ಬೆಂಗಳೂರು: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರವನ್ನು ಸ್ಫೋಟಿಸಿ ಬಾಬ್ರಿ ಮಸೀದಿ ನಿರ್ಮಿಸಲು ಇತ್ತೀಚೆಗಷ್ಟೇ ನಿಷೇಧಕ್ಕೀಡಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI Plot) ಸಂಚು ರೂಪಿಸಿದೆ ಎಂಬ ಮಾಹಿತಿ ಲಭ್ಯವಾದ ಬೆನ್ನಲ್ಲೇ ರಾಜ್ಯದಲ್ಲೂ ಸಂಘಟನೆ ಮೇಲೆ ಕಣ್ಣಿಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
“ಪಿಎಫ್‌ಐ ಒಂದು ದೇಶದ್ರೋಹ ಹಾಗೂ ದೇಶವಿರೋಧಿ ಸಂಘಟನೆಯಾಗಿದೆ. ದೇಶಾದ್ಯಂತ ವಿಧ್ವಂಸಕ, ಭಯೋತ್ಪಾದನೆ ಕೃತ್ಯ ಎಸಗಲು ಅದು ಸಂಚು ರೂಪಿಸಿದೆ. ಮುಂಬೈ ಮಾದರಿಯಲ್ಲಿ ಸರಣಿ ಬಾಂಬ್ ಸ್ಫೋಟಿಸುವ ಕುರಿತು ಸಂಚು ರೂಪಿಸಿರುವುದು ಈಗ ಬಯಲಾಗಿದೆ. ಭಾರತದ ಅಸ್ಮಿತೆಯನ್ನು ಪ್ರತಿನಿಧಿಸುವ ರಾಮಮಂದಿರವನ್ನು ಧ್ವಂಸ ಮಾಡುವುದು ಅದರ ದುರುದ್ದೇಶವಾಗಿದೆ. ಆದರೆ, ಇದಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡುವುದಿಲ್ಲ. ಸದ್ಯ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಪಿಎಫ್‌ಐ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ” ಎಂದು ತಿಳಿಸಿದ್ದಾರೆ.
ಕೇಂದ್ರದಿಂದ ಅಜೆಂಡಾ ಜಾರಿ ವಿಫಲ
“ಪಿಎಫ್‌ಐ ನಿಷೇಧಿಸಿದ ಬಳಿಕ ಹಲವು ಸಂಗತಿಗಳು ಬೆಳಕಿಗೆ ಬರುತ್ತಿವೆ. ಪಿಎಫ್‌ಐ ಸಂಘಟನೆಯು ದೇಶವನ್ನು ಇಸ್ಲಾಮೀಕರಣ ಮಾಡುವ ಗುರಿ ಹೊಂದಿತ್ತು. ಈಗ ರಾಮಮಂದಿರ ಧ್ವಂಸದ ಕುರಿತು ರೂಪಿಸಿದ ಸಂಚು ಬೆಳಕಿಗೆ ಬಂದಿದೆ. ಆದರೆ, ಇದೆಲ್ಲ ಅಜೆಂಡಾವನ್ನು ಜಾರಿಗೊಳಿಸುವ ತಂತ್ರಗಳನ್ನು ಕೇಂದ್ರ ಸರ್ಕಾರ ವಿಫಲಗೊಳಿಸಿದೆ. ಹಾಗೆಯೇ, ತನಿಖಾ ಸಂಸ್ಥೆಗಳಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ” ಎಂದು ಇಂಧನ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿ ಇಲ್ಲ ಎಂದ ಆರಗ ಜ್ಞಾನೇಂದ್ರ
“ಪಿಎಫ್‌ಐ ಸಂಚು ಕುರಿತು ಈಗಷ್ಟೇ ಮಾಹಿತಿ ಬಂದಿದೆ. ಇದರ ಕುರಿತು ಹೆಚ್ಚಿನ ವಿವರ ಲಭ್ಯವಾಗಿಲ್ಲ. ಮಾಹಿತಿ ಪಡೆದು ಮಾತನಾಡುತ್ತೇನೆ” ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. “ಈಗಾಗಲೇ ಪಿಎಫ್‌ಐನ ಹಲವು ಕಾರ್ಯಕರ್ತರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ದೇಶದ ಏಕತೆ, ಸಮಗ್ರತೆಗೆ ಧಕ್ಕೆ ತರಲು ಯತ್ನಿಸುವವರನ್ನು ನಮ್ಮ ಸರ್ಕಾರ ಬಿಡುವುದಿಲ್ಲ” ಎಂದು ತಿಳಿಸಿದರು.
ಏನಿದು ಪ್ರಕರಣ?
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರವನ್ನು ಧ್ವಂಸಗೊಳಿಸಿ, ಬಾಬ್ರಿ ಮಸೀದಿ ನಿರ್ಮಿಸಲು ಪಿಎಫ್‌ಐ ಸಂಚು ರೂಪಿಸಿದೆ ಎಂದು ತಿಳಿದುಬಂದಿದೆ. ಹಾಗೆಯೇ, ೨೦೪೭ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡುವುದು ಸಹ ಇವರ ಉದ್ದೇಶವಾಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರವು ಸಂಘಟನೆಯನ್ನು ನಿಷೇಧಿಸಿದ್ದು ಹಲವು ಕಾರಣಗಳಿಂದಾಗಿ ಇಂತಹ ವಿಧ್ವಂಸಕ ಕೃತ್ಯಗಳಲ್ಲಿ ತೊಡಗುವುದು ಇದರ ಉದ್ದೇಶವಾಗಿದೆ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ | Telegram terror | ಟೆಲಿಗ್ರಾಂನಲ್ಲಿ ಪಿಎಫ್‌ಐ ರಹಸ್ಯ ಮಾಹಿತಿ ವಿನಿಮಯ, ಆ್ಯಪ್ ಮೇಲೆ ಕಣ್ಣಿಡಲು ಸೂಚನೆ