ಬೆಂಗಳೂರು: ಮತದಾರರ ಮಾಹಿತಿ ಕಳವು ಆರೋಪ ಎದುರಿಸುತ್ತಿರುವ ಚಿಲುಮೆ ಸಂಸ್ಥೆ ತಾನೊಂದು ಎನ್‌ಜಿಒ ಎಂದು ಹೇಳಿಕೊಳ್ಳುತ್ತಿದೆ. ಈ ಬಾರಿಯೂ ತಾನು ಮಾಡಿದ್ದು ಮತದಾರರ ಜಾಗೃತಿ ಎನ್ನುತ್ತಿದೆ. ಆದರೆ, ಇದು ಕೇವಲ ಎನ್‌ಜಿಒ ಆಗಿರದೆ ರಾಜಕೀಯ ನಾಯಕರ ಪರವಾಗಿ ಖಾಸಗಿ ಸಮೀಕ್ಷೆ ನಡೆಸುವ ಸಂಸ್ಥೆಯಾಗಿಯೂ ಕೆಲಸ ಮಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಬಿಜೆಪಿ ಮುಖಂಡ ನಂದೀಶ್ ರೆಡ್ಡಿ ಅವರು ಚಿಲುಮೆ ಸಂಸ್ಥೆಗೆ ೧೮ ಲಕ್ಷ ರೂ. ಕೊಟ್ಟಿರುವ ವಿಚಾರ ಈಗ ಬಯಲಿಗೆ ಬಂದಿದ್ದು, ಇದರ ಹಿನ್ನೆಲೆ ಏನು? ಯಾಕಾಗಿ ಇಷ್ಟೊಂದು ಮೊತ್ತ ಕೊಟ್ಟರು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ನಂದೀಶ್ ರೆಡ್ಡಿ ಅವರು ಚುನಾವಣಾ ಆಯೋಗಕ್ಕೆ ನೀಡಿರುವ ಅಧಿಕೃತ ಅಫಿಡವಿಟ್ಟಿನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅದರಲ್ಲಿ ಎರಡು ಬಾರಿ ಹಣ ಸಂದಾಯ ಆಗಿರುವ ಬಗ್ಗೆ ಉಲ್ಲೇಖ ಮಾಡಲಾಗಿದೆ. ಚಿಲುಮೆ ಟ್ರಸ್ಟ್ ಹೆಸರಲ್ಲಿ 17,50,000 ರೂ. ಹಾಗೂ ಚಿಲುಮೆ ಗ್ರೂಪ್ ಹೆಸರಿನಲ್ಲಿ ೫೦,೦೦೦ ರೂ. ಸಂದಾಯ ಮಾಡಲಾಗಿದೆ.
2018 ರ ಚುನಾವಣಾ ಅಫಿಡವಿಟ್ ನಲ್ಲಿ ಹಣ ಕೊಟ್ಟಿರುವ ಬಗ್ಗೆ ಉಲ್ಲೇಖವಾಗಿದೆ.
ಮತದಾರರ ಮಾಹಿತಿ ಕಳವು ಮಾಡಿದ ಆರೋಪ ಎದುರಿಸುತ್ತಿರುವ ಸಂಸ್ಥೆಗೆ ನಂದೀಶ್ ರೆಡ್ಡಿ ಅವರು ಇಷ್ಟೊಂದು ಹಣ ಯಾಕೆ ಕೊಟ್ಟರು ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ಚಿಲುಮೆ ಸಂಸ್ಥೆ ರಾಜಕೀಯ ನಾಯಕರ ಖಾಸಗಿ ಚುನಾವಣಾ ಸಮೀಕ್ಷೆ ನಡೆಸುವ ಸಂಸ್ಥೆಯಾಗಿತ್ತಾ ಎನ್ನುವ ಅನುಮಾನ ಮೂಡಿದೆ.
ಅಂದರೆ, ಇದು ಸಮೀಕ್ಷೆಗಳನ್ನು ನಡೆಸಿ ರಾಜಕೀಯ ನಾಯಕರಿಗೆ ದತ್ತಾಂಶ ಮಾರಾಟ ಮಾಡುತ್ತಿತ್ತೇ ಎನ್ನುವ ಸಂಶಯ ವ್ಯಕ್ತವಾಗಿದೆ. ಆಯಾಯ ವಿಧಾನಸಭಾ ಕ್ಷೇತ್ರದ ಮತದಾರರ ದತ್ತಾಂಶ ಸಂಗ್ರಹಿಸಿ ರಾಜಕೀಯ ಮುಖಂಡರಿಗೆ ರವಾನೆ ಮಾಡುತ್ತಿದ್ದ ಬಗ್ಗೆ ಈಗ ಗುಮಾನಿ ಹೆಚ್ಚಾಗಿದೆ.
ಇದನ್ನೂ ಓದಿ | Voter data | ಚಿಲುಮೆ ಕಚೇರಿಗೆ ಲಗ್ಗೆ ಇಟ್ಟ ಪೊಲೀಸರು: ನಾಲ್ವರ ಬಂಧನ, ಕಂದಾಯ ಅಧಿಕಾರಿ ಅಮಾನತು