Site icon Vistara News

ವಿಸ್ತಾರ TOP 10 NEWS | ಜ್ಞಾನವಾಪಿ ವಿವಾದದಲ್ಲಿ ಹಿಂದು ಪರ ಮೊದಲ ಜಯದಿಂದ ಜ.14ರಂದು ರಾಮಲಲ್ಲಾ ಪ್ರತಿಷ್ಠಾಪನೆವರೆಗೆ ಪ್ರಮುಖ ಸುದ್ದಿಗಳು

top10

ಬೆಂಗಳೂರು: ವಾರಾಣಸಿಯ ಜ್ಞಾನವಾಪಿ ಸಂಕೀರ್ಣಕ್ಕೆ ಸಂಬಂಧಿಸಿದ ಕಾನೂನು ಸಮರದಲ್ಲಿ ಹಿಂದು ಅರ್ಜಿದಾರರಿಗೆ ಮೊದಲ ಜಯ ಸಿಕ್ಕಿದೆ. ಜ್ಞಾನವಾಪಿ ಮಸೀದಿಯ ಗೋಡೆಯಲ್ಲಿರುವ ಶೃಂಗಾರ ಗೌರಿ ದೇವಿಯ ಚಿತ್ರಗಳಿಗೆ ಪೂಜೆ ನಡೆಸಲು ಅವಕಾಶ ಕೋರಿ ಸಲ್ಲಿಸಿದ ಅರ್ಜಿಯು ವಿಚಾರಣೆಗೆ ಯೋಗ್ಯ ಎಂದು ವಾರಾಣಸಿ ಜಿಲ್ಲಾ ಕೋರ್ಟ್‌ ಹೇಳಿದೆ. ಇನ್ನೊಂದೆಡೆ ಅಯೋಧ್ಯೆಯಲ್ಲಿ ೨೦೨೪ರ ಮಕರ ಸಂಕ್ರಾಂತಿ ದಿನದಂದು ರಾಮ ಲಲ್ಲಾನ ಮೂರ್ತಿ ಪ್ರತಿಷ್ಠಾಪನೆಗೆ ನಿರ್ಧಾರ ಮಾಡಲಾಗಿದೆ. ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನ ಶುರುವಾಗುತ್ತಿದ್ದಂತೆಯೇ ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿ ಕಾಂಗ್ರೆಸ್‌ ಒಂದು “ಬಾಂಬ್‌ʼ ಸ್ಫೋಟಿಸಿದೆ. ಜಿಡಿಪಿಯ ಮಾನದಂಡಗಳನ್ನು ಬದಲಿಸಬೇಕೆಂಬ ಸ್ವದೇಶಿ ಜಾಗರಣ ಮಂಚ್‌ ವಾದ, ಬೆಂಗಳೂರಿನಲ್ಲಿ ರಾಜಕಾಲುವೆಗಳನ್ನು ಒತ್ತುವರಿ ಮಾಡಿರುವ ಐಟಿ-ಬಿಟಿ ಕಂಪನಿಗಳನ್ನೂ ಬಿಡಲ್ಲ ಎಂಬ ಎಚ್ಚರಿಕೆ ಸೋಮವಾರ ಸದ್ದು ಮಾಡಿದೆ. ಇದರ ನಡುವೆಯೇ ಮರುಚೈತನ್ಯ ಪಡೆದ ಲೋಕಾಯುಕ್ತದ ಮೊದಲ ದಾಳಿಯಲ್ಲಿ ಬಿಬಿಎಂಪಿ ಜಂಟಿ ಆಯುಕ್ತರೇ ಸಿಕ್ಕಿಬಿದ್ದಿದ್ದಾರೆ. ಹೀಗೆ ನಾನಾ ವಲಯಗಳ ಕುತೂಹಲಕಾರಿ ಸುದ್ದಿಗಳ ವಿಸ್ತಾರ ಟಾಪ್‌ ೧೦ ನಿಮ್ಮ ಮುಂದೆ…

