಗೆ ಸ್ಪರ್ಧೆ ಇತ್ಯಾದಿ ಮನೋಲ್ಲಾಸದ ಅಪರೂಪದ ಕಾರ್ಯಕ್ರಮ ಇದಾಗಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮೇ 27 ಮತ್ತು 28ರಂದು ಬೆಳಗ್ಗೆ 9ರಿಂದ ರಾತ್ರಿ 12ರವರೆಗೆ ಈ ಕಾರ್ಯಕ್ರಮ ನಡೆಯಲಿದೆ.
ಪ್ರವೇಶ ಉಚಿತವಾಗಿದ್ದು, ಮೊದಲೇ ಹೆಸರು ನೋಂದಾಯಿಸಿಕೊಂಡವರಿಗೆ
ಪುಸ್ತಕ ಖರೀದಿ ವೇಳೆ ಶೇ.15 ರಿಯಾಯಿತಿ ಮತ್ತು ವಿಶೇಷ ನೆನಪಿನ ಕಾಣಿಕೆ ಸಿಗಲಿದೆ.
ಏನೇನು ಕಾರ್ಯಕ್ರಮ?
ಮೇ 27ರ ಶನಿವಾರ ಬೆಳಗ್ಗೆ 9ರಿಂದ 10ರವರೆಗೆ “ಗೀತ ಬೆಳಗುʼ ಕಾರ್ಯಕ್ರಮದಲ್ಲಿ ಸರಿಗಮಪ ಸೀಸನ್ 19ರ ವಿಜೇತೆ ಕುಮಾರಿ ಪ್ರಗತಿ ಬಡಿಗೇರ್, ಬಸವರಾಜ್ ಬಡಿಗೇರ್ ಮತ್ತು ಪ್ರತೀಕ್ಷಾ ಬಡಿಗೇರ್ ಗಾಯನವಿದೆ.
ವಿಸ್ತಾರ ಸಾಹಿತ್ಯ ಸಂಭ್ರಮವನ್ನು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಬೆಳಗ್ಗೆ 10 ಗಂಟೆಗೆ ಉದ್ಘಾಟಿಸಲಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ, ಖ್ಯಾತ ಕವಿ ಡಾ. ಎಚ್. ಎಸ್ ವೆಂಕಟೇಶಮೂರ್ತಿ, ಅದಮ್ಯ ಚೇತನ ಟ್ರಸ್ಟ್ ಅಧ್ಯಕ್ಷರಾದ ತೇಜಸ್ವಿನಿ ಅನಂತಕುಮಾರ್, ಖ್ಯಾತ ಚಲನಚಿತ್ರ ನಟ, ನಿರ್ದೇಶಕ ರಮೇಶ್ ಅರವಿಂದ್, ಖ್ಯಾತ ಚಲನಚಿತ್ರ ನಟಿ ಆಶಾ ಭಟ್ ಅವರು ಭಾಗವಹಿಸಲಿದ್ದಾರೆ.
ಮಧ್ಯಾಹ್ನ 12ರಿಂದ 1ರವರೆಗೆ “ಇಂಗ್ಲಿಷ್ ಅಲೆ – ಕನ್ನಡ ಬೆಳೆ” – ಮಕ್ಕಳಲ್ಲಿ ಕನ್ನಡ ಓದಿನ ಆಸಕ್ತಿ ಮೂಡಿಸುವುದು ಹೇಗೆ? ವಿಷಯದ ಕುರಿತು ಮೊದಲ ಗೋಷ್ಠಿ ನಡೆಯಲಿದೆ.
“ಕನ್ನಡ ಓದಿನ ಹೊಸ ಮಾಧ್ಯಮಗಳು” ಕುರಿತು ವಸಂತ್ ಶೆಟ್ಟಿ, ಮೈಲಾಂಗ್ ಸಂಸ್ಥೆಯ ಸಹ ಸಂಸ್ಥಾಪಕರು; “ಮಕ್ಕಳಲ್ಲಿ ಕನ್ನಡದ ಆಕರ್ಷಣೆ” ಕುರಿತು ವಂದನಾ ರೈ, ಸೃಜನಶೀಲ ಶಿಕ್ಷಕಿ; “ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕನ್ನಡ” ಕುರಿತು ಉನ್ನತ ಶಿಕ್ಷಣ ಪರಿಷತ್ ಮಾಜಿ ಉಪಾಧ್ಯಕ್ಷ ಪ್ರೊ. ಬಿ. ತಿಮ್ಮೇಗೌಡ ಮಾತನಾಡಲಿದ್ದಾರೆ. ಭಾಷಾ ತಜ್ಞರಾದ ಮೇಟಿ ಮಲ್ಲಿಕಾರ್ಜುನ ಅವರು ಗೋಷ್ಠಿ ನಿರ್ವಹಿಸಲಿದ್ದಾರೆ.
