ಬೆಂಗಳೂರು: ಸದಾ ವಿವಾದಿತ ಹೇಳಿಕೆಗಳಿಂದ ಸುದ್ದಿಯಲ್ಲಿರುವ ನಟ ಚೇತನ್ ಅಹಿಂಸಾ ಅವರು, ಗಾಂಧಿವಾದ ಕಿತ್ತೊಗೆಯಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಮತ್ತೊಂದು ವಿವಾದಿತ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ʼರಾಷ್ಟ್ರೀಯ ಯುವ ದಿನದಂದುʼ ಸ್ವಾಮಿ ವಿವೇಕಾನಂದರ ಬಗ್ಗೆ ನಟ (Chetan Ahimsa) ವಿವಾದಿತ ಹೇಳಿಕೆ ನೀಡಿರುವುದು ಕಂಡುಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ‘ಇಂದು ವಿವೇಕಾನಂದರ ಜನ್ಮದಿನ. ವಿವೇಕಾನಂದರು ಮಹಿಳಾ ವಿಮೋಚನೆಯನ್ನು ವಿರೋಧಿಸಿದವರು ಮತ್ತು ಜಾತಿ ವ್ಯವಸ್ಥೆಯನ್ನು ಸರ್ಮರ್ಥಿಸಿದರು. ಅವರು ಬರೆಯುತ್ತಾರೆ, ‘ಜಾತಿ ಒಳ್ಳೆಯದು, ಅದೊಂದೇ ಜೀವನವನ್ನು ಪರಿಹರಿಸುವ ನೈಸರ್ಗಿಕ ಮಾರ್ಗವಾಗಿದೆ. ವಿವೇಕಾನಂದರನ್ನು ಹಿಂದೂ ಸಮಾಜದಿಂದ ವೈಭವೀಕರಿಸಲಾಗಿದೆ. ಏಕೆಂದರೆ, ಅವರು ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯನ್ನು ಬಲಪಡಿಸುತ್ತಾರೆ. ವಿವೇಕಾನಂದರು ಸಮಾನತಾವಾದಿಯಲ್ಲ.. ಅವರು ನಮ್ಮವರಲ್ಲ’ ಎಂದು ತಮ್ಮ ಟ್ವೀಟ್‌ನಲ್ಲಿ ಚೇತನ್ ಬರೆದುಕೊಂಡಿದ್ದಾರೆ.
ಹಿಂದುತ್ವ (ಬಿಜೆಪಿ) ಮತ್ತು ಉದಾರವಾದಿಗಳು (ಕಾಂಗ್ರೆಸ್) ಇಬ್ಬರಿಗೂ ಏಕ ಶತ್ರುವಿದೆ -ಸಮಾನತಾವಾದಿಗಳಾದ ನಮಗೆ ಸಂಪೂರ್ಣ ಅನ್ಯಾಯದ ವ್ಯವಸ್ಥೆಯೇ ನಮ್ಮ ಶತ್ರು. ಅದಕ್ಕೆ, ನಾವು ಸಮಾನತಾವಾದಿಗಳು ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮವನ್ನು ಎಷ್ಟೇ ಪ್ರಶ್ನಿಸಿದರೂ ಹಿಂದುತ್ವಕ್ಕೆ ತೃಪ್ತಿಯಾಗುವುದಿಲ್ಲ; ನಾವು ಸಮಾನತಾವಾದಿಗಳು ಬಿಜೆಪಿ ಮತ್ತು ಮೋದಿಯನ್ನು ಎಷ್ಟೇ ಪ್ರಶ್ನಿಸಿದರೂ ಉದಾರವಾದಿಗಳಿಗೆ ತೃಪ್ತಿಯಾಗುವುದಿಲ್ಲ. ಅವರಿಬ್ಬರೂ ಸೀಮಿತ ಚಿಂತಕರು; ನಾವು ಹಾಗೆ ಇರಬಾರದು.
