ವಿಜಯನಗರ: ಮೂಲ ಸೌಕರ್ಯಗಳ ವಿಸ್ಮಯದ ಸುರಂಗ ಮಾರ್ಗ ನೋಡಿ ಕೇಂದ್ರ ಸಾರಿಗೆ ಸಚಿವ ಗಡ್ಕರಿ ಈ ಹಿಂದೆ ಟ್ವೀಟ್ ಮಾಡಿದ್ದರು. ಆದರೆ ಈಗ, ವಿಜಯನಗರದ ಜಿಲ್ಲಾ ಕೇಂದ್ರ ಹೊಸಪೇಟೆಯ ಸುರಂಗ ಮಾರ್ಗ ಉದ್ದಕ್ಕೂ ಅಲ್ಲಲ್ಲಿ ತೀವ್ರ ಪ್ರಮಾಣ ನೀರು ಸೋರಿಕೆಯಾಗುತ್ತಿದೆ.
ಹೊಸಪೇಟೆ – ಬೆಂಗಳೂರು ಹೆದ್ದಾರಿಯಲ್ಲಿ ಸುರಂಗ ಮಾರ್ಗ ನಿರ್ಮಿಸಲಾಗಿತ್ತು. ಕಾಮಗಾರಿ ಅವೈಜ್ಞಾನಿಕತೆಯೋ NHA ನಿರ್ಲಕ್ಷ್ಯವೋ ಗೊತ್ತಿಲ್ಲ. ಸುರಂಗದುದ್ದಕ್ಕೂ ಅಲ್ಲಲ್ಲಿ ನೀರು ಸೋರುತ್ತಿರುವುದು ಭಾರೀ ಆತಂಕ ಹುಟ್ಟು ಹಾಕಿದೆ. ಹೊಸಪೇಟೆಯ ತುಂಗಭದ್ರಾ ಜಲಾಶಯ ಪಕ್ಕದಲ್ಲೇ ಇರುವ ಸುರಂಗದಿಂದ ಜಲಾಶಯಕ್ಕೆ ಯಾವುದೇ ಧಕ್ಕೆಯಾಗದೇ ಸುರಂಗವನ್ನು ಕೊರೆಯಲಾಗಿದೆ.
ಇಂಜಿನಿಯರಿಂಗ್ ಕೆಲಸ ಅದ್ಭುತ ಎನ್ನುವ ರೀತಿಯಲ್ಲಿ ಈ ಸುರಂಗ ಮಾರ್ಗ ನಿರ್ಮಿಸಲಾಗಿತ್ತು. ಅವೈಜ್ಞಾನಿಕ ಕಾಮಗಾರಿಯೇ ಸುರಂಗದಲ್ಲಿ ನೀರು ಸೋರಲು ಕಾರಣವಾಗಿದೆ, ಕೂಡಲೇ ಸರಿಪಡಿಸ ಬೇಕು ಎಂದು ತಾಲೂಕಾ ಪಂ. ಮಾಜಿ ಸದಸ್ಯ ಹಾಗೂ ಗ್ರಾಂ.ಪಂ ಸದಸ್ಯ ಸೋಮಪ್ಪ ಉಪ್ಪಾರ ಆಗ್ರಹಿಸಿದ್ದಾರೆ.
ಮೊದಲು ಹೆದ್ದಾರಿ ಪಕ್ಕದ ಕಿರಿದಾದ ಹಾಗೂ ಹಳೆಯ ರಸ್ತೆಯಲ್ಲಿ ತಿಂಗಳಲ್ಲಿ 2 – 3 ದಿನಗಟ್ಟಲೇ ಲೆಕ್ಕವೇ ಇಲ್ಲದಷ್ಟು ಟ್ರಾಫಿಕ್ ಜಾಮ್ ಆದ ಉದಾಹರಣೆಗಳಿವೆ. ಅದೇ ರೀತಿ ಮಹಾರಾಷ್ಟ್ರ, ಕೇರಳಕ್ಕೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಸುರಂಗ ಕೊರೆಯಲಾಗಿತ್ತು. ಜತೆಗೆ ಸುರಂಗ ಮೇಲಿರುವ ಕಣಿವೆ ರಾಯಸ್ವಾಮಿ ದೇಗುಲಕ್ಕೆ ಮತ್ತು ವನ್ಯ ಸಂಪತ್ತಿಗೆ ಧಕ್ಕೆಯಾಗದ ರೀತಿ ಸುರಂಗ ಮಾರ್ಗ ನಿರ್ಮಿಸಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಜಯನಗರ ಡಿಸಿ ಅನಿರುದ್ಧ ಶ್ರವಣ್, NHA ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ ಎಂದಿದ್ದಾರೆ.
ನೀರು ಸೋರಿಕೆ ಬಗ್ಗೆ ನಿಖರ ಕಾರಣ ಏನು ಅನ್ನುವುದರ ಬಗ್ಗೆ ವರದಿಗೆ ಕಾಯುತ್ತಿದ್ದೇವೆ. ಆದಷ್ಟು ಬೇಗ ಸಮಸ್ಯೆ ನಿವಾರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ| ಕೆಆರ್‌ಎಸ್ ಡ್ಯಾಂ | ಬದಲಾಯಿಸುವ 80 ವರ್ಷದ ಹಳೇ ಗೇಟ್‌ಗಳು ಮ್ಯೂಸಿಯಂಗೆ: ಸಚಿವ ಗೋವಿಂದ ಕಾರಜೋಳ