Site icon Vistara News

ಮರಗಳ್ಳರಿಗೆ ಪ್ರತಾಪ್‌ಸಿಂಹ ಬೆಂಬಲ ಅಂತ ನಾವು ಹೇಳಬಹುದಲ್ವಾ: ಸಚಿವ ರಾಜಣ್ಣ ಕಿಡಿ

Pratap simha and KN Rajanna

ಹಾಸನ: ಯಾರೇ ತಪ್ಪು ಮಾಡಲಿ, ಕಾಂಗ್ರೆಸ್‌ನವರೇ ಆಗಲಿ, ಇನ್ನೊಂದು ಪಕ್ಷದವರು ಮಾಡಿರಲಿ, ಕಾನೂನು ಎಲ್ಲರಿಗೂ ಒಂದೇ. ಯಾರು ತಪ್ಪಿತಸ್ಥರಿರುತ್ತಾರೆ ಅವರಿಗೆ ಕಾನೂನಿನಡಿ ಶಿಕ್ಷೆ ಆಗುತ್ತದೆ. ಯಾವ್ಯಾವುದೋ ಕಾರಣಕ್ಕೋಸ್ಕರ ಯಾರ್ಯಾರನ್ನೋ ಟೀಕೆ ಮಾಡುವುದು ಸರಿಯಾದ ಪದ್ಧತಿ ಅಲ್ಲ. ಮರಗಳ್ಳರಿಗೆ ಪ್ರತಾಪ್‌ಸಿಂಹ ಬೆಂಬಲ ಅಂತ ನಾವು ಹೇಳಬಹುದಲ್ವಾ ಎಂದು ಮೈಸೂರು ಸಂಸದ ಪ್ರತಾಪ್‌ಸಿಂಹ (Pratap Simha) ವಿರುದ್ಧ ಸಹಕಾರ ಸಚಿವ ಕೆ.ಎನ್.ರಾಜಣ್ಣ (KN Rajanna) ವಾಗ್ದಾಳಿ ನಡೆಸಿದ್ದಾರೆ.

ನನ್ನ ಕುಟುಂಬವನ್ನು ಟಾರ್ಗೆಟ್ ಮಾಡಿ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಸಿದ್ದರಾಮಯ್ಯ ಷಡ್ಯಂತ್ರ ಹೂಡಿದ್ದಾರೆ ಎಂಬ ಸಂಸದ ಪ್ರತಾಪ್‌ ಸಿಂಹ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅವರು, ಕಾನೂನಿನಂತೆ ಕ್ರಮವನ್ನು ತೆಗೆದುಕೊಳ್ಳಲು ಯಾವೆಲ್ಲಾ ಅಧಿಕಾರಿಗಳು ಸಹಕರಿಸಿದ್ದಾರೆ ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಕಾನೂನು ವಿರೋಧವಾಗಿ ಯಾವೆಲ್ಲಾ ಅಧಿಕಾರಿಗಳು ಕಾಡುಗಳ್ಳರಿಗೆ ಪ್ರೋತ್ಸಾಹ ಕೊಟ್ಟಿದ್ದಾರೋ ಅವರ ಮೇಲೆ ಈಗಾಗಲೇ ಕ್ರಮ ಆಗಿದೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್‌ನವರು ಮರ ತೆಗೆದುಕೊಂಡು ಹೋಗಿ ಅಲ್ಲಿ ಇಟ್ಟು ಅವರ ಅಣ್ಣ, ತಮ್ಮನನ್ನೋ ಆ ಕೇಸ್‌ನಲ್ಲಿ ಸಿಲುಕಿಸಿದ್ದಾರಾ? ಅವರೇ (ವಿಕ್ರಮ್‌ ಸಿಂಹ) ಕತ್ತರಿಸಿದ್ದಾರೆ, ಅಲ್ಲೇ ಸಿಕ್ಕಿದ್ದಾರೆ. ಇದು ರಾಜಕೀಯಪ್ರೇರಿತ ಅಂದರೆ ಯಾರಾದರೂ ಒಪ್ಪುತ್ತಾರಾ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ | CM Siddaramaiah: ಸಿದ್ದರಾಮಯ್ಯ ಎಂದಾದರೂ ರಾಮನಿಗೆ ಸಮನಾಗಲು ಸಾಧ್ಯವೇ?; ಬಿಜೆಪಿ ವಾಗ್ದಾಳಿ

