ತುಮಕೂರು: ಸಿಎಂ ಸಿದ್ದರಾಮಯ್ಯ ಸಂಜೆ 6 ಗಂಟೆ ಮೇಲೆ ಎಲ್ಲೆಲ್ಲಿ ಹೋಗುತ್ತಿದ್ದರು, ನಮಗೆ ಗೊತ್ತಿಲ್ವಾ. ನಾವು ಅದರ ಬಗ್ಗೆ ಚರ್ಚೆ ಮಾಡುತ್ತೀವಾ? ಈಗಲೂ ಎಲ್ಲೆಲ್ಲಿ ಹೋಗ್ತಾರೆ, ನಾವು ಚರ್ಚೆ ಮಾಡಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ನಾವು ತಾಜ್ ವೆಸ್ಟೆಂಡ್‌ನಲ್ಲಿ ಕುಳಿತು ಸರ್ಕಾರ ನಡೆಸುತ್ತಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಕುಣಿಗಲ್ ತಾಲೂಕಿನ ಹಂಗರನಹಳ್ಳಿ ವಿದ್ಯಾ ಚೌಡೇಶ್ವರಿ ಸನ್ನಿಧಿಗೆ ಭೇಟಿ ನೀಡಿದ್ದಾಗ ಪ್ರತಿಕ್ರಿಯಿಸಿರುವ ಅವರು, ಪರಮೇಶ್ವರ್ ಅವರಿಗೆ ನಾನು ಹೇಳಲು ಇಷ್ಟಪಡುತ್ತೀನಿ, ಅವರ ಮುಖ್ಯಮಂತ್ರಿಗಳು ದಿನವೂ ಯಾಕೆ ವೆಸ್ಟೆಂಡ್ ಹೋಟೆಲ್‌ನ ಭಜನೆ ಮಾಡುತ್ತಾರೆ, ಅದನ್ನು ಮೊದಲು ನಿಲ್ಲಿಸುವುದಕ್ಕೆ ಹೇಳಿ. ವೆಸ್ಟೆಂಡ್‌ನಲ್ಲಿ ನಾನು ಬೇರೆ ವ್ಯವಹಾರ ನಡೆಸಲು ಹೋಗಿದ್ನಾ? ಬೇಕಿದ್ದರೆ ತನಿಖೆ ಮಾಡಲಿ, ಪ್ರತಿ ರೂಮ್ ಮುಂದೆ ಸಿಸಿಟಿವಿ ಕ್ಯಾಮೆರಾಗಳು ಇರುತ್ತವಲ್ಲವೇ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್‌ಗೆ ಕಾರಣ ಏನು ಎಂದು ಜನರಿಗೆ ಉತ್ತರ ಕೊಡಿ ಎಂದರೆ ಇವರ ಬಳಿ ಉತ್ತರವಿಲ್ಲ, ಯಾಕೆ ಕಲ್ಲಿದ್ದಲು ಖರೀದಿ ಮಾಡಿಲ್ಲ, ಅದಕ್ಕೆ ಉತ್ತರ ಕೊಡಿ ಎಂದ ಅವರು, ನಾನು ಸರ್ಕಾರ ಮಾಡಬೇಕು ಎಂದು ಯಾವುದೇ ಧ್ರವೀಕರಣ ರಾಜಕೀಯ ಮಾಡುತ್ತಿಲ್ಲ. ಕಾಂಗ್ರೆಸ್‌ನವರು ತಮ್ಮಲ್ಲಿನ ಗುಂಪುಗಾರಿಕೆ ಸರಿ ಮಾಡಿಕೊಳ್ಳಲಿ. ನಮ್ಮ ಶಾಸಕರನ್ನು ಸೆಳೆಯುತ್ತೇವೆ ಎನ್ನುತ್ತಾರೆ, ಬನ್ನಿ ಬನ್ನಿ ಅಂತ ನಮ್ಮ ಶಾಸಕರ ಕೈಕಾಲು ಹಿಡೀಯುತ್ತಾ ಇದ್ದಾರಾ? ಮೊದಲು ಅವರ ಮನೆ ಸರಿ ಮಾಡಿಕೊಳ್ಳಲಿ ಎಂದು ಕಿಡಿಕಾರಿದರು.