ಮಧ್ಯಾಹ್ನ 1.30ರಿಂದ 2.30ರವರೆಗೆ “ಸಾಹಿತಿಗಳ ಬದುಕಿನ ರಸಪ್ರಸಂಗಗಳು” ಎಂಬ ಕುತೂಹಕರ ಗೋಷ್ಠಿ ನಡೆಯಲಿದೆ. ಖಾತ್ಯ ಕತೆಗಾರ ಅಬ್ದುಲ್ ರಶೀದ್, ಜನಪ್ರಿಯ ಹಾಸ್ಯ ಲೇಖಕರಾದ ಭುವನೇಶ್ವರಿ ಹೆಗಡೆ ಮತ್ತು ದುಂಡಿರಾಜ್ ಅವರು ರಸ ಪ್ರಸಂಗಗಳನ್ನು ಪ್ರಸ್ತಾಪ ಮಾಡಲಿದ್ದಾರೆ. ಜನಪ್ರಿಯ ಲೇಖಕ ಜೋಗಿ ಅವರು ಪ್ರಸಂಗ ನಿರ್ವಹಣೆ ಮಾಡಲಿದ್ದಾರೆ.
ಮಧ್ಯಾಹ್ನ 3ರಿಂದ 4ರವರೆಗೆ “ಗತ ಕತೆಯ ಹೊಸ ವೈಭವ” – ಮರುಕಳಿಸುತ್ತಿರುವ ಪುರಾಣ, ಚರಿತ್ರೆ, ಜನಪದ ಕತೆಗಳು ಕುರಿತ ವಿಶೇಷ ಗೋಷ್ಠಿ ನಡೆಯಲಿದೆ.
ಚರಿತ್ರೆಯಲ್ಲಿ ಅಡಗಿದ ರೋಚಕ ಸಂಗತಿಗಳು: ಕೆ.ಎನ್ ಗಣೇಶಯ್ಯ, ಖ್ಯಾತ ಕಾದಂಬರಿಕಾರ, ಐತಿಹಾಸಿಕ ಕತೆ ಬರೆಯುವ ಮೊದಲಿನ ಸಂಶೋಧನೆ: ಗಜಾನನ ಶರ್ಮ, ಖ್ಯಾತ ಕಾದಂಬರಿಕಾರ, ಚರಿತ್ರೆಯ ಮರು ನಿರೂಪಣೆಯ ಸಮಸ್ಯೆ, ಸವಾಲು: ಆಶಾದೇವಿ, ಖ್ಯಾತ ವಿಮರ್ಶಕಿ ಈ ಮೂವರು ಮಾತನಾಡಲಿದ್ದಾರೆ. ಖ್ಯಾತ ವಿಮರ್ಶಕ ಎಚ್ ದಂಡಪ್ಪ ಅವರು ಗೋಷ್ಠಿ ನಿರ್ವಹಣೆ ಮಾಡಲಿದ್ದಾರೆ.
ಚಾಟ್ ಜಿಪಿಟಿ ಮುಂದಿನ ಕತೆಗಾರ!
