Site icon Vistara News

Criminal Cases: ಸಿದ್ದರಾಮಯ್ಯ, ಜೋಶಿ ನಡುವೆ ಕ್ರೈಂ ವಾರ್‌; ಏಟು-ಎದುರೇಟು!

CM Siddaramaiah and Minister Pralhad joshi

ಬೆಂಗಳೂರು: ವಂಟಮೂರಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣದ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರ ನಡುವೆ ಮಾತಿನ ಸಮರ ಮುಂದುವರಿದಿದೆ. ಕಾಂಗ್ರೆಸ್‌ ಸರ್ಕಾರದ ಆಡಳಿತದಲ್ಲಿ ರಾಜ್ಯದಲ್ಲಿ ಅಪರಾಧ ಪ್ರಕರಣಗಳ (Criminal Cases) ಸಂಖ್ಯೆ ಹೆಚ್ಚಳವಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಏನಾಗಿದೆ ಎಂಬುವುದು ಜನರಿಗೆ ಗೊತ್ತು ವಾಗ್ದಾಳಿ ನಡೆಸಿದ್ದಾರೆ.

ಯಾರ ಕಾಲದಲ್ಲಿ ಎಷ್ಟು ಕ್ರೈಂ ಕೇಸ್‌ ಆಗಿವೆಯೋ ವರದಿ ನೋಡಲಿ: ಸಿದ್ದರಾಮಯ್ಯ

ಬಿಜೆಪಿ ನಾಯಕರ ಆರೋಪಗಳಿಗೆ ಗದಗದಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ವಂಟಮೂರಿ ಪ್ರಕರಣ ಗೊತ್ತಾದ ತಕ್ಷಣವೇ ಗೃಹ ಸಚಿವರು ಮಹಿಳೆಯನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಶಾಸಕ 9 ವರ್ಷದ ಹುಡುಗಿ ಮೇಲೆ ರೇಪ್ ಮಾಡಿ ಜೈಲು ಸೇರಿದ್ದಾನೆ. ಇದಕ್ಕೆ ಜೆ.ಪಿ. ನಡ್ಡಾ ಮತ್ತು ಬಿಜೆಪಿ ನಾಯಕರು ಏನು ಹೇಳುತ್ತಾರೆ? ಇಂತಹ ಎಂಎಲ್ಎ ಇಟ್ಟುಕೊಂಡವರು, ಹೆಣ್ಣುಮಕ್ಕಳು ಮೇಲೆ ದೌರ್ಜನ್ಯ ಮಾಡುವವರು ಬಿಜೆಪಿಯವವರು. ಅವರಿಗೆ ನಮ್ಮ ಬಗ್ಗೆ ಮಾತನಾಡಲು ಯಾವ ನೈತಿಕತೆಯಿದೆ ಎಂದು ಪ್ರಶ್ನಿಸಿದ್ದಾರೆ.

ನ್ಯಾಷನಲ್ ಕ್ರೈಂ ಬ್ಯೂರೋ ವರದಿ ನೋಡಲಿ, ಯಾರ ಕಾಲದಲ್ಲಿ ಎಷ್ಟು ಪ್ರಕರಣ ಆಗಿವೆ ಅಂತ ಗೊತ್ತಾಗುತ್ತೆ. ಯಾರ ಮೇಲೆ ದೌರ್ಜನ್ಯ ಆದರೂ ಅವರ ಮೇಲೆ ನಾವು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ವಂಟಮೂರಿ ಘಟನೆ ಅನಾಗರಿಕ ಘಟನೆ, ಇದು ನಾಗರಿಕ ಸಮಾಜದಲ್ಲಿ ನಡೆಯಬಾರದು ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಅವಧಿಯಲ್ಲಿ ಕೊಲೆ, ರೇಪ್ ಕೇಸ್ ಹೆಚ್ಚು: ಪ್ರಲ್ಹಾದ್‌ ಜೋಶಿ

