ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಳೆದ ಒಂದು ವಾರದಿಂದ ನಿರಂತರ ಸುರಿಯುತ್ತಿದ್ದ ಮಳೆಯ ತೀವ್ರತೆ ಸ್ವಲ್ಪ ಕಡಿಮೆಯಾಗಿದೆ. ಆದರೆ, ಮಳೆ ಸೃಷ್ಟಿಸಿದ ಅವಾಂತರದಿಂದ ಜನರು ಸಂಕಟ ಎದುರಿಸುವಂತಾಗಿದೆ. ಮಳೆಯಿಂದ ನೀರು ನುಗ್ಗಿ ನೂರಾರು ಎಕರೆ ಕೃಷಿ ಭೂಮಿ ನಾಶವಾಗಿ, ಸಾವಿರಾರು ಎಕರೆ ತೋಟಕ್ಕೆ ಹಾನಿಯಾಗಿದೆ.
ಮೂಡಬಿದ್ರೆ ತಾಲೂಕಿನ ಕೆಮ್ರಾಲ್ ಪಂಜ ಗ್ರಾಮದಲ್ಲಿ ನಂದಿನಿ ನದಿಯ ನೀರು ನುಗ್ಗಿ 300 ಎಕರೆಯಲ್ಲಿನ ವಿವಿಧ ಬೆಳೆಗಳು ನಾಶವಾಗಿವೆ. ಇಲ್ಲಿನ ಪಂಜ, ಕೊಯ್ಕುಡೆ, ಕೆಮ್ರಾಲ್ ಭಾಗದ ಭತ್ತದ ಗದ್ದೆಗಳಲ್ಲಿ ಇನ್ನೂ ನೆರೆ ಪರಿಸ್ಥಿತಿ ಕಡಿಮೆಯಾಗಿಲ್ಲ. ಭಾರಿ ಪ್ರಮಾಣದಲ್ಲಿ ಭತ್ತದ ಗದ್ದೆ, ಅಡಕೆ, ತೆಂಗು ಮತ್ತು ಬಾಳೆ ತೋಟಗಳಿಗೆ ನೀರು ನುಗ್ಗಿದೆ. ತಕ್ಷಣ ಸರ್ಕಾರ ಬೆಳೆ ನಷ್ಟ ಪರಿಹಾರ ಕೊಡಬೇಕು ಎಂದು ರೈತರು ಮನವಿ ಮಾಡಿದ್ದಾರೆ. ವಿಪರ್ಯಾಸವೆಂದರೆ ಈಗ ಗದ್ದೆಗಳೇ ಕೆರೆಗಳಂತೆ ಆಗಿದ್ದು, ದೋಣಿ ಮೂಲಕ ಸಂಚರಿಸಬೇಕಾದ ದುಸ್ಥಿತಿ ಎದುರಾಗಿದೆ.
ಚಾವಣಿ ಕುಸಿತ: ಭಾರಿ ಗಾಳಿ-ಮಳೆಗೆ ಮಂಗಳೂರು ನಗರದ ಕೆ.ಎಸ್.ರಾವ್ ರಸ್ತೆಯಲ್ಲಿನ ಗಣೇಶ್ ಮಹಲ್ ಹೊಟೇಲ್ ಚಾವಣಿ ಕುಸಿದಿದೆ. ಮಳೆ ಹಾಗೂ ಬಿಸಿಲಿನ ರಕ್ಷಣೆಗೆ ನಿರ್ಮಿಸಲಾಗಿದ್ದ ಚಾವಣಿ ಕುಸಿದಿದೆ. ಮಧ್ಯಾಹ್ನದ ಊಟಕ್ಕೆ ಆಗಮಿಸಿದ್ದ ಹಲವು ಗ್ರಾಹಕರ ಐಷಾರಾಮಿ ಕಾರುಗಳು ಛಾವಣಿ ಕುಸಿತದಿಂದ ಜಖಂಗೊಂಡಿವೆ. ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ.
ಕಡಲ್ಕೊರೆತದಿಂದ ಕುಸಿದ ರಸ್ತೆ : ಕರಾವಳಿಯಲ್ಲಿ ಕಡಲ್ಕೊರೆತ ಹೆಚ್ಚಾಗಿ ಮಂಗಳೂರಿನ ಬೈಕಂಪಾಡಿ ಸಮೀಪ ಕಾಂಕ್ರಿಟ್ ರಸ್ತೆ ಕೊಚ್ಚಿ ಹೋಗಿದ್ದು, ಅಪಾಯದ ಸ್ಥಿತಿಯಲ್ಲಿದ್ದ ಮನೆಯೊಂದು ಕುಸಿದಿದೆ. ಕಳೆದೊಂದು ವಾರದಿಂದ ಅರಬ್ಬಿ ಸಮುದ್ರದಲ್ಲಿ ಭಾರಿ ಅಲೆಗಳು ಉಂಟಾಗುತ್ತಿದ್ದು, ವಾರದ ಹಿಂದೆ ಇದೇ ಸ್ಥಳದಲ್ಲಿ ಮೀನು ದಕ್ಕೆ ಕೊಚ್ಚಿ ಹೋಗಿತ್ತು. ಸುಮಾರು ಮುನ್ನೂರು ಮನೆಗಳು ಇಲ್ಲಿನ ಕಡಲ ತೀರದಲ್ಲಿದ್ದು, ಹಲವರಿಗೆ ಮನೆ ಕುಸಿಯುವ ಭೀತಿ ಎದುರಾಗಿದೆ.
ಇದನ್ನೂ ಓದಿ | Rain fury: ಮುಂಗಾರು ಅಬ್ಬರಕ್ಕೆ ನಲುಗಿದ ಗುಜರಾತ್, ಮಹಾರಾಷ್ಟ್ರ, ತೆಲಂಗಾಣ; ಇನ್ನೂ ಇದೆ ಭಾರಿ ಮಳೆ