ಬೆಂಗಳೂರು: ಕರುನಾಡಿನ ನಾಡಿಮಿಡಿತವಾಗಿ ಕಳೆದೊಂದು ವರ್ಷದಿಂದ ಕೆಲಸ ಮಾಡುತ್ತಿರುವ ವಿಸ್ತಾರ ನ್ಯೂಸ್‌ಗೆ (Vistara News) ನವೆಂಬರ್ ಆರರಂದು ವರ್ಷದ ಹರ್ಷ. 2022ರ ನವೆಂಬರ್ 6ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಅದ್ಧೂರಿ ವಿಸ್ತಾರ ಸಾಹಿತ್ಯ ಸಂಭ್ರಮದಲ್ಲಿ ಉದ್ಘಾಟನೆಗೊಂಡ ವಿಸ್ತಾರ ವಾಹಿನಿ ಒಂದೇ ವರ್ಷದಲ್ಲಿ ರಾಜ್ಯ ಮಾತ್ರವಲ್ಲ, ಹೊರರಾಜ್ಯಗಳಲ್ಲೂ ದೊಡ್ಡ ಸಂಚಲನವನ್ನು ಸೃಷ್ಟಿ ಮಾಡಿದೆ. ವಿಸ್ತಾರ ವರ್ಷದ ಹಬ್ಬವಾಗಿ ನವೆಂಬರ್ 4ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ವಿಸ್ತಾರ ಕನ್ನಡ ಸಂಭ್ರಮವನ್ನು (Vistara Kannada Sambhrama) ಅದ್ಧೂರಿಯಾಗಿ ಆಚರಿಸಲಾಯಿತು. ನವೆಂಬರ್ ಆರರಂದು ಈ ಸಂಭ್ರಮ ಇಡೀ ರಾಜ್ಯಾದ್ಯಂತ ಪಸರಿಸಿತು (Statewide Celebration).
ಹೌದು, ವಿಸ್ತಾರ ನ್ಯೂಸ್‌ಗೆ ಒಂದು ವರ್ಷದ ಆಗಿರುವ ಸಂಭ್ರಮವನ್ನು ಸ್ವತಃ ವೀಕ್ಷಕರೇ ರಾಜ್ಯಾದ್ಯಂತ ಆಚರಿಸಿದ್ದು ಈ ಬಾರಿಯ ವಿಶೇಷ. ರಾಜ್ಯದ ಎಲ್ಲ ಜಿಲ್ಲೆ ಮತ್ತು ಹಲವಾರು ತಾಲೂಕು ಕೇಂದ್ರಗಳಲ್ಲಿ ಕೂಡಾ ವಿಸ್ತಾರ ವರ್ಷ ವೈಭವ ಆಚರಿಸಲಾಯಿತು. ವೀಕ್ಷಕರು ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ, ನಾನಾ ರೀತಿಯ ಅಲಂಕಾರಗಳ ಮೂಲಕ ಸಂಭ್ರಮಿಸಿದರು.
ವಿಶೇಷವಾಗಿ ಶಾಲೆ ಮತ್ತು ಕಾಲೇಜುಗಳು, ಟಿವಿ ನೋಡುವ ಸಾರ್ವಜನಿಕರು, ಸಂಘ ಸಂಸ್ಥೆಗಳು, ವಿಶೇಷ ಮಕ್ಕಳ ಶಾಲೆಗಳು, ಅನಾಥಾಶ್ರಮಗಳು ವಿಸ್ತಾರದ ವರ್ಷದ ಸಂಭ್ರಮದಲ್ಲಿ ಭಾಗಿಯಾಗಿದ್ದು ಹಿತವಾಗಿತ್ತು. ಸಂತೋಷಾಚರಣೆಯ ಜತೆಗೆ ವಿಸ್ತಾರ ನಡೆಸಿದ ಸಮಾಜಹಿತ ಕೆಲಸಗಳನ್ನು ಕೂಡಾ ಅವರು ನೆನಪಿಸಿಕೊಂಡರು. ವಿಸ್ತಾರ ನ್ಯೂಸ್‌ನ ವಿಶೇಷ ಕಾರ್ಯಕ್ರಮಗಳು, ವಿಶ್ಲೇಷಣೆಗಳು, ವರದಿಗಳನ್ನು ಮೆಚ್ಚಿ ಮಾತನಾಡಿದರು. ನಾಡಿನ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ವೀಕ್ಷಕ ವರದಿಗಾರ ಕಾರ್ಯಕ್ರಮ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪಣ ತೊಟ್ಟ ನಮ್ಮೂರ ಶಾಲೆ ನಮ್ಮೆಲ್ಲರ ಶಾಲೆ ಕಾರ್ಯಕ್ರಮವೂ ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆ ಆಸ್ಥೆಯಿಂದ ಮಾತನಾಡಿದರು.
