Site icon Vistara News

ವಿಸ್ತಾರ TOP 10 NEWS | ಬೊಮ್ಮಾಯಿ ಸಿಎಂ ಸೀಟು ಭದ್ರದಿಂದ ಜೈಶಂಕರ್‌ ಅವರ ಸಿಂಪ್ಲಿಸಿಟಿವರೆಗೆ ಪ್ರಮುಖ ಸುದ್ದಿಗಳಿವು

TOP 10-12-08-2022

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧಿಸಿ ಹರಡಿಕೊಂಡಿದ್ದ ವದಂತಿಗಳನ್ನೆಲ್ಲ ಬಿಜೆಪಿ ಹೈಕಮಾಂಡ್‌ ಗುಡಿಸಿಹಾಕಿದೆ. ೨೦೨೩ರ ಚುನಾವಣೆಯನ್ನು ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ಎದುರಿಸಲಾಗುತ್ತದೆ ಎಂದು ಅದು ಹೇಳಿದೆ. ಪರೇಶ್‌ ಮೇಸ್ತ ಕೊಲೆ ಪ್ರಕರಣದ ನಂ.೧ ಆರೋಪಿಯನ್ನು ವಕ್ಫ್‌ ಬೋರ್ಡ್‌ ಉಪಾಧ್ಯಕ್ಷನನ್ನಾಗಿ ಮಾಡಿದ್ದ ಬಿಜೆಪಿ ತೀವ್ರ ಆಕ್ರೋಶ ಎದುರಾದಾಗ ಆದೇಶವನ್ನು ರದ್ದು ಮಾಡಿದೆ. ರಾಜ್ಯದಲ್ಲಿ ಮುಂದುವರಿದ ತ್ರಿವರ್ಣ ಧ್ವಜ ವಿವಾದ, ಲಂಚ-ಮಂಚದ ಹೇಳಿಕೆಗಳ ನಡುವೆ ನಿಜಕ್ಕೂ ಖುಷಿ ಕೊಟ್ಟಿದ್ದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರ ಸರಳತೆ… ಹೀಗೆ ಪ್ರಮುಖ, ವಿಭಿನ್ನ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. ಬೊಮ್ಮಾಯಿ ನೇತೃತ್ವದಲ್ಲೇ 2023ರ ಚುನಾವಣೆ: ಬಿಜೆಪಿ ಹೈಕಮಾಂಡ್‌ ಘೋಷಣೆ, ಎಲ್ಲ ಗೊಂದಲಕ್ಕೆ ತೆರೆ
ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ಬಿಜೆಪಿ ಚುನಾವಣೆ ಎದುರಿಸಲಿದೆ ಎಂದು ಬಿಜೆಪಿ ಹೈಕಮಾಂಡ್‌ ಘೋಷಿಸಿದೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರು ಖಾಸಗಿ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಇದರೊಂದಿಗೆ ಮುಖ್ಯಮಂತ್ರಿ ಬದಲಾವಣೆ ಕುರಿತ ಎಲ್ಲ ಚರ್ಚೆಗಳಿಗೆ ತೆರೆ ಬಿದ್ದಂತಾಗಿದೆ. ರಾಜ್ಯ ಬಿಜೆಪಿ ಸರಕಾರದಲ್ಲಿ ಶೀಘ್ರವೇ ಮೂರನೇ ಸಿಎಂ ಬರಲಿದ್ದಾರೆ ಎಂದು ಕಾಂಗ್ರೆಸ್‌ ಇತ್ತೀಚೆಗೆ ಭಾರಿ ಪ್ರಚಾರವನ್ನು ನಡೆಸಿತ್ತು.
ಪೂರ್ಣ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