ಸಂಜೆ 4.30ರಿಂದ 5.30ರವರೆಗೆ ಚಾಟ್ ಜಿಪಿಟಿ ಮುಂದಿನ ಕತೆಗಾರ! – ಕನ್ನಡ ಸಾಹಿತ್ಯ ಮತ್ತು ತಂತ್ರಜ್ಞಾನ ಕುರಿತ ಮಹತ್ವದ ಚರ್ಚೆ ನಡೆಯಲಿದೆ. ಐಟಿ ಪರಿಣತ ರತೀಶ್ ರತ್ನಕರ, ಕನ್ನಡ ಸಾಹಿತ್ಯ ಡಿಜಿಟಲೀಕರಣ ಪರಿಣತ ಓಂಶಿವಪ್ರಕಾಶ್ ಎಚ್ ಎಲ್ ಮತ್ತು ಸಾಫ್ಟ್‌ವೇರ್ ಉದ್ಯೋಗಿ, ಕತೆಗಾರ ಮಧು ವೈ ಎನ್ ಅವರು ಈ ವಿಷಯದ ಕುರಿತು ಬೆಳಕು ಚೆಲ್ಲಲಿದ್ದಾರೆ. ಏಮ್ ಹೈ ಕನ್ಸಲ್ಟಿಂಗ್ ಸಿಇಒ ಎನ್ ರವಿಶಂಕರ್ ಅವರು ಗೋಷ್ಠಿ ನಿರ್ವಹಣೆ ಮಾಡಲಿದ್ದಾರೆ.
ಸಂಜೆ 6ರಿಂದ 7.30ರವರೆಗೆ ಚಿತ್ರ ಗೀತೆ ಹಿಂದಿನ ವಿಚಿತ್ರ ಕತೆ ಎಂಬ ಆಸಕ್ತಿಕರ ಗೋಷ್ಠಿ ಇದೆ. ಖ್ಯಾತ ಗೀತ ರಚನೆಕಾರರಾದ ಡಾ. ನಾಗೇಂದ್ರ ಪ್ರಸಾದ್ ಮತ್ತು ಕವಿರಾಜ್ ಭಾಗವಹಿಸುತ್ತಾರೆ. ಶಮಿತಾ ಮಲ್ನಾಡ್ ಮತ್ತು ಕಂಬದ ರಂಗಯ್ಯ ಅವರು ಜನಪ್ರಿಯ ಗೀತೆಗಳನ್ನು ಹಾಡಲಿದ್ದಾರೆ.
ಸೋಜಿಗದ ಹಾಡುಗಳು
ರಾತ್ರಿ 8.00ರಿಂದ 9.30ರವರೆಗೆ ಅನನ್ಯಾ ಭಟ್ ಮತ್ತು ತಂಡದವರಿಂದ ಅಮೋಘ ಸಂಗೀತ ರಾತ್ರಿ ನಡೆಯಲಿದೆ. ರಾತ್ರಿ 10ರಿಂದ 12 ಗಂಟೆಯವರೆಗೆ ಹೇರಂಜಾಲು ಯಕ್ಷ ಬಳಗ ಹಾಗೂ ಟೀಮ್ ಉತ್ಸಾಹಿ, ಬೆಂಗಳೂರು ತಂಡದ ಆಶ್ರಯದಲ್ಲಿ ಹೆಸರಾಂತ ಕಲಾವಿದರ ʼಮಹಾಮಂತ್ರಿ ದುಷ್ಟಬುದ್ಧಿʼ ಎಂಬ ಯಕ್ಷಗಾನ ಪ್ರಸಂಗ ನಡೆಯಲಿದೆ.
ಮೇ 28ರ ಭಾನುವಾರ ಬೆಳಗ್ಗೆ 9ರಿಂದ 10ರವರೆಗೆ ಭಾವ ಸಂಪದ – ಸಿ. ಅಶ್ವತ್ಥ್ ಸಂಯೋಜನೆಯ ಪ್ರಸಿದ್ಧ ಕವಿಗಳ ಭಾವಗೀತೆಗಳ ಗಾಯನ. ಹಾಡುವವರು: ರಾಮಚಂದ್ರ ಹಡಪದ್, ಸಂಗೀತ ನಿರ್ದೇಶಕ, ಗಾಯಕ. ಶರಧಿ ಪಾಟೀಲ್, ಸರಿಗಮಪ ಖ್ಯಾತಿಯ ಗಾಯಕಿ.
ಬೆಳಗ್ಗೆ 10.00ರಿಂದ 11.00ರವರೆಗೆ ಕನ್ನಡ ಸಾಹಿತ್ಯಕ್ಕೆ ಭಕ್ತಿಯ ಹೊಳಪು ಕುರಿತು ಸಂವಾದ. ಮಾತನಾಡುವವರು: ಲಕ್ಷ್ಮೀಶ ತೋಳ್ಪಾಡಿ, ಚಿಂತಕರು, ಖ್ಯಾತ ವಾಗ್ಮಿ. ಗಿರಿಜಾ ರೈಕ್ವ, ಲೇಖಕಿ, ಸಂಶೋಧಕಿ.
