Site icon Vistara News

Karnataka Election 2023: ರೂಪಾಲಿ ನಾಯ್ಕರಿಗೆ ಮತ ನೀಡಿ, ಅಭಿವೃದ್ಧಿ ಗೆಲ್ಲಿಸಿ: ಪ್ರಮೋದ್ ಮಧ್ವರಾಜ್

Vote for Rupali Naik says Pramod Madhwaraj in election campaign Karnataka Election 2023 updates

ಕಾರವಾರ: ಜಿಲ್ಲೆಯ ಹಾಗೂ ಕ್ಷೇತ್ರದ ಧ್ವನಿಯಾಗಿರುವ ಮಹಿಳಾ ಶಾಸಕಿ ರೂಪಾಲಿ ನಾಯ್ಕ (Ripali Naik) ಅವರನ್ನು ಈ ಬಾರಿಯ ಚುನಾವಣೆಯಲ್ಲಿ (Karnataka Election 2023) ಮತ್ತೊಮ್ಮೆ ಆಯ್ಕೆ ಮಾಡಲು ಮತ ನೀಡಿ. ಈ ಮೂಲಕ ಅಭಿವೃದ್ಧಿಯನ್ನು ಗೆಲ್ಲಿಸಿ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ (Pramod Madhwaraj) ಕರೆ ನೀಡಿದರು.

ಕಾರವಾರದ ಕೋಡಿಬೀರ ದೇವಸ್ಥಾನದ ಹತ್ತಿರ ಗುರುವಾರ ನಡೆದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ರೂಪಾಲಿ ನಾಯ್ಕ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ರೂಪಾಲಿ ನಾಯ್ಕ ಅವರು ಮಹಿಳಾ ಶಾಸಕಿಯಾಗಿ ಜಿಲ್ಲೆ ಹಾಗೂ ಕ್ಷೇತ್ರದ ಧ್ವನಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರು ಜನರ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿದ್ದಾರೆ. ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಿದ್ದಾರೆ. ಹಿಂದೆಂದೂ ಆಗದೇ ಇರುವ ಕಾರ್ಯವನ್ನು ಅವರ ಅವಧಿಯಲ್ಲಿ ಮಾಡಿದ್ದಾರೆ. ಇಂತಹ ಜನ ನಾಯಕಿಯನ್ನು ಮತ್ತೊಮ್ಮೆ ಆಯ್ಕೆ ಮಾಡಲು ಅವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಹೇಳಿದರು.

ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ಶಾಸಕಿ ರೂಪಾಲಿ ನಾಯ್ಕ.

ಅಭಿವೃದ್ಧಿ ಕೆಲಸ ಮಾಡಿದ್ದೇನೆ- ನನಗೆ ಮತ ನೀಡಿ

ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಮಾತನಾಡಿ, 20 ವರ್ಷ ರಾಜಕಾರಣದಲ್ಲಿ ಯಾವುದೇ ರೀತಿಯ ಸ್ವಾರ್ಥಕ್ಕಾಗಿ ದುಡಿದಿಲ್ಲ. ಕೇವಲ ಜನರಿಗಾಗಿಯೇ ನಾನು ಕೆಲಸ ಮಾಡಿದ್ದೇನೆ. ನಗರದ ರಾಜಕಾಲುವೆ ಕೋಣೆನಾಲಾದ ಸ್ವಚ್ಛತೆಗೆ ಈಗಾಗಲೇ ಅನುದಾನವನ್ನು ನೀಡಲಾಗಿದೆ. ಈ ಪರಿಸರದ ದುರ್ವಾಸನೆ ನಿವಾರಣೆಯಾಗಲಿದೆ. ಸೊಳ್ಳೆಗಳ ಕಾಟ ತಪ್ಪಲಿದೆ. ನಗರದಲ್ಲಿ ಆಗದೇ ಇರುವ ಕಾರ್ಯಗಳನ್ನು ಮಾಡಿದ್ದೇನೆ. ಕಾರವಾರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು, ಜಿಲ್ಲಾ ಕೇಂದ್ರ ಕಾರವಾರದ ಮಾಲಾದೇವಿ ಮೈದಾನದ ಅಭಿವೃದ್ಧಿ, ಶಾಸಕರ ಮಾದರಿ ಶಾಲೆ, ಗುರುಭವನ ಮಹಿಳಾ ಕಾಲೇಜು ಹೀಗೆ ರಸ್ತೆ ಸೇತುವೆ ನಿರ್ಮಾಣಕ್ಕೆ ಒತ್ತು ನೀಡಿದ್ದೇನೆ ಎಂದರು.