2. ಪರೇಶ್‌ ಮೇಸ್ತಾ ಕೊಲೆ ಆರೋಪಿಗೆ ವಕ್ಫ್‌ ಮಂಡಳಿ ಉಪಾಧ್ಯಕ್ಷತೆ ನೀಡಿ ಪೇಚಿಗೆ ಸಿಲುಕಿದ ಬಿಜೆಪಿ
ಪಕ್ಷದೊಳಗೆ ಕಾಣಿಸಿಕೊಂಡ ಆಕ್ರೋಶ, ಸಾರ್ವಜನಿಕವಾಗಿ ಕೇಳಿಬಂದ ಗೇಲಿಯನ್ನು ಗಮನಿಸಿದ ಸರಕಾರ ಉತ್ತರ ಕನ್ನಡ ಜಿಲ್ಲಾ ವಕ್ಫ್‌ ಮಂಡಳಿ ಉಪಾಧ್ಯಕ್ಷ ಸ್ಥಾನದ ನೇಮಕಕ್ಕೆ ತಡೆ ನೀಡಿ ಆದೇಶ ಹೊರಡಿಸಿದೆ. ಜಿಲ್ಲಾ ವಕ್ಫ್‌ ಮಂಡಳಿ ಉಪಾಧ್ಯಕ್ಷರನ್ನಾಗಿ ಜಮಾಲ್ ಅಜಾದ್ ಅಣ್ಣಿಗೇರಿ ಅವರನ್ನು ನೇಮಿಸಿ ಸರಕಾರ ಗುರುವಾರ ಆದೇಶ ಹೊರಡಿಸಿತ್ತು. ಅಜಾದ್‌ ಅಣ್ಣಿಗೇರಿ ೨೦೧೭ರ ಡಿಸೆಂಬರ್‌ನಲ್ಲಿ ಹೊನ್ನಾವರದಲ್ಲಿ ನಡೆದ ಪರೇಶ್‌ ಮೇಸ್ತಾ ಎಂಬ ಹಿಂದು ಯುವಕನ ಕೊಲೆ ಪ್ರಕರಣದಲ್ಲಿ ಪ್ರಧಾನ ಆರೋಪಿಯಾಗಿದ್ದಾರೆ. ಅವರಿಗೆ ಅಧಿಕಾರ ನೀಡಿದ್ದು ಬಿಜೆಪಿ ಕಾರ್ಯಕರ್ತರನ್ನು ಕೆರಳಿಸಿತ್ತು. ಈ ಆಕ್ರೋಶದ ಬಿಸಿಗೆ ಕರಗಿದ ಸರಕಾರ ನೇಮಕಾತಿ ಆದೇಶಕ್ಕೆ ತಡೆ ನೀಡಿದೆ.
ಪೂರ್ಣ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

3. ಬೆಂಗಳೂರಿನಲ್ಲಿ ಚೀನಾ ಮೂಲದ ಶೆಲ್‌ ಕಂಪನಿ ಪತ್ತೆ, ಇ.ಡಿಯಿಂದ 370 ಕೋಟಿ ಮೌಲ್ಯದ ಸಂಪತ್ತು ಫ್ರೀಜ್‌
ಬೆಂಗಳೂರು:
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಯಲ್ಲೋ ಟ್ಯೂನ್‌ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ ಎಂಬ ಶೆಲ್‌ ಕಂಪನಿಯ ಮೇಲೆ ದಾಳಿ ಮಾಡಿದ್ದು, ಸುಮಾರು ೩೭೦ ಕೋಟಿ ರೂ. ಮೌಲ್ಯದ ಸಂಪತ್ತನ್ನು ಫ್ರೀಜ್‌ ಮಾಡಿದೆ. ಇದು ಕ್ರಿಪ್ಟೋ ಕರೆನ್ಸಿ ಸೇರಿದಂತೆ ಹಲವು ವ್ಯವಹಾರಗಳನ್ನು ನಡೆಸುವ ಸಂಸ್ಥೆಯಾಗಿದ್ದು, ಸುಮಾರು ೩೭೦ ಕೋಟಿ ರೂ. ಮೌಲ್ಯದ ಡಿಜಿಟಲ್‌ ಕರೆನ್ಸಿಯನ್ನು ಬ್ಯಾಂಕ್‌ನಲ್ಲಿ ಇಟ್ಟಿತ್ತು ಎಂದು ತಿಳಿದುಬಂದಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್‌ ಕ್ಲಿಕ್‌ ಮಾಡಿ

