Site icon Vistara News

Voter data | ಇಬ್ಬರು ಐಎಎಸ್‌ ಅಧಿಕಾರಿಗಳ ಅಮಾನತು ರದ್ದು ಮಾಡಿ ಸರ್ಕಾರ ಆದೇಶ: ಸಿದ್ದರಾಮಯ್ಯ ಆಕ್ಷೇಪ

voter data

ಬೆಂಗಳೂರು: ಮತದಾರರ ಪಟ್ಟಿ ಅಕ್ರಮ, ಹೆಸರು ಡಿಲಿಟ್‌, ಮಾಹಿತಿ ದುರುಪಯೋಗ (Voter data) ಪ್ರಕರಣದಲ್ಲಿ ಕೇಂದ್ರ ಚುನಾವಣೆ ಆಯೋಗ ಸೂಚನೆಯ ಮೇರೆಗೆ ಅಮಾನತುಗೊಂಡಿದ್ದ ಇಬ್ಬರು ಐಎಎಸ್‌ ಅಧಿಕಾರಿಗಳನ್ನು ಮತ್ತೆ ಸೇವೆಗೆ ತೆಗೆದುಕೊಳ್ಳಲಾಗಿದೆ.

ಬೆಂಗಳೂರು ನಗರ ಮಾಜಿ ಡಿಸಿ ಕೆ. ಶ್ರೀನಿವಾಸ್ ಹಾಗೂ ಬಿಬಿಎಂಪಿ ವಿಶೇಷ ಆಯುಕ್ತರಾಗಿದ್ದ ರಂಗಪ್ಪ ಅಮಾನತನ್ನು ಸರ್ಕಾರ ವಾಪಸ್‌ ಪಡೆದಿದೆ. ಅವರಿಬ್ಬರನ್ನು ಬೇರೆ ಹುದ್ದೆಗಳಿಗೆ ನೇಮಿಸಲಾಗಿದೆ. ಶ್ರೀನಿವಾಸ್‌ ಅವರನ್ನು ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್ ಬೆಂಗಳೂರು ಇದರ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ, ರಂಗಪ್ಪ ಎಸ್ ಅವರನ್ನು ಕರ್ನಾಟಕ ರಾಜ್ಯ ಮಿನರಲ್ಸ್ ಕಾರ್ಪೊರೇಷನ್‌ನ ಎಕ್ಸಿಕ್ಯುಟಿವ್ ಡೈರೆಕ್ಟರ್ ಆಗಿ ನಿಯೋಜಿಸಲಾಗಿದೆ.

ಬೆಂಗಳೂರಿನ ಮಹದೇವಪುರ, ಚಿಕ್ಕಪೇಟೆ ಸೇರಿದಂತೆ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಚಿಲುಮೆ ಸಂಸ್ಥೆಗೆ ಮತದಾರರ ಮಾಹಿತಿ ಸಂಗ್ರಹಕ್ಕೆ ಅಧಿಕಾರಿಗಳು ಅಧಿಕೃತವಾದ ಬಿಎಲ್‌ಒ ನೇಮಕಾತಿ ಕಾರ್ಡ್‌ ನೀಡಿದ್ದರು. ಇದರ ವಿರುದ್ಧ ಕಾಂಗ್ರೆಸ್‌ ದೊಡ್ಡ ಹೋರಾಟವನ್ನೇ ಸಂಘಟಿಸಿದ ಬಳಿಕ ಅಧಿಕಾರಿಗಳನ್ನು ಅಮಾನತು ಮಾಡಿದ್ದಲ್ಲದೆ, ಮತದಾರರ ಪಟ್ಟಿ ಪರಿಷ್ಕರಣೆಯನ್ನು ಮರುಪರಿಶೀಲಿಸಲು ಸೂಚಿಸಲಾಗಿತ್ತು. ಕೆಲವೇ ವಾರಗಳಲ್ಲಿ ಅಧಿಕಾರಿಗಳ ಮರು ನೇಮಕ ಮಾಡಲಾಗಿರುವುದು ಅಚ್ಚರಿ ಮೂಡಿಸಿದೆ.

ವಾಪಸಾತಿ ಸರಿಯಲ್ಲ
ಈ ನಡುವೆ, ತುಮಕೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಮತದಾರರ ಪಟ್ಟಿ ಅಕ್ರಮ ಪ್ರಕರಣದಲ್ಲಿ ಅಮಾನತಾಗಿದ್ದ ಐಎಎಸ್ ಅಧಿಕಾರಿಗಳ ಮರುಸ್ಥಾಪನೆ ಅಗತ್ಯವಿರಲಿಲ್ಲ ಎಂದಿದ್ದಾರೆ. ಪ್ರಕರಣದ ತನಿಖೆ ಇನ್ನೂ ಮುಗಿದಿಲ್ಲ. ಹೀಗಾಗಿ ತಕ್ಷಣವೇ ಅಮಾನತು ವಾಪಸ್‌ ಮಾಡುವುದು ಸರಿಯಾದ ನಿರ್ಧಾರವಲ್ಲ ಎಂದಿದ್ದಾರೆ. ಈ ಅಧಿಕಾರಿಗಳೂ ಹಗರಣದಲ್ಲಿ ಶಾಮೀಲಾಗಿದ್ದಾರೆ. ನನ್ನ ಪ್ರಕಾರ ಇಡೀ ಬಿಬಿಎಂಪಿ ಶಾಮೀಲಾಗಿದೆ ಎಂದರು.

ಈ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಕಾರಣಕ್ಕೆ ಅಧಿಕಾರಿಗಳನ್ನು ಅಮಾನತು ಮಾಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಈಗ ಏಕಾಏಕಿ ಅಮಾನತು ಹಿಂಪಡೆದಿರುವುದು ಯಾರನ್ನು ಕೇಳಿ ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ | Voter data | ಸಸ್ಪೆಂಡ್‌ ಆದ ಐಎಎಸ್‌ ಅಧಿಕಾರಿಗಳ ವಿಚಾರಣೆಗೆ ಆದೇಶ, ಇನ್ನಷ್ಟು ಅಧಿಕಾರಿಗಳಿಗೆ ಶುರುವಾಯಿತು ನಡುಕ

Exit mobile version