ನಾವು ಸಮಾನತಾವಾದಿಗಳು ನಮ್ಮ ಐಕಾನ್‌ಗಳ (ಪೆರಿಯಾರ್, ಬಾಬಾಸಾಹೇಬ್) ಕ್ರಾಂತಿಕಾರಿ ಪರಿವರ್ತನೆಗೂ ಮತ್ತು ಅಸಮಾನತೆ/ಅನ್ಯಾಯವನ್ನು ಹೆಚ್ಚು ಆಳವಾಗಿ ಬೇರೂರಿಸುವ ಹಿಂದೂ ಸುಧಾರಣಾವಾದಿ ಉದಾರವಾದಿಗಳ ನಡುವೆ ವ್ಯತ್ಯಾಸವನ್ನು ಮಾಡಬೇಕು. ಹಿಂದೂ ಉದಾರವಾದಿಗಳು (ವಿವೇಕಾನಂದ, ಗಾಂಧಿ, ಇತ್ಯಾದಿ) ಹಿಂದುತ್ವಕ್ಕಿಂತ (ಸಾವರ್ಕರ್ ಮತ್ತು RSS) ಹೆಚ್ಚು ಅಪಾಯಕಾರಿ — ಇದಕ್ಕೆ ಕಾರಣ ಹಿಂದುತ್ವವು ಪ್ರಾಮಾಣಿಕ ಶತ್ರು; ಆದರೆ ಹಿಂದೂ ಉದಾರವಾದಿಗಳು ಅಪ್ರಾಮಾಣಿಕ/ಕುತಂತ್ರವಾದಿ ‘ಸ್ನೇಹಿತರು’
19 ನೇ ಶತಮಾನ:
ಸಮಾನತಾವಾದಿ ಜ್ಯೋತಿಬಾ ಫುಲೆ ಅವರು (ಮಹಾರಾಷ್ಟ್ರದಲ್ಲಿ) ಮಹಿಳೆಯರಿಗೆ ಮತ್ತು ದಲಿತರಿಗಾಗಿ ಶಾಲೆಗಳನ್ನು ಪ್ರಾರಂಭಿಸಿದರು – ಇದು ಹಲವಾರು ಪ್ರಮುಖ ಮಹಿಳಾ ಸ್ತ್ರೀವಾದಿಗಳಿಗೆ ಸ್ಫೂರ್ತಿ ನೀಡಿತು
ಹಿಂದೂ ಉದಾರವಾದಿ ವಿವೇಕಾನಂದರು (ಬಂಗಾಳದಲ್ಲಿ) ಮಹಿಳೆಯರನ್ನು ‘ಗಂಡಸ್ತನ ಕಡಿಮೆಮಾಡುವ ಪ್ರಭಾವ’ ಎಂದು ನೋಡಿದರು — ಮಹಿಳೆ ‘ನಿಷ್ಠೆ’ ಅಥವಾ ‘ಪರಿಶುದ್ಧತೆಯ’ ಸಂದರ್ಭದಲ್ಲಿ ಮಾತ್ರ ‘ವೀರ’ ಆಗಿರಬಹುದು.
ಇಂದು ನಾವು ಫುಲೆಯವರಂತೆ ಇಂಟರ್ಸೆಕ್ಷನಲ್ ಸ್ತ್ರೀವಾದಿಗಳಾಗಿರಬೇಕು — ವಿವೇಕಾನಂದರಂತೆ ಪುರುಷಪ್ರಧಾನದವರಲ್ಲ ಎಂದು ಚೇತನ್ ಅಹಿಂಸಾ ಹೇಳಿದ್ದಾರೆ.
ಇದನ್ನೂ ಓದಿ | ರಾಜಮಾರ್ಗ ಅಂಕಣ: ವಿವೇಕಾನಂದರ ಮೇಲೆ ಪ್ರಭಾವ ಬೀರಿದ್ದು ಮೂವರು, ನಮಗೆ ಸಾರಿದ್ದು ನೂರಾರು!
ಕೆಂಪೇಗೌಡರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ
ನಟ ಚೇತನ್ ಕುಮಾರ್ ಇತ್ತೀಚೆಗೆ ಬೆಂಗಳೂರು ನಿರ್ಮಾತೃ ಕೆಂಪೇಗೌಡರಿಗೆ ಅಪಮಾನವಾಗುವ ರೀತಿಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೆಯೊಂದನ್ನು ನೀಡಿದ್ದರಿಂದ ಅವರ ವಿರುದ್ಧ ರಾಣೆಯಲ್ಲಿ ದೂರು ದಾಖಲಾಗಿತ್ತು.