4. ಪ್ರವೀಣ್‌ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ರದ್ದಾಗಿದ್ದ ಜನೋತ್ಸವ ಆಗಸ್ಟ್‌ 28ಕ್ಕೆ ಫಿಕ್ಸ್
ಜುಲೈ ೨೮ಕ್ಕೆ ನಿಗದಿಯಾಗಿ ಕೊನೆಯ ಕ್ಷಣದಲ್ಲಿ ರದ್ದಾಗಿದ್ದ ಬಿಜೆಪಿ ಸರಕಾರದ ಸಾಧನಾ ಸಮಾವೇಶ ʻಜನೋತ್ಸವʼವನ್ನು ಆಗಸ್ಟ್‌ ೨೮ಕ್ಕೆ ಮರುನಿಗದಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ಜುಲೈ ೨೮ರಂದು ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಆಚರಿಸುವುದಕ್ಕೆ ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸಲಾಗಿತ್ತು. ಅದರ ಮಧ್ಯೆ ಜುಲೈ ೨೬ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ನೆಟ್ಟಾರಿನಲ್ಲಿ ಬಿಜೆಪಿ ಯುವಮೋರ್ಚಾ ಪದಾಧಿಕಾರಿ ಪ್ರವೀಣ್‌ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಈ ಘಟನೆಯಿಂದ ಬಿಜೆಪಿ ಕಾರ್ಯಕರ್ತರು ಕೆರಳಿದ್ದರು. ಹೀಗಾಗಿ ಸರಕಾರ ಜನೋತ್ಸವದಿಂದ ಹಿಂದೆ ಸರಿದಿತ್ತು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

೫. ತ್ರಿವರ್ಣ ಧ್ವಜಕ್ಕಿಂತಲೂ ಮೇಲೇರಿದ ಕೇಸರಿ: ಶಿಕ್ಷಣ ಸಚಿವರ ವಜಾಕ್ಕೆ ಆಗ್ರಹ
ರಾಜ್ಯದಲ್ಲಿ ತ್ರಿವರ್ಣ ಧ್ವಜಕ್ಕೆ ಸಂಬಂಧಿಸಿದ ರಾಜಕಾರಣಿಗಳ ಗುದ್ದಾಟ ಮುಂದುವರಿದಿದೆ. ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರು ತ್ರಿವರ್ಣ ಧ್ವಜಕ್ಕಿಂತಲೂ ಮೇಲೆ ಕೇಸರಿ ಧ್ವಜ ಹಾರಿಸುವ ಮೂಲಕ ಅಪಮಾನ ಮಾಡಿದ್ದಾರೆ. ಹೀಗಾಗಿ ಅವರನ್ನು ವಜಾ ಮಾಡಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ. ಈ ನಡುವೆ, ಎಲ್ಲರ ಮನೆ ಮುಂದೆ ತ್ರಿವರ್ಣ ಧ್ವಜ ಏಕೆ ಹಾರಿಸಬೇಕು ಎಂದು ಕಾರಣ ಹೇಳಿದ್ದ ಸಿಎಂ ಬೊಮ್ಮಾಯಿ ಅವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ೧೩ ಪ್ರಶ್ನೆ ಕೇಳಿದ್ದಾರೆ. ಪೂರ್ಣ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ಇದು ಲಂಚ, ಮಂಚದ ಸರಕಾರ ಎಂದ ಪ್ರಿಯಾಂಕ ಖರ್ಗೆಗೆ ಸಖತ್‌ ಕ್ಲಾಸ್‌
ʻಇಂದು ಲಂಚ ಮಂಚದ ಸರಕಾರʼ ಎಂದು ಕಾಂಗ್ರೆಸ್‌ ಶಾಸಕ ಪ್ರಿಯಾಂಕ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ. ʻʻಯುವಕರಿಗೆ ನೌಕರಿ ಬೇಕಂದ್ರೆ ಲಂಚ ಕೊಡಬೇಕು. ಯುವತಿಯರಿಗೆ ನೌಕರಿ ಬೇಕಂದ್ರೆ ಮಂಚ ಹತ್ತಬೇಕುʼʼ ಎಂದು ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆದರೆ, ಈ ಹೇಳಿಕೆಯನ್ನು ಹಲವಾರು ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಇದು ಅತ್ಯಂತ ಕೀಳುಮಟ್ಟದ ಅಭಿರುಚಿ ಎಂದು ಕ್ಲಾಸ್‌ ತೆಗೆದುಕೊಂಡಿದ್ದಾರೆ.
ಪೂರ್ಣ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

