ತುಮಕೂರು: ಮತದಾರರ ಪಟ್ಟಿ ಅಕ್ರಮ ಪ್ರಕರಣದಲ್ಲಿ (Voter Data) ಅಮಾನತಾಗಿದ್ದ ಐಎಎಸ್ ಅಧಿಕಾರಿಗಳನ್ನು ಮತ್ತೆ ವಾಪಸ್ ಹುದ್ದೆಗೆ ನಿಯೋಜಿಸುವ ಅಗತ್ಯವಿರಲಿಲ್ಲ. ಇದರಲ್ಲಿ ಬಿಬಿಎಂಪಿ ಕೂಡ ಶಾಮೀಲಾಗಿದೆ. ಈ ಬಗ್ಗೆ ಬೆಂಗಳೂರು ಉಸ್ತುವಾರಿ ಸಚಿವ ಆಗಿರುವ ಸಿಎಂ ಬಸವರಾಜ ಬೊಮ್ಮಾಯಿಗೆ ಜವಾಬ್ದಾರಿ ಇಲ್ಲವೇ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ತುಮಕೂರಿನ ವಿನಾಯಕ ನಗರದ ಸಿದ್ಧಿವಿನಾಯಕ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಸಹಕಾರಿ ಸಂಘದ ರಜತ ಮಹೋತ್ಸವ ಹಾಗೂ ಜನತಾ ಪರಿವಾರದ ಮುಖಂಡ ದಿವಂಗತ ಲಕ್ಷ್ಮೀನರಸಿಂಹಯ್ಯ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಅಕ್ರಮಕ್ಕೆ ಸಹಕರಿಸಿದ್ದ ಅಧಿಕಾರಿಗಳನ್ನು ಅಮಾನತು ಮಾಡಲು ಚುನಾವಣಾ ಆಯೋಗವೇ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು. ಆದರೆ ಅವರನ್ನು ರಿವೋಕ್ ಮಾಡಿರುವುದು ಸರಿಯಲ್ಲ ಎಂದು ಕಿಡಿ ಕಾರಿದರು.
ಮೀಸಲಾತಿ ಹೆಚ್ಚಳ ವಿಚಾರ ಸ್ಪಂದಿಸಿ, ಈ ಸಂಬಂಧ ಅಧ್ಯಯನ ಮಾಡಲು ಹಿಂದುಳಿದ ವರ್ಗಗಳ ಅಯೋಗ ಇದೆ. ಅವರು ಯಾರ್ಯಾರಿಗೆ ಕೊಡಬೇಕು ಎಂದು ಶಿಫಾರಸು ಮಾಡುತ್ತಾರೋ ಅವರಿಗೆಲ್ಲ ಮೀಸಲಾತಿ ಕೊಡಲಿ ಎಂದರು. ಇದೇ ವೇಳೆ ಪಂಚಮಸಾಲಿಗೆ 2ಎ ಘೋಷಣೆ ಮಾಡುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿ, ಅದು ನನಗೆ ಗೊತ್ತಿಲ್ಲಪ್ಪ, ರಿಪೋರ್ಟ್ ಬರಬೇಕಲ್ಲವೇ? ನಂತರ ಮಾತನಾಡೋಣ ಎಂದು ಹೇಳಿದರು.
ಇದನ್ನೂ ಓದಿ | Karnataka Election | ಜೆಡಿಎಸ್ ಹೈಕಮಾಂಡ್‌ಗೆ ಬಗ್ಗದ ಹಾಸನ ಹೈಕಮಾಂಡ್: ರೇವಣ್ಣ ಹಠಕ್ಕೆ ಕುಮಾರಸ್ವಾಮಿ ಸುಸ್ತು !
ಎಸ್‌ಸಿ-ಎಸ್‌ಟಿ ಮೀಸಲಾತಿ ಹೆಚ್ಚಳದ ಬಗ್ಗೆ ಸ್ಪಂದಿಸಿ, ಕರ್ನಾಟಕದಲ್ಲಿ ಈಗಾಗಲೇ ಶೇ.50 ರಿಸರ್ವೇಶನ್ ಇದೆ. ಅದನ್ನು ಶೇ. 56 ಮಾಡಲು ಸಾಧ್ಯವಿಲ್ಲ. ಒಂದು ವೇಳೆ ನೀಡಿದರೆ ಅದನ್ನು 9ನೇ ಅನುಸೂಚಿಯಲ್ಲಿ ಸೇರಿಸಬೇಕು. ಆದರೆ ಆ ಕೆಲಸವಾಗಿಲ್ಲ. ಈ ಡಬಲ್ ಎಂಜಿನ್ ಸರ್ಕಾರ, ಮೊದಲು ಅದನ್ನು ಮಾಡಿಸಿಕೊಂಡು ಬರಬೇಕು ತಾನೆ ಎಂದು ಹೇಳಿರು ಅವರು, ಇದು ಕೇವಲ ಕಣ್ಣೋರೆಸುವ ತಂತ್ರ, ಚುನಾವಣೆಗೋಸ್ಕರ ಮಾಡಿರುವ ಗಿಮಿಕ್ ಇದು ಎಂದು ಟೀಕಿಸಿದರು.