ವಂಟಮೂರಿ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂಬ ಸಿಎಂ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು, ಸಿದ್ದರಾಮಯ್ಯ ಅವರು ಬೆಳಗಾವಿ ಘಟನೆಯನ್ನು, ಇತರೆ ರಾಜ್ಯದ ಘಟನೆಗಳಿಗೆ ಹೋಲಿಸಬಾರದು. ಮಣಿಪುರಿ ಘಟನೆಗೂ, ಬೆಳಗಾವಿ ವಿಚಾರಕ್ಕೆ ಅಜಗಜಾಂತರ ವ್ಯತ್ಯಾಸ ಇದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ, ಅದಕ್ಕೂ ಮೊದಲು ಜನಾಂಗೀಯ ಹಿಂಸಾಚಾರ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮಣಿಪುರ ಘಟನೆ ಆದ ಮೇಲೂ ಕೇಂದ್ರ ಸರ್ಕಾರ ಕೈ ಕಟ್ಟಿ ಕುಳಿತಿಲ್ಲ. ಈ ಹಿಂದೆ ಇಂತಹ ಘಟನೆ ಆದಾಗ ಒಬ್ಬೇ ಒಬ್ಬ ಗೃಹಸಚಿವ ಮಣಿಪುರಕ್ಕೆ ಹೋಗಿರಲಿಲ್ಲ. ಅಮಿತ್ ಷಾ ಮೂರು ದಿನ ಹೋಗಿ ಅಲ್ಲೆ ಇದ್ದರು‌. ಕೇಂದ್ರದ ಗೃಹ ರಾಜ್ಯಮಂತ್ರಿ 24 ದಿನ ಅಲ್ಲೆ ಇದ್ದರು. ಇಲ್ಲಿ ನಡೆದ ಘಟನೆ ಸಾಮಾನ್ಯ ರಾಜ್ಯಗಳಲ್ಲಿ ಆಗಿರುವ ಘಟನೆಗಳು. ರಾಜಸ್ಥಾನದಲ್ಲಿ ಹೆಚ್ಚು ಕೊಲೆ, ರೇಪ್ ಕೇಸ್ ಕಾಂಗ್ರೆಸ್ ಅವಧಿಯಲ್ಲಿ ಆಗಿವೆ. ಕೊಲೆ, ಅತ್ಯಾಚಾರ ನಂಬರ್ ಒನ್ ರಾಜಸ್ಥಾನ ಇತ್ತು. ದೇಶದ ಒಟ್ಟು ಕ್ರೈಂಗಳಲ್ಲಿ ಶೇ.16 ಕ್ರೈಂ ರಾಜಸ್ಥಾನದಲ್ಲಿ ಆಗಿದೆ. ಎಲ್ಲೆಲ್ಲಿ ಕಾಂಗ್ರೆಸ್ ಸರ್ಕಾರ ಇದೆಯೋ ಅಲ್ಲಿ ಇಂತಹ ಘಟನೆಗಳು ಜಾಸ್ತಿ ಆಗಿದೆ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ | CM Siddaramaiah: ಬಿಜೆಪಿ ಬೊಗಳೆ ಜನತಾ ಪಾರ್ಟಿ; ಸಿ.ಟಿ. ರವಿ, ಅಶ್ವತ್ಥ್‌ರನ್ನು ಆಚೆಗಟ್ಟಿ ಎಂದ ಸಿದ್ದರಾಮಯ್ಯ

ಹೈಕೋರ್ಟ್ ಮಧ್ಯಪ್ರವೇಶ ಮಾಡುವವರೆಗೆ ರಾಜ್ಯ ಸರ್ಕಾರ ಕ್ರಮ ತೆಗೆದುಕೊಂಡಿರಲಿಲ್ಲ. ಹೈಕೋರ್ಟ್ ಛೀಮಾರಿ ಹಾಕಿದ ಬಳಿಕ ಇವರು ಹೋಗಿದ್ದಾರೆ. ರಾಷ್ಟ್ರೀಯ ಮಾನವ ಹಕ್ಕು ಆಯೋಗದವರು ಬಂದಿದ್ದಾರೆ. ಆಯೋಗಕ್ಕೂ ಕೇಂದ್ರ ಸರ್ಕಾರಕ್ಕೂ ಸಂಬಂಧ ಇಲ್ಲ. ನಮ್ಮ‌ ಮಹಿಳಾ ಸಂಸದರು ಹೋಗಿ ಭೇಟಿಯಾಗಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಅವರಿಗೆ ಯಾಕೆ ಭಯ. ರಾಜ್ಯ ಸರ್ಕಾರದ ಇಂಟಲಿಜೆನ್ಸ್ ಸಂಪೂರ್ಣವಾಗಿ ವಿಫಲವಾಗಿದೆ. ಆದ್ದರಿಂದ ನಿಮಗೆ ಭಯ ಇದೆ ಎಂದು ಹೇಳಿದ್ದಾರೆ.

ಮಾನವ ಹಕ್ಕುಗಳ ಆಯೋಗ ಏನಾದರೂ ರಿಪೋರ್ಟ್ ಮಾಡಿದರೆ ನಿಮ್ಮ ಸರ್ಕಾರದ ಮರ್ಯಾದೆ ಹೋಗಲಿದೆ ಅನ್ನೋ ಭಯವಿದೆ. ಹೀಗಾಗಿ ಸಿಎಂ ಭಯವಾಗಿ ಅಸಂಬದ್ಧ ಹೇಳಿಕೆ ಕೊಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಯೋಚನೆಗಳೇ ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ ಎಂದು ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.

