Site icon Vistara News

Voter data | ಡಿಲೀಟ್‌ ಆಗಿದ್ದು 24 ಲಕ್ಷ ಹೆಸರಲ್ಲ, 6 ಲಕ್ಷ ಮಾತ್ರ: ಕಾಂಗ್ರೆಸ್‌ ಹೇಳೋದೆಲ್ಲ ಸುಳ್ಳು ಎಂದ ಬಿಜೆಪಿ

ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

ಬೆಂಗಳೂರು: ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್‌ (Voter data) ಆಗಿರುವುದಕ್ಕೆ ಸಂಬಂಧಿಸಿ ಕಾಂಗ್ರೆಸ್‌ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಜತೆಗೆ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ. ಬೆಂಗಳೂರಿನಲ್ಲಿ ಡುಪ್ಲಿಕೇಟ್‌ ಆಗಿರುವ 6,74,422 ಮತಗಳನ್ನು ಡಿಲೀಟ್‌ ಮಾಡಲಾಗಿದೆ ಎಂದು ಚುನಾವಣಾ ಆಯೋಗ ಈಗಾಗಲೇ ಹೇಳಿದೆ. ಆದರೆ ಕಾಂಗ್ರೆಸ್‌ ೨೪ ಲಕ್ಷ ಹೆಸರುಗಳು ಡಿಲೀಟ್‌ ಆಗಿವೆ ಎಂದು ಸುಳ್ಳು ಹೇಳುತ್ತಿದೆ ಎಂದು ಬಿಜೆಪಿ ಹೇಳಿದೆ.

ಕಾಂಗ್ರೆಸ್‌ನ ಈ ಸುಳ್ಳಿನ ವಿರುದ್ಧ ಬಿಜೆಪಿ ವತಿಯಿಂದ ಚುನಾವಣೆ ಆಯೋಗಕ್ಕೆ ದೂರು ನೀಡಲಾಗಿದೆ. ಮೇಲ್ಮನೆ ಸದಸ್ಯರಾದ ಚಲವಾದಿ ನಾರಾಯಣ ಸ್ವಾಮಿ, ಎನ್‌. ರವಿಕುಮಾರ್‌, ಬೆಂಗಳೂರು ಉತ್ತರ ಜಿಲ್ಲೆ ಬಿಜೆಪಿ ಅಧ್ಯಕ್ಷ ಮಂಜುನಾಥ್, ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಅಧ್ಯಕ್ಷ ನಾರಾಯಣ್ ಸೇರಿದಂತೆ ಬಿಜೆಪಿ ನಾಯಕರ ನಿಯೋಗ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿ ಚುನಾವಣಾ ಆಯುಕ್ತರಿಗೆ ದೂರು ನೀಡಿದರು.

ಮನವಿ ನೀಡಿ ಹೊರಬಂದ ಬಳಿಕ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌ ಅವರು, ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಅವರು ಸೀದಾ ಸಿದ್ದರಾಮಯ್ಯ ಅಲ್ಲ ಸುಳ್ಳು ಸಿದ್ದರಾಮಯ್ಯ. ಡಿ.ಕೆ ಶಿವಕುಮಾರ್ ಅವರಿಗೆ ಮುಖಕ್ಕೆ ರಾಚುವಂತೆ ಈ ಪತ್ರ ಹಿಡಿಯುತ್ತಿದ್ದೇವೆ. 2017ರಲ್ಲಿ ಚಿಲುಮೆ ಸಂಸ್ಥೆಗೆ ಸರ್ವೇಗೆ ಅನುಮತಿ ಕೊಟ್ಟಿದ್ದು ಯಾರು? ಎಂದು ಪ್ರಶ್ನಿಸಿದರು.

ಬಿಜೆಪಿ ದೂರಿನಲ್ಲಿನ ಅಂಶಗಳೇನು?
ಕಾಂಗ್ರೆಸ್‌ ಅರೋಪಗಳೆಲ್ಲವೂ ಸುಳ್ಳು, ಪುನರಾವರ್ತಿತ ಸುದ್ದಿ ತೆಗೆದದ್ದು ಸರಿಯೇ ಇದೆ
ಮತದಾರರ ಪಟ್ಟಿ ಪರಿಷ್ಕರಣೆಯ ವಿಚಾರದಲ್ಲಿ ಅಕ್ರಮ ನಡೆದಿದೆ ಎನ್ನುವ ಕಾಂಗ್ರೆಸ್ ಪಾರ್ಟಿಯ ಆರೋಪವು ದುರುದ್ದೇಶದಿಂದ ಕೂಡಿದೆ. ಮತದಾರರ ಪಟ್ಟಿಯಲ್ಲಿ 2-3 ಬಾರಿ ಹೆಸರುಗಳು ಪುನರಾವರ್ತನೆಯಾಗಿದ್ದರೆ ಆ ಹೆಸರುಗಳನ್ನು ಕೈ ಬಿಡುವುದು ಚುನಾವಣಾ ಆಯೋಗ ಕಾರ್ಯವಾಗಿದೆ. ಈ ಕಾರ್ಯವನ್ನು ಚುನಾವಣಾ ಆಯೋಗ ಮಾಡುತ್ತಿರುವುದು ಸ್ವಾಗತಾರ್ಹ. ಇದುವರೆಗೆ ಬೆಂಗಳೂರಿನಲ್ಲಿ ಎರಡು ಮೂರು ಬಾರಿ ಪುನರಾವರ್ತಿತ 6,74,422 ಹೆಸರುಗಳನ್ನು ಮತದಾರರ ಪಟ್ಟಿಯಿಂದ ಬೆಂಗಳೂರು ನಗರದಲ್ಲಿ ತೆಗೆದು ಹಾಕಿರುವುದನ್ನು ಚುನಾವಣಾ ಆಯೋಗ ಈಗಾಗಲೇ ಹೇಳಿದೆ.

