ಹುಬ್ಬಳ್ಳಿ: ಬೆಂಗಳೂರಿನಲ್ಲಿ ಚಿಲುಮೆಯಿಂದ ಮತದಾರರ ಮಾಹಿತಿ (Voter Data) ಸಂಗ್ರಹ, ಮತಪಟ್ಟಿಯಿಂದ ಹೆಸರು ಡಿಲೀಟ್ ಪ್ರಕರಣ ಸದ್ದು ಮಾಡುತ್ತಿರುವ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ ಕ್ಷೇತ್ರಗಳಲ್ಲಿ ಆ್ಯಪ್ ಮೂಲಕ ಮತದಾರರ ಸರ್ವೇ ನಡೆಸುತ್ತಿದ್ದ ಮೂವರನ್ನು ಕಾಂಗ್ರೆಸ್ ನಾಯಕರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮತದಾರರ ಸರ್ವೇ ಮಾಡುತ್ತಿದ್ದ ಮೂವರ ಬಗ್ಗೆ ಕಾಂಗ್ರೆಸ್ ಮುಖಂಡರಿಗೆ ಮಾಹಿತಿ ಹೋಗಿದೆ. ಈ ವೇಳೆ ಈ ಯುವಕರು ಅಲ್ಪಸಂಖ್ಯಾತರು ಇರುವ ಆನಂದ ನಗರದ ಸುತ್ತಮುತ್ತ ಮಾಹಿತಿಯನ್ನು ಕಲೆ ಹಾಕುತ್ತಿದ್ದರು ಎನ್ನಲಾಗಿದೆ. ಆಗ ಸ್ಥಳಕ್ಕಾಗಮಿಸಿದ ಕಾಂಗ್ರೆಸ್ ನಾಯಕರು ಅವರ ಬಳಿ ವಿಚಾರಿಸಿದ್ದು, ಮಾಹಿತಿ ಪಡೆಯುತ್ತಿರುವುದು ದೃಢವಾದ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
ಹರೀಶ್, ನಿತೇಶ್, ಮಂಜುನಾಥ್ ಅವರನ್ನು ಹಳೇಹುಬ್ಬಳ್ಳಿ ಠಾಣೆ ಪೊಲೀಸರಿಗೆ ಕಾಂಗ್ರೆಸ್ ಮುಖಂಡರು ಒಪ್ಪಿಸಿದ್ದಾರೆ. ಎಎಸ್‌ಆರ್ ಕನ್ಸಲ್ಟಿಂಗ್ ಸರ್ವಿಸ್ ಪ್ರೈವೆಟ್ ಲಿಮಿಟೆಡ್ ಹೆಸರಿನಲ್ಲಿ ಸರ್ವೇ ನಡೆಯುತ್ತಿತ್ತು ಎನ್ನಲಾಗಿದೆ. ಪೊಲೀಸರು ಮೂವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಇದು ಬಿಜೆಪಿ ಕೃತ್ಯ ಎಂದು ಕಾಂಗ್ರೆಸ್ ಆರೋಪ
ಈ ಸರ್ವೆಯನ್ನು ಬಿಜೆಪಿಯವರು ಮಾಡಿಸುತ್ತಿದ್ದಾರೆ. ಅವರಿಗೆ ಸೋಲುವ ಭಯ ಉಂಟಾಗಿದೆ. ಅಲ್ಪಸಂಖ್ಯಾತ ಮತದಾರರನ್ನು ಪಟ್ಟಿಯಿಂದ ಕೈಬಿಡಲು ಈ ರೀತಿ ಮಾಡಿಸಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.
ಇದನ್ನೂ ಓದಿ | Voter data | ಗದಗದಲ್ಲೂ ಮತದಾರರ ಹೆಸರು ಡಿಲಿಟ್? ಬೂತ್ ಮಟ್ಟದಿಂದಲೇ ಸಮೀಕ್ಷೆ ಆರಂಭಿಸಿದ ಕಾಂಗ್ರೆಸ್