ಇದನ್ನೂ ಓದಿ: Karnataka Election: ಗಾಳಿಗೂ ಮೋದಿ ಜಿಎಸ್‌ಟಿ ವಿಧಿಸಿದರೆ ಅಚ್ಚರಿ ಇಲ್ಲ: ಖರ್ಗೆ ವಾಗ್ದಾಳಿ

ಮೀನುಗಾರರಿಗೆ ಎಂದಿಗೂ ನಾನು ಅನ್ಯಾಯ ಮಾಡಿಲ್ಲ. ಕೋವಿಡ್ ಸಂದರ್ಭದಲ್ಲಿ ಎಲ್ಲರಿಗೂ ಪ್ಯಾಕೇಜ್ ಘೋಷಣೆ ಮಾಡುತ್ತಿದ್ದಾಗ, ನಿಕಟ ಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ ಕೂಡಲೇ ಅವರು ಪ್ಯಾಕೇಜ್ ನೀಡುವುದಾಗಿ ಘೋಷಿಸಿ ಅವರಿಗೆ ತಲುಪುವಂತೆ ಮಾಡಿದ್ದರು. ಅದೇ ರೀತಿ ಬೆಳಂಬಾರ ಬಂದರು, ಮಾಜಾಳಿ ಬಂದರು ನಿರ್ಮಾಣಕ್ಕೆ ಅನುದಾನವನ್ನು ತಂದಿದ್ದೇನೆ. ಈ ಬಂದರು ನಿರ್ಮಾಣವಾದರೆ ಕ್ಷೇತ್ರದ ಮೀನುಗಾರರಿಗೆ ಅನುಕೂಲವಾಗಲಿದೆ ಎಂದರು.

ಎಲ್ಲ ಸಮಾಜದ ಏಳಿಗೆಗೆ ನಾನು ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಕ್ಷೇತ್ರದಲ್ಲಿ ಇದುವರೆಗೆ ಶಾಂತಿ ಸುವ್ಯವಸ್ಥೆಗೆ ಶ್ರಮಿಸಿದ್ದೇನೆ. ಪ್ರವಾಹ ಹಾಗೂ ಕೋವಿಡ್ ಸಂದರ್ಭದಲ್ಲಿ ಜನರಿಗಾಗಿ ಹಗಲಿರುಳು ಶ್ರಮಿಸಿದ್ದೇನೆ. ಕೋವಿಡ್ ಆದಾಗ ಆಸ್ಪತ್ರೆಯಲ್ಲಿ ಸೋಂಕಿತರು ದಾಖಲಾಗಿ ಸಾವನ್ನಪ್ಪುತ್ತಿದ್ದ ಘಟನೆ ತುಂಬಾ ನೋವನ್ನು ನೀಡಿದೆ. ಕೊರೊನಾ ಮಾರಿ ಬಂದಾಗ ವ್ಯಾಕ್ಸಿನೇಶನ್‌ನಿಂದ ಬದುಕುಳಿದೆವು. ಪ್ರಧಾನಿ ನರೇಂದ್ರ ಮೋದಿ ನಮ್ಮ ದೇಶದಲ್ಲೇ ವ್ಯಾಕ್ಸಿನ್ ತಯಾರಿಸಲು ಉತ್ತೇಜಿಸಿದರು. ವ್ಯಾಕ್ಸಿನ್ ತಯಾರಾಗುತ್ತಿದ್ದಂತೆ ಅದರ ಬಗ್ಗೆಯೂ ಕಾಂಗ್ರೆಸ್‌ನವರು ಟೀಕೆ ಮಾಡಿದರು. ನಂತರ ವ್ಯಾಕ್ಸಿನ್ ಪಡೆದವರು ಇದೇ ಟೀಕೆ ಮಾಡಿದ ಕಾಂಗ್ರೆಸ್ ಜನ ಎಂದರು.

