Site icon Vistara News

BE Good Do Good | ಭೌತಿಕ ಆಕರ್ಷಣೆಗಳು ಹೆಚ್ಚಾಗಿರುವ ವರ್ತಮಾನಕ್ಕೆ ವಿವೇಕಾನಂದರು ಅನಿವಾರ್ಯ: ಹರಿಪ್ರಕಾಶ್​ ಕೋಣೆಮನೆ

hariprakash konemane

ಬೆಂಗಳೂರು: ಜನರು ಭೌತಿಕ ಜಗತ್ತಿನೆಡೆಗೆ ಆಕರ್ಷಿತರಾಗಿರುವ ಪ್ರಸ್ತುತ ಕಾಲಘಟ್ಟದಲ್ಲಿ ಸ್ವಾಮಿ ವಿವೇಕಾನಂದರ ಆದರ್ಶಗಳು ಹಿಂದೆಂದಿಗಿಂತಲೂ ಅತ್ಯಗತ್ಯ ಎಂದು ವಿಸ್ತಾರ ನ್ಯೂಸ್​ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ್​ ಕೋಣೆಮನೆ ಅವರು ಅಭಿಪ್ರಾಯಪಟ್ಟಿದ್ದಾರೆ.

ಸಮರ್ಥ ಭಾರತ್​ ಸಂಸ್ಥೆಯು ಸ್ವಾಮಿ ವಿವೇಕಾನಂದರ 160ನೇ ಜಯಂತಿ ಹಿನ್ನೆಲೆಯಲ್ಲಿ ಉತ್ತಮನಾಗು, ಉಪಕಾರಿಯಾಗು (BE Good Do Good) ಎಂಬ ಶೀರ್ಷಿಕೆಯಡಿ ಆಯೋಜಿಸಿರುವ 15 ದಿನಗಳ ಉಪನ್ಯಾಸ ಮಾಲಿಕೆಯ ಮೂರನೇ ದಿನದ ವರ್ಚುಯಲ್​ ವೇದಿಕೆಯಲ್ಲಿ ಅವರು ಮಾತನಾಡಿದರು. “ವಿಶ್ವ ಕಂಡಿರುವ ಅತ್ಯುತ್ತಮ ಭಾಷಣಕಾರರಲ್ಲಿ ಒಬ್ಬರಾಗಿರುವ ವಿವೇಕಾನಂದರು ಭಾಷಣ ಹಾಗೂ ಆಡಂಬರ ರಹಿತ ಜೀವನದ ಮೂಲಕ ವಿಖ್ಯಾತಿ ಪಡೆದವರು. ಮಾತು ಹಾಗೂ ಕೃತಿಯಲ್ಲಿ ಸಮತೋಲನ ಸಾಧಿಸಿದವರು. ಇವೆಲ್ಲ ಕಾರಣಕ್ಕೆ ಅವರು ಇಂದಿನ ಕಾಲಘಟ್ಟಕೂ ಪ್ರಸ್ತುತ ಹಾಗೂ ಯುವ ಜನಾಂಗ ಅವರ ಬಗ್ಗೆ ತಿಳಿದುಕೊಳ್ಳಲೇಬೇಕು,” ಎಂದು ಹೇಳಿದರು.

ನುಡಿದಂತೆ ಬದುಕಿದರು

“ವಿವೇಕಾನಂದರು ಉತ್ತಮ ವಾಗ್ಮಿಯಾಗಿದ್ದು, ಭಾಷಣದ ಮೂಲಕ ಭಾರತೀಯ ಪರಂಪರೆಯನ್ನು ಜಗದಗಲಕ್ಕೂ ಪರಿಚಯಿಸಿದ್ದರು. ಅವರ ಜೀವನವೂ ಅಂತೆಯೇ ಇತ್ತು. ವಿವೇಕಾನಂದರ ವಾಣಿಗಳು ಅವರು ನಮಗೆ ಅವರು ಬಿಟ್ಟು ಹೋಗಿರುವ ಸಂಪತ್ತು. ಅವರು ಮಾತಿನಂತೆ ಬದುಕುವ ಮೂಲಕವೂ ಆದರ್ಶವಾಗಿದ್ದರು,” ಎಂದು ಅನುಭವಿ ಪತ್ರಕರ್ತರೂ ಆಗಿರುವ ಹರಿಪ್ರಕಾಶ್​ ಕೋಣೆಮನೆ ಅವರು ಹೇಳಿದರು.

