ಬೆಂಗಳೂರು: ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮತದಾನ ಹಬ್ಬ ಬಿರುಸಿನ ನಡೆಯುತ್ತಿದ್ದು, ವಿಶೇಷ ಚೇನತರು, ವೃದ್ಧರೆನ್ನದೆ ಎಲ್ಲರೂ ಸಂಭ್ರಮದಿಂದ ಮತಗಳನ್ನು ಚಲಾವಣೆ ಮಾಡುತ್ತಿದ್ದಾರೆ. ಎಲ್ಲರ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಮದುವೆ ಮನೆಗೆ ಹೋಗುವಂತೆ ಹಲವರು ರೇಷ್ಮೆ ಸೀರೆಗಳನ್ನು ಉಟ್ಟು ಹೋಗುತ್ತಿರುವುದೂ ಕಂಡು ಬಂತು. ಇನ್ನು ಕೆಲವು ಮಹಿಳೆಯರು ಮುಡಿಗೆ ಮಲ್ಲಿಗೆ ಹೂವನ್ನು ಮುಡಿದು ನೀಟಾಗಿ ಸಿಂಗರಿಸಿಕೊಂಡೂ ಹೋಗಿ ಮತ ಚಲಾವಣೆ ಮಾಡಿದ್ದಾರೆ. ಅಲ್ಲದೆ, ನೂತನ ವಧುಗಳೂ ಸಹ ವಿವಾಹಕ್ಕೆ ಮುಂಚೆ ಮತಗಟ್ಟೆಗೆ ಬಂದು ಮತವನ್ನು ಚಲಾಯಿಸುವ ಮೂಲಕ ತಮ್ಮ ಹಕ್ಕನ್ನು ಚಲಾವಣೆ ಮಾಡಿದ್ದಾರೆ. ಈ ಮೂಲಕ ಎಲ್ಲರೂ ಮತದಾನ ಮಾಡುವಂತೆ ಕರೆ ಕೊಟ್ಟಿದ್ದಾರೆ.
ಮತ ಚಲಾಯಿಸಿದ ವಧು ಮೆಲಿಟಾ
ಉಡುಪಿ: ಕಾಪು ಕ್ಷೇತ್ರದ ಪಲಿಮಾರು ಗ್ರಾಮ ಪಂಚಾಯಿತಿಯ ಅವರಾಲು ಮಟ್ಟು ಮತಗಟ್ಟೆಯಲ್ಲಿ ನವ ವಧು ಮೆಲಿಟಾ ಅವರು ಮತ ಚಲಾವಣೆ ಮಾಡಿದ್ದಾರೆ. ಮತ ಚಲಾಯಿಸಿದ ಬಳಿಕ ಅವರು ಚರ್ಚ್‌ಗೆ ತೆರಳಿದರು.
ಮುಹೂರ್ತಕ್ಕೂ ಮುನ್ನ ವಧುವಿನ ಮತದಾನ
ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿಯ ಮತಗಟ್ಟೆಯಲ್ಲಿ ಮುಹೂರ್ತಕ್ಕೂ ಮುನ್ನ ನವ ವಧುವೊಬ್ಬರು ಮತದಾನ ಮಾಡಿ ಗಮನ ಸೆಳೆದಿದ್ದಾರೆ. ರೇಷ್ಮೆ ಸೀರೆ ಉಟ್ಟಿದ್ದ ಮದುವಣಗಿತ್ತಿ ಸಂಪೂರ್ಣ ರೆಡಿಯಾಗಿ ಬಂದು ಮತ ಚಲಾಯಿಸಿ ಮದುವೆ ಮಂಟಪಕ್ಕೆ ಹೋಗಿದ್ದಾರೆ. ಬಳಿಕ ಹಸೆಮಣೆ ಏರಿದ್ದಾರೆ. ಈ ಮೂಲಕ ತಮ್ಮ ಹಕ್ಕನ್ನು ಚಲಾವಣೆ ಮಾಡಿದ್ದಾರೆ.
