Site icon Vistara News

Voter Data | ಮತದಾರರ ಪಟ್ಟಿ ಅಕ್ರಮ; ಕೇಂದ್ರ ಚುನಾವಣಾ ಆಯೋಗಕ್ಕೆ ರಾಜ್ಯ ಕಾಂಗ್ರೆಸ್‌ ನಾಯಕರಿಂದ ದೂರು

Voter Data

ನವದೆಹಲಿ: ಬೆಂಗಳೂರು ಮತದಾರರ ಪಟ್ಟಿ ಅಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ನಾಯಕರು, ಕೇಂದ್ರ ಚುನಾವಣಾ ಆಯೋಗಕ್ಕೆ ಬುಧವಾರ ದೂರು ಸಲ್ಲಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ದೂರು ಸಲ್ಲಿಸಲಾಗಿದ್ದು, ಚಿಲುಮೆ ಮತ್ತು ರಾಜ್ಯ ಬಿಜೆಪಿ ನಾಯಕರ ವಿರುದ್ಧ ಮತದಾರರ ದತ್ತಾಂಶ ಕಳವು ಆರೋಪ ಮಾಡಲಾಗಿದೆ.

ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮತದಾರರ ಪಟ್ಟಿ ಮಾಹಿತಿ ಕಳವು ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಇದು ದೇಶದ ಅತಿದೊಡ್ಡ ಹಗರಣವಾಗಿದ್ದು, ದಾಖಲೆಗಳ ಸಮೇತ ದೂರು ನೀಡಲಾಗಿದೆ. ಸರ್ಕಾರಿ ಅಧಿಕಾರಿಗಳು ಮಾಡಬೇಕಾದ ಕೆಲಸವನ್ನು ಖಾಸಗಿ ಸಂಸ್ಥೆ, ಬಿಜೆಪಿ ಕಾರ್ಯಕರ್ತರು ಮಾಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳು, ಹಗರಣಕ್ಕೆ ಎಲ್ಲ ರೀತಿ ಅಗತ್ಯ ನೆರವು ನೀಡಿದ್ದಾರೆ. ಈ ಬಗ್ಗೆ ಆಯೋಗದ ಗಮನಕ್ಕೆ ತಂದಿದ್ದೇವೆ. ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ | Voter Data | ಅಂಬೇಡ್ಕರ್‌ ಚುನಾವಣೆ ಬೇಕೆ, ಗೋಡ್ಸೆ ಚುನಾವಣೆ ಬೇಕೆ ಎಂದು ಆಯೋಗವೇ ನಿರ್ಧರಿಸಲಿ: ಸಿ.ಎಂ. ಇಬ್ರಾಹಿಂ

ಈಗಾಗಲೇ ರಾಜ್ಯಕ್ಕೆ ವಿಶೇಷ ಚುನಾವಣಾ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಪ್ರಕರಣದ ಬಗ್ಗೆ ಕೂಲಂಕಷವಾಗಿ ತನಿಖೆ ಮಾಡುವುದು ನಮ್ಮ ಜವಾಬ್ದಾರಿ ಎಂದು ಚುನಾವಾಣಾ ಆಯುಕ್ತರು ತಿಳಿಸಿದ್ದಾರೆ. ಕ್ರಮ ಜರುಗಿಸುವವರೆಗೆ ನಾವು ಕಾಯುತ್ತೇವೆ, ಒಂದು ವೇಳೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಕಾನೂನು ಹೋರಾಟದ ಬಗ್ಗೆ ನಂತರ ಯೋಚಿಸುತ್ತೇವೆ ಎಂದು ಹೇಳಿದರು.

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಮಾತನಾಡಿ, ಚುನಾವಣಾ ಆಯೋಗದ ಅಧಿಕಾರಿಗಳು ನಮ್ಮ ಮನವಿಯನ್ನು ಸ್ಪಷ್ಟವಾಗಿ ಆಲಿಸಿದ್ದಾರೆ. ಬೆಂಗಳೂರು ಉಸ್ತುವಾರಿ ಸಚಿವರೂ ಆದ ಸಿಎಂ ಬೊಮ್ಮಾಯಿ ಅವರ ಮೂಗಿನಡಿಯಲ್ಲೇ ಈ ವಂಚನೆ ನಡೆದಿದೆ. ಬಿಜೆಪಿ ಸಹಯೋಗದ ಖಾಸಗಿ ಚಿಲುಮೆ ಸಂಸ್ಥೆ ಈ ಕೆಲಸ ಮಾಡಿದೆ. ಖಾಸಗಿ ವ್ಯಕ್ತಿಗಳನ್ನು ಬೂತ್‌ ಮಟ್ಟದ ಅಧಿಕಾರಿಗಳಾಗಿ (ಬಿಎಲ್‌ಒ) ಈ ಸಂಸ್ಥೆ ನಿಯೋಜನೆ ಮಾಡಿದೆ. ಜಿಲ್ಲಾ ಚುನಾವಣಾಧಿಕಾರಿ ಸಹಿ ಮಾಡಿರುವ ನಕಲಿ ಗುರುತಿನ ಚೀಟಿಗಳನ್ನು ಸಂಸ್ಥೆ ಬಳಸಿದೆ ಎಂದು ಆರೋಪಿಸಿದರು.

ಇದು ಅತಿ ದೊಡ್ಡ ಹಗರಣವಾಗಿದ್ದು, ದೊಡ್ಡ ಪ್ರಮಾಣದಲ್ಲಿ ಮತದಾರರ ದತ್ತಾಂಶ ಕಳವಾಗಿದೆ. ಖಾಸಗಿ ಆ್ಯಪ್ ಮೂಲಕ ಮಾಹಿತಿಯನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ಕೆಲ ಕ್ಷೇತ್ರಗಳಲ್ಲಿ ಇತ್ತೀಚೆಗೆ 27 ಲಕ್ಷ ಮತದಾರರ ಹೆಸರನ್ನು ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ ಹಾಗೂ 11 ಲಕ್ಷ ಜನರ ಹೆಸರನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ಎಸ್‌ಸಿ ಎಸ್‌ಟಿ, ಅಲ್ಪಸಂಖ್ಯಾತ ಮತಗಳನ್ನು ಹೆಚ್ಚಾಗಿ ಡಿಲೀಟ್‌ ಮಾಡಲಾಗಿದೆ ಎಂದು ಚುನಾವಣಾ ಆಯೋಗಕ್ಕೆ ವಿಸ್ತೃತವಾಗಿ ತಿಳಿಸಲಾಗಿದೆ ಎಂದು ಹೇಳಿದರು. ಕಾಂಗ್ರೆಸ್‌ ನಾಯಕರಾದ ಪ್ರಿಯಾಂಕ್ ಖರ್ಗೆ, ಎಂ.ಬಿ.ಪಾಟೀಲ್, ನಾಸೀರ್ ಹುಸೇನ್ ಸೇರಿ ಹಲವು ನಾಯಕರು ಉಪಸ್ಥಿತರಿದ್ದರು.

ಇದನ್ನೂ ಓದಿ | Janasankalpa yatre | ಮುಂದಿನ ವರ್ಷದೊಳಗೆ 4 ಕೋಟಿ ಜನರಿಗೆ ಆರೋಗ್ಯ ಕಾರ್ಡ್: ಬೊಮ್ಮಾಯಿ ಭರವಸೆ

Exit mobile version