ವಿಸ್ತಾರ ಪ್ರಧಾನ ಕಚೇರಿಯಲ್ಲಿ ಸಂಭ್ರಮೋಲ್ಲಾಸ
ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ವಿಸ್ತಾರ ನ್ಯೂಸ್ ಪ್ರಧಾನ ಕಚೇರಿಯಲ್ಲಿ ಸೋಮವಾರ ಮೊದಲ ವರ್ಷಾಚರಣೆಯ ಸಂಭ್ರಮ ನೆಲೆ ಮಾಡಿತ್ತು. ನಾನಾ ಬಗೆಯ ಅಲಂಕಾರ, ರಂಗವಲ್ಲಿಗಳು ಗಮನ ಸೆಳೆದವು. ಮ್ಯಾನೇಜಿಂಗ್ ಡೈರೆಕ್ಟರ್ ಎಚ್.ವಿ. ಧರ್ಮೇಶ್, ಎಕ್ಸಿಕ್ಯೂಟಿವ್ ಡೈರೆಕ್ಟರ್ ಕಿರಣ್ ಕುಮಾರ್ ಡಿ.ಕೆ. ಅವರ ಸಾರಥ್ಯದಲ್ಲಿ ಎಲ್ಲ ಸಿಬ್ಬಂದಿಗಳು ಕೇಕ್ ಕತ್ತರಿಸಿ ಪರಸ್ಪರ ಹಂಚಿ ಸಂಭ್ರಮಿಸಿದರು.
ಚೀಫ್ ಟೆಕ್ನಿಕಲ್ ಆಫೀಸರ್ (ಸಿಟಿಒ) ಪರಶುರಾಮ್, ವಿಸ್ತಾರ ನ್ಯೂಸ್‌ನ ಎಕ್ಸಿಕ್ಯೂಟಿವ್ ಶರತ್ ಎಂ.ಎಸ್., ಅಸೋಸಿಯೇಟ್ ಎಕ್ಸಿಕ್ಯೂಟಿವ್ ಎಡಿಟರ್ ಹರೀಶ್ ನಾಗರಾಜು, ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥರು ಮತ್ತು ವೈಸ್ ಪ್ರೆಸಿಡೆಂಟ್ ನವನೀತ್ ಸಿ.ಎಂ, ಇನ್‌ಪುಟ್ ಮತ್ತು ಔಟ್ ಪುಟ್ ಮುಖ್ಯಸ್ಥರಾದ ಮಂಜುನಾಥ್ ಎಸ್., ವಿಸ್ತಾರ ನ್ಯೂಸ್ ಜಾಲತಾಣದ ಸಂಪಾದಕರಾದ ರಮೇಶ್ ಕುಮಾರ್ ನಾಯಕ್ ಮತ್ತು ಎಲ್ಲ ಸಿಬ್ಬಂದಿ ಭಾಗವಹಿಸಿದ್ದರು.
ತುಮಕೂರಿನಲ್ಲಿ ಶುಭ ಹಾರೈಸಿದ ಬಿ.ಎಸ್. ಯಡಿಯೂರಪ್ಪ
ತುಮಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೇಕ್ ಕತ್ತರಿಸಿ ಎಲ್ಲರಿಗೂ ಹಂಚಿ ಖುಷಿಪಟ್ಟರು. ಶಾಸಕ ಸುರೇಶ್ ಗೌಡ ಅವರು ಮತ್ತು ಇತರ ಹಲವು ಮುಖಂಡರು ಭಾಗವಹಿಸಿದ್ದರು.
ಚಾಮರಾಜನಗರದಲ್ಲಿ ಮೊದಲ ವಾರ್ಷಿಕೋತ್ಸವ ಸಂಭ್ರಮ
ಚಾಮರಾಜನಗರದಲ್ಲಿ ನಡೆದ ವಿಸ್ತಾರ ನ್ಯೂಸ್ ಮೊದಲ ವಾರ್ಷಿಕೋತ್ಸವದಲ್ಲಿ ಬಿಜೆಪಿ ಶಾಸಕರು ಹಾಗೂ ರೈತ ಮುಖಂಡರು ಭಾಗಿಯಾಗಿದ್ದರು. ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಶ್ರೀವತ್ಸ, ಮಾಜಿ ಶಾಸಕರಾದ ಎನ್.ಮಹೇಶ್ , ನಿರಂಜನ್ ಕುಮಾರ್, ಹರ್ಷವರ್ಧನ್ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಭಾಗವಹಿಸಿದ್ದರು. ನಗರದ ಪ್ರವಾಸಿ ಮಂದಿರದಲ್ಲಿ ಗಣ್ಯರು ಕೇಕ್ ಕತ್ತರಿಸಿ ವಿಸ್ತಾರ ನ್ಯೂಸ್ ಗೆ ಶುಭಾಶಯ ಕೋರಿದರು.
