ವಿಜಯಪುರ: ರಾಷ್ಟ್ರಾದ್ಯಂತ ಸುದ್ದಿ ಮಾಡಿದ ಬೆಂಗಳೂರಿನ ಮತದಾರರ ಮಾಹಿತಿ ಕಳವು (voter data) ಪ್ರಕರಣದ ಮಾದರಿಯಲ್ಲೇ ವಿಜಯಪುರದಲ್ಲೂ ದೊಡ್ಡ ಮಟ್ಟದ ಗೋಲ್‌ಮಾಲ್ ನಡೆದಿದೆ ಎಂಬ ಆರೋಪ ಗಂಭೀರವಾಗಿ ಕೇಳಿಬಂದಿದೆ. ವಿಜಯಪುರ ನಗರದಲ್ಲಿ ಮನೆ ಮನೆಗೆ ಹೋಗಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡುವ ಹೆಸರಿನಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ಹೀಗೆ ಸಿಕ್ಕಿಬಿದ್ದವನನ್ನು ಮಹಾಂತೇಶ ಪೂಜಾರಿ ಎಂದು ಗುರುತಿಸಲಾಗಿದ್ದು, ಈತನನ್ನು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಕಡೆಯವನು ಎಂಬ ಮಾತು ಕೇಳಿಬರುತ್ತಿದೆ.
ವಿಜಯಪುರ ನಗರದ ಖಾದಿ ಗ್ರಾಮೋದ್ಯೋಗ ಪ್ರದೇಶದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಮನೆ ಮನೆಗೆ ಭೇಟಿ ನೀಡುತ್ತಿದ್ದ ವ್ಯಕ್ತಿಯೊಬ್ಬನನ್ನು ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಷರಫ್ ಮತ್ತಿತರರು ಸೇರಿ ಹಿಡಿದು ವಿಚಾರಣೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ವೋಟರ್ ಸ್ಕ್ಯಾಮ್‌ನ ಮಾದರಿಯಲ್ಲೇ ಇಲ್ಲೂ ನಡೆಯುತ್ತಿದೆಯೇ ಎಂಬ ಸಂಶಯದಲ್ಲೇ ಇವರೂ ಕಾರ್ಯಾಚರಣೆ ನಡೆಸಿದ್ದರು.
ಮಹಾಂತೇಶ ಪೂಜಾರಿ ಎನ್ನುವ ವ್ಯಕ್ತಿಯಿಂದ ಮತದಾರರ ಪಟ್ಟಿ ಪರಿಷ್ಕರಣೆಗೆ ಯತ್ನ ನಡೆಸಿದವನು ಈತನನ್ನು ವಿಚಾರಣೆ ನಡೆಸಿದಾಗ, ತಾನು ಜಿಲ್ಲಾಧಿಕಾರಿಗಳ ಹಾಗೂ ತಹಸೀಲ್ದಾರ್ ಕಚೇರಿಯಿಂದ ಬಂದಿದ್ದೇನೆ ಎಂದು ಹೇಳುತ್ತಿದ್ದಾನೆ. ಮತದಾರರ ಪಟ್ಟಿಯಿಂದ ಯಾರ ಹೆಸರು ಡಿಲೀಟ್ ಆಗಿದೆಯೋ ಅವರ ಹೆಸರನ್ನು ಸೇರಿಸಲು ಸಹಾಯ ಮಾಡುವುದಾಗಿ ಆತ ಹೇಳುತ್ತಿದ್ದಾನೆ.
ಕಾಂಗ್ರೆಸ್ ಮುಖಂಡ ಹೇಳುವುದೇನು?
ವಿಜಯಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿಗ ಮತದಾರರ ಹೆಸರನ್ನು ಡಿಲಿಟ್ ಮಾಡುತ್ತಿದ್ದಾರೆ. ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿದ್ದಾರೆ. ಹೊಸ ಮತದಾರರನ್ನು ಸೇರಿಸುವ ನೆಪದಲ್ಲಿ ಇದ್ದ ಹೆಸರನ್ನೂ ಕಿತ್ತು ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಅಬ್ದುಲ್ ಹಮೀದ್ ಮುಷರಫ್ ವಿಸ್ತಾರ ನ್ಯೂಸ್ ಗೆ ತಿಳಿಸಿದ್ದಾರೆ. ಇವರು ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸ್ಪರ್ಧಿಸಿ ಸೋತಿದ್ದರು.