ಮಧ್ಯಾಹ್ನ 12.00ರಿಂದ 1.00ರವರೆಗೆ “ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆʼ (ಕನ್ನಡ ಮತ್ತು ಇತರ ಭಾಷೆಗಳ ನಡುವೆ ಸಾಹಿತ್ಯ ವಿನಿಮಯ) ಗೋಷ್ಠಿ. ಮಾತನಾಡುವವರು: ಇಂಗ್ಲಿಷ್ – ಕನ್ನಡ: ಸಂಯುಕ್ತಾ ಪುಲಿಗಲ್ (ಇಂಗ್ಷಿಷ್). ತಮಿಳು – ಕನ್ನಡ: ನಲ್ಲತಂಬಿ (ತಮಿಳು). ತೆಲುಗು- ಕನ್ನಡ: ಅಜಯ್ ವರ್ಮಾ ಅಲ್ಲೂರಿ (ತೆಲುಗು). ಮಲಯಾಳಂ – ಕನ್ನಡ: ಪಾರ್ವತಿ ಐತಾಳ್ (ಮಲಯಾಳಂ). ಖ್ಯಾತ ಸಾಹಿತಿ ವಸುಧೇಂದ್ರ ಅವರು ಗೋಷ್ಠಿ ನಿರ್ವಹಿಸಲಿದ್ದಾರೆ.
ಮಧ್ಯಾಹ್ನ 1.30ರಿಂದ 2.30ರವರೆಗೆ ಕಿರುತೆರೆ ಬರಹ, ನಾನಾ ತರಹ! – ಅವಕಾಶ ಮತ್ತು ಸವಾಲು ಕುರಿತ ಉಪಯುಕ್ತ ಮಾತುಕತೆ. ಕಿರುತೆರೆ ಕತೆಗಳು, ಆಗ-ಈಗ ಕುರಿತು ನಟಿ, ನಿರ್ದೇಶಕಿ, ನಿರ್ಮಾಪಕಿ ಸಪ್ನ ಕೃಷ್ಣ; ನಟ, ಬರಹಗಾರ, ನಿರ್ದೇಶಕ ಒಬ್ಬರೇ ಆಗುವುದರ ಲಾಭ ನಷ್ಟದ ಕುರಿತು ನಟ, ಲೇಖಕ, ನಿರ್ದೇಶಕ ಅನಿರುದ್ಧ್, ಕಿರುತೆರೆ ಬರಹದ ಗಳಿಕೆ ಕುರಿತು ಕಿರುತೆರೆ ಬರಹಗಾರ ಸತ್ಯಕಿ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಕಿರುತೆರೆ ಬರಹಗಾರ್ತಿ ಸುಷ್ಮ ಮೂಡಬಿದ್ರಿ ಈ ಗೋಷ್ಠಿಯನ್ನು ನಿರ್ವಹಿಸಲಿದ್ದಾರೆ.
ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ
ಮಧ್ಯಾಹ್ನ 3.00ರಿಂದ 4.00ರವರೆಗೆ ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ ವಿತರಣೆ ನಡೆಯಲಿದೆ. 1180 ಕತೆಗಳಲ್ಲಿ ಆಯ್ಕೆಯಾದ ಟಾಪ್ 25 ಕತೆಗಾರರು ಭಾಗವಹಿಸಲಿದ್ದಾರೆ. ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಬಹುಮಾನ ವಿತರಣೆ ಮಾಡಲಿದ್ದಾರೆ.
ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಬುಕ್ ಡಿಪೊ ಮತ್ತು ಪ್ರಕಾಶನದ ಮಾಲೀಕರಾದ ಬಸವರಾಜ ಕೊನೇಕ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಶ್ರೀ ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕರಾದ ಎಂ ಆರ್ ವೆಂಕಟೇಶ್ ಮತ್ತು ವಿ 2 ಹೋಲ್ಡಿಂಗ್ಸ್ ಹೌಸಿಂಗ್ ಡೆವಲಪ್‌ಮೆಂಟ್ ಪ್ರೈ. ಲಿ ಮುಖ್ಯಸ್ಥರಾದ ಡಾ. ವೆಂಕಟರಮಣ ರೆಡ್ಡಿ ಪಿ ಎಲ್ ಅವರು ಭಾಗಿಯಾಗಲಿದ್ದಾರೆ.