ಹರಿಪ್ರಕಾಶ್ ಕೋಣೆಮನೆ ಅವರು ಉಪನ್ಯಾಸದಲ್ಲಿ ಇತ್ತೀಚೆಗೆ ದೇಹಾಂತ್ಯಗೊಂಡ ಸಿದ್ದೇಶ್ವರ ಶ್ರೀಗಳನ್ನು ಸ್ಮರಿಸಿಕೊಂಡರು. “ಸಿದ್ದೇಶ್ವರ ಶ್ರೀಗಳು ಕೂಡ ವಿವೇಕಾನಂದರ ರೀತಿ ಬಾಳಿ ಬದುಕಿದವರು. ಶ್ರೀಗಳೂ ಸರಳತೆಯಿಂದ ಶ್ರೇಷ್ಠರೆನಿಸಿಕೊಂಡವರು . ಆ ಮೂಲಕವೇ ಲಕ್ಷಾಂತರ ಅನುಯಾಯಿಗಳನ್ನು ಸಂಪಾದಿಸಿದ್ದರು,” ಎಂದು ಹೇಳಿದರು.

“ವಿವೇಕಾನಂದರು ತಮ್ಮ ಗುರುಗಳಾದ ರಾಮಕೃಷ್ಣ ಪರಮಹಂಸರ ಪರಂಪರೆಯನ್ನು ಮುಂದುವರಿಸಿದ್ದರು. ಕೃತಿ ಮತ್ತು ಮಾತು ಏಕರೂಪದಲ್ಲಿ ಇರಬೇಕು ಎಂಬುದು ಪರಮಹಂಸರ ಆದರ್ಶವಾಗಿತ್ತು. ವಿವೇಕಾನಂದರು ಅದನ್ನು ಯಥಾವತ್​ ಪಾಲಿಸಿದರು” ಎಂದು ಹರಿಪ್ರಕಾಶ್ ಕೋಣೆಮನೆ ಅವರು ಹೇಳಿದರು. “ವಿದೇಶಕ್ಕೆ ಹೋದಾಗಲೂ ಅಲ್ಲಿನ ಪರಿಸರ ಹಾಗೂ ಹವಾಗುಣಕ್ಕೆ ವ್ಯತಿರಿಕ್ತವಾಗಿ ಭಾರತೀಯತೆಯನ್ನು ಉಳಿಸಿಕೊಂಡಿದ್ದರು,” ಎಂದು ಇದೇ ವೇಳೆ ಹರಿಪ್ರಕಾಶ್​ ಕೋಣೆಮನೆ ಅವರು ನುಡಿದರು.

ದೇಶದ ವಿಚಾರದಲ್ಲಿ ರಾಜಿಯೇ ಇಲ್ಲ

“ದೇಶ, ಧರ್ಮ ಹಾಗೂ ಸತ್ಯ ಪರಿಪಾಲನೆಯಲ್ಲಿ ವಿವೇಕಾನಂದರು ರಾಜಿ ಮಾಡಿಕೊಂಡವರಲ್ಲ. ದಾಸ್ಯ ಮುಕ್ತ ಭಾರತದ ಕಲ್ಪನೆಯನ್ನು ಮೊದಲಾಗಿ ಬಿತ್ತಿದವರು . ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮಹಾತ್ಮ ಗಾಂಧೀಜಿ, ವಿವೇಕಾನಂದರ ಕಲ್ಪನೆಗಳನ್ನು ಅಳವಡಿಸಿಕೊಂಡಿದ್ದರು. ಅವರ ಬಗ್ಗೆ ಗೌರವ ಹಾಗೂ ಪ್ರೀತಿ ಹೊಂದಿದ್ದರು. ಸುಭಾಷ್​ಚಂದ್ರ ಬೋಸ್​, ಸ್ವಾತಂತ್ರ್ಯ ಪಡೆಯಲು ಶಕ್ತಿಯ ಪ್ರದರ್ಶನವೂ ಅಗತ್ಯ ಎಂಬ ವಿವೇಕಾನಂದರ ತತ್ವದ ಮೇಲೆ ನಂಬಿಕೆ ಇಟ್ಟವರಾಗಿದ್ದರು,”ಎಂದು ಹರಿಪ್ರಕಾಶ್​ ಕೋಣೆಮನೆ ಅವರು ವಿವೇಕಾನಂದರ ದೇಶಪ್ರೇಮವನ್ನು ವಿವರಿಸಿದರು.

