Site icon Vistara News

ವಕ್ಫ್‌ ಮಂಡಳಿ ಉಪಾಧ್ಯಕ್ಷತೆ| ಪರೇಶ್‌ ಮೇಸ್ತಾ ಪ್ರಕರಣದ ಪ್ರಧಾನ ಆರೋಪಿ ನೇಮಕಕ್ಕೆ ಸರಕಾರ ತಡೆ

Paresh mesta- annigeri

ಬೆಂಗಳೂರು: ಪಕ್ಷದೊಳಗೆ ಕಾಣಿಸಿಕೊಂಡ ಆಕ್ರೋಶ, ಸಾರ್ವಜನಿಕವಾಗಿ ಕೇಳಿಬಂದ ಗೇಲಿಯನ್ನು ಗಮನಿಸಿದ ಸರಕಾರ ಉತ್ತರ ಕನ್ನಡ ಜಿಲ್ಲಾ ವಕ್ಫ್‌ ಮಂಡಳಿ ಉಪಾಧ್ಯಕ್ಷ ಸ್ಥಾನದ ನೇಮಕಕ್ಕೆ ತಡೆ ನೀಡಿ ಆದೇಶ ಹೊರಡಿಸಿದೆ. ಜಿಲ್ಲಾ ವಕ್ಫ್‌ ಮಂಡಳಿ ಉಪಾಧ್ಯಕ್ಷರನ್ನಾಗಿ ಜಮಾಲ್ ಅಜಾದ್ ಅಣ್ಣಿಗೇರಿ ಅವರನ್ನು ನೇಮಿಸಿ ಸರಕಾರ ಗುರುವಾರ ಆದೇಶ ಹೊರಡಿಸಿತ್ತು. ಅಜಾದ್‌ ಅಣ್ಣಿಗೇರಿ ೨೦೧೭ರ ಡಿಸೆಂಬರ್‌ನಲ್ಲಿ ಹೊನ್ನಾವರದಲ್ಲಿ ನಡೆದ ಪರೇಶ್‌ ಮೇಸ್ತಾ ಎಂಬ ಹಿಂದು ಯುವಕನ ಕೊಲೆ ಪ್ರಕರಣದಲ್ಲಿ ಪ್ರಧಾನ ಆರೋಪಿಯಾಗಿದ್ದಾರೆ. ಅವರಿಗೆ ಅಧಿಕಾರ ನೀಡಿದ್ದು ಬಿಜೆಪಿ ಕಾರ್ಯಕರ್ತರನ್ನು ಕೆರಳಿಸಿತ್ತು. ಈ ಆಕ್ರೋಶದ ಬಿಸಿಗೆ ಕರಗಿದ ಸರಕಾರ ನೇಮಕಾತಿ ಆದೇಶಕ್ಕೆ ತಡೆ ನೀಡಿದೆ.

ವಕ್ಫ್‌ ಮಂಡಳಿಯ ತಡೆ ಆದೇಶ

ರಾಜ್ಯ ವಕ್ಫ್ ಮಂಡಳಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಅವರು ನೇಮಕಾತಿಗೆ ತಡೆ ನೀಡಿ ಆದೇಶ ಹೊರಡಿಸಿದ್ದಾರೆ. ಇದರೊಂದಿಗೆ ಸರಕಾರ ದೊಡ್ಡದೊಂದು ಮುಖಭಂಗದ ಬಳಿಕವೂ ಸಣ್ಣ ಮಟ್ಟಿಗೆ ಮುಖ ಉಳಿಸಿಕೊಂಡಂತಾಗಿದೆ.

2017ರ ಡಿಸೆಂಬರ್ ತಿಂಗಳಿನಲ್ಲಿ ಹೊನ್ನಾವರದಲ್ಲಿ ನಡೆದ ಒಂದು ಗಲಾಟೆಯ ವೇಳೆ ಪರೇಶ್‌ ಮೇಸ್ತಾ ಎಂಬ ಯುವಕ ನಾಪತ್ತೆಯಾಗಿ, ಎರಡು ದಿನಗಳ ನಂತರ ಶವವಾಗಿ ಪಟ್ಟಣದ ಕೆರೆಯೊಂದರಲ್ಲಿ ಪತ್ತೆಯಾಗಿದ್ದ. ಮೇಸ್ತಾನನ್ನು ಕೋಮು ಗಲಭೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಆಪಾದಿಸಿ ಬಿಜೆಪಿಯು ರಾಜ್ಯಾದ್ಯಂತ ಯುವಕನ ಸಾವಿಗೆ ನ್ಯಾಯ ಒದಗಿಸುವಂತೆ ಪ್ರತಿಭಟನೆ ನಡೆಸಿತ್ತು. ಆಗ ಬಿಜೆಪಿ ಅಧ್ಯಕ್ಷರಾಗಿದ್ದ ಅಮಿತ್‌ ಶಾ ಅವರೇ ಹೊನ್ನಾವರಕ್ಕೆ ಬಂದು ಪರೇಶ್‌ ಮೇಸ್ತಾ ಮನೆಗೆ ಭೇಟಿ ನೀಡಿದ್ದರು. ಆರೋಪಿಗಳಿಗೆ ತಕ್ಕ ಶಿಕ್ಷೆ ಕೊಡುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ಈಗ ಪರೇಶ್‌ ಕೊಲೆ ಆರೋಪಿಗೆ ಬಿಜೆಪಿ ಸರ್ಕಾರದಿಂದಲೇ ವಕ್ಫ್‌ ಮಂಡಳಿಯಲ್ಲಿ ಸ್ಥಾನಮಾನ ನೀಡಿ ಗೌರವಿಸಿದ್ದು ಜನಾಕ್ರೋಶಕ್ಕೆ ಕಾರಣವಾಗಿತ್ತು.

ಬದಲಾವಣೆಗೆ ಎಲ್ಲ ಕಡೆಯಿಂದ ಒತ್ತಡ
ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯರ ಪಟ್ಟಿಯಲ್ಲಿ ಬೇರೆ ಪಕ್ಷದ ಅಜಾದ್‌ ಅಣ್ಣಿಗೇರಿ ಹಾಗೂ ಕೆ.ಎಚ್‌.ಕರೀಂ ಹಾಜಿ ಅವರನ್ನು ನೇಮಕ ಮಾಡಿದ್ದನ್ನು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರಾದ ಮಹಮ್ಮದ್ ಅನೀಷ್ ತಹಸೀಲ್ದಾರ್ ಅವರೇ ಆಕ್ಷೇಪಿಸಿದ್ದರು. ಜತೆಗೆ ಬಿಜೆಪಿಯಲ್ಲಿ ಆಂತರಿಕವಾಗಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದ ಕಳವಳಗೊಂಡ ಸರಕಾರ ಇದೀಗ ನೇಮಕಾತಿಯನ್ನು ತಡೆ ಹಿಡಿದಿದೆ.

ಇದನ್ನೂ ಓದಿ ಪರೇಶ್‌ ಮೇಸ್ತಾ ಕೊಲೆ ಪ್ರಧಾನ ಆರೋಪಿಗೆ ವಕ್ಫ್‌ ಬೋರ್ಡ್‌ ಉಪಾಧ್ಯಕ್ಷ ಸ್ಥಾನ: ಬಿಜೆಪಿ ಎಡವಟ್ಟಿಗೆ ಎಲ್ಲೆಡೆ ತರಾಟೆ

Exit mobile version