Site icon Vistara News

ವಿಸ್ತಾರ TOP 10 NEWS | ಯಡಿಯೂರಪ್ಪ ಪುನರಾಗಮನದಿಂದ ಸೆನ್ಸೆಕ್ಸ್‌ ಸಂಭ್ರಮದವರೆಗಿನ ಪ್ರಮುಖ ಸುದ್ದಿಗಳಿವು

arasikere, BJP parliamentary board, bs yeddiyurappa, election hawa, FIFA, Ganeshothsav, Jacqueline Fernandez, latest, modi story, savarkar issue, short term loan, udupi news

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಪ್ರಮುಖ ಬದಲಾವಣೆ ಎನ್ನಬಹುದಾದ ಬೆಳವಣಿಗೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಕೇಂದ್ರ ಬಿಜೆಪಿ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಯಲ್ಲಿ ಸ್ಥಾನ ಕಲ್ಪಿಸಲಾಗಿದೆ. ಶಾಲೆಗಳಲ್ಲಿ ಗಣೇಶೋತ್ಸವಕ್ಕೆ ಮುಕ್ತ ಅವಕಾಶ ಎಂಬ ಸಚಿವರ ಹೇಳಿಕೆ ಮತ್ತೊಂದು ಸುತ್ತಿನ ವಿವಾದಕ್ಕೆ ತೆರೆದುಕೊಳ್ಳುವ ಸೂಚನೆ ನೀಡಿದೆ, ನಾಲ್ಕು ತಿಂಗಳ ನಂತರ ಸೆನ್ಸೆಕ್ಸ್‌ ಮತ್ತೆ ಅರವತ್ತು ಸಾವಿರ ಹಂತಕ್ಕೆ ಮರಳಿದೆ ಎನ್ನುವುದು ಸೇರಿದಂತೆ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. ಬಿಜೆಪಿ ಕೇಂದ್ರ ಚುನಾವಣಾ ಸಮಿತಿ, ಸಂಸದೀಯ ಮಂಡಳಿಯಲ್ಲಿ ಯಡಿಯೂರಪ್ಪಗೆ ಮಹತ್ವದ ಸ್ಥಾನ
ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರನ್ನು ಕೇಂದ್ರ ಬಿಜೆಪಿ ಚುನಾವಣಾ ಸಮಿತಿ ಸದಸ್ಯರಾಗಿ ಹಾಗೂ ಸಂಸದೀಯ ಮಂಡಳಿಗೆ ನೇಮಕ ಮಾಡಲಾಗಿದೆ. ಈ ಕುರಿತು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಸೂಚನೆ ಮೇರೆಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಧಾನ ಕಾರ್ಯಾಲಯ ಪ್ರಭಾರಿ ಅರುಣ್‌ ಸಿಂಗ್‌ ಆದೇಶ ಹೊರಡಿಸಿದ್ದಾರೆ. ಕೇಂದ್ರೀಯ ಸಂಸದೀಯ ಮಂಡಳಿಯು ಪಕ್ಷದ ಸಂಪೂರ್ಣ ನಿರ್ಧಾರವನ್ನು ಕೈಗೊಳ್ಳುವ ಅತ್ಯುನ್ನತ ಸಮಿತಿಯಾಗಿದೆ. ಜತೆಗೆ, ಪ್ರತಿ ಚುನಾವಣೆಯಲ್ಲೂ ಟಿಕೆಟ್‌ ಅಂತಿಮಗೊಳಿಸುವುದು ಹಾಗೂ ಚುನಾವಣಾ ರಣತಂತ್ರ ಹೆಣೆಯುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: ಸ್ವತಃ ನರೇಂದ್ರ ಮೋದಿಯೇ ಬಿ.ಎಸ್‌. ಯಡಿಯೂರಪ್ಪಗೆ ಫೋನ್‌ ಮಾಡಿ ಒಪ್ಪಿಸಿದರು!

2. ಕೇಂದ್ರ ಬಿಜೆಪಿಗೆ ಬಿ.ಎಸ್‌. ಯಡಿಯೂರಪ್ಪ ನೇಮಕ ಆದೇಶ: ಯಾರ‍್ಯಾರಿಗೆ ಏನೇನು ಸಂದೇಶ?
ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಕೇಂದ್ರ ಬಿಜೆಪಿ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿಗೆ ನೇಮಕ ಮಾಡಲಾಗಿದೆ. ರಾಷ್ಟ್ರ ರಾಜಕಾರಣವೇ ಬೇಡ ಎನ್ನುತ್ತಿದ್ದ ಯಡಿಯೂರಪ್ಪ ಅವರನ್ನು ಸ್ವತಃ ಪ್ರಧಾನಿ ಮೋದಿ ಕರೆ ಮಾಡಿ ಒಪ್ಪಿಸಿದ್ದಾರೆ ಎನ್ನಲಾಗಿದ್ದು, ಈ ನೇಮಕವು ರಾಜ್ಯ ರಾಜಕಾರಣದ ದೃಷ್ಟಿಯಿಂದ ಅನೇಕ ಸಂದೇಶಗಳನ್ನು ನೀಡುತ್ತದೆ. ರಾಜ್ಯದ ಮಟ್ಟಿಗೆ ಯಡಿಯೂರಪ್ಪ ಅವರನ್ನು ಕಡೆಗಣಿಸುವುದಿಲ್ಲ ಎನ್ನುವುದರ ಜತೆಗೆ, ಪುತ್ರ ಬಿ.ವೈ. ವಿಜಯೇಂದ್ರ ಭವಿಷ್ಯ, ರಾಜ್ಯಾಧ್ಯಕ್ಷರ ನೇಮಕದ ಮೇಲೆಯೂ ಪ್ರಭಾವ ಬೀರಲಿದೆ. ಈ ಕುರಿತು ಸಂಪೂರ್ಣ ವಿಶ್ಲೇಷಣೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

3. Modi Story | ʻತಂಗಿʼಗೆ ನರೇಂದ್ರ ಮೋದಿ ಕೊಟ್ಟ 11 ರೂಪಾಯಿ, ಅರ್ಧ ಗಂಟೆಯಲ್ಲಿ 7.5 ಲಕ್ಷವಾಗಿತ್ತು !
ಪ್ರಧಾನಿ ನರೇಂದ್ರ ಮೋದಿ ಬೆಳೆದು ಬಂದ ಕುರಿತು, ಅವರ ತಾಯಿಯ ಕುರಿತು ಅನೇಕ ಘಟನೆಗಳನ್ನು ಕೇಳಿರಬಹುದು. ಆದರೆ ಮೋದಿಯವರ ಮಮತೆ, ಪ್ರೀತಿ ಕುರಿತು ಹರ್ಯಾಣದ ಬಿಜೆಪಿ ನಾಯಕಿ ಡಾ. ಸುಧಾ ಯಾದವ್‌ ಹೇಳಿರುವ ಕಥೆ ಇನ್ನೂ ಅದ್ಭುತವಾಗಿದೆ. ಮೊದಲ ಚುನಾವಣೆ ಎದುರಿಸುವಾಗ ಅಂದಿನ ಬಿಜೆಪಿ ನಾಯಕ ನರೇಂದ್ರ ಮೋದಿ ನೀಡಿದ 11 ರೂ. ಮಾಡಿದ ಜಾದೂ ಬಗ್ಗೆ ಭಾವನಾತ್ಮಕವಾಗಿ ವಿವರಿಸಿದ್ದಾರೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. ಶಾಲೆಗಳಲ್ಲಿ ಗಣೇಶೋತ್ಸವ ಆಚರಣೆಗೆ ಮುಕ್ತ ಅವಕಾಶ: ಮತ್ತೆ ಶುರುವಾಗುತ್ತಾ ಹಿಜಾಬ್‌ ವಿವಾದದ ಧರ್ಮ ಸಂಘರ್ಷ
ರಾಜ್ಯದ ಯಾವುದೇ ಸರ್ಕಾರಿ ಶಾಲೆಯಲ್ಲಿ ಗಣೇಶೋತ್ಸವ ಆಚರಣೆಗೆ ಸರಕಾರ ಮುಕ್ತ ಅವಕಾಶ ನೀಡಿದೆ. ಹಿಂದಿನಿಂದ ಆಚರಣೆ ಮಾಡಿಕೊಂಡು ಬಂದವರೂ ಆಚರಿಸಬಹುದು, ಹೊಸದಾಗಿ ಆರಂಭ ಮಾಡುವವರಿಗೂ ಮುಕ್ತ ಸ್ವಾತಂತ್ರ್ಯವಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರು ಸ್ಪಷ್ಟಪಡಿಸಿದ್ದಾರೆ. ಈ ಅನುಮತಿ ಇದೀಗ ವಿವಾದದ ರೂಪ ಪಡೆದುಕೊಳ್ಳುವ ಹಾದಿಯಲ್ಲಿದೆ. ಗಣೇಶ ಮೂರ್ತಿ ಪ್ರತಿಷ್ಠಾಪನೆ, ಉತ್ಸವ ಆಚರಣೆಗೆ ಅವಕಾಶ ನೀಡುವ ಸರಕಾರ ಹಿಂದೆ ಮುಸ್ಲಿಂ ಧಾರ್ಮಿಕ ಸಂಕೇತಗಳು, ಆಚರಣೆಗಳಿಗೆ ಸಂಬಂಧಿಸಿ ಅತ್ಯಂತ ಕಟುವಾಗಿ ನಡೆದುಕೊಂಡಿದೆ ಎನ್ನುವುದನ್ನು ಕೆಲವರು ನೆನಪಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇದೊಂದು ಧರ್ಮ ಸಂಘರ್ಷದ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಕಂಡುಬಂದಿದೆ. ಜತೆಗೆ ಕಳೆದ ಕೆಲವು ತಿಂಗಳಿನಿಂದ ತಣ್ಣಗಾಗಿದ್ದ ಹಿಜಾಬ್‌ ವಿವಾದವೂ ಮರುಜೀವ ಪಡೆದುಕೊಳ್ಳುವ ಸಾಧ್ಯತೆಯೂ ಎದುರಾಗಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Cabinet decision | ಅಲ್ಪಾವಧಿಯ ಕೃಷಿ ಸಾಲಕ್ಕೆ 1.5% ಬಡ್ಡಿ ರಿಯಾಯಿತಿಗೆ ಸಂಪುಟ ಒಪ್ಪಿಗೆ
ಅಲ್ಪಾವಧಿಯ ಕೃಷಿ ಸಾಲದ ವಿತರಣೆಗೆ ನೆರವಾಗಲು ವಾರ್ಷಿಕ ೧.೫% ಬಡ್ಡಿ ರಿಯಾಯಿತಿಗೆ (Interest subvention) ಕೇಂದ್ರ ಸಚಿವ ಸಂಪುಟ ಸಭೆ ಬುಧವಾರ (cabinet decision) ಅನುಮೋದಿಸಿದೆ. ಸಚಿವ ಸಂಪುಟ ಸಭೆಯ ಬಳಿಕ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಅವರು ವಿವರಗಳನ್ನು ನೀಡಿದರು. ಈ ನೆರವನ್ನು ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕ್‌ಗಳು, ಕಿರು ಹಣಕಾಸು ಸಂಸ್ಥೆಗಳು, ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ಗಳು, ಸಹಕಾರ ಬ್ಯಾಂಕ್‌ಗಳು, ಕಂಪ್ಯೂಟರೀಕೃತ ಪ್ರಾಥಮಿಕ ಕೃಷಿ ಪತ್ತಿನ ಸೊಸೈಟಿಗಳಿಗೆ ನೀಡಲಾಗುವುದು. ಇದರಿಂದ ಅವುಗಳಿಗೆ ೨೦೨೨-೨೩ರಿಂದ ೨೦೨೪-೨೫ರ ತನಕ ರೈತರಿಗೆ ೩ ಲಕ್ಷ ರೂ. ತನಕ ಅಲ್ಪಾವಧಿಯ ಕೃಷಿ ಸಾಲ ವಿತರಿಸಲು ಹಾದಿ ಸುಗಮವಾಗಲಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. ವಿಸ್ತಾರ Explainer | FIFA ban: ಪ್ರಫುಲ್‌ ಪಟೇಲ್‌ ಕಳ್ಳಾಟಕ್ಕೆ ಫಿಫಾದ ಕಾಲ್ಚೆಂಡಾದ ಭಾರತೀಯ ಫುಟ್ಬಾಲ್‌
ಅಖಿಲ ಭಾರತ ಫುಟ್ಬಾಲ್‌ ಒಕ್ಕೂಟ (AIFF) ವನ್ನು ಅಂತಾರಾಷ್ಟ್ರೀಯ ಫುಟ್ಬಾಲ್‌ ಸಂಸ್ಥೆಗಳ ಒಕ್ಕೂಟ (FIFA) ವಜಾ ಮಾಡಿದೆ. ಕೂಡಲೇ ಈ ಕುರಿತು ಮಧ್ಯಸ್ಥಿಕೆ ವಹಿಸಿ ವಾತಾವರಣ ತಿಳಿಗೊಳಿಸುವಂತೆ, ಭಾರತದಲ್ಲಿ ಮುಂದಿನ ಅಕ್ಟೋಬರ್‌ನಲ್ಲಿ ನಡೆಯಬೇಕಿದ್ದ 17 ವರ್ಷದೊಳಗಿನ ಮಹಿಳೆಯರ ಫುಟ್ಬಾಲ್‌ ವಿಶ್ವಕಪ್‌ ಪಂದ್ಯಾಟ ನಡೆಯುವಂತೆ ನೋಡಿಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ತಾಕೀತು ಮಾಡಿದೆ. ಭಾರತೀಯ ಸಂಘಟನೆಯನ್ನು ವಜಾ ಮಾಡಲು ಫಿಫಾಗೆ ಇರುವ ಹಕ್ಕೇನು? ಯಾಕೆ ಈ ವಜಾ? ಇದಕ್ಕೆ ಕಾರಣ ಏನು, ಯಾರು? ಭಾರತೀಯ ಫುಟ್ಬಾಲ್‌ ಕ್ಷೇತ್ರಕ್ಕೆ ಇದರಿಂದ ಏನು ಹಾನಿ? ಇದರಿಂದ ಪಾರಾಗುವುದು ಹೇಗೆ? ಈ ಕುರಿತು ವಿಸ್ತೃತ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.
