ಮುಂಬೈ: ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದ ದಿನವೇ ಮಹಾಮೇಳಾವ್ ಆಯೋಜಿಸುವ ಮೂಲಕ ಎಂಇಎಸ್ ಉದ್ಧಟತನ ಮೆರೆದಿದೆ. ಎಂಇಎಸ್ ಉದ್ಧಟತನಕ್ಕೆ ಮಹಾರಾಷ್ಟ್ರ ಸರ್ಕಾರವೇ ಬೆಂಬಲ ಸೂಚಿಸಿದ್ದು, ಎನ್‌ಸಿಪಿ, ಕಾಂಗ್ರೆಸ್ ಹಾಗೂ ಶಿವಸೇನೆ (ಉದ್ಧವ್ ಠಾಕ್ರೆ ಬಣ) ನಾಯಕರು ಬೆಳಗಾವಿಗೆ ಬರಲು ಯತ್ನಿಸಿದ್ದಾರೆ. ಇದರ ಬೆನ್ನಲ್ಲೇ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೂಡ ಕರ್ನಾಟಕದಲ್ಲಿರುವ ಮರಾಠಿಗರ ಹಕ್ಕುಗಳ ಕುರಿತು ಮಾತನಾಡುವ ಮೂಲಕ ಗಡಿ ವಿವಾದದ (Border Dispute) ಬೆಂಕಿಗೆ ತುಪ್ಪ ಸುರಿಯುವ ಯತ್ನ ಮಾಡಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಅವರು, “ಕರ್ನಾಟಕದಲ್ಲಿರುವ ಮರಾಠಿಗರ ಹಕ್ಕುಗಳ ರಕ್ಷಣೆಗೆ ಬಿಜೆಪಿ ಹಾಗೂ ಶಿವಸೇನೆ (ಏಕನಾಥ್ ಶಿಂಧೆ ಬಣ) ಸರ್ಕಾರ ಬದ್ಧವಾಗಿದೆ. ಹಕ್ಕುಗಳ ರಕ್ಷಣೆಗಾಗಿ ಶೀಘ್ರದಲ್ಲಿಯೇ ಮೂವರು ಸಚಿವರ ಸಮಿತಿ ರಚಿಸಲಾಗುವುದು. ಕರ್ನಾಟಕ ಪಾಕಿಸ್ತಾನದಲ್ಲಿಲ್ಲ ನಿಜ, ಆದರೆ, ಮರಾಠಿಗರ ರಕ್ಷಣೆಯು ನಮ್ಮ ಸರ್ಕಾರದ ಜವಾಬ್ದಾರಿಯಾಗಿದೆ” ಎಂದು ಹೇಳಿದ್ದಾರೆ.
ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಬಿಕ್ಕಟ್ಟು ಬಹು ವರ್ಷಗಳಿಂದ ಇದೆ. ಆಗಾಗ, ಎಂಇಎಸ್ ಪುಂಡರು, ಮಹಾರಾಷ್ಟ್ರ ಸರ್ಕಾರವು ವಿವಾದದ ಬೆಂಕಿಗೆ ತುಪ್ಪ ಸುರಿಯುತ್ತಿದೆ.. ಅಷ್ಟಕ್ಕೂ, ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯ ವಿಚಾರಣೆಯೇ ನಡೆದಿಲ್ಲ. ಆದರೂ, ಮಹಾರಾಷ್ಟ್ರ ಸರ್ಕಾರ ದಿನಕ್ಕೊಂದು ಹೇಳಿಕೆ ನೀಡುತ್ತಿದೆ. ಮತ್ತೊಂದೆಡೆ, ಸುಪ್ರೀಂ ಕೋರ್ಟ್ ಆದೇಶದತನಕ ಗಡಿ ಬಿಕ್ಕಟ್ಟಿನ ಚರ್ಚೆ, ವಾದ ಬೇಡ ಎಂದು ಅಮಿತ್ ಶಾ ಅವರು ಎರಡೂ ರಾಜ್ಯಗಳಿಗೆ ಸೂಚಿಸಿದ್ದಾರೆ. ಹೀಗಿದ್ದರೂ, ಮಹಾರಾಷ್ಟ್ರ ಉದ್ಧಟತನ ತೋರುವುದನ್ನು ನಿಲ್ಲಿಸಿಲ್ಲ. ಇನ್ನು ಬೆಳಗಾವಿಗೆ ಆಗಮಿಸಲು ಯತ್ನಿಸಿದ ಶಿವಸೇನೆ, ಎನ್‌ಸಿಪಿ, ಕಾಂಗ್ರೆಸ್ ಮುಖಂಡರನ್ನು ಕರ್ನಾಟಕದ ಪೊಲೀಸರು ನಿಪ್ಪಾಣಿಯಲ್ಲಿಯೇ ತಡೆದಿದ್ದಾರೆ.
ಇದನ್ನೂ ಓದಿ | Border Dispute | ಎಂಇಎಸ್ ಮಹಾಮೇಳಾವ್‌ಗೆ ರಾಜ್ಯ ಸರ್ಕಾರ ಬ್ರೇಕ್; ನಿಪ್ಪಾಣಿ ಗಡಿಗೆ ಬಂದಿದ್ದ ಮಹಾ ನಾಯಕರ ಹಿಮ್ಮೆಟ್ಟಿದ ಪೊಲೀಸರು