ಅಸ್ಪೃಶ್ಯತೆ ವಿರುದ್ಧ ಹೋರಾಟ

ಭಾರತಿಯ ಸಂಸ್ಕೃತಿಗೆ ಹಾಗೂ ಹಿಂದೂ ಧರ್ಮಕ್ಕೆ ಜಾಗತಿಕ ಮಟ್ಟದಲ್ಲಿ ಸ್ವಲ್ಪ ಮಟ್ಟಿಗೆ ಹಿನ್ನಡೆ ಉಂಟಾಗಲು ಅಸ್ಪೃಶ್ಯತೆಯ ಆಚರಣೆಯೇ ಕಾರಣವಾಗಿತ್ತು. ಈ ಹೀನ ಪದ್ಧತಿ ಬಗ್ಗೆ ವಿವೇಕಾನಂದರು ವಿರೋಧ ವ್ಯಕ್ತಪಡಿಸಿದ್ದರು. ಅದು ದೇಶಕ್ಕೆ ಅಂಟಿದ ಜಾಡ್ಯ ಎಂದೇ ಹೇಳಿದ್ದರು. ಕೇರಳಕ್ಕೆ ಹೋಗಿದ್ದ ವೇಳೆ ದಲಿತರ ಸೊಂಟಕ್ಕೆ ಪೊರಕೆ ಕಟ್ಟುವ ಪದ್ಧತಿಯನ್ನು ನೋಡಿ, ಇದು ಮುಂದುವರಿದರೆ ಕೇರಳವನ್ನು ಹುಚ್ಚಾಸ್ಪತ್ರೆ ಎಂದು ಕರೆಯಬೇಕಾದೀತು ಎಂದು ಕಟು ಪದಗಳಿಂದ ಟೀಕಿಸಿದ್ದರು. ಕೆಟ್ಟ ಆಚರಣೆಯ ನಿವಾರಣೆಗೆ ಕರೆಕೊಟ್ಟಿದ್ದ ವಿವೇಕಾನಂದರು ದೀನ ದೇವೋಭವ, ದಲಿತ ದೇವೋಭವ ಎಂದು ಬರೆದಿದ್ದರು,” ಎಂಬುದಾಗಿ ಹರಿಪ್ರಕಾಶ್ ಕೋಣೆಮನೆ ನುಡಿದರು.

ಅಧ್ಯಾತ್ಮ, ವಿಜ್ಞಾನದ ಪ್ರತಿಪಾದನೆ

“ವಿವೇಕಾನಂದರು ಅಧ್ಯಾತ್ಮ ಸಾಧನೆಯನ್ನು ಸಾರಿ ಹೇಳಿದ್ದರು. ಅಷ್ಟೇ ಪ್ರಮಾಣದಲ್ಲಿ ವಿಜ್ಞಾನದ ಅಗತ್ಯವನ್ನೂ ವಿವರಿಸಿದ್ದರು. ಭಾರತೀಯರು ಸೋಮಾರಿಗಳಲ್ಲ. ಆಧ್ಯಾತ್ಮದ ಮೂಲಕ ಸಾಧನೆ ಮಾಡಿದವರು ಎಂಬುದನ್ನು ಜಗತ್ತಿಗೆ ನಿರೂಪಿಸಿದರು ವಿವೇಕಾನಂದರು. ಯೋಗ ಮತ್ತು ಧ್ಯಾನದ ಮಹತ್ವವನ್ನು ಜಗತ್ತಿಗೆ ಪಸರಿಸುವ ಮೂಲಕ ಭಾರತ ಸಂಪದ್ಭರಿತ ಎಂಬುದನ್ನು ಸಾಬೀತುಪಡಿಸಿದ್ದರು,” ಎಂಬುದಾಗಿ ಹರಿಪ್ರಕಾಶ್​ ಕೋಣೆಮನೆ ನುಡಿದರು.