ಹೊಸತಲೆಮಾರಿನ ಕನ್ನಡ ಧ್ವನಿಗಳು
ಸಂಜೆ 4.30ರಿಂದ 5.30ರವರೆಗೆ ನಡೆಯಲಿರುವ “ಹೊಸತಲೆಮಾರಿನ ಕನ್ನಡ ಧ್ವನಿಗಳುʼʼ ಕುರಿತ ವಿಶಿಷ್ಟ ಗೋಷ್ಠಿಯಲ್ಲಿ ರ‍್ಯಾಪರ್ ಆಲ್ ಓಕೆ ಅಲೋಕ್, ವಿಡಿಯೋ ಜಾಕಿ ನಿರಂಜನ್ ದೇಶಪಾಂಡೆ, ಯೂಟ್ಯೂಬರ್ ರಘು Vine Store ಮತ್ತು ಹೆಸರಾಂತ ಆರ್ ಜೆ ದಿವ್ಯಾ ಅವರು ಭಾಗಿಯಾಗಲಿದ್ದಾರೆ.
ಸಮಾರೋಪ ಸಮಾರಂಭ
ಸಂಜೆ 6.00ರಿಂದ 7.30ರವರೆಗೆ ಸಮಾರೋಪ ಸಮಾರಂಭ ನಡೆಯಲಿದೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಖ್ಯಾತ ಚಲನಚಿತ್ರ ನಟ ಗಣೇಶ್ ಮತ್ತು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ. ಮೋಹನ್ ಆಳ್ವ ಭಾಗವಹಿಸುತ್ತಾರೆ.
ರಘು ದೀಕ್ಷಿತ್ ಸಂಗೀತ ಉತ್ಸವ
ರಾತ್ರಿ 8.00ರಿಂದ 9.30ರವರೆಗೆ ರಘು ದೀಕ್ಷಿತ್ ಸಂಗೀತ ಉತ್ಸವ ನಡೆಯಲಿದೆ. ತತ್ವಪದ, ಜನಪದ, ಸಿನಿ ಗೀತೆಗಳ ವಿಶಿಷ್ಟ ಕಾರ್ಯಕ್ರಮ ಇದಾಗಲಿದೆ.
ಸಂಸ ಬಯಲು ರಂಗಮಂದಿರದಲ್ಲೂ ಕಾರ್ಯಕ್ರಮ
ಮೇ 27, ಶನಿವಾರ ಸಂಜೆ 5ರಿಂದ 6.30ರವರೆಗೆ ಮೈಸೂರಿನ ಅರಿವು ಶಾಲೆಯ ಮಕ್ಕಳಿಂದ ʼಸ್ಮಶಾನ ಕುರುಕ್ಷೇತ್ರಂʼ ನಾಟಕ ನಡೆಯಲಿದೆ.
ಸಂಜೆ 7.00ರಿಂದ 8.00ರವರೆಗೆ ನಾಡಿನ ವಸ್ತ್ರ ವೈವಿಧ್ಯ ಪ್ರದರ್ಶನ ಇರಲಿದ್ದು, ಖ್ಯಾತ ಮಾಡೆಲ್‌ಗಳಿಂದ ವಿಭಿನ್ನ ಫ್ಯಾಷನ್ ಶೋ ನಡೆಯಲಿದೆ.
ಮೇ 28ರ ಭಾನುವಾರ ಸಂಜೆ 5ರಿಂದ 6ರವರೆಗೆ ಖ್ಯಾತ ಸ್ಟ್ಯಾಂಡಪ್ ಕಾಮಿಡಿಯನ್ ರಾಘವೇಂದ್ರ ಆಚಾರ್ ನಗೆಯ ಚಟಾಕಿ ಹಾರಿಸಲಿದ್ದಾರೆ.
