ಬೆಂಗಳೂರು: ಬಿಜೆಪಿಯಿಂದ ದೂರಾಗುವುದನ್ನು ತಿಳಿದುಕೊಂಡ ಮಾಜಿ ಸಿಎಂ ಜಗದೀಶ ಶೆಟ್ಟರ್ ಹೊರತುಪಡಿಸಿ ಯಾರೂ ತಮ್ಮನ್ನು ಸಂಪರ್ಕ ಮಾಡಿಲ್ಲ. ಹೈಕಮಾಂಡ್ ಜತೆ ಮಾತಾಡುತ್ತೇನೆ ಎಂದ ಜಗದೀಶ ಶೆಟ್ಟರ್ ಅವರೂ ಮತ್ತೆ ಕರೆ ಮಾಡಲೇ ಇಲ್ಲ ಎಂದು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ ಯಲ್ಲಾಪುರ ಮಾಜಿ ಶಾಸಕ ವಿ.ಎಸ್. ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಆರ್. ವಿ. ದೇಶಪಾಂಡೆ, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಬಿ.ಕೆ. ಹರಿಪ್ರಸಾದ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ ನಂತರ ಮಾತನಾಡಿದರು. ಸ್ಥಳೀಯ ಬಿಜೆಪಿ ಮುಖಂಡ ಶ್ರೀನಿವಾಸ ಭಟ್ ಸಹ ಪಾಟೀಲ್ ಅವರ ಜತೆ ಕಾಂಗ್ರೆಸ್ ಸೇರಿದರು.
ನಾನು 2008ರಿಂದ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಾ ಬಂದಿದ್ದೇನೆ. 2008ರಲ್ಲಿ ಶಾಸಕನಾಗಿದ್ದೆ. ನಾನು ಬಿಜೆಪಿ ಸೇರಿದ ಮೇಲೆ ಶಿವರಾಂ ಹೆಬ್ಬಾರ್ ಕಾಂಗ್ರೆಸ್ ಸೇರಿದರು. ನಾನು ಆರ್.ವಿ ದೇಶಪಾಂಡೆ ವಿರುದ್ಧ 2004ರಲ್ಲಿ ಸೋಲು ಕಂಡೆ. 2008ರಲ್ಲಿ ಕ್ಷೇತ್ರ ವಿಂಗಡಣೆ ಬಳಿಕ ಜಯ ಆಗಿತ್ತು. 2013, 2018 ರಲ್ಲಿ ಸೋಲು ಕಂಡಿದ್ದೆ ಎಂದರು.
ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ 17 ಜನ ಬಂದಾಗ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಸ್ವಾಗತ ಮಾಡಿ ಕರೆದುಕೊಂಡೆವು. ಆದರೆ ಮೂರು ವರ್ಷದಿಂದ ಆತ್ಮೀಯತೆಯಿಂದ ನಡೆಸಿಕೊಳ್ಳಲಿಲ್ಲ. ನಮ್ಮ ಆತ್ಮೀಯರಿಗೂ ತೊಂದರೆ ಕೊಡುತ್ತಿದ್ದರು. ಕ್ಯಾಬಿನೆಟ್ ದರ್ಜೆ, ನಿಗಮದ ಅಧ್ಯಕ್ಷನಾಗಿದ್ದೆ. ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ರೂಡ್ ಹಾಕಿಸಿದ್ದೆ. ಅದನ್ನೂ ಕ್ಯಾನ್ಸಲ್ ಮಾಡಿದ್ದರು. ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂದು ಸಚಿವ ಶಿವರಾಂ ಹೆಬ್ಬಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಯಾವುದೇ ಕಂಡಿಷನ್ ಹಾಕಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಲ್ಲ. ಸರ್ವೆ ಮಾಡಿ ಟಿಕೆಟ್ ಕೊಡುತ್ತಾರೆ. ಯಾರಿಗೆ ಟಿಕೆಟ್ ಕೊಟ್ಟರೂ ದುಡಿಯುತ್ತೇವೆ. ಜಗದೀಶ್ ಶೆಟ್ಟರ್ ಒಬ್ಬರು ನನ್ನ ಸಂಪರ್ಕ ಮಾಡಿದ್ದರು. ಯಾಕೆ ಹಿಂಗ್ ಮಾಡುತ್ತೀಯ ಎಂದರು. ನಾನು ಹೈಕಮಾಂಡ್ ಜತೆಗೆ ಮಾತಾಡುತ್ತೇನೆ ಎಂದು ಹೇಳಿದ್ದರು. ಇದಾದ ಮೇಲೆ ಮತ್ತೆ ಏನೂ ಹೇಳಿಲ್ಲ. ಜಗದೀಶ್ ಶೆಟ್ಟರ್ ಬಿಟ್ಟರೆ ಯಾರೂ ನಮ್ಮನ್ನು ಸಂಪರ್ಕ ಮಾಡಿಲ್ಲ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ವಿ.ಎಸ್.ಪಾಟೀಲ್ ಬಿಜೆಪಿಯಿಂದ ಬಂದಿದ್ದಾರೆ. ಹಿರೆಕೆರೂರಿನ ಬಣಕಾರ್ ಸೇರಿದ್ದಾರೆ. ಇನ್ನೂ ಹಲವರು ಪಕ್ಷಕ್ಕೆ ಬರುತ್ತಾರೆ. ಕೆಲವರು ಅಧಿವೇಶನ ಮುಗಿಯಲಿ ಎಂದು ಕಾಯುತ್ತಿದ್ದಾರೆ. ನಮ್ಮ ಪ್ರವಾಸ ಹೇಗಿರುತ್ತದೆ ಎಂದು ಹೇಳಿದ್ದೇವೆ. ಮಧ್ಯದಲ್ಲೂ ನಾವು ಕೆಲವರನ್ನು ಸೇರಿಸಿಕೊಳ್ಳುತ್ತೇವೆ. ರಾಜ್ಯ ಮಟ್ಟದಲ್ಲೂ ನಾವು ಸೇರ್ಪಡೆ ಮಾಡುತ್ತೇವೆ. ಡಿ.30ರಂದು ಕೃಷ್ಣೆ ಸಮಾವೇಶ ಮಾಡುತ್ತೇವೆ ಎಂದರು.