ಬಿಜೆಪಿ ಶಾಸಕರ ಕಡೆಯವರು ಈ ಕೆಲಸ ಮಾಡುತ್ತಿದ್ದಾರೆ. ಒಬ್ಬ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದೇವೆ. ಇನ್ನೂ 30 ಜನ ಈ ಕೃತ್ಯದಲ್ಲಿ ತೊಡಗಿರುವ ಮಾಹಿತಿ ಇದೆ. ಬಿಇಒಗಳೂ ಇದರಲ್ಲಿ ಶಾಮೀಲಾಗಿದ್ದಾರೆ ಎಂದವರು ಆಪಾದಿಸಿದರು.
ಡಿಸಿ, ತಹಸೀಲ್ದಾರ್ ಹೆಸರು ಹೇಳಿಕೊಂಡು ಬಂದು ಮತದಾರರ ಹೆಸರನ್ನು ಡಿಲಿಟ್ ಮಾಡುತ್ತಿದ್ದಾರೆ. ಕಾರ್ಪೋರೇಷನ್ ಎಲೆಕ್ಷನ್ ನಲ್ಲೂ ಹೀಗೇ ಮಾಡಿ ನಮ್ಮ ಅಭ್ಯರ್ಥಿಗಳು ಸೋಲುವ ಹಾಗೆ ಮಾಡಿದರು. ಇದನ್ನು ಚುನಾವಣೆ ಆಯೋಗದ ಗಮನಕ್ಕೆ ತರುತ್ತೇವೆ ಎಂದವರು ಹೇಳಿದರು.
ಯತ್ನಾಳ್ ಪಿಎ ಜತೆಗೂ ಮಾತುಕತೆ
ಈ ನಡುವೆ ಮುಷರಫ್ ಅವರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಆಪ್ತ ಸಹಾಯಕನ ಜತೆಗೂ ಮಾತನಾಡಿದ್ದಾರೆ. ಈ ರೀತಿ ಮಾಡುವುದು ಸರಿಯಲ್ಲ ಎಂದು ವಾದಿಸಿದ್ದಾರೆ.
ಸಿಕ್ಕಿಬಿದ್ದಿರುವ ಮಹಾಂತೇಶ್ ಪೂಜಾರಿ ಯಾರು?
ಮಹಾಂತೇಶ ಪೂಜಾರಿ ತಾನೊಬ್ಬ ಖಾಸಗಿ ವ್ಯಕ್ತಿ. ಬಿಎಲ್‌ಒ ಅವರಿಂದ ನೇಮಕವಾಗಿರುವ ವ್ಯಕ್ತಿ. ಯಾವ ಪಕ್ಷಕ್ಕೂ ಸೇರಿದವನಲ್ಲ ಎನ್ನುತ್ತಾನೆ. ಆದರೆ, ಮಹಾಂತೇಶ್ ಪೂಜಾರಿ ಬಸನಗೌಡ ಪಾಟೀಲ್ ಯತ್ನಾಳ್ ಅವರ ಆಪ್ತ ಎನ್ನುತ್ತಾರೆ ಕಾಂಗ್ರೆಸ್ ನಾಯಕರು. ಮಹಾಂತೇಶ ಪೂಜಾರಿ ಬಸನಗೌಡ ಪಾಟೀಲ್ ಯತ್ನಾಳರಿಗೆ ಸೇರಿದ ಸಿದ್ದಶ್ರೀ ಎಂಬ ಬ್ಯಾಂಕ್‌ನ ಸಿಬ್ಬಂದಿ ಎನ್ನುತ್ತಾರೆ ಮುಷರಫ್.
ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎನ್ನುವುದು ಕಾಂಗ್ರೆಸ್ ನಾಯಕರ ಆಗ್ರಹ.
ಇದನ್ನೂ ಓದಿ | Voter Data | ʼಚಿಲುಮೆʼ ಕೇಸ್‌ನಲ್ಲಿ ಮತ್ತೊಬ್ಬ ಬಂಧನ; ನಿರೀಕ್ಷಣಾ ಜಾಮೀನಿಗೆ ಮುಂದಾದ 200 BBMP ಅಧಿಕಾರಿಗಳು !