Site icon Vistara News

ಪ್ರಧಾನಿ ಮೋದಿಗೆ ಕಾನೂನು ಅರಿವಿಲ್ಲ: ವಿ.ಎಸ್‌. ಉಗ್ರಪ್ಪ ಕಿಡಿ

rahul

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಗೆ ಕಾನೂನಿನ ಅರಿವು ಇದ್ದಿದ್ದರೆ ಕಾಂಗ್ರೆಸ್‌ ನಾಯಕರ ಮೇಲೆ ಸೇಡಿನ ರಾಜಕಾರಣ ಮಾಡುತ್ತಿರಲಿಲ್ಲ ಎಂದು ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಕಿಡಿಕಾರಿದ್ದಾರೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಕಾನೂನು ಸೇಡಿನ ವಿಚಾರವಾಗಿ ಸಾಕಷ್ಟು ಚರ್ಚೆ ನಡೆಯುತ್ತಿವೆ. ಈ ನೆಲದ ಕಾನೂನು ಹಾಗೂ ಅದರ ವಿಧಿ ವಿಧಾನಗಳು, ದೇಶದ ಸಂವಿಧಾನ ಹಾಗೂ ಸ್ವಾತಂತ್ರ್ಯ ಚಳುವಳಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅರಿವಿದ್ದಿದ್ದರೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ನಾಯಕರ ಮೇಲೆ ಸೇಡಿನ ರಾಜಕಾರಣ ಮಾಡುತ್ತಿರಲಿಲ್ಲ ಎಂದಿದ್ದಾರೆ.

ಮೋದಿ ದೇಶದ ಜನರಿಗೆ ಕೊಟ್ಟ ಆಶ್ವಾಸನೆಗಳನ್ನು ಈಡೇರಿಸಲು ಸಾಧ್ಯವಾಗಲಿಲ್ಲ. ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಬೃಹದಾಕಾರವಾಗಿ ಬೆಳೆದಿದೆ. ಪಾಕಿಸ್ತಾನ ಹಾಗೂ ಚೀನಾದಿಂದ ಭಾರತದ ಗಡಿ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ರೈತರ ಸಮಸ್ಯೆ ಹೆಚ್ಚಿದ್ದು, ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದವರು, ಈಗ 18 ತಿಂಗಳಲ್ಲಿ 10 ಲಕ್ಷ ಸರ್ಕಾರಿ ಹುದ್ದೆಗಳನ್ನು ತುಂಬಲು ಘೋಷಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ | ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಇ.ಡಿ. ಕಿರುಕುಳ ವಿರೋಧಿಸಿ ಪ್ರತಿಭಟನೆ: ಡಿ ಕೆ ಶಿವಕುಮಾರ್

ಈ ಎಲ್ಲ ವಿಚಾರಗಳನ್ನು ಜನರ ಮುಂದೆ ಇಡುವ ಪ್ರಯತ್ನವನ್ನು ರಾಹುಲ್ ಗಾಂಧಿ ಮಾಡಿದಾಗ ಅವರ ವಿರುದ್ಧ ಇಡಿ ತನಿಖೆ ಮಾಡಿಸಿ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ. ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯು 1938ರಲ್ಲಿ ಬ್ರಿಟಿಷರ ವಿರುದ್ಧದ ಧ್ವನಿಯನ್ನು ಪಸರಿಸಲು ಆಗಿನ ಕಾಂಗ್ರೆಸ್ ಅಧ್ಯಕ್ಷ ನೆಹರೂ ಆರಂಭಿಸಿದ್ದರು. ಅದರಲ್ಲಿ ಸುಮಾರು 500ಕ್ಕೂ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರು ಷೇರುದಾರರಾಗಿದ್ದರು. ನೆಹರೂ ಅವರು ಪ್ರಧಾನಮಂತ್ರಿಯಾದ ಬಳಿಕ ಈ ಸಂಸ್ಥೆಯ ಮುಖ್ಯಸ್ಥ ಸ್ಥಾನ ಬಿಟ್ಟರು. ನಂತರ ಅದು ಕಾಂಗ್ರೆಸ್ ಪಕ್ಷದ ಜನಪರ ಯೋಜನೆಗಳ ಧ್ವನಿಯಾಗಿತ್ತು. ಕ್ವಾಮಿ ಅವಾಜ್, ನವ ಜೀವನ್ ಎಂಬ ಹೆಸರಿನಲ್ಲಿ ಈ ಪತ್ರಿಕೆಯ ಉರ್ದು ಹಾಗೂ ಹಿಂದಿ ಅವತರಣಿಕೆಗಳು ಇದ್ದವು.