ರಾಮನಗರ ಮಣ್ಣಿನ ಶಕ್ತಿಯನ್ನು ಹಾಳು ಮಾಡುವ ಹುನ್ನಾರ
ರಾಮನಗರ ಜಿಲ್ಲೆ ಬೆಂಗಳೂರಿನೊಂದಿಗೆ ವಿಲೀನಗೊಳಿಸುವ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ಏನು ಮಾಡಬೇಕು ಅಂತ ರಾಮನಗರದ ಚಾಮುಂಡೇಶ್ವರಿ ದೇವಿಯೇ ನಿರ್ಧಾರ ಮಾಡುತ್ತಾಳೆ. ಯಾವ ಕಾರಣಕ್ಕೋಸ್ಕರ ರಾಮನಗರ ಜಿಲ್ಲೆಯಾಗಿದೆ, ನಂತರ ರಾಮನಗರ ಯಾವ ರೀತಿ ಅಭಿವೃದ್ಧಿ ಆಗಿದೆ ಎಂಬುವುದು ಜನತೆಗೆ ಗೊತ್ತಿದೆ. ನಾನು ನನ್ನ ಹೆಸರು ಮಾಡಿಕೊಳ್ಳಲು ಜಿಲ್ಲೆ ಮಾಡಿಲ್ಲ, ಕೆಂಗಲ್ ಹನುಮಂತಯ್ಯ, ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾರೆ. ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ರಾಮನಗರ ಮಣ್ಣಿನ ಶಕ್ತಿಯನ್ನು ಹಾಳು ಮಾಡಬೇಕು ಎನ್ನುವುದು ಈ ವ್ಯಕ್ತಿಗಳ ಹುನ್ನಾರ ಎಂದು ಪರೋಕ್ಷವಾಗಿ ಡಿ.ಕೆ. ಶಿವಕುಮಾರ್ ವಿರುದ್ಧ ಎಚ್‌ಡಿಕೆ ಕಿಡಿ ಕಾರಿದರು.
ರಾಮನಗರದಲ್ಲಿ ದೇವೇಗೌಡರು ಪ್ರಥಮ ಬಾರಿ ರಾಜಕೀಯ ಪ್ರವೇಶ ಮಾಡಿದಾಗ, ಆ ಜಿಲ್ಲೆಯಲ್ಲಿದ್ದ ಬಡತನ, ಈಗ ಎಷ್ಟು ಸುಧಾರಣೆ ಆಗಿದೆ ಎಂಬುವುದು ಜನರಿಗೆ ಗೊತ್ತು. ಬೆಂಗಳೂರಿನಲ್ಲಿ ಕೆಂಗಲ್ ಹನುಮಂತಯ್ಯ ಕಟ್ಟಿಸಿದ ವಿಧಾನಸೌಧದ ನೆರಳು ರಾಮನಗರಕ್ಕೆ ಬೀಳುತ್ತದೆ, ಅಂತಹ ಸ್ಥಳದಲ್ಲಿ ವಿದ್ಯುತ್ ಶಕ್ತಿ, ರಸ್ತೆಗಳಿರಲಿಲ್ಲ. ಈಗ ಸಾಕಷ್ಟು ಅಭಿವೃದ್ಧಿ ಆಗಿದೆ. ಅದೆಲ್ಲಾ ದೇವೇಗೌಡರ ಕುಟುಂಬದ ಕೊಡುಗೆ. ಇವತ್ತು ಪುನಃ ಬೆಂಗಳೂರು ನಗರಕ್ಕೆ ತೆಗೆದುಕೊಂಡು ಹೋಗುತ್ತಿರುವುದು ಯಾವ ಕಾರಣಕ್ಕೆ ಎಂದು ಪ್ರಶ್ನಿಸಿದರು.