ಕಪೋಲಕಲ್ಪಿತ ಆರೋಪ
ಕಾಂಗ್ರೆಸ್‌ಗೆ ಸೇರಿದ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಕಾಂಗ್ರೆಸ್‌ ದೂರಿನಲ್ಲಿ ಹೇಳಿದೆ. ಈ ಕುರಿತಂತೆ ತನಿಖೆ ನಡೆಯಲಿ. ಆದರೆ ಇದರಲ್ಲಿ ಬಿಜೆಪಿ ಹೆಸರುಗಳನ್ನು ಸೇರಿಸಲಾಗಿದೆ. ಕಾಂಗ್ರೆಸ್‌ನ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ ಎಂಬುದು ಅತ್ಯಂತ ಕಪೋಲ ಕಲ್ಪಿತ ಆರೋಪವಾಗಿದೆ.

ಲೋಪಗಳಾಗಿದ್ದರೆ ಚುನಾವಣಾ ಆಯೋಗ ಸರಿ ಮಾಡಲಿ
ಚುನಾವಣಾ ಆಯೋಗ ಒಂದು ಸ್ವಾಯತ್ತ ಸಂಸ್ಥೆ. ಆ ಸಂಸ್ಥೆಗೆ ಮತದಾರರ ಸೇರ್ಪಡೆ ಮತ್ತು ರದ್ದುಪಡಿಸುವ ಅಧಿಕಾರವಿದೆ. ಇದರಲ್ಲಿ ಲೋಪಗಳಾಗಿದ್ದಲ್ಲಿ ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳಬೇಕೆಂದು ಬಿ.ಜೆ.ಪಿ ಮನವಿ ಮಾಡಿಕೊಳ್ಳುತ್ತದೆ.

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಬಿಜೆಪಿ ಪಾಲುದಾರಿಕೆ ಇಲ್ಲ
ಚುನಾವಣಾ ಆಯೋಗದ ಕೆಲಸವನ್ನು ಸರ್ಕಾರದ ಕೆಲಸ ಎನ್ನುವಂತೆ ಬಿಂಬಿಸಿ, ತನ್ನ ಭ್ರಷ್ಟಾಚಾರ ಮುಚ್ಚಿಕೊಳ್ಳುವ ಕಾಂಗ್ರೆಸ್ ಪಾರ್ಟಿ ಜನರಿಗೆ ಸುಳ್ಳು ಮಾಹಿತಿ ನೀಡುತ್ತಿರುವುದು ದುರದೃಷ್ಟಕರ ಸಂಗತಿ. ಆದರೆ ವಿಪರ್ಯಾಸದ ಸಂಗತಿಯೆಂದರೆ ಚಿಲುಮೆ ಸಂಸ್ಥೆಗೆ ಮತದಾರರ ಜಾಗೃತಿ ಮತ್ತು ಪರಿಷ್ಕರಣೆಯ ಕಾರ್ಯಕ್ಕೆ 2017-18ರಲ್ಲಿ ಅನುಮತಿ ನೀಡಿರುವುದು ಕಾಂಗ್ರೇಸ್ ಸರ್ಕಾರವಿದ್ದಾಗಲೇ. ಆಗಿನ ಮುಖ್ಯಮಂತ್ರಿಗಳು ಇಂದಿನ ವಿರೋಧಪಕ್ಷದ ನಾಯಕರಾದ ಸಿದ್ಧರಾಮಯ್ಯನವರ ಆಗಿದ್ದರು.

ಚಿಲುಮೆ ಬಗ್ಗೆ ೨೦೧೩ರಿಂದಲೇ ತನಿಖೆ ನಡೆಯಲಿ
2017 ರಲ್ಲಿ ಕಾಂಗ್ರೆಸ್‌ ನಾಯಕರು, ಬಿಜೆಪಿಯ ವಿರುದ್ಧ ತಾವು ಕಾರ್ಯಾದೇಶ ನೀಡಿದ್ದನ್ನು ಮರೆತು ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಇಡೀ ಪ್ರಕರಣದ ಉನ್ನತ ಮಟ್ಟದ ತನಿಖೆಯನ್ನು 2013ರಿಂದ ಕೈಗೊಳ್ಳಲು ಆಯೋಗವನ್ನು ವಿನಂತಿಸುತ್ತದೆ.

ಚಿಲುಮೆ ವಿರುದ್ಧ ದೂರು ನೀಡಿದ್ದು ಸ್ವಾಗತಾರ್ಹ
2022ರ ನವೆಂಬರ್ 17ರಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮತದಾರರ ಜಾಗೃತಿ ಕಾರ್ಯಕ್ರಮಕ್ಕೆ ನಿಯೋಜನೆ ಮಾಡಿರುವ ಚಿಲುಮೆ ಸಂಸ್ಥೆಯು ಮತದಾರರ ಮಾಹಿತಿಯನ್ನು ಕಾನೂನುಬಾಹಿರವಾಗಿ ಸಂಗ್ರಹಿಸುತ್ತಿರುವ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದು ಸ್ವಾಗತಾರ್ಹ ಕ್ರಮವಾಗಿದೆ.

ಇದನ್ನೂ ಓದಿ | Voter data | ಬೊಮ್ಮಾಯಿ ಅವರೇ ನಿಮ್ಮ ವಿರುದ್ಧ ಯಾಕೆ FIR ಆಗಿಲ್ಲ? 11 ಪ್ರಶ್ನೆ ಕೇಳಿದ ರಣದೀಪ್‌ ಸುರ್ಜೇವಾಲಾ

Exit mobile version