Site icon Vistara News

R Dhruvanarayana : ನಂಜನಗೂಡಿನಿಂದ ಸ್ಪರ್ಧೆ ಬಯಸಿದ್ದ ಧ್ರುವನಾರಾಯಣ್‌; ಟಿಕೆಟ್‌ ಕೈ ತಪ್ಪುವ ಆತಂಕದಲ್ಲಿದ್ದರೇ?

Dhruvanarayana

#image_title

ಬೆಂಗಳೂರು: ಶನಿವಾರ ನಿಧನರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ (R Dhruvanarayana) ಅವರು ಕಳೆದ ಕೆಲವು ದಿನಳಿಂದ ಆತಂಕದಲ್ಲಿದ್ದರೇ? ಒತ್ತಡಕ್ಕೆ ಒಳಗಾಗಿದ್ದರೇ? ಇದೇ ಹೃದಯಾಘಾತಕ್ಕೆ ಕಾರಣವಾಯಿತೇ? ಹೀಗೆ ಹಲವು ಪ್ರಶ್ನೆಗಳು ಎದ್ದುನಿಂತಿವೆ.

ರಾಜ್ಯ ಕಾಂಗ್ರೆಸ್‌ನಲ್ಲಿ ಕಾರ್ಯತಂತ್ರ ನಿಪುಣನೆಂದೇ ಖ್ಯಾತರಾಗಿದ್ದ, ಎಲ್ಲರಿಗೂ ಸಲಹೆಗಾರನಂತೆ, ಗೆಳೆಯನಂತೆ ಕೆಲಸ ಮಾಡುತ್ತಿದ್ದ ಧ್ರುವನಾರಾಯಣ್‌ ಎರಡು ಬಾರಿ ಶಾಸಕರಾಗಿ, ಎರಡು ಬಾರಿ ಸಂಸದರಾಗಿ ಜನಸೇವೆ ಮಾಡಿದ್ದರು. ಆದರೆ, ಈಗ ಅವರು ಕೇವಲ ಕೆಪಿಸಿಸಿ ಕಾರ್ಯಾಧ್ಯಕ್ಷ ಮಾತ್ರ. ಈ ಹಂತದಲ್ಲಿ 2023ರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಕಾಣಬೇಕು, ಸಮಾಜಸೇವೆ ಮುಂದುವರಿಸಬೇಕು ಎನ್ನುವ ಮಹತ್ವಾಕಾಂಕ್ಷೆ ಅವರಿಗೆ ಇತ್ತು ಎಂದು ಹೇಳಲಾಗಿದೆ.

ಹೀಗಾಗಿ ಅವರು ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದರು. ಪಕ್ಷದ ನಿಯಮದಂತೆ ಅರ್ಜಿಯನ್ನೂ ಸಲ್ಲಿಸಿದ್ದರು. ಆದರೆ, ಈ ಕ್ಷೇತ್ರದಿಂದ ಮಾಜಿ ಸಚಿವ ಮಹದೇವಪ್ಪ ಕೂಡಾ ಅರ್ಜಿ ಸಲ್ಲಿಸಿದ್ದು, ಇನ್ನೂ ಅಂತಿಮಗೊಂಡಿಲ್ಲ.

ಧ್ರುವ ನಾರಾಯಣ ಅವರು ಕಳೆದ ಕೆಲವು ವರ್ಷಗಳಿಂದ ನಂಜನಗೂಡನ್ನು ಕೇಂದ್ರೀಕರಿಸಿ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಹೀಗಾಗಿ ಟಿಕೆಟ್‌ ಸಿಗಬಹುದು ಎಂಬ ನಿರೀಕ್ಷೆ ಅವರಲ್ಲಿತ್ತು. ಈ ನಡುವೆ, ಮಹಾದೇವಪ್ಪ ಅವರನ್ನು ಟಿ. ನರಸೀಪುರದಿಂದ ಸ್ಪರ್ಧೆ ಮಾಡುವಂತೆ ಕಾಂಗ್ರೆಸ್‌ ನಾಯಕರು ಹೇಳಿದ್ದರು. ಇದು ಧ್ರುವ ನಾರಾಯಣ ಅವರಿಗೆ ಸ್ವಲ್ಪ ಮಟ್ಟಿಗೆ ಖುಷಿ ನೀಡಿತ್ತು.