ಬಸನವಗುಡಿ ಮತ ಚಲಾವಣೆ ಮಾಡಿದ ವರ ಸಾಹಿಲ್
ಬೆಂಗಳೂರು: ಬಸವನಗುಡಿ ಕ್ಷೇತ್ರದಲ್ಲಿ ಸಾಹಿಲ್ ಎಂಬ ವರ ತಮ್ಮ ಕುಟುಂಬಸ್ಥರೊಂದಿಗೆ ಮತಗಟ್ಟೆಗೆ ಬಂದು ಹಕ್ಕು ಚಲಾವಣೆ ಮಾಡಿದ್ದಾರೆ. ಮತದಾನದ ನಂತರ ಕಲ್ಯಾಣ ಮಂಟಪಕ್ಕೆ ತೆರಳಿದರು.
ಶತಾಯುಷಿ ಬಸಮ್ಮ ಅವರ ಉತ್ಸಾಹದ ಮತದಾನ
ಬಳ್ಳಾರಿ: ಕಂಪ್ಲಿಯ ಡಿಎಸ್‌ವಿ ಶಾಲೆಯಲ್ಲಿ 103 ವರ್ಷದ ಬಸಮ್ಮ ಮತದಾನ ಮಾಡಿ ಗಮನ ಸೆಳೆದಿದ್ದಾರೆ. 103 ವರ್ಷದ ನಾನು ಮತದಾನ ಮಾಡಿದ್ದೇನೆ, ಎಲ್ಲರೂ ಮತದಾನ ಮಾಡಿ ಎಂದು ಬಸಮ್ಮ ಅವರು ಈ ವೇಳೆ ಕರೆಕೊಟ್ಟಿದ್ದಾರೆ. ಆ ಮೂಲಕ ಮತದಾನದ ಮಹತ್ವ ಎಂಥದ್ದು ಎಂದು ಸಾರಿ ಹೇಳಿದ್ದಾರೆ. ಇನ್ನೊಂದು ವಿಶೇಷವೆಂದರೆ ಬಸಮ್ಮ ಅವರು ನಡೆದುಕೊಂಡೇ ಬಂದು ಮತದಾನ ಮಾಡಿದ್ದಾರೆ.
ಇದನ್ನೂ ಓದಿ: Karnataka Election: ಮತದಾನ ಮಾಡಿದ ರಾಜ್ಯದ ಪ್ರಮುಖ ಸ್ವಾಮೀಜಿಗಳು, ಇಲ್ಲಿವೆ ಫೋಟೊಗಳು
ಚನ್ನಗಿರಿಯ ದುರ್ವಿಗೆರೆಯಲ್ಲಿ ಶತಾಯುಷಿ ಜಾನಕೀಬಾಯಿ ಮತದಾನ
ಚನ್ನಗಿರಿ ತಾಲೂಕು ವಿಧಾನಸಭಾ ಕ್ಷೇತ್ರದ ದುರ್ವಿಗೆರೆಯ PS-254ರಲ್ಲಿ 106 ವರ್ಷದ ಶತಾಯುಷಿ ಜಾನಕೀಬಾಯಿ ಮತದಾನ ಮಾಡಿ ಗಮನ ಸೆಳೆದಿದ್ದಾರೆ.
ಕೋಲಾರದಲ್ಲಿ 93 ವರ್ಷದ ವೃದ್ಧೆ ಮತದಾನ
ಕೋಲಾರ: ಕೋಲಾರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬೂತ್‌ನಲ್ಲಿ 93 ವರ್ಷದ ಸುಬ್ಬಲಕ್ಷ್ಮಮ್ಮ ಮತದಾನ ಮಾಡಿದ್ದಾರೆ. ಮತಗಟ್ಟೆ ಸಂಖ್ಯೆ 135ರಲ್ಲಿ ಮತ ಚಲಾಯಿಸಿದ್ದಾರೆ.