ಸಂಸತ್ ಮೇಲಿನ‌ ದಾಳಿಗೆ ನಿರುದ್ಯೋಗ ಕಾರಣ ಎಂಬ ರಾಹುಲ್ ಗಾಂಧಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ಹೇಳಿಕೆ ಚೈಲ್ಡಿಶ್ ಹೇಳಿಕೆ. ನಿರುದ್ಯೋಗ ಸಮಸ್ಯೆ ಬಗ್ಗೆ ಚರ್ಚೆ ಆಗಲಿದೆ, ಬೇಡ ಎನ್ನಲ್ಲ. ನಿರುದ್ಯೋಗ ಇದೆ ಅಂತ ಹೇಳಿ ಕೊಲೆ ಮಾಡುತ್ತೇವೆ, ಎಂಪಿಯನ್ನು ಕೊಲೆ ಮಾಡ್ತೀನಿ ಎಂದರೆ ಹೇಗೆ? ಕರ್ನಾಟಕದಲ್ಲಿ ನಿರುದ್ಯೋಗ ಇಲ್ಲವಾ? ಛತ್ತೀಸ್‌ಗಢ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಇತ್ತು, ಅಲ್ಲಿ ನಿರುದ್ಯೋಗ ಇಲ್ಲವೇ? ನಿರುದ್ಯೋಗ ಇದೆ ಅಂತ ದೇಶ ವಿರೋಧಿ, ದೇಶದ್ರೋಹಿ, ಟೆರರಿಸ್ಟ್ ಜೊತೆ ಲಿಂಕ್ ಇಟ್ಟುಕೊಳ್ಳುವ ಸಂಘಟನೆ ಜತೆ ಹೀಗೆ ಮಾಡೋಕೆ ನಿಮ್ಮ ಬೆಂಬಲ‌ ಇದೆಯಾ ಎಂದು ರಾಹುಲ್‌ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ.

ಮರ್ಡರ್ ಮಾಡಿದವನಿಗೂ ಅವನದ್ದೇ ಲಾಜಿಕ್ ಇರುತ್ತೆ. ಆದರೆ ಇದನ್ನು ಸಮಾಜ ಒಪ್ಪುತ್ತಾ? ರಾಹುಲ್ ಗಾಂಧಿ‌ ಎಷ್ಟು ಚೈಲ್ಡಿಶ್ ಆಗಿ ಮಾತನಾಡುತ್ತಿದ್ದಾರೆ. ಮೋದಿ ವಿರೋಧ ಮಾರುವ ಭರದಲ್ಲಿ ರಾಷ್ಟ್ರದ್ರೋಹಿಗಳನ್ನು ಸಮರ್ಥನೆ ಮಾಡಿಕೊಳ್ಳುತ್ತೀರಾ? ರಾಹುಲ್‌ ಹೇಳಿಕೆ ಬಹ್ಹೆ ಕಾಂಗ್ರೆಸ್ ‌ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಸ್ಪಷ್ಟನೆ ಕೊಡಬೇಕು. ರಾಹುಲ್ ಹೇಳಿಕೆ ಇನ್ ಮೆಚ್ಯೂರ್ಡ್ ಹೇಳಿಕೆ. ನಿರುದ್ಯೋಗದ ಬಗ್ಗೆ ಪ್ರತ್ಯೇಕ ಚರ್ಚೆ ಮಾಡಲಿ. ಅದಕ್ಕೆ ಉತ್ತರ ಕೊಡಲು ನಾವು ತಯಾರು ಇದ್ದೇವೆ ಎಂದು ತಿಳಿಸಿದ್ದಾರೆ.

ನಮ್ಮದು ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ. ಉದ್ಯೋಗ ಸಿಗದೇ ಆರ್ಥಿಕತೆ ಬೆಳೆಯುತ್ತದೆಯಾ? ಯಾರಾದರೂ ನಾಳೆ ಮರ್ಡರ್, ರೇಪ್ ಮಾಡಿದ್ರೆ, ಆಗ ಅವನಿಗೆ ಕೆಲಸ ಸಿಗಲಿಲ್ಲ, ಅದಕ್ಕೆ ಮಾಡಿದ ಅಂತ ಹೇಳಿದ್ರೆ ಅದಕ್ಕೆ ಸಮರ್ಥನೆ ಇದೆಯಾ? ಸಮಾಜವನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದೀರಿ? ಈ‌ ರೀತಿ ಸಮರ್ಥನೆ ಮಾಡುವುದು ದೇಶಕ್ಕೆ ಮಾಡುವ ಅನ್ಯಾಯ ಎಂದಿದ್ದಾರೆ.

ಇದನ್ನೂ ಓದಿ | Aghanashini River: ಸಹಸ್ರಲಿಂಗದಲ್ಲಿ ಈಜಲು ತೆರಳಿದ್ದ ಒಂದೇ ಕುಟುಂಬದ ಐವರು ನಾಪತ್ತೆ

ಕೋಲಾರದಲ್ಲಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಕೈಯಲ್ಲಿ ಮಲ ಶುಚಿಗೊಳಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಸರ್ಕಾರ ಬೆಳಗಾವಿ ಪ್ರಕರಣ, ಕೋಲಾರ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಈ ಸರ್ಕಾರ ಇಂತಹ ಘಟನೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಲ್ಲ. ಸಿಎಂ ಮತ್ತು ಮಂತ್ರಿಗಳು ಯಾವಾಗ ಕ್ಯಾಶುವಲ್ ಆಗಿ ಇರುತ್ತಾರೋ, ಆಗ ಅಧಿಕಾರಿಗಳು ಗಂಭೀರವಾಗಿ ಇರುವುದಿಲ್ಲ. ಅದಕ್ಕೆ ಇಂತಹ ಸ್ಥಿತಿ ಆಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

Exit mobile version