7. ಮಂತ್ರಾಲಯದಲ್ಲಿ ಶುರುವಾಯಿತು ರಾಯರ ಆರಾಧನೆ ವೈಭವ
ಶ್ರೀ ಕ್ಷೇತ್ರ ಮಂತ್ರಾಲಯದಲ್ಲಿ ರಾಯರ ಆರಾಧನೆ ಆರಂಭಗೊಂಡಿದೆ. ದೇಶ-ವಿದೇಶಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದು, ಬೃಂದಾವನದ ದರ್ಶನ ಪಡೆಯುತ್ತಿದ್ದಾರೆ. ಆರಾಧನೆಯ ನಿಮಿತ್ತ ನಡೆಯುವ ಏಳು ದಿನಗಳ ಕಾರ್ಯಕ್ರಮಗಳಲ್ಲಿ ಪೂರ್ವಾರಾಧನೆ, ಮಧ್ಯಾರಾಧನೆ ಮತ್ತು ಉತ್ತರಾರಾಧನೆ ಬಹಳ ಮುಖ್ಯವಾದ ದಿನಗಳಾಗಿವೆ.
ಪೂರ್ಣ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

೮. ಬಿಜೆಪಿ ಕಾರ್ಯಕರ್ತನ ಕರೆ ಮನ್ನಿಸಿ ಮನೆಗೆ ಬಂದು ಖುಷಿಪಟ್ಟ ಸಿಂಪಲ್‌ ವಿದೇಶಾಂಗ ಮಂತ್ರಿ|
ಕೇಂದ್ರ ವಿದೇಶಾಂಗ ಸಚಿವರಾಗಿರುವ ಎಸ್‌. ಜೈಶಂಕರ್‌ ಅವರು ಶುಕ್ರವಾರ ಆನೇಕಲ್‌ನ ಹುಲ್ಲಹಳ್ಳಿಯ ಮನೆಯೊಂದಕ್ಕೆ ಭೇಟಿ ನೀಡಿದರು. ಬಿಜೆಪಿ ಕಾರ್ಯಕರ್ತ ಹುಲ್ಲಹಳ್ಳಿ ಶ್ರೀನಿವಾಸ್‌ ಅವರ ಆಹ್ವಾನದ ಮೇರೆಗೆ ಅವರ ಮನೆಗೆ ಬಂದಿದ್ದ ಅವರು ತೋರಿದ ಸಿಂಪಲ್‌ ನಡವಳಿಕೆಗಳು ಅವರ ಬಗ್ಗೆ ಇದ್ದ ಗೌರವವನ್ನು ಇನ್ನಷ್ಟು ಹೆಚ್ಚಿಸಿತು. ಅವರು ಶ್ರೀನಿವಾಸ್‌ ಅವರ ಮನೆಯಲ್ಲಿ ನೆಲದ ಮೇಲೆ ಕುಳಿತು ಬಾಳೆ ಎಲೆಯಲ್ಲಿ ಊಟ ಮಾಡಿದ್ದಲ್ಲದೆ, ಮನೆಗೆ ಬಂದ ಎಲ್ಲರ ಜತೆ ಯಾವುದೇ ಹಮ್ಮು ಬಿಮ್ಮಿಲ್ಲದೆ ಬೆರೆತರು. ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಿದರು.
ಪೂರ್ಣ ಸುದ್ದಿಯನ್ನು ಓದಲು, ಚಿತ್ರಗಳನ್ನು ನೋಡಲು ಇಲ್ಲಿ ಕ್ಲಿಕ್‌ ಮಾಡಿ

