ನವ ದೆಹಲಿ: ಜಡ್ಜ್ ಏನು ಹೇಳುತ್ತಾರೋ ಅದನ್ನು ನಾವು ಕೇಳಬೇಕು. ಅವರು ಏನು ಕೊಟ್ಟರೂ ಅದು ಪ್ರಸಾದವೇ ಎಂದು ಕೆಪಿಸಿಸಿ ಅಧ್ಯಕ್ಷ, ಮಾಜಿ ಸಚಿವ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದರು.
ನವ ದೆಹಲಿಯ ಸಫ್ದರ್ ಜಂಗ್ ಫ್ಲಾಟ್‌ನಲ್ಲಿ ಹಣ ಸಿಕ್ಕ ಪ್ರಕರಣಕ್ಕೆ ಸಂಬಂಧಪಟ್ಟಂತೆ ರೋಜ್ ಅವೆನ್ಯೂ ಕೋರ್ಟ್‌ನಲ್ಲಿ ವಿಚಾರಣೆ ಎದುರಿಸಿ ಹೊರಬಂದ ಅವರು, ತಮ್ಮ ವಿರುದ್ಧ ಇರುವ ಪ್ರಕರಣಗಳ ವಿಚಾರಣೆ ಕುರಿತು ಈ ಪ್ರತಿಕ್ರಿಯೆಯನ್ನು ನೀಡಿದರು. ಈ ಮೂಲಕ ನ್ಯಾಯಾಲಯದ ತೀರ್ಮಾನಕ್ಕೆ ತಾವು ಬದ್ಧ ಎಂದು ಹೇಳಿದರು.
ಎರಡನೇ ಇಸಿಆರ್ ವಿರುದ್ಧ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೆ. ಅದರ ವಿಚಾರಣೆಗೆ ನಾನು ಬಂದಿದ್ದೇನೆ. ಆದರೆ, ವಿಚಾರಣೆ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಇದನ್ನೂ ಓದಿ | Election 2023 | ಕೊಪ್ಪಳದ 5 ಕ್ಷೇತ್ರದಲ್ಲಿ ಅಭ್ಯರ್ಥಿ ಹೆಸರು ಘೋಷಿಸಿದ್ದ ಸಿದ್ದು ವಿರುದ್ಧ ಎಐಸಿಸಿಗೆ ದೂರು; ಡಿಕೆಶಿ ಅಸಮಾಧಾನ
ಇನ್ನು ಜಾರಿ ನಿರ್ದೇಶನಾಲಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಡಿ.ಕೆ. ಶಿವಕುಮಾರ್, ಇ.ಡಿ ದಾಖಲೆಗಳನ್ನು ನೀಡುತ್ತಿಲ್ಲ. ಅಲ್ಲದೆ, ನಾನು ವಿದೇಶಕ್ಕೆ ತೆರಳಲು ಅನುಮತಿ ಕೇಳಿದ್ದೇನೆ. ಕಾರ್ಯಕ್ರಮವೊಂದಕ್ಕೆ ದುಬೈ ತೆರಳಬೇಕಿದ್ದು, ನ್ಯಾಯಾಲಯಕ್ಕೆ ಕೋರಿದ್ದೇನೆ. ಇದರ ಅರ್ಜಿ ವಿಚಾರಣೆಯನ್ನು ನ. ೨೬ಕ್ಕೆ ಮುಂದೂಡಲಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಅಕ್ರಮ ಹಣ ಸಿಕ್ಕ ಪ್ರಕರಣ ಜ.೧೮ಕ್ಕೆ ಮುಂದೂಡಿಕೆ
ರೋಜ್ ಅವೆನ್ಯೂ ಕೋರ್ಟ್‌ನಲ್ಲಿ ಸಫ್ದರ್ ಜಂಗ್ ಫ್ಲಾಟ್‌ನಲ್ಲಿ ಹಣ ಸಿಕ್ಕ ಪ್ರಕರಣದ ವಿಚಾರಣೆಯು ಬುಧವಾರ ನಡೆದಿದ್ದು, ಇದರ ವಿಚಾರಣೆಯನ್ನು ಜನವರಿ 18ಕ್ಕೆ ಮುಂದೂಡಿದೆ. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ಇ.ಡಿ) ಈಗಾಗಲೇ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ.
ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಪ್ರಕರಣ
ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಪ್ರಕರಣವನ್ನು ಜಾರಿ ನಿರ್ದೇಶನಾಲಯವು ದಾಖಲಿಸಿತ್ತು. ಡಿ.ಕೆ. ಶಿವಕುಮಾರ್ ಅವರು, ಇ.ಡಿ. ಕ್ರಮವನ್ನು ದೆಹಲಿಯ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ನ್ಯಾಯಮೂರ್ತಿ ಉದಯ್ ಗುಪ್ತ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಿದೆ. ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಮಾಡಲಾಗಿದೆ ಎಂದು ಸಿಬಿಐ ಕೂಡಾ ಪ್ರಕರಣವನ್ನು ದಾಖಲಿಸಿತ್ತು. ಇದನ್ನು ಡಿ.ಕೆ. ಶಿವಕುಮಾರ್ ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ | Voter Data | ಮತಪಟ್ಟಿ, ಜಾತಿಗಣತಿ ಕುರಿತು ಕ್ರಮ ತಗೊಳ್ಳಿ; ಮಾನನಷ್ಟ ಕೇಸನ್ನೂ ಹಾಕಿ ಎಂದ ಡಿ.ಕೆ. ಶಿವಕುಮಾರ್