”ಅಧ್ಯಾತ್ಮದಿಂದ ದೃಢ ಮನಸ್ಸು ಪಡೆದಿದ್ದ ಭಾರತೀಯರು ಆತ್ಮಹತ್ಯೆಯೇ ಮಾಡಿಕೊಳ್ಳುತ್ತಿರಲಿಲ್ಲ. ಪಾಶ್ಚಾತ್ಯ ದೇಶಗಳಲ್ಲಿ ಆತ್ಯಹತ್ಯೆ ಪ್ರಕರಣಗಳು ಹೆಚ್ಚಿದ್ದವು. ಇದೀಗ ಭಾರತದಲ್ಲೂ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಶೇ.35ರಷ್ಟು ಯುವ ಜನಾಂಗ ಆತ್ಯಹತ್ಯೆ ಮಾಡಿಕೊಳ್ಳುತ್ತಿವೆ ಎಂದು ವರದಿಗಳು ಹೇಳುತ್ತಿವೆ. ಎಲ್ಲ ಸೌಲಭ್ಯಗಳು ಇರುವ ಹೊರತಾಗಿಯೂ ಆತ್ಮಹತ್ಯೆ ಪ್ರಕರಣಗಳು ಹೆಚ್ಚುವ ಈ ಸಂದರ್ಭದಲ್ಲಿ ವಿವೇಕಾನಂದರ ಮಾತುಗಳು ಅನಿವಾರ್ಯ,” ಎಂದು ಅವರು ಹೇಳಿದರು.

”ವಿದೇಶಕ್ಕೆ ಹಡಗಿನಲ್ಲಿ ಹೋಗುವ ವೇಳೆ ಮಾತಿಗೆ ಸಿಕ್ಕಿ ಜೆಮ್​ಶೆಡ್​ಜೀ ಟಾಟಾ ಅವರಿಗೆ ವಿಜ್ಞಾನದ ಮಹತ್ವವನ್ನು ವಿವೇಕಾನಂದರು ತಿಳಿಹೇಳಿದ್ದರು. ಅವರ ಪರಿಣಾಮವೇ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್​ಸಿ) ಹುಟ್ಟು,” ಎಂಬುದಾಗಿ ಹರಿಪ್ರಕಾಶ್​ ಕೋಣೆಮನೆ ಅವರು ಹೇಳಿದರು.

“ರವಿಂದ್ರನಾಥ್​ ಟ್ಯಾಗೋರ್​ ಅವರು, ”ಭಾರತವನ್ನು ತಿಳಿಯಬೇಕಾದರೆ ವಿವೇಕಾನಂದರನ್ನು ಅರಿಯಿರಿ” ಎಂದಿದ್ದರು. ರಾಷ್ಟ್ರಕವಿ ಕುವೆಂಪು, ”ರಾಮಕೃಷ್ಣ ಪರಮಹಂಸರು ಮೂರ್ತಿ, ವಿವೇಕಾನಂದರು ಉತ್ಸವ ಮೂರ್ತಿ” ಎಂದು ಬಣ್ಣಿಸಿದ್ದರು. ಇವೆಲ್ಲವೂ ವಿವೇಕಾನಂದರ ಶ್ರೇಷ್ಠತೆಯನ್ನು ಹೇಳುತ್ತದೆ ಎಂದು ಹರಿಪ್ರಕಾಶ್​ ಕೋಣೆಮನೆ ಹೇಳಿದರು.

