ಮಂಡ್ಯ: ಅಧಿಕಾರಿಗಳ ನಿರ್ಲಕ್ಷ್ಯದಿಂದ ಕುಡಿಯುವ ನೀರು ಪೈಪ್ ಒಡೆದು ಅಪಾರ ಪ್ರಮಾಣ ನೀರು ವ್ಯರ್ಥವಾದ (Water leakage) ಘಟನೆ ಬೆಳಕಿಗೆ ಬಂದಿದೆ. ಶ್ರೀರಂಗಪಟ್ಟಣ ತಾಲೂಕಿನ ಪಂಪ್ ಹೌಸ್ ಸರ್ಕಲ್ ಸಮೀಪ ಪೈಪ್ ಒಡೆದಿದ್ದು, ಪರಿಣಾಮ ಸುಮಾರು 8 ರಿಂದ 10 ಅಡಿ ಎತ್ತರದಲ್ಲಿ ನೀರು ಚಿಮ್ಮಿ, ಕೃತಕ ಕಾರಂಜಿ ಸೃಷ್ಟಿ ಆಗಿತ್ತು.
ಬಲಮುರಿಯಿಂದ ಮೈಸೂರಿನ ವಾಣಿ ವಿಲಾಸ ನೀರು ಸರಬರಾಜು ಕೇಂದ್ರಕ್ಕೆ ಹೋಗಿರುವ ಪೈಪ್ ಲೈನ್ ಇದಾಗಿದ್ದು, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನೀರು ಪೋಲಾಗಿದೆ. ರಸ್ತೆಯಲ್ಲಿ ಮಿನಿ ಕಾರಂಜಿ ನಿರ್ಮಾಣ ಆಗಿದ್ದು, ವಾಹನ ಸವಾರರು ಪೋಲಾಗುತ್ತಿದ್ದ ನೀರಲ್ಲಿ ಬಸ್, ಕಾರು ತೊಳೆಯುತ್ತಿದ್ದ ದೃಶ್ಯ ಕಂಡು ಬಂತು.
ಮತ್ತೊಂದು ಕಡೆ ರಸ್ತೆ ಪೂರ್ತಿ ನೀರು ಚಿಮ್ಮುತ್ತಿದ್ದ ಕಾರಣ ಬೈಕ್ ಸವಾರರು ಹೋಗಲು ಆಗದೆ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಾಯಿತು. ಪಾದಚಾರಿಗಳು ರಸ್ತೆ ದಾಟಲು ಪರದಾಡಬೇಕಾಯಿತು. ಕೆ.ಆರ್.ಎಸ್ -ಮೈಸೂರು ರಸ್ತೆ ಪಕ್ಕದಲ್ಲಿರುವ ಪೈಪ್‌ಲೈನ್ ಒಡೆದು ಭಾರೀ ಪ್ರಮಾಣದ ನೀರು ಪೋಲಾಗಿದೆ.
ಬೇಸಿಗೆಯಿಂದಾಗಿ ಹಲವೆಡೆ ನೀರಿನ ವ್ಯತ್ಯಯವಾಗುತ್ತಿದ್ದರೆ, ಮತ್ತೊಂದು ಕಡೆ ನೀರು ಪೋಲಾಗುತ್ತಿದ್ದರೂ ಕ್ಯಾರೆ ಎನ್ನದಿರುವ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: Priyanka Chopra : ಮಗಳಿಗೆ ಪ್ರಿಯಾಂಕಾ-ನಿಕ್ ನೀಡಿದ ಸರ್‌ಪ್ರೈಸ್ ಏನು? ಮಾಲತಿ ಫುಲ್ ಖುಷ್!