ಕಾರಣಾಂತರಗಳಿಂದ 2008ರಲ್ಲಿ ಸುಮಾರು 90.25 ಲಕ್ಷ ಸಾಲ ಆಗಿ ಕೆಲಸಗಾರರಿಗೆ ವೇತನ ನೀಡಲು ಸಾಧ್ಯವಾಗದಿದ್ದಾಗ, ಆ ಸಾಲವನ್ನು ಕಾಂಗ್ರೆಸ್ ಪಕ್ಷ ತೀರಿಸಿದೆ. ನಂತರ 2010ರಲ್ಲಿ ರಾಹುಲ್ ಗಾಂಧಿ ನೇತೃತ್ವದ ಯಂಗ್ ಇಂಡಿಯಾದಲ್ಲಿ ಸೋನಿಯಾ ಗಾಂಧಿ, ಮೋತಿಲಾಲ್ ವೊಹ್ರಾ, ಆಸ್ಕರ್ ಫರ್ನಾಂಡೀಸ್ ಇತರರು ಇದರ ಸದಸ್ಯರಾಗಿದ್ದರು. 2010ರಲ್ಲಿ 1057 ಷೇರುದಾರರಿದ್ದರು. ಅದರಲ್ಲಿ ಶಾಂತಿ ಭೂಷಣ ಅವರ ತಂದೆ, ಅಲಹಬಾದ್ ಹೈಕೋರ್ಟ್ ಮುಖ್ಯನ್ಯಾಯಾಧೀಶರಾಗಿದ್ದ ಮಾರ್ಕಂಡೇಯ ಕಾಟ್ಜು ಅವರ ತಂದೆ ಅವರು ಇದರ ಷೇರುದಾದರಿದ್ದರು. ಇವರ ಅನುಮತಿ ಆಧಾರದಲ್ಲಿ ಯಂಗ್ ಇಂಡಿಯಾ ಲಿಮಿಟೆಡ್‌ಗೆ ಈ ನ್ಯಾಷನಲ್ ಹೆರಾಲ್ಡ್ ಆಸ್ತಿಯನ್ನು ವರ್ಗಾವಣೆ ಮಾಡಲಾಯಿತು. ₹50 ಲಕ್ಷ ಹಣವನ್ನು ನೀಡಲಾಗಿತ್ತು. ಉಳಿದ ಹಣ ಕಾಂಗ್ರೆಸ್ ಪಕ್ಷದ ನಾಯಕರದ್ದೇ ಆಗಿದೆ ಎಂದು ಅದನ್ನು ಮನ್ನಾ ಮಾಡಲಾಗಿತ್ತು ಎಂದು ಪ್ರಕರಣವನ್ನ ವಿವರಿಸಿದರು.