೧. ಜ್ಞಾನವಾಪಿ ಸಂಕೀರ್ಣದಲ್ಲಿ ಪೂಜೆಗೆ ಅವಕಾಶ ಕೋರಿದ ಅರ್ಜಿ ಸ್ವೀಕೃತ: ಹಿಂದು ಪರ ವಾದಕ್ಕೆ ಗೆಲುವು
ವಾರಾಣಸಿಯ ವಿವಾದಿತ ಜ್ಞಾನವಾಪಿ ಸಂಕೀರ್ಣದ ಗೋಡೆಯಲ್ಲಿರುವ ಶೃಂಗಾರ ಗೌರಿ ದೇವರ ಚಿತ್ರಗಳಿಗೆ ಪೂಜೆ ಸಲ್ಲಿಸಲು ಅವಕಾಶ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆಗೆ ವಾರಾಣಸಿ ಜಿಲ್ಲಾ ಕೋರ್ಟ್‌ ಸೋಮವಾರ ಸಮ್ಮತಿಸಿದೆ. ೧೯೯೧ರ ಪೂಜಾಸ್ಥಳ ಕಾಯಿದೆ ಪ್ರಕಾರ, ಈ ಅರ್ಜಿ ಸ್ವೀಕಾರಾರ್ಹವಲ್ಲ ಎಂಬ ವಕ್ಫ್‌ ಬೋರ್ಡ್‌ ವಾದವನ್ನು ತಳ್ಳಿ ಹಾಕಿದ ಕೋರ್ಟ್‌, ಈ ಪ್ರಕರಣ ಕಾಯಿದೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದೆ. ಇದನ್ನು ಪ್ರಶ್ನಿಸಿ ಮುಸ್ಲಿಂ ಅರ್ಜಿದಾರರು ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದಾರೆ. (ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ)

೨. ಅಯೋಧ್ಯೆಯ ದೇವಾಲಯದಲ್ಲಿ ೨೦೨೪ರ ಸಂಕ್ರಾಂತಿಯಂದು ರಾಮಲಲ್ಲಾನ ಪ್ರತಿಷ್ಠಾಪನೆಗೆ ಮುಹೂರ್ತ
ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮ ಮಂದಿರದಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆಗೆ ಮುಹೂರ್ತ ನಿಗದಿಯಾಗಿದೆ. ೨೦೨೪ರ ಮಕರ ಸಂಕ್ರಾಂತಿಯಂದು ಶ್ರೀರಾಮನು ದೇವಾಲಯದ ಗರ್ಭಗುಡಿ ಪ್ರವೇಶಿಸಲಿದ್ದಾನೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

೩. ಈಗಿನ ಜಿಡಿಪಿ ಅಪೂರ್ಣ, ಪರ್ಯಾಯ ಸೂಚ್ಯಂಕ ರೂಪಿಸಲು ಆರೆಸ್ಸೆಸ್‌ ಚಿಂತನೆ
ದೇಶದಲ್ಲಿ ಈಗ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ)ವನ್ನು ಕೇವಲ ಆರ್ಥಿಕ ವಿಕಾಸದ ಆಧಾರದಲ್ಲಿ ಅಳತೆ ಮಾಡಲಾಗುತ್ತಿದೆ. ಅದರ ಬದಲಾಗಿ ಪರ್ಯಾಯ ಸೂಚ್ಯಂಕವೊಂದನ್ನು ರೂಪಿಸಬೇಕಾಗಿದೆ ಎಂಬ ಬಗ್ಗೆ ಛತ್ತೀಸ್‌ಗಢದಲ್ಲಿ ನಡೆದ ಆರೆಸ್ಸೆಸ್‌ನ ಸಮನ್ವಯ ಬೈಠಕ್‌ನಲ್ಲಿ ಚರ್ಚೆ ನಡೆದಿದೆ. ಸಂಘ ಪರಿವಾರದ ೩೬ ಸಂಘಟನೆಗಳು ಸೇರಿ ಮಹತ್ವದ ವಿಚಾರಗಳ ಬಗ್ಗೆ ಇಲ್ಲಿ ಚರ್ಚಿಸಿವೆ. ಭಾರತನ್ನು ಹಿಂದೂ ರಾಷ್ಟ್ರವೆಂದು ಸರಕಾರ ಘೋಷಿಸಬೇಕಾಗಿಲ್ಲ, ಅದು ಈಗಾಗಲೇ ಹಿಂದು ರಾಷ್ಟ್ರ ಎಂದು ಆರೆಸ್ಸೆಸ್‌ ಪ್ರತಿಪಾದಿಸಿದೆ.
(ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ)

4. ಮತ್ತೆ ಲೋಕಾಯುಕ್ತ ಅಬ್ಬರ ಶುರು, ಬಿಬಿಎಂಪಿ ಜಂಟಿ ಆಯುಕ್ತ ಶ್ರೀನಿವಾಸ್‌, ಆಪ್ತ ಸಹಾಯಕನ ಅರೆಸ್ಟ್‌
ಹೈಕೋರ್ಟ್‌ನ ಅಭಯಹಸ್ತದೊಂದಿಗೆ ಶಕ್ತಿ ತುಂಬಿಕೊಂಡಿರುವ ರಾಜ್ಯ ಲೋಕಾಯುಕ್ತ ಮತ್ತೆ ಅಬ್ಬರಿಸಲು ಶುರು ಮಾಡಿದೆ. ಅಧಿಕಾರ ಮರುಸ್ಥಾಪನೆ ಬಳಿಕ ಸೋಮವಾರ ನಡೆಸಿದ ಮೊದಲ ದಾಳಿಯಲ್ಲೇ ಅದು ಬಿಬಿಎಂಪಿ ಬಿಬಿಎಂಪಿ ಜಂಟಿ ಆಯುಕ್ತ ಶ್ರೀನಿವಾಸ್‌ ಮತ್ತು ಅವರ ಆಪ್ತ ಸಹಾಯಕ ಉಮೇಶ್‌ನನ್ನು ಬಲೆಗೆ ಕೆಡವಿದೆ. ಅವರು ೪ ಲಕ್ಷ ರೂ. ಲಂಚ ಸ್ವೀಕರಿಸುವಾಗಲೇ ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. (ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ)