೯. ಆಮಿರ್‌ ಖಾನ್‌ನ ಲಾಲ್‌ ಸಿಂಗ್‌ ಚಡ್ಡಾಗೆ ಬಾಯ್ಕಾಟ್‌ ಏಕೆ?
ಬಾಲಿವುಡ್‌ ನಟ ಆಮಿರ್‌ ಖಾನ್‌ ತಮ್ಮ ಮಹತ್ವಾಕಾಂಕ್ಷೆಯ ಲಾಲ್‌ ಸಿಂಗ್‌ ಚಡ್ಡಾ ಸಿನಿಮಾ ಹೊರತರುವ ಮುನ್ನವೇ ವಿವಾದ ಅವರ ಬೆನ್ನು ಹತ್ತಿತ್ತು. ಟ್ವಿಟರ್‌ನಲ್ಲಿ ʼಬಾಯ್ಕಾಟ್‌ ಲಾಲ್‌ ಸಿಂಗ್‌ ಚಡ್ಡಾʼ ಎಂಬುದು ಟ್ರೆಂಡ್‌ ಆಗಿತ್ತು. ಭರ್ತಿ ನಾಲ್ಕು ವರ್ಷಗಳ ಬಳಿಕ ಅವರ ನಟನೆಯ ಸಿನಿಮಾ ಬೆಳ್ಳಿ ತೆರೆಗೆ ಬರುತ್ತಿದೆ. ಯಾಕೆ ಈ ಬಹಿಷ್ಕಾರದ ಕರೆ, ಅಂತದ್ದೇನು ಮಾಡಿದ್ದಾರೆ ಆಮಿರ್‌ ಖಾನ್‌. ವಿವರ ಮಾಹಿತಿಗೆ ನೋಡಿ ವಿಸ್ತಾರ Explainer


೧೦. ಆಕಾಶಕ್ಕೆ ಹಾರಿತು ಗಾಳಿಪಟ, ಬಂದಿದ್ದಾನೆ ರವಿ ಬೋಪಣ್ಣ, ಡೊಳ್ಳು ಬಾರಿಸಲು ರೆಡಿ
ಯೋಗರಾಜ್‌ ಭಟ್‌-ಗಣೇಶ್‌ ಜೋಡಿಯ ಗಾಳಿಪಟ-2 ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಮೊದಲ ಪ್ರದರ್ಶನವೇ ಹೌಸ್‌ಫುಲ್‌ ಆಗಿದ್ದು, ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತಿವೆ. ಕರ್ನಾಟಕದಲ್ಲಿ 200ಕ್ಕೂ ಹೆಚ್ಚು ಸ್ಕ್ರೀನ್‌ನಲ್ಲಿ ಈ ಚಿತ್ರದ ಪ್ರದರ್ಶನ ಶುರುವಾಗಿವೆ. ಹೊರ ರಾಜ್ಯ ಹಾಗೂ ವಿದೇಶದಲ್ಲೂ 200 ಸ್ಕ್ರೀನ್‌ಗಳಲ್ಲಿ “ಗಾಳಿಪಟʼ ರಿಲೀಸ್ ಆಗಿದೆ. ಈ ನಡುವೆ ರವಿಚಂದ್ರನ್‌ ಅವರ ರವಿ ಬೋಪಣ್ಣ ಕೂಡಾ ತೆರೆಗೆ ಬಂದಿದ್ದಾನೆ. ಇನ್ನೊಂದು ಕಡೆ ರಾಷ್ಟ್ರಪ್ರಶಸ್ತಿ ವಿಜೇತ ಡೊಳ್ಳು ಸಿನಿಮಾ ರಿಲೀಸ್‌ಗೆ ಆಗಸ್ಟ್‌ ೨೬ರ ದಿನ ಫಿಕ್ಸ್‌ ಆಗಿದೆ. ವಿವರ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

Exit mobile version