ರಾಮನಗರವನ್ನೂ ಸೇರಿಸಿಕೊಂಡರೆ ಸ್ಕ್ವೇರ್ ಫೀಟ್‌ಗೆ 75-80 ಫಿಕ್ಸ್ ಮಾಡಿಕೊಂಡಿದ್ದನ್ನು ಇಲ್ಲಿಗೂ ಅಪ್ಲೈ ಮಾಡಬೇಕು ಎಂಬುವುದು ಅವರ ಹುನ್ನಾರ. ಅಲ್ಲಿಯ ಕಲ್ಲನ್ನು ದೇಶ ವಿದೇಶಗಳಿಗೆ ಸಾಗಿಸಿ ಗುಡ್ಡಗಳನ್ನೆಲ್ಲ ನುಂಗಿ ನೀರು ಕುಡಿದಿದ್ದಾಯ್ತು. ಇಲ್ಲಿಯ ಭೂಮಿಯ ಬೆಲೆ ಏರಿಸುತ್ತೀನಿ ಅಂತ ಹೇಳುತ್ತಾರೆ. ಅದು ಇವರು ಉದ್ಧಾರ ಆಗಲೆಂದೋ ಅಥವಾ ರೈತರು ಉದ್ದಾರ ಆಗುವುದಕ್ಕೋ? ರಾಮನಗರ ಜಿಲ್ಲೆಯಲ್ಲಿ ನಾನೇನು ಆಸ್ತಿ ಮಾಡಲು ಹೋದೆನಾ, ಜನಗಳ ಪ್ರೀತಿ ಅದು. ಬಡತನ ನಿವಾರಣೆ, ಅಭಿವೃದ್ಧಿ ಮಾಡಲು ಪ್ರತ್ಯೇಕ ಜಿಲ್ಲೆ ರಚನೆ ಮಾಡಿದ್ದೆ. ಜಿಲ್ಲೆ ರಚನೆ ಆದಮೇಲೆ ಎಷ್ಟು ಅಭಿವೃದ್ಧಿ ಆಗಿದೆ ಎಂಬುವುದು ಕಣ್ಣಿಗೆ ಕಾಣುತ್ತದೆ ಎಂದರು.
ಬೆಂಗಳೂರಿನೊಂದಿಗೆ ರಾಮನಗರ ಮರುವಿಲೀನಗೊಳಿಸುವ ಈ ತೀರ್ಮಾನಕ್ಕೆ ಲೋಕಸಭಾ ಚುನಾವಣೆಯಲ್ಲಿ ರಾಮನಗರದ ಜನತೆ ತಕ್ಕ ಉತ್ತರ ಕೊಡುತ್ತಾರೆ. ರಾಮನಗರ, ಚನ್ನಪಟ್ಟಣದಿಂದ ದಿನನಿತ್ಯ ಬೆಂಗಳೂರಿಗೆ ಬಂದು ಸರ್ಕಾರಿ ಕೆಲಸಗಳನ್ನು ಮಾಡಿಸಿಕೊಳ್ಳಲು ಆಗುತ್ತಿರಲಿಲ್ಲ. ಅದಕ್ಕೆ ಜಿಲ್ಲೆಯನ್ನು ಮಾಡಿದ್ದು, ಅವರ ದುರ್ಬುದ್ಧಿಗೆ ಜನ ಉತ್ತರ ಕೊಡುತ್ತಾರೆ. ಪಂಚರಾಜ್ಯ ಚುನಾವಣೆ ಬಳಿಕ ನಾನು ದೆಹಲಿಗೆ ಹೋಗುತ್ತೇನೆ ಎಂದು ತಿಳಿಸಿದರು.
ಮತ್ತೆ ಸಿಎಂ ಆಗೋದು, ಬಡೋದು ತಾಯಿ ಚೌಡೇಶ್ವರಿ ಇಚ್ಛೆ
ನನ್ನ ಆರೋಗ್ಯ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ವಿದ್ಯಾ ಚೌಡೇಶ್ವರಿ ದೇವಿ ಬಳಿ ಹರಕೆ ಹೊತ್ತಿದ್ದರು. ಇವತ್ತು ಬಂದು ಆ ಹರಕೆ ತೀರಿಸಿದ್ದೇನೆ. ಜತೆಗೆ ನಾಡಿನ ಜನತೆಗೆ ಒಳ್ಳೆಯದಾಗಲಿ ಎಂದು ಹರಕೆ ಸಲ್ಲಿಸಿದ್ದೇನೆ. ರೈತರು ಸಂಕಷ್ಟದಿಂದ ಪಾರಾಗಲಿ ಎಂದು ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಿದ್ದೇನೆ. ನನ್ನ ತಂದೆ-ತಾಯಿ ಆರೋಗ್ಯ ಸ್ಥಿರವಾಗಿರಲಿ, ತಂದೆ ಅವರು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದೇನೆ. ನಾನು ಮತ್ತೆ ಮುಖ್ಯಮಂತ್ರಿಯಾಗುವುದು, ಬಿಡುವುದು ತಾಯಿ ಚೌಡೇಶ್ವರಿ ಇಚ್ಛೆ ಎಂದರು.