ಸುಬ್ರಹ್ಮಣ್ಯನ್‌ ಸ್ವಾಮಿ 2011ರಲ್ಲಿ ಹಣಕಾಸು ಅವ್ಯವಹಾರ ಅಂತ ಪ್ರಕರಣ ದಾಖಲಿಸಿದರು. ಇಲ್ಲಿ ನಾವು ಯಾವುದೇ ಕಪ್ಪು ಹಣ ನೀಡಿಲ್ಲ, ಅಕ್ರಮ ಚಟುವಟಿಕೆಯಿಂದ ಹಣ ಪಡೆದಿಲ್ಲ. ಸ್ವಾತಂತ್ರ್ಯದ ಹೋರಾಟದಲ್ಲಿ ಕೊಡುಗೆ ನೀಡಿರುವ ಪತ್ರಿಕೆ ಉಳಿಸಲು ಕಾಂಗ್ರೆಸ್ ದೇಣಿಗೆ ಕೊಟ್ಟಿದೆ ಎಂದು ಸ್ಪಷ್ಟಪಡಿಸಿದರು. 2015ರಲ್ಲಿ ಪ್ರಕರಣ ಖುಲಾಸೆಯಾಗಿತ್ತು, ಖುಲಾಸೆಯಾದ ಪ್ರಕರಣವನ್ನು ಮತ್ತೆ ಆರಂಭಿಸಿದ್ದಾರೆ. ದೆಹಲಿ ಹೈಕೋರ್ಟ್ ವಜಾಗೊಳಿಸಿದ ಪ್ರಕರಣವನ್ನು ಇಡಿ ಅವರು ಹೇಗೆ ಪ್ರಕರಣ ನಡೆಸುತ್ತಿದ್ದಾರೆ? ಇದು ರಾಜಕೀಯ ಷಡ್ಯಂತ್ರವಲ್ಲದೇ ಮತ್ತೇನು ಎಂದು ಪ್ರಶ್ನೆ ಮಾಡಿದ್ದಾರೆ.   

ಯಂಗ್ ಇಂಡಿಯಾ ಸಂಸ್ಥೆ ಚಾರಿಟಬಲ್ ಹಾಗೂ ಆದಾಯೇತ್ತರ ಸಂಸ್ಥೆಯಾಗಿದೆ. ಈ ಆಸ್ತಿ ವರ್ಗಾವಣೆಯಾದ ನಂತರ ಒಂದಿಂಚು ಜಮೀನು ಅಥವಾ ಆಸ್ತಿಯನ್ನು ಯಾರಿಗೂ ಮಾರಾಟ ಮಾಡಿಲ್ಲ. ಅದರ ಹಣವನ್ನು ಯಾರೂ ಲಪಟಾಯಿಸಿಲ್ಲ. ಆದರೂ ಇಡಿಯವರು ಏಕೆ ವಿಚಾರಣೆ ಮಾಡಿ ಕಿರುಕುಳ ನೀಡುತ್ತಿದ್ದಾರೆ?

ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರ ಮುಂದೆ ಇಡುತ್ತಿರುವ ರಾಹುಲ್ ಗಾಂಧಿ ಖ್ಯಾತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯವರು ಭಯಭೀತರಾಗಿದ್ದು, ಈ ರೀತಿಯ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ₹50 ಲಕ್ಷಕ್ಕೆ ನ್ಯಾಷನಲ್ ಹೆರಾಲ್ಡ್ ಆಸ್ತಿ ವರ್ಗಾವಣೆಯಾಗಿರುವುದು ಅಕ್ರಮವಾದರೆ, ಚಾಲುಕ್ಯ ವಿವಿಗೆ ರಾಜ್ಯ ಸರ್ಕಾರ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 116,16 ಎಕರೆ ಜಾಗವನ್ನು ಕಡಿಮೆ ಬೆಲೆಗೆ ನೀಡಿರುವುದು ಕೂಡ ಅಕ್ರಮವಾಗುತ್ತದೆ ಅಲ್ವಾ ಎಂದು ಪ್ರಶ್ನೆ ಹಾಕಿದ್ದಾರೆ.

ಇದನ್ನೂ ಓದಿ | ವಿಸ್ತಾರ Explainer | ಕಾಂಗ್ರೆಸ್‌ ಕೊರಳಿಗೆ ಮತ್ತೆ ಸುತ್ತಿಕೊಂಡಿದೆ ನ್ಯಾಷನಲ್‌ ಹೆರಾಲ್ಡ್‌ ಉರುಳು!

Exit mobile version