ಬೆಂಗಳೂರು: ಈಗಾಗಲೆ ಮಾನಸಿಕವಾಗಿ ಬಿಜೆಪಿಯಿಂದ ದೂರವಾಗಿರುವ ಯಲ್ಲಾಪುರ ಮಾಜಿ ಶಾಸಕ ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮಾಜಿ ಅಧ್ಯಕ್ಷ ವಿ.ಎಸ್. ಪಾಟೀಲ್ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಗುರುವಾರ ಸೇರ್ಪಡೆಯಾಗಲಿದ್ದಾರೆ.
ವಿ.ಎಸ್. ಪಾಟೀಲ್ ಕಾಂಗ್ರೆಸ್ ಸೇರ್ಪಡೆ ಕುರಿತು ಆಗಸ್ಟ್‌ನಿಂದಲೇ ಮಾತುಗಳು ಕೇಳಿಬರುತ್ತಿವೆಯಾದರೂ ಅದಕ್ಕೆ ಮುಹೂರ್ತ ಕೂಡಿಬಂದಿರಲಿಲ್ಲ. ಇದೀಗ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಅನೇಕ ಗಣ್ಯರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುವುದು ಖಚಿತವಾಗಿದೆ.
ರಾಜ್ಯ ಸರ್ಕಾರ ನೇಮಿಸಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ(NWKRTC) ಅಧ್ಯಕ್ಷ ಸ್ಥಾನದಿಂದ ಆಗಸ್ಟ್‌ನಲ್ಲಿ ವಜಾ ಮಾಡಲಾಗಿತ್ತು. ಈ ಮೂಲಕ, ಕಾಂಗ್ರೆಸ್ ಸೇರ್ಪಡೆ ಹಾದಿಯನ್ನು ಪಕ್ಷವೇ ಸುಗಮಗೊಳಿಸಿಕೊಟ್ಟಿತ್ತು.
2008ರಲ್ಲಿ ಯಲ್ಲಾಪುರ ವಿಧಾನಸಭೆ ಚುನಾವಣೆಯಲ್ಲಿ ಅಂದಿನ ಕಾಂಗ್ರೆಸ್‌ನ ಶಿವರಾಮ್ ಹೆಬ್ಬಾರ್ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಜಯ ಗಳಿಸಿದ್ದ ಪಾಟೀಲ್, ನಂತರ ಎರಡು ಚುನಾವಣೆಯಲ್ಲೂ ಹೆಬ್ಬಾರ್ ಅವರ ವಿರುದ್ಧವೇ ಸ್ಪರ್ಧಿಸಿದ್ದರು. ಆದರೆ ಜಯಗಳಿಸಲು ಸಾಧ್ಯವಾಗಿರಲಿಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿ ಹೆಬ್ಬಾರ್ ಕಾರ್ಯನಿರ್ವಹಿಸಿದ್ದರು. 2019ರಲ್ಲಿ ಬಿಜೆಪಿ ಸರ್ಕಾರ ರಚನೆಗೆ ಪೂರಕವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಆಗಮಿಸಿದ ಶಾಸಕರ ಪೈಕಿ ಶಿವರಾಮ ಹೆಬ್ಬಾರ್ ಸಹ ಒಬ್ಬರು.
ಈ ಸಮಯದಲ್ಲೆ ಮುನಿಸಿಕೊಂಡಿದ್ದ ವಿ.ಎಸ್. ಪಾಟೀಲ್ ಅವರನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿ ೨೦೧೯ರಲ್ಲಿ ನೇಮಕ ಮಾಡಲಾಗಿತ್ತು. ಕಾಂಗ್ರೆಸ್ ಸೇರ್ಪಡೆಯಾಗಲು ಸಿದ್ಧರಾಗಿದ್ದಾರೆ ಎಂಬ ಮಾಹಿತಿ ಲಭಿಸುತ್ತಿದ್ದಂತೆಯೇ ಬಿಜೆಪಿ ಸರ್ಕಾರದ ವತಿಯಿಂದ ನೇಮಿಸಲಾಗಿದ್ದ ಅಧ್ಯಕ್ಷ ಸ್ಥಾನವನ್ನು ರದ್ದುಪಡಿಸಲಾಗಿತ್ತು.
ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಪಾಟೀಲ್, ಬಿಜೆಪಿ ತೊರೆಯುವುದನ್ನು ಖಚಿತಪಡಿಸಿದ್ದರು. ಪಕ್ಷದಲ್ಲಿ ಕೆಲವರ ನಡೆ ಕುರಿತು ನನಗೆ ಅಸಮಾಧಾನವಾಗಿದೆ. ಹೀಗಾಗಿ ಪಕ್ಷ ಬಿಡುವ ನಿರ್ಧಾರ ಮಾಡಿದ್ದೇನೆ. ಈಗಾಗಲೇ ಕಾಂಗ್ರೆಸ್‌ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದಿದ್ದರು.
ಕಾಂಗ್ರೆಸ್ ಸೇರ್ಪಡೆಯಾಗುವ ಸಮಯದಲ್ಲೆ, ಟಿಕೆಟ್ ಕುರಿತು ಪಾಟೀಲ್ ಖಚಿತಪಡಿಸಿಕೊಳ್ಳುತ್ತಿದ್ದಾರೆ. ಈಗಾಗಲೆ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವ ಹೆಬ್ಬಾರ್ ಅವರೇ ಮುಂಬರುವ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ. ಹೀಗಾಗಿ, ಕಳೆದ ಮೂರು ಚುನಾವಣೆಗಳಿಂದಲೂ ಪ್ರತಿಸ್ಪರ್ಧಿಗಳಾಗಿರುವ ಇಬ್ಬರೇ, ಆದರೆ ವಿಭಿನ್ನ ಪಕ್ಷಗಳಿಂದ ಸ್ಪರ್ಧಿಸಲಿದ್ದಾರೆ ಎನ್ನುವುದು ವಿಶೇಷವಾಗಲಿದೆ.
ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ ನಂತರ ಕ್ಷೇತ್ರದಲ್ಲಿ ಬೃಹತ್ ಸಮಾವೇಶವೊಂದನ್ನು ಆಯೋಜನೆ ಮಾಡಲಾಗುತ್ತದೆ ಎನ್ನಲಾಗಿದೆ.
ಇದನ್ನೂ ಓದಿ | Kabaddi | ಯಲ್ಲಾಪುರದ ಕಬಡ್ಡಿ ಪಟುಗಳಿಬ್ಬರಿಗೆ ಕರ್ನಾಟಕ ತಂಡದಲ್ಲಿ ಸ್ಥಾನ