ನಯನ ಸಭಾಂಗಣದಲ್ಲಿ ಏನೇನು?
ಮೇ 27ರ ಶನಿವಾರ ಮಧ್ಯಾಹ್ನ 12ರಿಂದ 1ರವರೆಗೆ “ಆಡಳಿತದಲ್ಲಿ ಕನ್ನಡʼ ಕುರಿತು ಸಂವಾದ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಡಾ. ಮನು ಬಳಿಗಾರ್, ಅರಣ್ಯಾಧಿಕಾರಿ ಹಿಮಾ ಗೌತಮ್, ಆದಾಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ದರ್ಶನ್ ಕುಮಾರ್ ಎಚ್ ಜಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಭಾಗಿಯಾಗಲಿದ್ದಾರೆ. ಹಿರಿಯ ಪತ್ರಕರ್ತ ಭಾಸ್ಕರ ರಾವ್ ಕಾರ್ಯಕ್ರಮ ನಿರ್ವಹಿಸಲಿದ್ದಾರೆ.
ಸಂಜೆ 4ರಿಂದ 5ರವರೆಗೆ “ಜಗದ ಎಲ್ಲಿದ್ದರೂ ನಾವು ಕನ್ನಡಿಗರು” ಕುರಿತ ಸಂವಾದದಲ್ಲಿ ಅಮೆರಿಕದ ಶ್ರೀವತ್ಸ ಜೋಶಿ, ಗುರುಪ್ರಸಾದ್ ಕಾಗಿನೆಲೆ, ಬ್ರಿಟನ್‌ನ ಡಾ. ಶಿವಪ್ರಸಾದ್ ಮತ್ತು ದುಬೈಯ ಆರತಿ ಘಟಿಕಾರ್ ಮತ್ತು ಕತಾರ್‌ನ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಮತ್ತು ಅಮೆರಿಕದ ಎಂ ಆರ್ ದತ್ತಾತ್ರಿ ಭಾಗವಹಿಸುತ್ತಾರೆ.
ಮೇ 28ರ ಭಾನುವಾರ ಬೆಳಗ್ಗೆ 10.00ರಿಂದ 11.00ರವರೆಗೆ ನಡೆಯುವ ಕನ್ನಡ ಉದ್ಯಮಿಗಳ ಸಕ್ಸೆಸ್ ಸ್ಟೋರಿ ಗೋಷ್ಠಿಯಲ್ಲಿ ಜೆ. ಕ್ರಾಸ್ಟಾ, ಚೇರ್ಮನ್, ಎಲ್ ಸ್ಕ್ವೇರ್ ಇಕೋ ಪ್ರಾಡಕ್ಟ್; ದಿವ್ಯಾ ಎಸ್, ಮ್ಯಾನೇಜಿಂಗ್ ಡೈರೆಕ್ಟರ್, ರಾಮೆಶ್ವರಂ ಕೆಫೆ; ರಾಮನಾಥ್ ಭಟ್, ವ್ಯವಸ್ಥಾಪಕ ನಿರ್ದೇಶಕರು. ರಿಪೋಸ್ ಮತ್ತು ಎಚ್, ಆರ್, ಪ್ರಭಾಕರ್, ಟ್ಯಾಕ್ಸ್ ಅಂಡ್ ಅಕೌಂಟಿಂಗ್ ಸರ್ವೀಸ್ ಕಂ. ಇವರು ಭಾಗಿಯಾಗಿ ಮಾತನಾಡುತ್ತಾರೆ.