ಕಲಬುರಗಿಯ ವಿಶೇಷ ಮಕ್ಕಳ ಶಾಲೆಯಲ್ಲಿ ವರ್ಷಾಚರಣೆ
ಕಲಬುರಗಿಯ ಅಜಾದ್ ಪುರದಲ್ಲಿರುವ ಸಿದ್ದಾರ್ಥ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯಲ್ಲಿ ನಾಲ್ಕು ಚಕ್ರ ತಂಡದಿಂದ ಮೊದಲ ವಾರ್ಷಿಕೋತ್ಸವ ಆಚರಣೆ ನಡೆಯಿತು. ತಂಡವು ಕೇಕ್ ಕತ್ತರಿಸಿ, ಮಕ್ಕಳಿಗೆ ಪೆನ್ನು ಕೊಟ್ಟು ಸಂಭ್ರಮ ಆಚರಣೆ ಮಾಡಿತು. ಕಲಬುರಗಿ ನಗರದ ಶೆಟ್ಟಿ ಕಾಂಪ್ಲೆಕ್ಸ್ ಬಳಿ ಹಿಂದೂ ಜಾಗರಣ ವೇದಿಕೆಯಿಂದ ಕೇಕ್ ಕತ್ತರಿಸಿ ಮೊದಲ ವರ್ಷಾಚರಣೆ ಮಾಡಲಾಯಿತು.
ಮಡಿಕೇರಿಯಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಂದ ವಿಸ್ತಾರ ಸಂಭ್ರಮ
ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಿಂದ ವಿಸ್ತಾರ ವಾರ್ಷಿಕೋತ್ಸವ ನಡೆಯಿತು. ವಿದ್ಯಾರ್ಥಿಗಳು ಕೇಕ್ ಕತ್ತರಿಸಿ ವಿಸ್ತಾರ ನ್ಯೂಸ್ ಚಾನಲ್ ಮತ್ತಷ್ಟು ವಿಸ್ತರಿಸಲೆಂದು ಶುಭ ಹಾರೈಸಿದರು.
ಗದಗದಲ್ಲಿ ಅಂಧ ಮಕ್ಕಳ ಜತೆ ವರ್ಷದ ಸಂಭ್ರಮಾಚರಣೆ
ಗದಗನ ಲಿಂಗೈಕ್ಯ ಪಂಡಿತ ಪುಟ್ಟರಾಜ ಗವಾಯಿಗಳ ವಿರೇಶ್ವರ ಪುಣ್ಯಾಶ್ರಮದಲ್ಲಿ ವಿಸ್ತಾರ ಸಂಭ್ರಮ ಆಚರಿಸಲಾಯಿತು. ವಿಸ್ತಾರ ನ್ಯೂಸ್ ಹೆಸರಿನಲ್ಲಿ ಪುಟ್ಟರಾಜ ಗವಾಯಿಗಳ ಗದ್ದುಗೆಗೆ ಪೂಜೆ ಸಲ್ಲಿಸಲಾಯಿತು.
ಆಶ್ರಮದ ಪೀಠಾಧಿಪತಿ ಪೂಜ್ಯ ಶ್ರೀ ಕಲ್ಲಯ್ಯಜ್ಜನವರ ಸಾನ್ನಿಧ್ಯದಲ್ಲಿ ಆಶ್ರಮದ ಶಿಲಾಮಂಟಪದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು. ಕಲ್ಲಯ್ಯಜ್ಜನವರಿಂದ ಕೇಕ್ ಕತ್ತರಿಸಿ ಅಂಧ ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮಿಸಲಾಯತು. ಶ್ರೀಗಳು ವಿಸ್ತಾರ ವಾಹಿನಿಗೆ ಶುಭ ಹಾರೈಸಿದರು.