ನಾನು, ಸಿದ್ದರಾಮಯ್ಯ ಮೊದಲ ಹಂತದಲ್ಲಿ 20ಜಿಲ್ಲೆಗಳ ಪ್ರವಾಸ ಮಾಡುತ್ತೇವೆ. ಕರಾವಳಿ ಭಾಗದಲ್ಲೂ ನಾವು ಪ್ರವಾಸ ಮಾಡುತ್ತೇವೆ. ನಂತರ 224 ಕ್ಷೇತ್ರಗಳಲ್ಲಿ ಪ್ರತ್ಯೇಕ ಪ್ರವಾಸ ಮಾಡುತ್ತೇವೆ. ಅದರ ಪಟ್ಟಿಯನ್ನೂ ನಾವು ಮಾಡಿಕೊಂಡಿದ್ದೇವೆ. ಉತ್ತರ ಕರ್ನಾಟಕದಲ್ಲಿ ಸಿದ್ದರಾಮಯ್ಯ ತಂಡ ಹೋಗಲಿದೆ. ಅವರ ಜತೆ ಹಿರಿಯ ನಾಯಕರು ಇರುತ್ತಾರೆ. ದಕ್ಷಿಣ ಕರ್ನಾಟಕದಲ್ಲಿ ನಾನು ಪ್ರವಾಸ ಮಾಡುತ್ತೇನೆ. ಚುನಾವಣೆ ಹತ್ತಿರದಲ್ಲಿ ನಾನು ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸ ಮಾಡುತ್ತೇನೆ. ಸಿದ್ದರಾಮಯ್ಯ ದಕ್ಷಿಣ ಭಾಗದಲ್ಲಿ ಪ್ರಚಾರ ಮಾಡುತ್ತಾರೆ. ಈಗಾಗಲೇ ನಾವು ರೂಟ್ ಮ್ಯಾಪ್ ಮಾಡಿಕೊಂಡಿದ್ದೇವೆ. ಸಂಘಟಕರ ಜೊತೆ ಚರ್ಚೆ ಮಾಡಬೇಕಿದೆ ಎಂದು ಹೇಳಿದರು.
ಶಾಸಕರ ದುರ್ನಡತೆಯಿಂದ ಬೇಸತ್ತು ಬಿಜೆಪಿಗೆ ಎಂದ ಶ್ರೀನಿವಾಸ ಭಟ್
ಕಾಂಗ್ರೆಸ್ ಪಕ್ಷ ಸೇರ್ಪಡೆ ಬಳಿಕ ಶ್ರೀನಿವಾಸ್ ಭಟ್ ಮಾತನಾಡಿ, ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣ ಇದೆ. ಜತೆಗೆ ನಮ್ಮ ಶಾಸಕರು ನಮ್ಮ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ಪಕ್ಷದಲ್ಲಿದ್ದುಕೊಂಡು ಏನೂ ಕೆಲಸ ಮಾಡಲು ಆಗದ ಸ್ಥಿತಿಯಿತ್ತು. ಹಾಗಾಗಿ ನಾವು ಕಾಂಗ್ರೆಸ್ ಪಕ್ಷ ಸೇರಿದ್ದೇವೆ. ಇಲ್ಲಿ ಕಾಂಗ್ರೆಸ್ ಶಾಸಕರನ್ನು ಸ್ಥಾಪನೆ ಮಾಡಬೇಕು ಎಂದು ಸೇರಿದ್ದೇವೆ. ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ. ಅಲ್ಲಿರುವಂತಹ ಶಾಸಕರ ದುರ್ನಡತೆಯನ್ನು, ಉಸಿರುಗಟ್ಟುವ ವಾತಾವರಣ ಬದಲಿಸಬೇಕು ಎಂದರು.
ಇದನ್ನೂ ಓದಿ | ವಿ.ಎಸ್. ಪಾಟೀಲ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಮುಹೂರ್ತ ಫಿಕ್ಸ್: ರಾಜ್ಯದಲ್ಲಿ ಪಕ್ಷಾಂತರ ಪರ್ವ ಆರಂಭ