ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ದಿನದಿಂದ ದಿನಕ್ಕೆ ಕಾವು ಏರುತ್ತಿದೆ. ಆಯಾ ಪಕ್ಷಗಳ ಅಭ್ಯರ್ಥಿಗಳು ಪ್ರಚಾರ ಕಾರ್ಯವನ್ನು ಶುರು ಮಾಡಿದ್ದಾರೆ. ಈ ಮಧ್ಯೆ ಮತದಾರರ ದತ್ತಾಂಶ ಮಾರಾಟ (Voter Data) ಮಾಡುವ ಜಾಲವೊಂದು ಪತ್ತೆ ಆಗಿದೆ. ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳಿಗೆ ನಿಮ್ಮ ಕ್ಷೇತ್ರದ ಮತದಾರರ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ ಎಂಬ ಸಂದೇಶ ಬರುತ್ತಿದೆ.
25 ಸಾವಿರ ರೂ. ನೀಡಿದರೆ ಮತದಾರರ ದತ್ತಾಂಶ ಮಾರಾಟ ಮಾಡಲಾಗುತ್ತದೆ. ಚಿಲುಮೆ ಸಂಸ್ಥೆ ಮಾದರಿಯಲ್ಲೇ ಈ ಗೋಲ್‌ಮಾಲ್ ನಡೆಯುತ್ತಿದ್ದು, ಈ ಸಂಬಂಧ ಪ್ರಕರಣವೊಂದು ದಾಖಲಾಗಿದೆ. ಪಕ್ಷೇತರ ಅಭ್ಯರ್ಥಿ ರಾಜು ಎಂಬುವವರು ಮಾಹಿತಿ ಮೇರೆಗೆ ಬಿಬಿಎಂಪಿಯ ಬೆಂಗಳೂರು ದಕ್ಷಿಣದ ಮತದಾರರ ನೋಂದಣಾಧಿಕಾರಿ ವಿಜಯಲಕ್ಷ್ಮೀ ದೂರು ದಾಖಲಿಸಿದ್ದಾರೆ.
ಸದ್ಯ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಕಂಪನಿಯ ಹೆಸರನ್ನು ಬಹಿರಂಗ ಪಡಿಸಿಲ್ಲ. ಚಿಲುಮೆ ಸಂಸ್ಥೆಯ ಮಾದರಿಯಲ್ಲೆ ಈ ಕಂಪನಿಯು ಕೆಲಸ ಮಾಡುತ್ತಿತ್ತು ಎಂಬ ಆರೋಪ ಕೇಳಿ ಬಂದಿದೆ. ಮತದಾರರ ಸಂಪೂರ್ಣ ವಿವರವನ್ನು ಈ ಸಂಸ್ಥೆ ಸಂಗ್ರಹಿಸುತ್ತಿತ್ತು ಎನ್ನಲಾಗಿದೆ.