ಪೂರಕ ಮಾಹಿತಿಗಾಗಿ: AIFF BAN | ಫುಟ್ಬಾಲ್‌ ಒಕ್ಕೂಟದ ವಿಚಾರಣೆ ಮುಂದೂಡಿದ ಸುಪ್ರೀಮ್‌ ಕೋರ್ಟ್‌

7. ಉಡುಪಿ ಸರ್ಕಲ್‌ನಲ್ಲಿ ಸಾವರ್ಕರ್‌ ಬ್ಯಾನರ್‌ ಮಾತ್ರ ಅಲ್ಲ, ಪುತ್ಥಳಿನೇ ಸ್ಥಾಪನೆ ಮಾಡ್ತೇವೆ: ಹಿಂದು ಮುಖಂಡರ ಸವಾಲು
ಉಡುಪಿ ಬ್ರಹ್ಮಗಿರಿ ಸರ್ಕಲ್‌ನಲ್ಲಿ ಹಾಕಲಾಗಿರುವ ಸಾವರ್ಕರ್‌ ಚಿತ್ರ ಇರುವ ಬ್ಯಾನರನ್ನು ತೆಗೆಯಬೇಕು ಎಂಬ ಎಸ್‌ಡಿಪಿಐ ಬೇಡಿಕೆಗೆ ಬಿಜೆಪಿಗೆ ಸಡ್ಡು ಹೊಡೆದಿದೆ. ಅದನ್ನು ತೆರವುಗೊಳಿಸುವ ಬದಲು ಬುಧವಾರ ಮುಂಜಾನೆ ಬ್ಯಾನರ್‌ಗೆ ಹೊಸದಾಗಿ ಮಾಲಾರ್ಪಣೆ ಮಾಡಿದೆ. ಜತೆಗೆ ಸಾವರ್ಕರ್‌ ಅವರನ್ನು ವಿರೋಧಿಸುತ್ತಿರುವ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರ ಮನೆ ಮುಂದೆಯೂ ಸಾವರ್ಕರ್‌ ಫೋಟೊ ಹಾಕುವುದಾಗಿ ಬಿಜೆಪಿ ನಾಯಕ ಯಶಪಾಲ್‌ ಸುವರ್ಣ ಸವಾಲು ಹಾಕಿದ್ದಾರೆ. ಜತೆಗೆ ಸರ್ಕಲ್‌ನಲ್ಲಿ ಸಾವರ್ಕರ್‌ ಪುತ್ಥಳಿ ಸ್ಥಾಪಿಸುವುದಾಗಿಯೂ ಘೋಷಿಸಿದ್ದಾರೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಪೂರಕ ಓದಿಗಾಗಿ: ಸಾವರ್ಕರ್‌ ವಿಷಯದಲ್ಲಿ ಬೀದಿ ಕಾಳಗ ದುರದೃಷ್ಟಕರ ಎಂದ ಇತಿಹಾಸ ತಜ್ಞ ವಿಕ್ರಮ ಸಂಪತ್‌

8. ಎಲೆಕ್ಷನ್ ಹವಾ | ಅರಸೀಕೆರೆ | ಒಕ್ಕಲಿಗ ವರ್ಸಸ್ ವೀರಶೈವ-ಲಿಂಗಾಯತ ಅಭ್ಯರ್ಥಿ ಫೈಟ್‌ ನಿರೀಕ್ಷೆ
ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯದ ಎಲ್ಲ ಕ್ಷೇತ್ರಗಳ ಚಿತ್ರಣವನ್ನು ನೀಡುವ ಎಲೆಕ್ಷನ್‌ ಹವಾ ಸರಣಿಯಲ್ಲಿ ಹಾಸನ ಜಿಲ್ಲೆಯ ಅರಸೀಕೆರೆ ಕ್ಷೇತ್ರದ ವಿಶ್ಲೇಷಣೆ. ಕಲ್ಪತರು ನಾಡಿನ ಅರಸೀಕೆರೆ ವಿಧಾನಸಭೆ ಚುನಾವಣೆ ಕಾವು ಜೋರಾಗಿದೆ. ಸಾಧನೆಯ ಮಾನದಂಡ, ಜಾತಿಯ ಅಸ್ತ್ರ ಅಭ್ಯರ್ಥಿಗಳ ಸೋಲು-ಗೆಲುವನ್ನು ನಿರ್ಧರಿಸಲಿದ್ದು, ಹಾಲಿ ಶಾಸಕ ಕೆ. ಎಂ. ಶಿವಲಿಂಗೇಗೌಡ (ಕೆಎಂಶಿ) ಹಾಗೂ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಎನ್.