ಇದು ಇಬ್ಬರು ಯೋಧರ ಕಥೆ, 1) ಕೆಂಪೇಗೌಡ: ಅವರು ಊಳಿಗಮಾನ್ಯ ಜಾತಿ ಲಾಬಿಗಳ ಪ್ರಭಾವದಿಂದಾಗಿ ಈಗ ಪ್ರಮುಖ ಕರ್ನಾಟಕದ ಐಕಾನ್ ಆಗಿರುವ ಅತ್ಯಲ್ಪ ಐತಿಹಾಸಿಕ ವ್ಯಕ್ತಿ. 2) ಟಿಪ್ಪು ಸುಲ್ತಾನ್: ಒಬ್ಬ ಐತಿಹಾಸಿಕವಾಗಿ ಬಹಳ ಮಹತ್ವದ ವ್ಯಕ್ತಿ. ಅವರ ಜನ್ಮವು ಮುಸ್ಲಿಂ ಸಮುದಾಯದಲ್ಲಾದ ಕಾರಣ ಇಂದಿನ ಮಾನ್ಯತೆಗೆ ಅಡ್ಡಿಯಾಗಿದೆ. ದುರದೃಷ್ಟವಶಾತ್, ಒಬ್ಬ ವ್ಯಕ್ತಿಯು ಹುಟ್ಟಿದ ಸಮುದಾಯಕ್ಕೆ ಅವನ/ಅವಳ ಸಾಮಾಜಿಕ ಕೊಡುಗೆಗಳಿಗಿಂದ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ ಎಂದು ಚೇತನ್ ಪೋಸ್ಟ್ ಮಾಡಿದ್ದರು.
ಇದನ್ನೂ ಓದಿ | National Youth Day : ಯುವಜನರು ಗೆದ್ರೆ ದೇಶ ಗೆದ್ದಂತೆ: ಸಂಚಲನ ಮೂಡಿಸಿದ ವಿಸ್ತಾರ ನ್ಯೂಸ್‌ನ ವಿವೇಕ ವಂದನೆ
ಗಾಂಧಿವಾದ ಕಿತ್ತೊಗೆಯಬೇಕು ಎಂದಿದ್ದ ಚೇತನ್
ಕೆಲವು ದಿನಗಳ ಹಿಂದೆ ಎಕ್ಸ್ ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದ ನಟ ಚೇತನ್, ಮಹಾತ್ಮ ಗಾಂಧಿ ಅವರ ಧಾರ್ಮಿಕ ಸಾಮರಸ್ಯ ಇಂದಿನ ಅಗತ್ಯ ಎಂದು ಪ್ರತಿಪಾದಿಸುವ ಉದಾರವಾದಿಗಳಿಗೆ ನಮ್ಮ ಸಾಂವಿಧಾನಿಕ ತತ್ವದಗಳು ಅರ್ಥವಾಗುತ್ತಿಲ್ಲ. ಖಾಸಗಿಯಾಗಿ ನಾವೆಲ್ಲರೂ ಧಾರ್ಮಿಕ ಹಕ್ಕು ಹೊಂದಿದ್ದೇವೆ. ಸಾರ್ವಜನಿಕವಾಗಿ ನಾವು ಜಾತ್ಯತೀತ ರಾಷ್ಟ್ರ. ಅಂದರೆ, ಧರ್ಮದಿಂದ ದೂರವಾಗಿದ್ದೇವೆ. ಹಾಗಿದ್ದ ಮೇಲೆ, ಧಾರ್ಮಿಕ ಸಾಮರಸ್ಯ ಎನ್ನುವುದು ಅಸಮಾನತೆಯ ಸಂರಕ್ಷಣೆಯಾಗಿದೆ. ಗಾಂಧಿವಾದವನ್ನು ಕಿತ್ತೊಗೆಯಬೇಕು ಎಂದು ಟ್ವೀಟ್ ಮಾಡಿದ್ದರು.