ಬೆಂಗಳೂರು: ಮತದಾರರ ಮಾಹಿತಿ ಕಳವಿನ (voter data) ಗಂಭೀರ ಅರೋಪ ಮಾಡುತ್ತಿರುವ ಕಾಂಗ್ರೆಸ್ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಚಿಲುಮೆ ಸಂಸ್ಥೆಯನ್ನು ಬಳಸಿಕೊಂಡು ಮತದಾರರ ಮಾಹಿತಿಯನ್ನು ಸಂಗ್ರಹಿಸಲಾಗಿದೆ, ಮತದಾರರ ಪಟ್ಟಿಯಿಂದ ಹೆಸರನ್ನು ಡಿಲೀಟ್ ಮಾಡಿಸಲಾಗಿದೆ. ಇದು ಮತದಾನದ ಹಕ್ಕನ್ನು ಕಸಿದುಕೊಳ್ಳುವ ಗಂಭೀರ ಅಪರಾಧವಾಗಿದ್ದು, ಚುನಾವಣಾ ಆಯೋಗ ಮೂಕವಾಗಿ ಕುಳಿತುಕೊಳ್ಳುವಂತಿಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಪಕ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್, ರಾಮಲಿಂಗಾ ರೆಡ್ಡಿ, ಮಾಜಿ ಸಚಿವ ಕೃಷ್ಣ ಭೈರೇಗೌಡ , ಶಾಸಕ ರಿಜ್ವಾನ್ ಅರ್ಷದ್ ಸೇರಿದಂತೆ ಕಾಂಗ್ರೆಸ್ ನಾಯಕರ ನಿಯೋಗ ಚುನಾವಣಾ ಆಯೋಗದ ಕಚೇರಿಗೆ ತೆರಳಿ, ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾಗೆ ದೂರು ಸಲ್ಲಿಸಿತು.
ಯಾರನ್ನೂ ಅರೆಸ್ಟ್ ಮಾಡಿಲ್ಲ
ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ʻʻಪ್ರಕರಣ ಇಷ್ಟೊಂದು ಗಂಭೀರವಾಗಿದ್ದರೂ ಯಾರನ್ನೂ ಇದುವರೆಗೂ ಬಂಧಿಸಿಲ್ಲ. ಕೆಲವರನ್ನು ನೆಪ ಮಾತ್ರಕ್ಕೆ ವಶಕ್ಕೆ ಪಡೆದಿದ್ದಾರೆ. ಇಲ್ಲಿ ಕೆಲವರನ್ನು ಮಾತ್ರ ವಶಕ್ಕೆ ಪಡೆದು ಏನೋ ಕ್ರಮ ಕೈಗೊಂಡಂತೆ ಮಾಡುವಂತೆ ಕಾಣುತ್ತಿದೆ. ಇದು ಒಬ್ಬಿಬ್ಬರಿಂದ ಆಗಿರುವ ಕೆಲಸ ಅಲ್ಲ. ಎಲ್ಲರ ಮೇಲೆ ಎಫ್‌ಐಆರ್ ಹಾಕಬೇಕುʼʼ ಎಂದು ಆಗ್ರಹಿಸಿದರು.
ಬ್ಲಾಕ್ ಲೆವೆಲ್ ಆಫೀಸರ್ (ಬಿಎಲ್‌ಒ) ಗುರುತಿನ ಚೀಟಿ ಯಾರೆಲ್ಲ ಪಡೆದು ಮಾಹಿತಿ ಸಂಗ್ರಹಿಸಿದ್ದಾರೋ ಅವರೆಲ್ಲರ ಮೇಲೆ ಕೇಸು ದಾಖಲಿಸಬೇಕು. ಎಲ್ಲರ ಮೇಲೆ ಕ್ರಿಮಿನಲ್ ಕೇಸೇ ದಾಖಲಿಸಬೇಕು. ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಆದೇಶಿಸಬೇಕು. ಹೈಕೋರ್ಟ್ ನ್ಯಾಯಮೂರ್ತಿಗಳ ಮಾರ್ಗದರ್ಶನದಲ್ಲೇ ತನಿಖೆಯಾಗಬೇಕು. ಯಾರು ಏನು ಮಾಡಿದ್ದಾರೆ ಎನ್ನುವುದು ಬೆಳಕಿಗೆ ಬರಬೇಕು. ಇದರಲ್ಲಿ ಬಿಬಿಎಂಪಿ ಕಮೀಷನರ್ ತುಷಾರ್ ಗಿರಿನಾಥ್ ಅವರೇ ಭಾಗಿಯಾಗಿರಲಿ, ಇನ್ಯಾರೇ ಇರಲಿ, ಕ್ರಮ ಕೈಗೊಳ್ಳಬೇಕುʼʼ ಎಂದು ಅವರು ಆಗ್ರಹಿಸಿದರು.
ಪ್ರಕರಣದಲ್ಲಿ ಭಾಗಿಯಾಗಿರುವ ಒಬ್ಬೊಬ್ಬರ ಮೊಬೈಲ್ ಚೆಕ್ ಮಾಡಿ, ಅವರಿಗೆ ಯಾರ ಜತೆಗೆಲ್ಲ ಸಂಪರ್ಕ ಇತ್ತು ಎನ್ನುವುದು ಬಯಲಾಗಬೇಕು. ಎಷ್ಟು ದಿನ ಎಷ್ಟು ಗಂಟೆ ಸಂಪರ್ಕದಲ್ಲಿದ್ದರು ಎನ್ನುವ ಮಾಹಿತಿ ಬಯಲಾಗಬೇಕು ಎಂದ ಡಿ.ಕೆ. ಶಿವಕುಮಾರ್, ಅಲ್ಲಿ ಕೆಲಸ ಮಾಡುತ್ತಿದ್ದವರೇ ನಮಗೆ ದಾಖಲೆಗಳನ್ನು ಕೊಟ್ಟಿದ್ದಾರೆ ಎಂಬ ಮಹತ್ವದ ಅಂಶ ಬಯಲಿಗಿಟ್ಟರು.
ಇದನ್ನೂ ಓದಿ | Voter data | ಚಿಲುಮೆ ಸಂಸ್ಥೆ ಮಾಲೀಕ ರವಿಕುಮಾರ್ ಸೇರಿದಂತೆ ಮೂವರು ಎಸ್ಕೇಪ್, ಪತ್ನಿಯ ವಿಚಾರಣೆ