ದಾವಣಗೆರೆಯಲ್ಲಿ ಕೇಕ್ ಕತ್ತರಿಸಿ ಶುಭ ಕೋರಿದ ವೈದ್ಯರು
ದಾವಣಗೆರೆಯಲ್ಲಿ ಆರೈಕೆ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಕೇಕ್ ಕತ್ತರಿಸಿ ಶುಭ ಹಾರೈಸಿದರು. ಡಾ. ರವಿಕುಮಾರ್ ಮತ್ತು ತಂಡ ವಿಸ್ತಾರ ನ್ಯೂಸ್ ಗೆ ಶುಭವಾಗಲಿ ಎಂದು ಹಾರೈಸಿತು.
ಬೆಳಗಾವಿಯಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ ಪೌರ ಕಾರ್ಮಿಕರು
ವಿಸ್ತಾರ ನ್ಯೂಸ್ ಗೆ ಒಂದು ವರ್ಷ ಪೂರ್ಣವಾದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಪೌರ ಕಾರ್ಮಿಕರು ಕೇಕ್ ಕತ್ತರಿಸಿ ಸಂಭ್ರಮಾಚರಿಸಿದರು. ಬೆಳಗಾವಿಯ ಸದಾಶಿವ ನಗರದ ವೇಹಿಕಲ್ ಗ್ಯಾರೇಜ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರು ವಿಸ್ತಾರ ನ್ಯೂಸ್‌ಗೆ ಜೈಕಾರ ಹಾಕಿ ಖುಷಿಪಟ್ಟರು. ಕೇಕ್ ಕತ್ತರಿಸಿ ಸಿಹಿ ಹಂಚಿದರು.
ರಾಯಚೂರಿನಲ್ಲಿ ಅನಾಥ ಮಕ್ಕಳ ಜತೆ ಸಂಭ್ರಮಾಚರಣೆ
ರಾಯಚೂರಿನ ಕನಕದಾಸ ಅನಾಥಾಶ್ರಮ ಮಕ್ಕಳೊಂದಿಗೆ ವಿಸ್ತಾರ ಸಂಭ್ರಮ ಆಚರಿಸಲಾಯಿತು. ಕೇಕ್ ಕತ್ತರಿಸುವ ಮೂಲಕವಾಗಿ ಖುಷಿ ಹಂಚಲಾಯಿತು. ಬಳಿಕ ಮಕ್ಕಳು ವಿಸ್ತಾರ ನ್ಯೂಸ್ ಗೆ ಶುಭ ಹಾರೈಸಿದರು.
ಹುಬ್ಬಳ್ಳಿಯಲ್ಲಿ ಮಧ್ಯರಾತ್ರಿಯಲ್ಲೇ ಸೆಲಬ್ರೇಷನ್!
ಹುಬ್ಬಳ್ಳಿಯಲ್ಲಿ ವಿಸ್ತಾರ ನ್ಯೂಸ್ ಪ್ರಥಮ ವಾರ್ಷಿಕೋತ್ಸವ ವಿಶೇಷವಾಗಿತ್ತು. ಯಾಕೆಂದರೆ, ಅಭಿಮಾನಿಗಳು ಮಧ್ಯರಾತ್ರಿಯೇ ಕೇಕ್ ಕತ್ತರಿಸಿ, ಸಂಭ್ರಮಕ್ಕೆ ಚಾಲನೆ ನೀಡಿದರು.
ಕೇಶ್ವಾಪುರದಲ್ಲಿ ಭಗತ್‌ಸಿಂಗ್ ಸೇವಾ ಸಮಿತಿಯಿಂದ ಸಂಭ್ರಮದ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಶಾಲ್ ಜಾಧವ್ ಹಾಗೂ ಸ್ನೇಹಿತರು ಕೇಕ್ ಕತ್ತರಿಸಿ ಪರಸ್ಪರ ತಿನ್ನಿಸುತ್ತಾ ವಿಸ್ತಾರಕ್ಕೆ ಶುಭ ಹಾರೈಸಿದರು.
ಹಾಸನದ ಹಾಸನಾಂಬೆ ಸನ್ನಿಧಿಯಲ್ಲಿ ವಿಶೇಷ ಪೂಜೆ
ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನದ ಹಾಸನಾಂಬೆ ಸನ್ನಿಧಿಯಲ್ಲಿ ವಿಸ್ತಾರ ನ್ಯೂಸ್ ವರ್ಷದ ಸಂಭ್ರಮ ನಿಮಿತ್ತ ವಿಶೇಷ ಪೂಜೆ ನಡೆಯಿತು. ವಿಸ್ತಾರಗೆ ವಿಶೇಷ ಶುಭವಾಗಲಿ ಎಂಬ ಹಾರೈಕೆಯೊಂದಿಗೆ ವಿಸ್ತಾರ ನ್ಯೂಸ್ ಲೋಗೋವನ್ನಿಟ್ಟು ಅರ್ಚಕರು ಪೂಜೆ ನೆರವೇರಿಸಿದರು.