೫. ಶಾಸಕರು, ಗಣ್ಯರ ನಿಧನಕ್ಕೆ ಕಂಬನಿ ಮಿಡಿದ ವಿಧಾನ ಮಂಡಲ, ಅಧಿವೇಶನ ನಾಳೆಗೆ ಮುಂದೂಡಿಕೆ
ಬೆಂಗಳೂರು: ಬಹು ನಿರೀಕ್ಷಿತ, ರಾಜ್ಯ ವಿಧಾನ ಮಂಡಲದ ಮಳೆಗಾಲದ ಅಧಿವೇಶನ ಸೋಮವಾರ ಆರಂಭವಾಗಿದ್ದು, ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿ ಉಭಯ ಸದನಗಳನ್ನು ಮಂಗಳವಾರಕ್ಕೆ ಮುಂದೂಡಲಾಯಿತು. (ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ)

೬. PSI Scam | ಶಾಸಕ ದಡೇಸುಗೂರು ವಿರುದ್ಧ ಕಾಂಗ್ರೆಸ್‌ನಿಂದ ವಿಡಿಯೊ ಬಾಂಬ್‌, ನಾಳೆ ಸ್ಫೋಟವಾಗುತ್ತಾ?
ರಾಜ್ಯದಲ್ಲಿ ಭಾರಿ ಸದ್ದು ಮಾಡಿದ್ದ ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್‌ ವಿಡಿಯೊ ಬಾಂಬ್‌ ರೆಡಿ ಮಾಡಿದೆ. ಕನಕಗಿರಿಯ ಬಿಜೆಪಿ ಶಾಸಕ ಬಸವರಾಜ ದಡೇಸುಗೂರು ಅವರಿಗೆ ಹಣ ನೀಡಿದ ವಿದ್ಯಾರ್ಥಿಯ ಪೋಷಕರೇ ಮಾತನಾಡಿದ ವಿಡಿಯೊ ಇದು. ಮಂಗಳವಾರ ವಿಧಾನ ಮಂಡಲ ಅಧಿವೇಶನದಲ್ಲಿ ಈ ಬಾಂಬ್‌ ಸ್ಫೋಟವಾಗಲಿದೆ ಎಂದು ಕಾಂಗ್ರೆಸ್‌ ಕಾಯುತ್ತಿದೆ. (ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ)

೭. ಟೆರರಿಸ್ಟ್ ಜತೆ ಲಿಂಕ್, ಗ್ಯಾಂಗ್‌ಸ್ಟರ್‌ಗಳಿಗೆ ಸೇರಿದ 60 ಸ್ಥಳಗಳಲ್ಲಿ ಎನ್ಐಎ ರೇಡ್
ಸಂಘಟಿತ ಅಪರಾಧ ಮತ್ತು ಗ್ಯಾಂಗ್‌ಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಸೋಮವಾರ ಬೆಳಗ್ಗೆ ದೇಶದ್ಯಾಂತ 60 ಸ್ಥಳಗಳಲ್ಲಿ ದಾಳಿ ನಡೆಸಿದೆ. ದಿಲ್ಲಿ, ಹರಿಯಾಣ, ಉತ್ತರ ಪ್ರದೇಶ ಮತ್ತು ಪಂಜಾಬ್ ಸೇರಿದಂತೆ ವಿವಿಧೆಡೆ ದಾಳಿ ನಡೆದಿದೆ. ಗಾಯಕ ಸಿಧು ಮೂಸೆವಾಲಾ ಹತ್ಯೆಯ ಬಳಿಕ ಇಂಥ ಅಪರಾಧ ಗುಂಪುಗಳನ್ನು ಮಟ್ಟಹಾಕಲು ನಿರ್ಧರಿಸಲಾಗಿದೆ. (ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ)