ನಮ್ಮ ಮೇಲೆ ಗೂಬೆ ಕೂರಿಸಿದರು

ಸಿಎಂ ಪಟ್ಟಕ್ಕಾಗಿ ಕಾಂಗ್ರೆಸ್‌ನಲ್ಲಿ ಕಾಂಪಿಟೇಶನ್ ನಡೆಯುತ್ತಿದೆ. ಅವರಿಗೆ ರಾಜ್ಯ, ಜನರ ಹಿತಕ್ಕಿಂತ ಸಿಎಂ ಸ್ಥಾನವೇ ಮುಖ್ಯವಾಗಿದೆ. ಕಾಂಗ್ರೆಸ್ ನವರು ಗ್ಯಾರಂಟಿ ಕಾರ್ಡ್‌ ಹೆಸರಿನಲ್ಲಿ ಜನರನ್ನು ಮರಳು ಮಾಡುತ್ತಿದ್ದಾರೆ. ಮೀನುಗಾರರಿಗೆ ನಮ್ಮ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ನೇಕಾರರ ಸಾಲ ಮನ್ನಾ ಮಾಡಿದರು. ಆಗ ಮೀನುಗಾರರ ಸಾಲ ಮನ್ನಾ ಮಾಡುವಂತೆ ಯಡಿಯೂರಪ್ಪ ಅವರಲ್ಲಿ ವಿನಂತಿಸಿದೆ. ಆಗ ಅವರು ಒಪ್ಪಿ ಸಾಲ ಮನ್ನಾ ಮಾಡಿದ್ದರು. ನಾನೂ ಕೂಡ ಮಹಿಳೆ. ಮೀನು ಮಾರಾಟ ಮಾಡುವ ನೀವೂ ಮಹಿಳೆಯರು. ನೀವು ಶಕ್ತಿ ಕೊಟ್ಟಿದ್ದರಿಂದ ನಾನು ಇಲ್ಲಿದ್ದೇನೆ. ಅದಕ್ಕಾಗಿ ನಿಮ್ಮೆಲ್ಲರಿಗೆ ಅನುಕೂಲ ಕಲ್ಪಿಸುವುದು ನನ್ನ ಉದ್ದೇಶ. ಸಾಗರಮಾಲಾಕ್ಕೆ ಸತೀಶ ಸೈಲ್ ಹಾಗೂ ಸಿದ್ಧರಾಮಯ್ಯ ಸೇರಿ ಶಿಲಾನ್ಯಾಸ ನೆರವೇರಿಸಿದರು. ಆದರೆ ಅಮಾಯಕರನ್ನು ನನ್ನ ವಿರುದ್ಧ ಎತ್ತಿಕಟ್ಟಿದರು. ನನ್ನ ಹೆಸರು ಹಾಳು ಮಾಡಿದರು. ಪಾಪ ಮಾಡಿದವರು ಅವರು, ನಮ್ಮ ಮೇಲೆ ಗೂಬೆ ಕೂರಿಸಿದರು ಎಂದರು.

ಮತ್ತೊಮ್ಮೆ ಆಯ್ಕೆ ಮಾಡಬೇಕು

ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ ಮಾತನಾಡಿ, ಶಾಸಕಿ ರೂಪಾಲಿ ನಾಯ್ಕ ಅವರು ಕ್ಷೇತ್ರದಲ್ಲಿ ಅನೇಕ ಕಾರ್ಯವನ್ನು ಮಾಡಿದ್ದಾರೆ. ಮೀನುಗಾರರ ಪರವಾಗಿ ಸದಾ ಅವರ ಮನ ಮಿಡಿಯುತ್ತದೆ. ಪ್ರತಿ ಸಂದರ್ಭದಲ್ಲೂ ಜನರಿಗಾಗಿ ಆಗಬೇಕಾದ ಕೆಲಸಗಳ ಬಗ್ಗೆಯೇ ಯೋಚಿಸುತ್ತಿರುತ್ತಾರೆ. ಹಲವರು ಇಲ್ಲಿ ಶಾಸಕರಾಗಿ ಹೋದರು, ಆದರೆ ಮೀನುಗಾರರನ್ನು ಬಳಸಿಕೊಂಡರೇ ಹೊರತು ಅವರ ಪರವಾಗಿ ಎಂದಿಗೂ ನಿಂತಿಲ್ಲ. ಮೀನುಗಾರ ಸಮುದಾಯದ ನನ್ನನ್ನು ಕೂಡ ಮೇಲ್ಮನೆಗೆ ಕಳುಹಿಸಲು ಅಪಾರವಾಗಿ ಶ್ರಮಿಸಿದ್ದಾರೆ. ಅವರನ್ನು ನಾವು ಮತ್ತೊಮ್ಮೆ ಆಯ್ಕೆ ಮಾಡಬೇಕು ಎಂದರು.

ಇದನ್ನೂ ಓದಿ: Karnataka Election 2023: ಕಾಂಗ್ರೆಸ್‌ ಪೇಯ್ಡ್‌ ಎಂಜಿನ್‌ ಬಿಡಿ, ಬಿಜೆಪಿ ಡಬಲ್ ಎಂಜಿನ್ ಕೈಹಿಡಿಯಿರಿ: ಯೋಗಿ ಆದಿತ್ಯನಾಥ ಕರೆ

ಈ ಸಂದರ್ಭದಲ್ಲಿ ಗೋವಾ ಶಾಸಕ ಪ್ರೇಮೇಂದ್ರ ಶೇಟ್, ನಗರಸಭೆ ಅಧ್ಯಕ್ಷ ಡಾ. ನಿತಿನ್ ಪಿಕಳೆ, ಮಂಡಲದ ಅಧ್ಯಕ್ಷರಾದ ನಾಗೇಶ ಕುರ್ಡೆಕರ, ಸುಭಾಷ ಗುನಗಿ, ಮನೋಜ ತಾಮ್ಸೆ, ರೋಷನಿ ಮಾಳ್ಸೆಕರ, ರವಿರಾಜ ಅಂಕೋಲೆಕರ, ಮಾಲಾ ಹುಲುಸ್ವಾರ, ಪಕ್ಷದ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

Exit mobile version