Site icon Vistara News

Woman suicide : ಅಕ್ಕಪಕ್ಕದ ಮನೆಗಳ ನೀರಿನ ಜಗಳ; ಮನನೊಂದ ಗೃಹಿಣಿ ಸಾವಿಗೆ ಶರಣು

Water dispute between neighbours, woman Commits suicide in Bangalore

Water dispute between neighbours, woman Commits suicide in Bangalore

ಬೆಂಗಳೂರು: ನೀರಿನ ವಿಚಾರಕ್ಕೆ ಅಕ್ಕಪಕ್ಕದ ಮನೆಯವರು ಗಲಾಟೆ ಮಾಡಿದ್ದರಿಂದ ಮನ ನೊಂದ ಗೃಹಿಣಿಯೊಬ್ಬರು ಆತ್ಮಹತ್ಯೆ (Woman suicide) ಮಾಡಿಕೊಂಡಿದ್ದಾರೆ. ನೀರು ತುಂಬುವ ವಿಚಾರಕ್ಕೆ ಆರಂಭವಾದ ಗಲಾಟೆ ಇದೀಗ ಸಾವಿನಲ್ಲಿ ಅಂತ್ಯಗೊಂಡಿದೆ.

ಯಲಹಂಕ ಠಾಣಾ ವ್ಯಾಪ್ತಿಯ ಕೋಗಿಲು ಮುಖ್ಯ ರಸ್ತೆಯ ಸರ್ಕಾರಿ ವಸತಿ ಸಮುಚ್ಚಯದಲ್ಲಿ ವಾಸವಾಗಿರುವ ಸರಸ್ವತಿ (35) ಎಂಬವರೇ ಮೃತಪಟ್ಟವರು. ಇವರು ಸಿನಿಮಾಗಳಲ್ಲಿ ಕ್ಯಾಮೆರಾ ಸಹಾಯಕರಾಗಿ ಕೆಲಸ ಮಾಡುವ ನಾಗರಾಜ್‌ ಎಂಬವರ ಪತ್ನಿ. ಇವರಿಗೆ ಇಬ್ಬರು ಮಕ್ಕಳಿದ್ದಾರೆ.

ಸರಸ್ವತಿ ಹಾಗೂ ಅವರ ಪತಿ ಕೋಗಿಲು ಮುಖ್ಯರಸ್ತೆಯ ಶ್ರೀನಿವಾಸಪುರದಲ್ಲಿರುವ ಸರ್ಕಾರಿ ವಸತಿ ಸಮುಚ್ಚಯದ ಮನೆಯಲ್ಲಿ ವಾಸವಿದ್ದಾರೆ.

ನೆಲ ಮಹಡಿಯಲ್ಲಿ ವಾಸವಿದ್ದ ಶ್ರೀನಿವಾಸ್ ಹಾಗೂ ಭವಾನಿ ಎಂಬ ದಂಪತಿ ಪ್ರತ್ಯೇಕವಾಗಿ ನೀರಿನ ಟ್ಯಾಂಕ್ ತಂದಿಟ್ಟುಕೊಂಡು ಎಲ್ಲರಿಗಾಗಿ ಇರುವ ನೀರಿನ ಸಂಪ್‌ನಿಂದ ಪ್ರತ್ಯೇಕವಾಗಿ ನೀರು ತುಂಬಿಸಿಕೊಳ್ಳುತ್ತಿದ್ದರೆಂದು ಹೇಳಲಾಗಿದೆ. ನೀವು ಹೀಗೆ ಮಾಡುವುರಿಂದ ನೀರಿನ ಅಭಾವ ಉಂಟಾಗುತ್ತಿದೆ ಎಂದು ಸರಸ್ವತಿ ಪ್ರಶ್ನಿಸಿದಾಗ, ಮನ ಬಂದಂತೆ ಬೈದು, ಚಾರಿತ್ರ್ಯವಧೆ ಮಾಡಿದ್ದಾರೆ ಎಂದು ಹೇಳಲಾಗಿದೆ.

ಇದೇ ವಿಚಾರವಾಗಿ ಕಳೆದ ಕೆಲ ದಿನಗಳಿಂದ ಎರಡೂ ಮನೆಯವರ ನಡುವೆ ಗಲಾಟೆಗಳಾಗಿದ್ದು ಠಾಣೆಯ ಮೆಟ್ಟಿಲೇರಿದಾಗ ಪೊಲೀಸರು ಬುದ್ಧಿವಾದ ಹೇಳಿ‌ ಕಳಿಸಿದ್ದರು.

ಏಪ್ರಿಲ್ 21ರಂದು ನಾಗರಾಜ್ ಅವರು ಸಿನಿಮಾ ಕೆಲಸದ ನಿಮಿತ್ತ ಧಾರವಾಡಕ್ಕೆ ಹೋದಾಗ ನೀರಿನ ವಿಚಾರವಾಗಿ ಮತ್ತೆ ಗಲಾಟೆ ಆಗಿದೆ. ಈ ವೇಳೆ ಶ್ರೀನಿವಾಸ್, ಅವರ ಪತ್ನಿ ಭವಾನಿ ಹಾಗೂ ಶಿಲ್ಪಾ ಎಂಬಾಕೆ ಸರಸ್ವತಿಗೆ ಮನಬಂದಂತೆ ನಿಂದಿಸಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಮನನೊಂದ ಸರಸ್ವತಿ ಗಂಡನಿಗೆ ಕರೆ ಮಾಡಿ ‘ನನ್ನಿಂದ ಇನ್ನು ಸಹಿಸಲು ಸಾಧ್ಯವಿಲ್ಲ, ಬೇರೆ ಕಡೆ ಮನೆ ಮಾಡು ಅಂದರೆ ನೀನು ಅದನ್ನೂ ಮಾಡುತ್ತಿಲ್ಲ. ನನಗೆ ಇದನ್ನು ಸಹಿಸಲು ಸಾಧ್ಯವಿಲ್ಲ, ನಾನು ಸಾಯುತ್ತಿದ್ದೇನೆ’ ಎಂದಿದ್ದಾಳೆ.

ಗಾಬರಿಗೊಂಡ ನಾಗರಾಜ್ ಪಕ್ಕದ ಮನೆಯವರಿಗೆ ಕರೆ ಮಾಡಿ ಕಳಿಸುವಷ್ಟರಲ್ಲಿ ಸರಸ್ವತಿ ಆತ್ಮಹತ್ಯೆಗೆ ಶರಣಾಗಿದ್ದಳು. ಪತ್ನಿಯ ಸಾವಿಗೆ ಕಾರಣವಾದ ಶ್ರೀನಿವಾಸ್, ಭವಾನಿ ಹಾಗೂ ಶಿಲ್ಪಾಳ ವಿರುದ್ಧ ನಾಗರಾಜ್ ಯಲಹಂಕ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ : Suicide case : ಪ್ರಿಯಕರನ ಬ್ಲ್ಯಾಕ್‌ಮೇಲ್‌ಗೆ ಬೇಸತ್ತು ವಿಡಿಯೊ ಮಾಡುತ್ತಲೇ ನೇಣಿಗೆ ಶರಣಾದ ಮಹಿಳೆ

Exit mobile version