8. ಯಾರೇ ಭೂ ಒತ್ತುವರಿ ಮಾಡಿದ್ದರೂ ತೆರವು ಎಂದ ಸಿಎಂ ಬೊಮ್ಮಾಯಿ; ಐಟಿ ಕಂಪನಿಗಳಿಗೂ ಕಂಟಕ?
ಕೆರೆಗಳು, ರಾಜಕಾಲುವೆಗಳ ಒತ್ತುವರಿಯಿಂದ ನಗರದಲ್ಲಿ ಮಳೆ ಬಂದಾಗ ಹಲವು ಪ್ರದೇಶಗಳು ಜಲಾವೃತವಾಗಿ, ಪ್ರವಾಹ ಸ್ಥಿತಿ ನಿರ್ಮಾಣವಾಗುತ್ತಿದೆ ಎಂಬ ಜನಾಕ್ರೋಶದ ಹಿನ್ನೆಲೆಯಲ್ಲಿ ಭೂ ಒತ್ತುವರಿದಾರರಗೆ ಬಿಸಿ ಮುಟ್ಟಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಒತ್ತುವರಿ ಮಾಡಿದವರಲ್ಲಿ ೩೦ರಷ್ಟು ಐಟಿ ಕಂಪನಿಗಳೂ ಇವೆ ಎಂದು ಹೇಳಲಾಗುತ್ತಿದೆ. ಅವುಗಳನ್ನೂ ಬಿಡಲ್ಲ ಎಂದು ಸರಕಾರ ಹೇಳಿಕೊಂಡಿದೆ. (ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ)

೯. ಶಬ್ದಸ್ವಪ್ನ ಅಂಕಣ | ಕನಸು ಎಚ್ಚರಗಳ ನಡುವೆ ಮಾರ್ಕ್ವೇಜ್‌ನ ಮಾಯಾದರ್ಪಣ
ಬರಹಗಾರ ಗ್ಯಾಬ್ರಿಯೆಲ್‌ ಮಾರ್ಕ್ವೇಜ್ ಒಮ್ಮೆ ವಿಚಿತ್ರ ಕನಸು ಕಂಡ. ಸ್ವತಃ ತನ್ನ ಶವವನ್ನು ನೋಡಿದ. ತಾನೇ ಶವಯಾತ್ರೆಯಲ್ಲಿ ಪಾಲ್ಗೊಂಡ. ಜನ ತನ್ನ ಬಗ್ಗೆ ಏನು ಮಾತನಾಡುತ್ತಿದ್ದಾರೆ ಎಂಬೆಲ್ಲ ವಿಚಿತ್ರ ಅನುಭವಗಳು ಅವನಿಗಾದವು. ಇಂಥಹುದೊಂದು ಅನೂಹ್ಯ ಅನುಭವದ ಕಥನ ವಿಸ್ಮಯವನ್ನು ಸೊಗಸಾಗಿ ವಿಶ್ಲೇಷಿಸಿದ್ದಾರೆ ಶಬ್ದಸ್ವಪ್ನ ಅಂಕಣದಲ್ಲಿ ಶ್ರೀಧರ ಬಳಗಾರ. (ಪೂರ್ಣ ಲೇಖನ ಓದಲು ಈ ಲಿಂಕ್‌ ಕ್ಲಿಕ್‌ ಮಾಡಿ)

೧೦. ಬುಮ್ರಾ, ಹರ್ಷಲ್‌ ವಾಪಸ್‌; ಟಿ20 ವಿಶ್ವ ಕಪ್‌ಗೆ 15 ಸದಸ್ಯರ ಟೀಮ್‌ ಇಂಡಿಯಾ ಪ್ರಕಟ
ಗಾಯದ ಸಮಸ್ಯೆಗಳಿಂದ ಗುಣಮುಖರಾಗಿರುವ ಜಸ್‌ಪ್ರಿತ್‌ ಬುಮ್ರಾ ಹಾಗೂ ಹರ್ಷಲ್‌ ಪಟೇಲ್‌ ಸೇರಿದಂತೆ ೧೫ ಸದಸ್ಯರ ಭಾರತ ತಂಡವನ್ನು ಮುಂಬರುವ ಟಿ೨೦ ವಿಶ್ವ ಕಪ್‌ಗೆ ಪ್ರಕಟಿಸಲಾಗಿದೆ. ಇದೇ ವೇಳೆ ತವರಿನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟಿ೨೦ ಸರಣಿಗೂ ತಂಡ ಪ್ರಕಟಿಸಲಾಗಿದೆ. ಎಲ್ಲ ತಂಡಗಳಿಗೆ ರೋಹಿತ್ ಶರ್ಮ ನಾಯಕರಾಗಿದ್ದರೆ, ಕನ್ನಡಿಗ ಕೆ.ಎಲ್‌ ರಾಹುಲ್‌ ಉಪನಾಯಕ.
(ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ)

Exit mobile version