ಪ್ರಶ್ನೋತ್ತರ

ಉಪನ್ಯಾಸನದ ಬಳಿಕ ಪ್ರಶ್ನೋತ್ತರ ನಡೆಯಿತು. ಈ ಅವಧಿಯಲ್ಲಿ ಹರಿಪ್ರಕಾಶ್​ ಕೋಣೆಮನೆ ಅವರು ಮೂರು ಪ್ರಶ್ನೆಗಳಿಗೆ ಉತ್ತರಿಸಿದರು. ಮೊದಲ ಪ್ರಶ್ನೆ ಮಾಧ್ಯಮಗಳ ನೈತಿಕತೆಯ ಕುರಿತದ್ದಾಗಿತ್ತು. ಅದಕ್ಕೆ ಉತ್ತರಿಸಿದ ಅವರು, ”ಪತ್ರಕರ್ತರ ಗುಂಪಿನಲ್ಲಿ ದೇಶದ ಒಳಿತಿಗೆ ಚಿಂತಿಸುವ ಹಾಗೂ ಪ್ರಾಮಾಣಿಕ ಪತ್ರಕರ್ತರು ಹಲವರಿದ್ದಾರೆ. ಕೆಟ್ಟವರೂ ಇದ್ದಾರೆ. ಎಲ್ಲರ ನೈತಿಕತೆ ಪ್ರಶ್ನಾರ್ಹವಲ್ಲ. ಆದರೆ, ಉತ್ತಮ ಯೋಚನೆಗಳಿಗೆ ಬೆಂಬಲಿಸುವ ವರ್ಗವೂ ಹೆಚ್ಚಾಗಬೇಕು. ವಸ್ತುನಿಷ್ಠ ಪತ್ರಕರ್ತರಿಗೆ ಪ್ರೋತ್ಸಾಹ ಸಿಗಬೇಕು. ಕ್ರೈಮ್​ ಸುದ್ದಿ ಕಡೆಗೆ, ದೊಡ್ಡ ಧ್ವನಿಯಲ್ಲಿ ಹೇಳುವ ಸುಳ್ಳನ್ನು ನಂಬುವವರ ಸಂಖ್ಯೆ ಕಡಿಮೆಯಾಗಬೇಕು,” ಎಂದರು.

ಎರಡನೇ ಪ್ರಶ್ನೆ, ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವ ವಿವೇಕಾನಂದರ ಆದರ್ಶ ಯಾವುದು ಎಂಬುದಾಗಿತ್ತು. ಅದಕ್ಕೆ ಉತ್ತರಿಸಿದ ಹರಿಪ್ರಕಾಶ್​ ಕೋಣೆಮನೆ ಅವರು, ”ಸತ್ಯ ಅನಿಸಿಕೆಗಳನ್ನು ಪ್ರತಿಪಾದಿಸಲು ಯಾವ ತ್ಯಾಗಕ್ಕೂ ಸಿದ್ಧನಿದ್ದೇನೆ ಎಂಬುದೇ ನಾನು ಪಾಲಿಸುವ ವಿವೇಕಾನಂದರ ಆದರ್ಶ. ಅದಕ್ಕಾಗಿ ನಾನು ದೊಡ್ಡ ಉದ್ಯೋಗಕ್ಕೂ ರಾಜೀನಾಮೆ ನೀಡಿದ್ದೆ,” ಎಂದು ಹರಿಪ್ರಕಾಶ್​ ಕೋಣೆಮನೆ ಅವರು ಹೇಳಿದರು.

ವಿವೇಕಾನಂದರನ್ನು ಪ್ರತಿಯೊಬ್ಬರೂ ಅರಿತುಕೊಂಡು ಅದನ್ನು ಪಾಲಿಸಬೇಕು. ನಮ್ಮ ಮಣ್ಣಿನ, ನಮ್ಮ ಸಂಸ್ಕೃತಿ ಕುರಿತು ಗೌರವ ಇಟ್ಟುಕೊಳ್ಳಬೇಕು ಎಂಬುದೇ ಯವ ಸಮುದಾಯಕ್ಕೆ ನಾನು ಹೇಳುವ ವಿವೇಕಾನಂದರ ಸಂದೇಶ ಎಂಬುದಾಗಿ ಹರಿಪ್ರಕಾಶ್​ ಕೋಣೆಮನೆ ಅವರು ಮೂರನೇ ಪ್ರಶ್ನೆಗೆ ಉತ್ತರಿಸಿದರು.

ಇದನ್ನು ಓದಿ | ವಿಸ್ತಾರ ಅಂಕಣ | ಬ್ರಿಟಿಷರು ನಮ್ಮನ್ನು ಬರ್ಬಾದ್ ಮಾಡುವವರೆಗೆ ಭಾರತದ ಆರ್ಥಿಕತೆ ವಿಶ್ವದಲ್ಲೇ ನಂ.1 ಆಗಿತ್ತು ಎನ್ನುವುದು ಎಷ್ಟು ಜನರಿಗೆ ಗೊತ್ತು?

Exit mobile version