ಪ್ರತ್ಯೇಕ ಆ್ಯಪ್ ಬಳಸಿ ಮತದಾರರ ಮಾಹಿತಿ, ಹೆಸರು, ವಿಳಾಸ, ಜಾತಿ, ಮತದಾರರು ಕಳೆದ ಬಾರಿ ಯಾವ ಪಕ್ಷಕ್ಕೆ ಬೆಂಬಲಿಸಿದ್ದರು, ಈ ಬಾರಿ ಯಾವ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂಬ ಮಾಹಿತಿಯನ್ನು ನೀಡುತ್ತಿತ್ತು. ಸುಮಾರು 6 ಲಕ್ಷದಷ್ಟು ಮತದಾರರ ಮಾಹಿತಿಯನ್ನು ಈ ಸಂಸ್ಥೆ ಬಳಿ ಇತ್ತು ಎಂದು ತಿಳಿದು ಬಂದಿದೆ. ನಿರ್ದಿಷ್ಟ ಕ್ಷೇತ್ರದ ಮತದಾರರ ಪಟ್ಟಿಯೇ ಅಥವಾ ಬೇರೆ ಕ್ಷೇತ್ರದ ಮತದಾರರ ಮಾಹಿತಿಯು ಇದೆಯೇ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇನ್ನು ಅಭ್ಯರ್ಥಿಗಳು Votersdata.in ಎಂಬ ವೆಬ್‌ಸೈಟ್ ಲಿಂಕ್ ಕ್ಲಿಕ್ ಮಾಡಿದ ಕೂಡಲೇ ಸ್ವಾಗತ ಎಂಬ ಸಂದೇಶ ಬರುತ್ತದೆ. ಬಳಿಕ ನಿಮ್ಮ ಕ್ಷೇತ್ರದ ಮತದಾರರ ಪಟ್ಟಿಯನ್ನು ಮೊಬೈಲ್ ಸಂಖ್ಯೆಯೊಂದಿಗೆ ಪರಿಶೀಲಿಸಬಹುದು, ಸೋಶಿಯಲ್ ಮೀಡಿಯಾದಲ್ಲಿ ಸರಳವಾಗಿ ಮಾಹಿತಿ ತಿಳಿಯಬಹುದು ಎಂಬ ಆಯ್ಕೆಗಳನ್ನು ನೀಡಲಾಗುತ್ತದೆ. 25 ಸಾವಿರ ರೂ. ಜತೆಗೆ 500 ಸೇವಾ ಶುಲ್ಕ ನೀಡಿದರೆ ಕ್ಷೇತ್ರದ ಮತದಾರರ ಮಾಹಿತಿ ಪಡೆಯಬಹುದು ಎಂಬ ಸಂದೇಶವನ್ನು ಕಳುಹಿಸಲಾಗುತ್ತದೆ.
ಮತದಾರರ ದತ್ತಾಂಶಕ್ಕೆ 25 ಸಾವಿರ ರೂ. ನೀಡಿದರೆ ಇದಕ್ಕಾಗಿ ಲಾಗ್ ಇನ್ ಆಗಲು ಐಡಿ ಹಾಗೂ ಪಾಸ್‌ವರ್ಡ್ ಅನ್ನು ನೀಡಲಾಗುತ್ತದೆ. ಮಾಹಿತಿ ಪಡೆದು ನಿಮ್ಮ ಚುನಾವಣೆಯಲ್ಲಿ ಜಯಶಾಲಿಯಾಗಿ, ಒಂದು ವೇಳೆ ಸೋತರೆ ಹಣ ವಾಪಸ್ ನೀಡುಲಾಗುತ್ತದೆ ಎಂಬುದನ್ನು ಸ್ಕೀನ್ ಶಾರ್ಟ್ ಮೂಲಕ ಕಳುಹಿಸಲಾಗುತ್ತದೆ.
ಇದನ್ನೂ ಓದಿ: Karnataka Election : ಹೀಗೆ ಮಾತನಾಡಿಯೇ ಕಾಂಗ್ರೆಸ್‌ಗೆ ಈ ಗತಿ ಬಂದಿದ್ದು; ಮೋದಿ ಹಾವು ಹೇಳಿಕೆಗೆ ಬೊಮ್ಮಾಯಿ ಆಕ್ರೋಶ
ಈ ರೀತಿ ಸಂದೇಶ ಪಕ್ಷೇತರ ಅಭ್ಯರ್ಥಿ ರಾಜುಗೆ ಬಂದಿದೆ. ಹೀಗಾಗಿ ಇದು ಕಾನೂನು ಬಾಹಿರವಾಗಿದ್ದು, ಅಪರಿಚಿತ ವ್ಯಕ್ತಿಯನ್ನು ಪತ್ತೆ ಮಾಡಿ ಕ್ರಮ ಜರಗಿಸುವಂತೆ ಮನವಿ ಮಾಡಿದ್ದಾರೆ. ಆಗ್ನೇಯ ವಿಭಾಗದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.