Site icon Vistara News

Voter data | ಸ್ವತಂತ್ರ ನ್ಯಾಯಾಂಗ ತನಿಖೆಗೆ ಕಾಂಗ್ರೆಸ್‌ ಆಗ್ರಹ, ಸಿಎಂ ಬೊಮ್ಮಾಯಿಯೇ ಕಿಂಗ್‌ಪಿನ್‌: ಪುನರುಚ್ಚಾರ

DK Shivakumar And I are Karnataka CM Aspirants: Says Siddaramaiah

DK Shivakumar And I are Karnataka CM Aspirants: Says Siddaramaiah

ಬೆಂಗಳೂರು: ಬೆಂಗಳೂರಿನ ಕೆಲವು ಭಾಗಗಳಲ್ಲಿ ನಡೆದಿದೆ ಎನ್ನಲಾದ ಮತದಾರರ ಮಾಹಿತಿ ಕಳವು (Voter data) ಆರೋಪದ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಕೈಗೊಂಡಿರುವ ಕ್ರಮಗಳ ಬಗ್ಗೆ ಕಾಂಗ್ರೆಸ್‌ ತೃಪ್ತಿ ವ್ಯಕ್ತಪಡಿಸಿದೆ. ಆದರೆ, ಇದರ ಬಗ್ಗೆ ಸಮಗ್ರವಾಗಿ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಉಸ್ತುವಾರಿಯಲ್ಲಿ ತನಿಖೆ ಆಗಬೇಕು ಎಂದು ಆಗ್ರಹಿಸಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಶನಿವಾರ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಆಗ್ರಹವನ್ನು ಮಂಡಿಸಿದರು.

ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯ ಮೂಲಕ ಮತದಾರರ ಮಾಹಿತಿ ಸಂಗ್ರಹ ಮಾಡಿರುವುದು, ಮತದಾರರ ಪಟ್ಟಿಯಿಂದ ಸಾವಿರಾರು ಜನರ ಹೆಸರನ್ನು ಕಿತ್ತು ಹಾಕಿರುವ ಬಗ್ಗೆ ಕಾಂಗ್ರೆಸ್‌ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದೆ ಕೇಂದ್ರ ಚುನಾವಣಾ ಆಯೋಗವು ಚಿಕ್ಕಪೇಟೆ, ಶಿವಾಜಿ ನಗರ ಮತ್ತು ಮಹದೇವಪುರ ಕ್ಷೇತ್ರದಲ್ಲಿ ಕಳೆದ ಜನವರಿ ೧ರಿಂದ ಆಗಿರುವ ಎಲ್ಲ ಸೇರ್ಪಡೆ ಮತ್ತು ಡಿಲಿಷನ್‌ನ್ನು ಮರುಪರಿಶೀಲನೆಗೆ ಒಳಪಡಿಸಬೇಕು ಎಂದು ಸೂಚಿಸಿದ್ದಲ್ಲದೆ, ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಜತೆಗೆ ಹೊಸ ಮತದಾರರ ಪಟ್ಟಿಯನ್ನು ರೂಪಿಸುವಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮೂವರು ಅಧಿಕಾರಿಗಳನ್ನು ನೇಮಿಸಿದೆ.

ʻʻನಮ್ಮ ದೂರಿನ ಮೇಲೆ ಕೇಂದ್ರ ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ. ಈ ಹಗರಣದಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರು ಶಾಮೀಲಾಗಿದ್ದಾರೆ. ಕೆಲವು ಬಿಜೆಪಿ ಶಾಸಕರೇ ಅಭಿಯಾನ ನಡೆಸಿದ್ದಾರೆ. ಚೆಕ್‌ ಮೂಲಕವೇ ಚಿಲುಮೆ ಸಂಸ್ಥೆಗೆ ಹಣ ನೀಡಿದ್ದಾರೆ. ಸರಕಾರಿ ಅಧಿಕಾರಿಗಳಿಗೆ ಮಾತ್ರ ಬಿಎಲ್ಓ ಆಗುವ ಅವಕಾಶವಿರುವುದು. ಆದರೆ, ಯಾರೋ ಅಧಿಕಾರಿಗಳ ಐಡಿ ಕಾರ್ಡ್ ಹಾಕಿಕೊಂಡು ಕೆಲಸ ಮಾಡಿದ್ದಾರೆʼʼ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆರೋಪಿಸಿದರು.

ʻʻಈ ಹಗರಣದ ಮೂಲಕ ರಾಜ್ಯದ ಹೆಸರಿಗೆ ಕಳಂಕ ತಂದಿದ್ದಾರೆ. ಕರ್ನಾಟಕ ಕಳಂಕಿತ ರಾಜ್ಯ ಎಂಬ ಹೆಸರು ಬರಲು ಇವರು ಕಾರಣರಾಗಿದ್ದಾರೆ. ಕೆಂಪೇಗೌಡ, ಕುವೆಂಪು ನಾಡು, ಬಸವಣ್ಣನ ನಾಡು, ಶಿಶುನಾಳ ಶರೀಫರ ನಾಡು ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದೆವು. ಈಗ ಅದಕ್ಕೆ ಕೆಟ್ಟ ಹೆಸರು ತಂದಿದೆʼʼ ಎಂದರು ಡಿ.ಕೆ ಶಿವಕುಮಾರ್‌. ಈ ಹಗರಣಕ್ಕೆ ಕಾರಣರಾದ ಎಲ್ಲರನ್ನು ಬಂಧಿಸಬೇಕು ಎಂದು ಡಿಕೆಶಿ ಆಗ್ರಹಿಸಿದರು.

