Site icon Vistara News

Wayanad Landslide: ಕೇರಳಕ್ಕೆ ಅಗತ್ಯವಿರುವ ಎಲ್ಲಾ ನೆರವನ್ನು ನಮ್ಮ ಸರ್ಕಾರ ನೀಡಲಿದೆ: ಸಿಎಂ ಸಿದ್ದರಾಮಯ್ಯ

Wayanad Landslide

ಬೆಂಗಳೂರು: ಕೇರಳದಲ್ಲಿ ಸಂಭವಿಸಿದ ಗುಡ್ಡ ಕುಸಿತ ಅವಘಡದಲ್ಲಿ 70ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದು, ಹಲವರು ಕಣ್ಮರೆಯಾಗಿರುವ ಸುದ್ದಿ ಕೇಳಿ ಎದೆ ನಲುಗಿತು. ಇಂತಹ ಸಂಕಷ್ಟದ ಸಮಯದಲ್ಲಿ ನೆರೆಯ ಕೇರಳ ಜನರ ಜೊತೆ ನಾವು ನಿಲ್ಲಲಿದ್ದೇವೆ. ಕೇರಳಕ್ಕೆ ಅಗತ್ಯವಿರುವ ಎಲ್ಲಾ ನೆರವನ್ನು ನಮ್ಮ ಸರ್ಕಾರ ನೀಡಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ದೇವರನಾಡು ಕೇರಳ (Kerala) ಮತ್ತೊಮ್ಮೆ ಭಾರಿ ಮಳೆಯ ಹೊಡೆತಕ್ಕೆ ಸಿಲುಕಿ ನಲುಗಿದೆ. ಅದರಲ್ಲಿಯೂ ವಯನಾಡಿನಲ್ಲಿ ನಡೆದ ಭೀಕರ ಭೂಕುಸಿತ (Wayanad Landslide) ದುರಂತದಲ್ಲಿ ಮೃತರ ಸಂಖ್ಯೆ 70ಕ್ಕೆ ಏರಿಕೆಯಾಗಿದೆ. ನೂರಾರು ಮಂದಿ ಅವಶೇಷದಡಿಯಲ್ಲಿ ಸಿಲುಕಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಗುಡ್ಡಗಾಡು ಪ್ರದೇಶವಾಗಿರುವ ಮೆಪ್ಪಡಿ (Meppadi) ಪ್ರದೇಶದಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಆಗುವ ಭೀತಿ ಎದುರಾಗಿದೆ. ಇದೀಗ ಎಲ್ಲಿ ನೋಡಿದರೂ ಮಣ್ಣಿನ ರಾಶಿಯೇ ಕಂಡು ಬಂದಿದ್ದು, ರಸ್ತೆ, ಸೇತುವೆ, ಮನೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಕಷ್ಟದ ಸಮಯದಲ್ಲಿ ನೆರೆಯ ಕೇರಳ ಜನರ ಜತೆ ನಾವು ನಿಲ್ಲಲಿದ್ದೇವೆ ಎಂದು ಹೇಳಿದ್ದಾರೆ.

ವಯನಾಡು ಭೂಕುಸಿತ; ಈವರೆಗೆ 250 ಜನರ ರಕ್ಷಣೆ

ವಯನಾಡಿನಲ್ಲಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF) ಸಿಬ್ಬಂದಿ, ಸರ್ಕಾರಿ ಸಂಸ್ಥೆ ಸಿಬ್ಬಂದಿ ಸೇರಿದಂತೆ ಮತ್ತು ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ರಕ್ಷಣಾ ಕಾರ್ಯದಲ್ಲಿ ಸಹಾಯ ಮಾಡಲು 43 ಭಾರತೀಯ ಸೇನಾ ಸಿಬ್ಬಂದಿಯ ತಂಡವನ್ನು ಸಹ ಸಜ್ಜುಗೊಳಿಸಲಾಗಿದೆ. ಇದೇ ವೇಳೆ ಸೇತುವೆ ಕುಸಿದಿರುವುದು ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿ ಪರಿಣಮಿಸಿದೆ. ಸರ್ಕಾರಿ ಮೂಲಗಳ ಪ್ರಕಾರ, ಈವರೆಗೆ ಗುಡ್ಡಗಾಡು ಪ್ರದೇಶಗಳಿಂದ 250 ಜನರನ್ನು ರಕ್ಷಿಸಲಾಗಿದೆ.

ಇದನ್ನೂ ಓದಿ | Kodi Mutt Swamiji: ಕೆಟ್ಟದ್ದೇ ಜಾಸ್ತಿ, ಪ್ರಕೃತಿ ವಿಕೋಪಗಳು ಮುಂದುವರಿಯುತ್ತವೆ: ಭಯಾನಕ ಭವಿಷ್ಯ ನುಡಿದ ಕೋಡಿಮಠ ಶ್ರೀ!

ಮಂಗಳವಾರ ಮುಂಜಾನೆ 2ರಿಂದ4 ಗಂಟೆಯ ನಡುವೆ ಸಂಭವಿಸಿದ ಭೂಕುಸಿತದಿಂದ ಮುಂಡಕೈ ಮತ್ತು ಚೂರಲ್‌ಮಾಲಾ ಪ್ರದೇಶದಲ್ಲಿ ವ್ಯಾಪಕ ಹಾನಿ ಸಂಭವಿಸಿದೆ. ಕುಸಿದ ಸೇತುವೆ, ಕೊಚ್ಚಿ ಹೋದ ರಸ್ತೆ ಮುಂಡಕೈಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿ ಪರಿಣಮಿಸಿದೆ. ಚೂರಲ್‌ಮಾಲಾದಲ್ಲಿ ಒಟ್ಟು 250 ಸಿಬ್ಬಂದಿ ಕಾರ್ಯ ಪ್ರವೃತ್ತರಾಗಿದ್ದಾರೆ.

Exit mobile version