ಆದರೆ, ಸ್ಕ್ರೀನಿಂಗ್‌ ಕಮಿಟಿ ಸಭೆಯಲ್ಲಿ ಒಂದು ಹೆಸರು ಫೈನಲ್‌ ಮಾಡುವ ಬದಲು ಎರಡೂ ಹೆಸರುಗಳನ್ನು ಇಟ್ಟು ಕೇಂದ್ರಕ್ಕೆ ಕಳುಹಿಸಲಾಗಿದೆ. ತನ್ನ ಮತ್ತು ಮಹಾದೇವಪ್ಪ ಇಬ್ಬರ ಹೆಸರನ್ನೂ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದರಿಂದ ತನಗೆ ಟಿಕೆಟ್‌ ಸಿಗುವುದೋ ಇಲ್ಲವೋ ಎನ್ನುವ ವಿಚಾರದಲ್ಲಿ ಎರಡು ದಿನಗಳಿಂದ ಅಪ್ಸೆಟ್‌ ಆಗಿದ್ದರು ಎಂದು ಆಪ್ತ ಮೂಲಗಳು ತಿಳಿಸಿವೆ.

ನಂಜನಗೂಡಿನಲ್ಲಿ ನಾನೇ ಮುಂದಿನ ಅಭ್ಯರ್ಥಿ ಎಂದು ಹೇಳಿಕೊಂಡು ಪ್ರಚಾರ ಮಾಡಿದ್ದ ಅವರಿಗೆ ಎರಡು ಹೆಸರು ಶಿಫಾರಸು ಮಾಡಿದ್ದು ಭಾರಿ ಬೇಜಾರಾಗಿತ್ತು ಎಂದು ಹೇಳಲಾಗಿದೆ.

ರಾಜಕೀಯ ಒತ್ತಡವಿತ್ತು ಎಂದ ಎಂ.ಬಿ. ಪಾಟೀಲ್‌

ಧ್ರುವನಾರಾಯಣ ಅವರು ಶಾಸಕರಾಗಿ ಮತ್ತು ಸಂಸದರಾಗಿ ಬದ್ಧತೆಯಿಂದ ಕೆಲಸ ಮಾಡಿದ್ದಾರೆ. ಲೋಕಸಭೆಯಲ್ಲೂ ಜಿಲ್ಲೆ ರಾಜ್ಯದ ಹಿತಾಸಕ್ತಿಗಾಗಿ ಹೋರಾಡಿದ್ದಾರೆ ಎಂದು ಕೆಪಿಸಿಸಿಯ ಇನ್ನೊಬ್ಬ ಕಾರ್ಯಾಧ್ಯಕ್ಷ ಎಂ.ಬಿ. ಪಾಟೀಲ್‌ ಹೇಳಿದ್ದಾರೆ.

ʻʻನಾನು ನೀರಾವರಿ ಸಚಿವನಾಗಿದ್ದಾಗ, ಚಾಮರಾಜನಗರ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳನ್ನು‌ ಮಾಡಿಸಿದ್ದಾರೆ. ಕೆರೆ ತುಂಬಿಸುವ ಕೆಲಸ ಮಾಡಿದ್ರು, ಮಾಡಿದ ಮೇಲೆ‌ ನಮ್ಮನ್ನು ಕರೆದುಕೊಂಡು ಹೋಗಿ ತೋರಿಸಿದ್ದರುʼʼ ಎಂದಿರುವ ಅವರು, ಕೆಲವು ದಲಿತ ನಾಯಕರಾಗಿ ಉಳಿಯದೆ ಎಲ್ಲ ಸಮಾಜದ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದರುʼʼ ಎಂದಿದ್ದಾರೆ.

ʻದೇವರು ಬಹಳ ದೊಡ್ಡ ಅನ್ಯಾಯ ಮಾಡಿದ್ದಾನೆ. ಇನ್ನೂ 15-20 ವರ್ಷಗಳ ಕಾಲ ನಮ್ಮ ಜೊತೆ ಇರಬೇಕಿತ್ತು. ಅವರಿಗೆ ಆರೋಗ್ಯದ ಬಗ್ಗೆ ಸಾಕಷ್ಟು ಕಳಕಳಿ ಇತ್ತು. ವಾಕ್‌ ಮಾಡುತ್ತಿದ್ದರುʼʼ ಎಂದು ಹೇಳಿರುವ ಎಂ.ಬಿ. ಪಾಟೀಲ್‌, ʻʻರಾಜಕೀಯವಾಗಿ ಅವರಿಗೆ ತುಂಬಾ ಒತ್ತಡ ಇತ್ತು. ಯಾಕೆಂದರೆ ಅವರು ಎಲ್ಲವನ್ನೂ ಮೈ ಮೇಲೆ ಎಳೆದುಕೊಂಡು ಕೆಲಸ ಮಾಡುತ್ತಿದ್ದರುʼʼ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ R Dhruvanarayana : ನನ್ನ ಮಾರ್ಗದರ್ಶಕ, ಸ್ನೇಹಿತ, ಹಿತೈಷಿಯಾಗಿದ್ದ ಧ್ರುವ ನಾರಾಯಣ; ಹರಿಪ್ರಕಾಶ್‌ ಕೋಣೆಮನೆ ಕಂಬನಿ

Exit mobile version