ಮತ ಚಲಾಯಿಸಿದ ಪಾರ್ಶ್ವವಾಯು ಪೀಡಿತ
ಗದಗ: ಗದಗಿನ ಸರ್ಕಾರಿ ಶಾಲೆ ನಂಬರ್ 2ರ ಮತಗಟ್ಟೆಯಲ್ಲಿ ಕುಟುಂಬಸ್ಥರ ಸಹಾಯದಿಂದ ಮತಗಟ್ಟೆಗೆ ಬಂದು ಪಾರ್ಶ್ವವಾಯು ಪೀಡಿತರೊಬ್ಬರು ಮತ ಚಲಾಯಿಸಿದ್ದಾರೆ. ಖಾನತೋಟ ಬಡಾವಣೆ ನಿವಾಸಿ ರೆಹಮಾನ್ ಸಾಬ್ ಹುಯಿಲಗೋಳ ಅವರು ಮತಚಲಾವಣೆ ಮಾಡಿದ್ದಾರೆ. ದೇಹ ಸ್ವಾಧೀನ ಇಲ್ಲದಿದ್ದರೂ ವ್ಹೀಲ್ ಚೇರ್ ಮೇಲೆ ಬಂದ ರೆಹಮಾನ್ ಅವರು ತಮ್ಮ ಹಕ್ಕನ್ನು ಚಲಾವಣೆ ಮಾಡಿದ್ದಾರೆ.
ವ್ಹೀಲ್ ಚೇರ್‌ನಲ್ಲಿ ಬಂದು ಮತದಾನ ಮಾಡಿದ ಶತಾಯುಷಿ
ಗದಗ: ಗದಗಿನ ವಿದ್ಯಾನಗರದ 204ರ ಮತಗಟ್ಟೆಯಲ್ಲಿ ವ್ಹೀಲ್ ಚೇರ್‌ನಲ್ಲಿ ಬಂದ 101 ವರ್ಷದ ವೃಂದಾಬಾಯಿ ಪುರಾಣಿಕ ಅವರು ಮತದಾನ ಮಾಡಿ ಗಮನ ಸೆಳೆದಿದ್ದಾರೆ. ಈ ಮೂಲಕ ಮತದಾನದ ಮಹತ್ವವನ್ನು ಸಾರಿದ್ದಾರೆ.
ಇದನ್ನೂ ಓದಿ: Karnataka Election: ಸಿಡಿ ಬಿಡುಗಡೆ ಎಂದು ಡಿಕೆಶಿ ಬ್ಲ್ಯಾಕ್‌ಮೇಲ್; ಮತದಾನದ ದಿನವೇ ರಮೇಶ್ ಜಾರಕಿಹೊಳಿ ಆರೋಪ
105ರ ಅಜ್ಜಿಯ ಮತ ಸಂಭ್ರಮ; ವಿಡಿಯೊ ಇಲ್ಲಿದೆ ನೋಡಿ
ಗಂಗಾವತಿಯಲ್ಲಿ ಮತ ಚಲಾಯಿಸಿದ 90ರ ರಾಮಣ್ಣ
ಕೊಪ್ಪಳ: ಗಂಗಾವತಿ ನಗರದ ಬೂತ್ ಸಂಖ್ಯೆ 155 ರಲ್ಲಿ 90 ವರ್ಷದ ರಾಮಣ್ಣ ಮಡಿವಾಳ ಅವರು ಮತದಾನ ಮಾಡಿದ್ದಾರೆ. ಮೊಮ್ಮಗಳು ಶೋಭಾ ಹಾಗೂ ಮಗಳು ಲತಾಶ್ರಿ ನೆರವಿನೊಂದಿಗೆ ಮತಗಟ್ಟೆಗೆ ಬಂದ ಅವರು ಮತ ಚಲಾವಣೆ ಮಾಡಿದ್ದಾರೆ.
ಕರ್ನಾಟಕ ಚುನಾವಣೆಯ ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