ಸಿಎಂ ರಾಜೀನಾಮೆ ಕೊಡಬೇಕು
ʻʻನಾವು ಚಿಲುಮೆ ವಿರುದ್ಧ ನಿರಂತರ ದೂರು ಕೊಟ್ಟಿದ್ದೇವೆ. ನಮಗೆ ರಾಜ್ಯ ಚುನಾವಣಾ ಆಯೋಗದ ಬಗ್ಗೆ ಅನುಮಾನವಿದ್ದುದರಿಂದ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೆವು. ಇದೀಗ ಅದು ಕ್ರಮಕ್ಕೆ ಮುಂದಾಗಿದೆʼʼ ಎಂದು ಹೇಳಿದ ಸಿದ್ದರಾಮಯ್ಯ ʻʻಚಿಲುಮೆ ಸಂಸ್ಥೆ ನೇಮಕ‌ ಮಾಡಿದ್ದು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ. ಬೆಂಗಳೂರು ಉಸ್ತುವಾರಿ ನೋಡಿಕೊಳ್ಳುತ್ತಿರುವುದು ಸಿಎಂ ಬೊಮ್ಮಾಯಿ. ಅದಕ್ಕೆ ನಾವು ಸಿಎಂ ರಾಜೀನಾಮೆ ಕೇಳಿದ್ದೆವು. ಈಗ ಮೂವರು ಐಎಎಸ್‌ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ನಮ್ಮ ದೂರಿನ ಹಿನ್ನೆಲೆಯಲ್ಲಿ ಕ್ರಮ ಆಗಿದೆʼʼ ಎಂದು ಸಿದ್ದರಾಮಯ್ಯ ಹೇಳಿದರು.

ʻʻಬೆಂಗಳೂರಿನ ಎಲ್ಲಾ ೨೮ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಮರು ಪರಿಷ್ಕರಣೆ ಆಗಬೇಕು. ಅದಕ್ಕಾಗಿ ಎಲ್ಲ ಕಡೆ ಅಧಿಕಾರಿಗಳ ನೇಮಕ ಆಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಚುನಾವಣಾ ಆಯೋಗ ಕ್ರಮಕ್ಕೆ ಮುಂದಾಗಬೇಕುʼʼ ಎಂದು ಆಗ್ರಹಿಸಿದ ಸಿದ್ದರಾಮಯ್ಯ, ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಉಸ್ತುವಾರಿಯಲ್ಲಿ ತನಿಖೆ ಆಗಬೇಕು ಎಂದರು.

ʻʻಮುಖ್ಯಮಂತ್ರಿ ಈ ಪ್ರಕರಣದ ಕಿಂಗ್‌ ಪಿನ್‌. ಹೀಗಾಗಿ ಅವರ ಮೇಲೆ ಕ್ರಮ ತಗೆದುಕೊಳ್ಳಬೇಕು. ಜಿಲ್ಲಾ ಚುನಾವಣಾಧಿಕಾರಿ ಮೇಲೆ‌ ಕ್ರಮ ಆಗಬೇಕುʼʼ ಎಂದು ಹೇಳಿದರು.

ಎಲ್ಲ ಕ್ಷೇತ್ರಗಳಲ್ಲೂ ಪರಿಶೀಲನೆ
ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರದಲ್ಲೂ ಇದೇ ರೀತಿ ಆಗಿರುವ ಸಾಧ್ಯತೆ ಇದೆ. ಹೀಗಾಗಿ ಆಯಾ ಕ್ಷೇತ್ರದಲ್ಲಿ ಪರಿಸ್ಥಿತಿ ಹೇಗಿದೆ ಎಂಬ ಬಗ್ಗೆ ತಿಳಿದುಕೊಳ್ಳಲಿ ಆಯಾ ಕ್ಷೇತ್ರದ ಕಾರ್ಯಕರ್ತರಿಗೆ ಸೂಚನೆ ನೀಡಿದ್ದೇವೆ. ಮತದಾರ ಹೆಸರು ಸೇರ್ಪಡೆ ರದ್ದು ಮಾಡಿದ್ರೆ ಅಧಿಕಾರಿಗಳ ಗಮನಕ್ಕೆ ತನ್ನಿ ಎಂದು ಸೂಚಿಸಿದ್ದೇವೆ. ನವೆಂಬರ್ 27ಕ್ಕೆ ವರ್ಚುವಲ್ ಮೂಲಕ ಸಭೆ ಕರೆದಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಇದನ್ನೂ ಓದಿ | Voter data | 3 ಕ್ಷೇತ್ರಗಳಲ್ಲಿ ಡಿಲೀಟ್‌ ಆದ ಎಲ್ಲ ಹೆಸರುಗಳ ಮರುಪರಿಶೀಲನೆಗೆ ಚು.ಆಯೋಗ ಆದೇಶ, ಇಬ್ಬರು ಅಧಿಕಾರಿಗಳ ಸಸ್ಪೆಂಡ್‌

Exit mobile version