ಇವರ ತಮ್ಮ ಕಳ್ಳ ಅಂತ ಜನರಲ್ಲಿ ಮನಸ್ಸಿನಲ್ಲಿದೆ. ಅಂತಹವರಿಗೆ ಇವರು ಬೆಂಬಲ ಕೊಡುತ್ತಾರೆ ಎಂದು ನಾವು ಭಾವಿಸಬಹುದಾ? ಮರಗಳ್ಳರಿಗೆ ಪ್ರತಾಪ್‌ಸಿಂಹನ ಬೆಂಬಲ ಅಂತ ನಾವು ಹೇಳಬಹುದಲ್ಲಾ? ಯಾವ್ಯಾವುದೋ ಕಾರಣಕ್ಕೋಸ್ಕರ ಯಾರ‍್ಯಾರನ್ನೋ ಟೀಕೆ ಮಾಡುವುದು ಸರಿಯಾದ ಪದ್ಧತಿ ಅಲ್ಲ. ಈಗಾಗಲೇ ಕಾನೂನು ಕ್ರಮ ಆಗಿವೆ. ಕೋರ್ಟ್‌ನಲ್ಲಿ ನಿರ್ದೋಷಿ ಅಂತ ಹೊರಬರಲಿ, ಯಾರು ಬೇಡ ಎನ್ನುತ್ತಾರೆ ಎಂದು ಕಿಡಿಕಾರಿದ್ದಾರೆ.

ರಾಮಮಂದಿರ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರದ್ದೇ ಒಂದು ಅಜೆಂಡಾ ಇರುತ್ತದೆ. ಯಾರಿಗೆ ಕರೆಯಬೇಕು, ಯಾರನ್ನು ಕರೆಯಬಾರದು, ಇವೆಲ್ಲಾ ಇರುತ್ತವೆ. ಬಿಜೆಪಿ ಅಜೆಂಡಾನಾ ನಾವ್ಯೇಕೆ ಪ್ರಶ್ನೆ ಮಾಡಲು ಹೋಗಬೇಕು. ಅಲ್ಲಿ ರಾಮಮಂದಿರಕ್ಕೆ ಹೋಗಿ ರಾಮನ ದರ್ಶನ ಮಾಡಿ, ರಾಮನ ಪೂಜೆ ಮಾಡಿದರೆ ಮಾತ್ರ ಆಶೀರ್ವಾದನಾ? ನಮ್ಮೂರಿನಲ್ಲಿರುವ ರಾಮನನ್ನು ಪೂಜೆ ಮಾಡಿದ್ರೆ ನಮಗೆ ರಾಮ ಆಶೀರ್ವಾದ ಸಿಗುವುದಿಲ್ಲವಾ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ | Ram Janmabhoomi: ರಾಮ ಭಕ್ತರ ಟಾರ್ಗೆಟ್‌; ಸರ್ಕಾರದ ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು

ದೇವರು ಸರ್ವಾಂತರಯಾಮಿ, ಎಲ್ಲಾ ಕಡೆ ಇದ್ದಾನೆ. ನಮ್ಮಲ್ಲೂ ಇದ್ದಾನೆ, ನಿಮ್ಮಲ್ಲೂ ಇದ್ದಾನೆ, ಎಲ್ಲಾ ಜಾಗದಲ್ಲೂ ಇದ್ದಾನೆ. ನಾವು ತೃಪ್ತಿಗೆ, ಮನಸ್ಸಿನ ನೆಮ್ಮದಿಗೆ ದೇವಸ್ಥಾನಕ್ಕೆ ಹೋಗೋದು. ಅಲ್ಲಿ ಶ್ರೀರಾಮದ ದರ್ಶನಕ್ಕೆ, ಪೂಜೆಗೆ ಹೋಗಿಬಿಟ್ಟರೆ ಆಶೀರ್ವಾದ ಆಗಿ ಬಿಡುತ್ತಾ? ಇಲ್ಲಿರುವ ಶ್ರೀರಾಮನ ದೇವಸ್ಥಾನಕ್ಕೆ ಹೋದರೆ ಶ್ರೀರಾಮ ಆಶೀರ್ವಾದ ಸಿಗುವುದಿಲ್ಲಾವಾ? ಅವರವರ ನಂಬಿಕೆಗೆ ಅನುಗುಣವಾಗಿ ಅವರವರು ನಡೆದುಕೊಳ್ಳುತ್ತಾರೆ. ಅದರಲ್ಲಿ ಸರಿ ತಪ್ಪು ಅಂತ ವ್ಯಾಖ್ಯಾನ ಮಾಡಲು ಹೋಗಲ್ಲ. ಅವರದ್ದು ಸಣ್ಣತನ ಅಂತ ಹೇಳೋಣ, ದೊಡ್ಡತನ ಅಂತ ಹೇಳೋಣ, ನೀವೇ ಹೇಳಿ ಎಂದು ವರದಿಗಾರರನ್ನು ಕೇಳಿದ್ದಾರೆ.

Exit mobile version