ಆರ್ . ಸಂತೋಷ್ ನಡುವೆ ಬಿಗ್ ಫೈಟ್ ಏರ್ಪಟ್ಟಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Jacqueline Fernandez | 215 ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ʼರಕ್ಕಮ್ಮʼ ಜಾಕ್ವೆಲಿನ್‌ಗೆ ಸಂಕಷ್ಟ
ವಿಕ್ರಾಂತ್‌ ರೋಣ ಸಿನಿಮಾದ “ರಾ ರಾ ರಕ್ಕಮ್ಮ” ಹಾಡಿನ ಮೂಲಕ ಪಡ್ಡೆ ಹುಡುಗರ ಹೃದಯಕ್ಕೆ ಕಿಚ್ಚು ಹಚ್ಚಿದ ಬಾಲಿವುಡ್‌ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ (Jacqueline Fernandez) ಅವರಿಗೆ ೨೧೫ ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ಸಂಕಷ್ಟ ಎದುರಾಗಿದೆ. ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಸುಲಿಗೆ ಪ್ರಕರಣದಲ್ಲಿ ಫರ್ನಾಂಡಿಸ್‌ ಅವರನ್ನು ಆರೋಪಿಯನ್ನಾಗಿಸಿದ್ದು, ಶೀಘ್ರದಲ್ಲಿಯೇ ನಟಿ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸುವ ಸಾಧ್ಯತೆ ಇದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Sensex @60K | 4 ತಿಂಗಳ ಬಳಿಕ 60,000 ಅಂಕಗಳ ಎತ್ತರಕ್ಕೆ ಮತ್ತೆ ಜಿಗಿದ ಸೆನ್ಸೆಕ್ಸ್
ಮುಂಬಯಿ ಷೇರು ಮಾರುಕಟ್ಟೆ ಸಂವೇದಿ‌ ಸೂಚ್ಯಂಕ ಸೆನ್ಸೆಕ್ಸ್ ಬುಧವಾರ ೬೦,೦೦೦ ಅಂಕಗಳ ದಾಖಲೆಯ (Sensex @60K) ಎತ್ತರವನ್ನು ಮತ್ತೆ ಗಳಿಸಿದೆ. ಕಳೆದ ಏಪ್ರಿಲ್‌ ೫ರ ಬಳಿಕ ಕುಸಿದಿದ್ದ ಸೂಚ್ಯಂಕ ಇದೀಗ ಮತ್ತೆ ೬೦ ಸಾವಿರ ಅಂಕಗಳ ಗಡಿಯನ್ನು ದಾಟಿದೆ. ಸೆನ್ಸೆಕ್ಸ್‌ ಬುಧವಾರ ಬೆಳಗ್ಗೆ ೧೦.೨೨ರ ವೇಳೆಗೆ ೬೦,೧೩೧ ಅಂಕಗಳಲ್ಲಿ ವಹಿವಾಟು ನಡೆಸುತ್ತಿತ್ತು. ಅಂದರೆ ೨೮೯ ಅಂಕಗಳ ಜಿಗಿತ ದಾಖಲಿಸಿತ್ತು. ನಿಫ್ಟಿ ೮೫ ಅಂಕ ಏರಿಕೊಂಡು ೧೭,೯೧೧ ಅಂಕಗಳಲ್ಲಿ ವಹಿವಾಟು ನಡೆಸುತ್ತಿತ್ತು. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version