ಆದಿಚುಂಚನಗಿರಿ ಶಾಖಾ ಮಠದ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿಯವರು, ಹಾಸನ ಶಾಸಕರಾದ ಎಚ್.ಪಿ. ಸ್ವರೂಪ್, ಹಾಸನಾಂಬಾ ದೇವಳದ ಆಡಳಿತಾಧಿಕಾರಿ ಮಾರುತಿ ಸೇರಿ ಹಲವು ಗಣ್ಯರು ಭಾಗಿಯಾಗಿ ವಿಸ್ತಾರಕ್ಕೆ ಶುಭ ಕೋರಿದರು.
ವಿಜಯಪುರದ ಸರ್ಕಾರಿ ಶಾಲೆಯಲ್ಲಿ ವಿಸ್ತಾರ ಸಂಭ್ರಮ
ವಿಜಯಪುರ ನಗರದ ಶಿಖರಖಾನೆಯಲ್ಲಿನ ಸರಕಾರಿ ಕನ್ನಡ ಗಂಡು ಹೆಣ್ಣು ಮಕ್ಕಳ ಶಾಲೆ ಸಂಖ್ಯೆ – 20ರಲ್ಲಿ ಅಭಿಮಾನಿಗಳು ಶಾಲಾಮಕ್ಕಳೊಂದಿಗೆ ಕೇಕ್ ಕತ್ತರಿಸಿ ವಿಸ್ತಾರ ನ್ಯೂಸ್ ವಾಹಿನಿಗೆ ಆಲ್ ದಿ ಬೆಸ್ಟ್ ಎಂದು ಶುಭ ಕೋರಿದರು. ಅಲ್ಲದೇ ಕೇಕ್ ಕತ್ತರಿಸಿ ಪರಸ್ಪರ ಸಿಹಿ ತಿನ್ನಿಸಿ ವಿಸ್ತಾರ ನ್ಯೂಸ್ ಮುಂದೆಯೂ ಸಹ ಇದೇ ರೀತಿ ನೂರಾರು ವಾರ್ಷಿಕೋತ್ಸವ ಆಚರಿಸುವಂತಾಗಲಿ. ಜನಪರ ಸುದ್ದಿ ನೀಡುವುದನ್ನು ಮುಂದುವರಿಸಲಿ ಎಂದು ಹಾರೈಸಿ ಶುಭಕೋರಿದರು.
ಇದನ್ನೂ ಓದಿ: Vistara Kannada Sambhrama : ಜನರ ಪರವಾಗಿ ಮಿಡಿಯುತ್ತಿರುವ ವಿಸ್ತಾರ ನ್ಯೂಸ್ ಸಾಧನೆ ಬಿಚ್ಚಿಟ್ಟ ಹರಿಪ್ರಕಾಶ್ ಕೋಣೆಮನೆ
ಹರಿಪ್ರಕಾಶ್ ಕೋಣೆಮನೆಯವರ ವಿಶೇಷ ಸಂದರ್ಶನ
ವಿಸ್ತಾರ ನ್ಯೂಸ್‌ಗೆ ವರ್ಷ ತುಂಬಿದ ಸಂದರ್ಭದಲ್ಲಿ ವಿಸ್ತಾರ ತಂಡದ ಮೂವರು ನಿರೂಪಕರಾದ ಅಭಿಷೇಕ್ ರಾಮಪ್ಪ, ದಿವ್ಯಾ ರಘುನಾಥ್ ಮತ್ತು ವಾಸುದೇವ್ ಮಾರ್ನಾಡ್ ಅವರು ಪ್ರಧಾನ ಸಂಪಾದಕರು ಮತ್ತು ಸಿಇಒ ಆಗಿರುವ ಹರಿಪ್ರಕಾಶ್ ಕೋಣೆಮನೆಯವರ ವಿಶೇಷ ಮತ್ತು ಆತ್ಮೀಯ ಸಂವಾದವನ್ನು ನಡೆಸಿದರು.
ಇದರಲ್ಲಿ ವಿಸ್ತಾರ ನ್ಯೂಸ್‌ನ ಕನಸು, ಅದನ್ನು ಕಟ್ಟಿದ ಬಗೆ, ಅದರ ಕಷ್ಟ ಸುಖಗಳ ಬಗ್ಗೆ ಹರಿಪ್ರಕಾಶ್ ಕೋಣೆಮನೆಯವರು ಮನದಾಳದ ಮಾತುಗಳನ್ನು ಹಂಚಿಕೊಂಡರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