ಕಡೂರು ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ವಿಚಾರ ಸ್ಪಂದಿಸಿ, ಕಡೂರಿನಿಂದ ಸ್ಪರ್ಧೆ ಮಾಡುತ್ತಾರೆ ಎಂದು ನಿಮಗೆ ಯಾರು ಹೇಳಿದರು? ಕೆಲವರು ಏನೇನೋ ಹೇಳುತ್ತಾರೆ, ಅವೆಲ್ಲವನ್ನು ನಾವು ಹೇಳಲು ಆಗುತ್ತದಾ? ಎಂದು ತಿಳಿಸಿದರು. ಕೆ.ಎನ್. ರಾಜಣ್ಣರಿಂದ ಮಧುಗಿರಿ ಕ್ಷೇತ್ರಕ್ಕೆ ಆಹ್ವಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ಪ್ರೀತಿಯಿಂದ ಹೇಳುತ್ತಾರೆ. ಸ್ನೇಹದಿಂದ ನಾನು ಮಧುಗಿರಿಗೆ ಬರಲ್ಲ ಎಂದು ಹೇಳಿದ್ದೇನೆ ಎಂದರು.
ಮನುಷ್ಯನ ಜೀವನದಲ್ಲಿ ಸಹಕಾರಿ ಸಂಘಗಳು ಪ್ರಮುಖ ಪಾತ್ರ ವಹಿಸುತ್ತವೆ. ಅದರಲ್ಲಿಯೂ ಕೃಷಿ ಕ್ಷೇತ್ರದಲ್ಲಿ ಸ್ವಾಮಿ ವಿವೇಕಾನಂದ ಸಹಕಾರಿ ಸಂಘದ ಪಾತ್ರ ಸಾಕಷ್ಟಿದೆ ಎಂದ ಅವರು, ಲಕ್ಷ್ಮೀನರಸಿಂಹಯ್ಯ ಬೊಮ್ಮಾಯಿಗೆ ಹೇಳಿ ಮಾಧುಸ್ವಾಮಿಯನ್ನು ಕರೆದುಕೊಂಡು ಬಂದು ಯೂತ್ ಯೂನಿಯನ್ ಲೀಡರ್ ಮಾಡಿದರು. ಇವತ್ತು ಅವರು ರಾಜಕೀಯವಾಗಿ ಬೆಳೆಯಲು ಹಾಗೂ ಜಿಲ್ಲೆಯಲ್ಲೂ ಜನತಾ ಪಾರ್ಟಿ ಬೆಳೆಯಲೂ ಅವರೇ ಕಾರಣ ಎಂದು ಹೇಳಿದರು.
ಲಕ್ಷ್ಮೀನರಸಿಂಹಯ್ಯ ಅವರಿಗೆ ರಾಮಕೃಷ್ಣ ಹೆಗಡೆಯವರ ಜತೆ ಉತ್ತಮ ಸಂಬಂಧವಿತ್ತು. ಹಾಗೆಯೇ ಬೊಮ್ಮಾಯಿ, ದೇವೇಗೌಡ ಹಾಗೂ ನನ್ನ ಜತೆಗೂ ಉತ್ತಮ ಸಂಬಂಧ ಇತ್ತು ಎಂದ ಅವರು, ರಾಜಕೀಯ ಅಧಿಕಾರ ಶಾಶ್ವತವಲ್ಲ. ಸಾಮಾಜಿಕ ನ್ಯಾಯದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗಲ್ಲ. ಮಹಿಳೆಯರಿಗೆ ಶೇ.33 ಮೀಸಲಾತಿ ಕೊಡಬೇಕು ಎಂದು ಆಗ್ರಹಿಸಿದ್ದು ನಮ್ಮ ಕ್ಯಾಬಿನೆಟ್ ಸಬ್ ಕಮಿಟಿ. ಅದನ್ನ ವಿರೋಧ ಮಾಡಿದ್ದು ಈ ಬಿಜೆಪಿಯವರೇ ಎಂದು ಕಿಡಿ ಕಾರಿದರು.
ಇದನ್ನೂ ಓದಿ | ಕೊರೊನಾ ನಿರ್ವಹಣೆ ಸೂಪರ್: ಆರೋಗ್ಯ ಸಚಿವ ಸುಧಾಕರ್ ಅವರನ್ನು ಹಾಡಿ ಹೊಗಳಿದ ಕಾಂಗ್ರೆಸ್ ನಾಯಕ ಜಿ. ಪರಮೇಶ್ವರ್