ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಗೆ ಆದಿಚುಂಚನಗಿರಿ ಮಠದ ಪದ್ಮಭೂಷಣ ಶ್ರೀ ಡಾ. ಬಾಲಗಂಗಾಧರ ಸ್ವಾಮೀಜಿ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಒಕ್ಕಲಿಗರ ಯುವ ಬ್ರಿಗೇಡ್ ಹಾಗೂ ಒಕ್ಕಲಿಗರ ಅನಿವಾಸಿ ಭಾರತೀಯ ಬ್ರಿಗೇಡ್ ವತಿಯಿಂದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಸಾರಿಗೆ ನಿತಿನ್ ಗಡ್ಕರಿ ಹಾಗೂ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರಿಗೆ ಮನವಿ ಸಲ್ಲಿಸಲಾಗಿದೆ.
ಇಡೀ ದೇಶದಲ್ಲಿ ಕರ್ನಾಟಕದ ದಕ್ಷಿಣ ಭಾಗವು ಯಾವಾಗಲೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಹಾಗೆಯೇ ಜಾತಿ ಮತ್ತು ಧರ್ಮದ ಭೇದವಿಲ್ಲದೆ ಎಲ್ಲರಿಗೂ ಉಚಿತ ಶಾಲೆಗಳು, ಕೈಗೆಟುಕುವ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಮೂಲಕ ಶಿಕ್ಷಣ, ಆರೋಗ್ಯ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಶ್ರೀ ಆದಿಚುಂಚನಗಿರಿ ಮಠದ ಶ್ರೀ ಡಾ. ಬಾಲಗಂಗಾಧರ ಸ್ವಾಮೀಜಿ ಅವರ ಕೊಡುಗೆ ಗಮನಾರ್ಹವಾಗಿದೆ. ಹೀಗಾಗಿ ಸ್ವಾಮೀಜಿ ಅವರ ಸೇವೆಯನ್ನು ಪರಿಗಣಿಸಿ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಗೆ ಶ್ರೀಗಳ ಹೆಸರನ್ನು ನಾಮಕರಣ ಮಾಡುವಂತೆ ಒಕ್ಕಲಿಗರ ಯುವ ಬ್ರಿಗೇಡ್ ಮತ್ತು ಒಕ್ಕಲಿಗರ ಅನಿವಾಸಿ ಭಾರತೀಯ ಬ್ರಿಗೇಡ್ ಕೋರಿದೆ.
ಒಕ್ಕಲಿಗರ ಯುವ ಬ್ರಿಗೇಡ್ ಮತ್ತು ಒಕ್ಕಲಿಗರ ಅನಿವಾಸಿ ಭಾರತೀಯ ಬ್ರಿಗೇಡ್, ಒಂದು ಸಾಮಾಜಿಕ ಕಳಕಳಿಯುಳ್ಳ ಸಂಸ್ಥೆಯಾಗಿದ್ದು, ನೂರಾರು ವಿದ್ಯಾರ್ಥಿಗಳಿಗೆ ಹಾಗೂ ಯುವಕರಿಗೆ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮಾರ್ಗದರ್ಶನಗಳನ್ನು ನೀಡುತ್ತಾ ದಾರಿದೀಪವಾಗಿದೆ. ಈ ಸಂಸ್ಥೆಯ ಸಂಸ್ಥಾಪಕ ನಂಜೇಗೌಡ ನಂಜುಂಡ ಅವರ ಪ್ರಯತ್ನದಿಂದ ದೇಶ-ವಿದೇಶದಲ್ಲಿ ನೆಲೆಸಿರುವ ಜನಾಂಗದ ಯುವಕರನ್ನು ಒಂದುಗೂಡಿಸಿ ಸಮಾಜ ಸೇವೆ, ಸಮಾಜ ಕಟ್ಟುವ ಕೆಲಸವನ್ನು ಮಾಡುತ್ತಿದೆ.
ಇದನ್ನೂ ಓದಿ | Helicopter Crash | ಹೆಲಿಕಾಪ್ಟರ್ ಪತನ, ಉಕ್ರೇನ್ ಸಚಿವ ಸೇರಿ 18 ಜನರು ದುರ್ಮರಣ