ಬೆಂಗಳೂರು: ರಾಜ್ಯದ 17,970 ಸರ್ಕಾರಿ ಶಾಲೆಗಳಿಗೆ ಕುಡಿಯುವ ನೀರಿನ ಸೌಲಭ್ಯವಿಲ್ಲ. ಪ್ರಧಾನ ಮಂತ್ರಿಗಳ ಜಲಜೀವನ್ ಮಿಷನ್ ಅಡಿಯಲ್ಲಿ ಈ ಶಾಲೆಗಳಿಗೂ ಕುಡಿಯುವ ನೀರಿನ ಸೌಕರ್ಯ ಒದಗಿಸಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್‌ಡಿಪಿಆರ್) ಇಲಾಖೆಗೆ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರರಾದ ಪ್ರೊ. ಎಂ. ಆರ್. ದೊರೆಸ್ವಾಮಿ ಸಲಹೆ ನೀಡಿದ್ದಾರೆ.
ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಒಟ್ಟು 42,015 ಶಾಲೆಗಳಿದ್ದು ಇದರಲ್ಲಿ 17,970 ಶಾಲೆಗಳಿಗೆ ಕುಡಿಯುವ ನೀರಿನ ಸಂಪರ್ಕವಿಲ್ಲವೆಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಗುರುತಿಸಿದೆ. ಈ ಶಾಲೆಗಳಿಗೆ ನೀರು ಒದಗಿಸುವ ಕಾರ್ಯವನ್ನು ಪ್ರಥಮ ಆದ್ಯತೆಯ ಮೇರೆಗೆ ಕೈಗೊಳ್ಳಬೇಕೆಂದು ಅವರು ಇಲಾಖೆಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಧಾನಮಂತ್ರಿಗಳ “ಜಲಜೀವನ್ ಮಿಷನ್” ಅಡಿಯಲ್ಲಿ ಎಲ್ಲ ಹಳ್ಳಿಗಳಿಗೂ ನಳಗಳ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿರುವುದು ಅತ್ಯಂತ ಪ್ರಶಂಸನೀಯ. ಇದರೊಂದಿಗೆ ಸರ್ಕಾರಿ ಶಾಲೆಗಳಿಗೂ ಸಹ ನಳ ನೀರಿನ ವ್ಯವಸ್ಥೆ ಮಾಡುವುದು ಅತ್ಯಂತ ಅವಶ್ಯಕ ಹಾಗೂ ಆದ್ಯತೆ ಮೇಲೆ ಮಾಡಬೇಕಾಗಿರುವ ಕೆಲಸ ಎಂದಿರುವ ಪ್ರೊ. ಎಂ.ಆರ್. ದೊರೆಸ್ವಾಮಿ, ಶಾಲಾ ಶಿಕ್ಷಣ ದೇಶದ ಪ್ರಗತಿಗೆ ಅಡಿಪಾಯ- ಆಧಾರವೆಂಬುದು ಸರ್ವವಿದಿತ. ಮುಖ್ಯಮಂತ್ರಿಗಳು ಹಳ್ಳಿಗಳಲ್ಲಿ ಜಲಜೀವನ್ ಮಿಷನ್ ಕಾರ್ಯಕ್ರಮ ಅನುಷ್ಠಾನಗೊಳಿಸಲು 300 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಆದ್ಯತೆಯ ಮೇರೆಗೆ ಸರ್ಕಾರಿ ಶಾಲೆಗಳಿಗೆ ಕುಡಿಯುವ ನೀರು ಒದಗಿಸಬೇಕೆಂದು ಅವರು ಕೋರಿದ್ದಾರೆ.
ಇದನ್ನೂ ಓದಿ | ದತ್ತು ಪಡೆದ ಶಾಲೆಗಳ ಅಭಿವೃದ್ಧಿ ಮಾಡಿ; ಜನಪ್ರತಿನಿಧಿಗಳಿಗೆ ಪ್ರೊ ಎಂ.ಆರ್. ದೊರೆಸ್ವಾಮಿ ಪತ್ರ