ಮೇ 28ರ ಭಾನುವಾರ ಬೆಳಗ್ಗೆ 11.30ರಿಂದ 12.30ರವರೆಗೆ ನಡೆಯುವ “ಕನ್ನಡದಲ್ಲಿ ಸಾಹಿತ್ಯೇತರ ಕೃತಿಗಳ ಸುಗ್ಗಿʼ ಸಂವಾದದಲ್ಲಿ ಆರ್ಥಿಕ ತಜ್ಞರಾದ ರಂಗಸ್ವಾಮಿ ಮೂಕನಹಳ್ಳಿ, ಅಮ್ಮ ಹೇಳಿದ ಎಂಟು ಸುಳ್ಳುಗಳು ಖ್ಯಾತಿಯ ಜನಪ್ರಿಯ ಲೇಖಕ ಎ ಆರ್ ಮಣಿಕಾಂತ್, ಖ್ಯಾತ ಕಾದಂಬರಿಗಾರ್ತಿ ಡಾ. ಶಾಂತಲಾ, ವಿಸ್ತಾರ ನ್ಯೂಸ್ ಕಾರ್ಯ ನಿರ್ವಾಹಕ ಸಂಪಾದಕ ಶರತ್ ಎಂ. ಎಸ್ ಭಾಗವಹಿಸುತ್ತಾರೆ. ವಿಸ್ತಾರ ನ್ಯೂಸ್ ಆಂಕರ್ ಅಭಿಷೇಕ್ ರಾಮಪ್ಪ ಅವರು ಈ ಗೋಷ್ಠಿ ನಿರ್ವಹಿಸಲಿದ್ದಾರೆ.
ಇನ್ನಿತರ ವಿಶೇಷ ಆಕರ್ಷಣೆಗಳೇನು?
ಪುಸ್ತಕ ಮೇಳ: ನಾಡಿನ ಪ್ರತಿಷ್ಠಿತ ಪುಸ್ತಕ ಮಳಿಗೆಗಳಲ್ಲಿ ಸಾವಿರಾರು ಪುಸ್ತಕಗಳ ಆಯ್ಕೆ. ವಿಶೇಷ ರಿಯಾಯಿತಿ.
ಕಾರ್ಟೂನ್ ಫೆಸ್ಟಿವಲ್: ಆಹ್ವಾನಿತ ಕಲಾವಿದರಿಂದ ಸ್ಥಳದಲ್ಲೇ ಕಾರ್ಟೂನ್, ಪೆನ್ಸಿಲ್ ಸ್ಕೆಚ್, ವ್ಯಕ್ತಿಚಿತ್ರಗಳ ರಚನೆ ಇತ್ಯಾದಿ.
ಜತೆಗೆ, ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳಿರುತ್ತವೆ.
ಸವಿ ರುಚಿ: ರಾಜ್ಯದ ವಿವಿಧೆಡೆಯ ಖಾದ್ಯ ತಿನಿಸುಗಳ ಸಂಗಮ.
ಹೆಸರು ನೋಂದಾಯಿಸಿ ರಿಯಾಯಿತಿ ಪಡೆಯಿರಿ
ಎರಡು ದಿನಗಳ ಈ ಸಾಹಿತ್ಯ ಸಂಭ್ರಮ ವಿಭಿನ್ನವಾಗಿ ನಡೆಯಲಿದೆ. ಪ್ರವೇಶ ಉಚಿತವಾಗಿದ್ದು, ಮೊದಲೇ ಹೆಸರು ನೋಂದಾಯಿಸಿಕೊಂಡವರಿಗೆ ಪುಸ್ತಕ ಖರೀದಿಯಲ್ಲಿ ಶೇ.15ರಷ್ಟು ರಿಯಾಯಿತಿ ಮತ್ತು ನೆನಪಿನ ಕಾಣಿಕೆ ಸಿಗಲಿದೆ. ಈಗಾಗಲೇ ರಾಜ್ಯದ ನಾನಾ ಕಡೆಗಳಿಂದ ನೂರಾರು ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಎರಡು ದಿನಗಳ ಈ ವಿಶಿಷ್ಟ ಮತ್ತು ಉಪಯುಕ್ತ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬ ಸಮೇತ ಆಗಮಿಸಿ ಎಂದು ವಿಸ್ತಾರ ನ್ಯೂಸ್ ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಮತ್ತು ವಿಸ್ತಾರ ಮೀಡಿಯಾ ಸಂಸ್ಥೆಯ ಚೇರ್ಮನ್, ಎಂಡಿ ಎಚ್ ವಿ ಧರ್ಮೇಶ್ ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ವಿಸ್ತಾರ ನ್ಯೂಸ್ ಯುಗಾದಿ ಕಥಾಸ್ಪರ್ಧೆ: ಇತಿಹಾಸ ಬರೆದ ಕಥಾಪ್ರವಾಹ; ಟಾಪ್ 25 ಕಥೆಗಾರರ ಪಟ್ಟಿ ಇಲ್ಲಿದೆ!