Site icon Vistara News

Praveen Nettaru: ಆಕ್ರೋಶದ ಬೆನ್ನಲ್ಲೇ ಔದಾರ್ಯ ಮೆರೆದ ಸಿದ್ದರಾಮಯ್ಯ; ನೆಟ್ಟಾರು ಪತ್ನಿ ಮರುನೇಮಕಕ್ಕೆ ನಿರ್ಧಾರ

Praveen Nettarus wife nutan kumari

#image_title

ಬೆಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಪತ್ನಿಯನ್ನು (Praveen Nettaru) ಗ್ರೂಪ್‌ ಸಿ ಹುದ್ದೆಗೆ ಮರುನೇಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಹೊಸ ಸರ್ಕಾರ ರಚನೆಯಾದ ಬೆನ್ನಲ್ಲೇ ಬೊಮ್ಮಾಯಿ ಸರ್ಕಾರದಲ್ಲಿ ನೇಮಕ ಮಾಡಿದ್ದ ಪ್ರವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿಯನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಇದಕ್ಕೆ ಬಿಜೆಪಿ ಹಾಗೂ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಶೇಷ ಪ್ರಕರಣವೆಂದು ಪರಿಗಣಿಸಿ ರಾಜ್ಯ ಸರ್ಕಾರ ಮರು ನೇಮಕ ಮಾಡಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಸಿಎಂ‌ ಸಿದ್ದರಾಮಯ್ಯ ಅವರು, ಹೊಸ ಸರ್ಕಾರ ಬಂದ ನಂತರ ಹಿಂದಿನ ಸರ್ಕಾರ ನೇಮಕ ಮಾಡಿಕೊಂಡಿದ್ದ ತಾತ್ಕಾಲಿಕ ನೌಕರರನ್ನು ಸರ್ಕಾರಿ ಸೇವೆಯಿಂದ ವಜಾ ಮಾಡುವುದು ಒಂದು ಸಹಜ ಪ್ರಕ್ರಿಯೆ. ಪ್ರವೀಣ್ ನೆಟ್ಟಾರು ಅವರ ಪತ್ನಿ ಮಾತ್ರವಲ್ಲ ಸುಮಾರು 150ಕ್ಕೂ ಹೆಚ್ಚು ಗುತ್ತಿಗೆ ನೌಕರರನ್ನು ಈಗಾಗಲೇ ಸೇವೆಯಿಂದ ವಜಾ ಮಾಡಲಾಗಿದೆ. ಇದರಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪವಿಲ್ಲ. ಆದರೂ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮಾನವೀಯತೆ ಆಧಾರದಲ್ಲಿ ನೂತನ ಕುಮಾರಿ ಅವರ ಮರು ನೇಮಕ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Karnataka Cabinet: ಕಾಂಗ್ರೆಸ್‌ನಲ್ಲಿ ಮತ್ತೆ ಶುರುವಾಯಿತು ಮೂಲ-ವಲಸಿಗ ಜಗಳ: ಸಿಎಂ ವಿರುದ್ಧ ಹರಿಪ್ರಸಾದ್‌ ಪ್ರಹಾರ

ಬೊಮ್ಮಾಯಿ ಸರ್ಕಾರದಲ್ಲಿ ಗ್ರೂಪ್‌ ಸಿ ಹುದ್ದೆ

ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆಯ ಬಳಿಕ ಮಾನವೀಯ ದೃಷ್ಟಿಯಿಂದ ಪ್ರವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿಗೆ ಬೊಮ್ಮಾಯಿ ಸರ್ಕಾರವು ತಾತ್ಕಾಲಿಕ ನೆಲೆಯ ನೇಮಕಾತಿ ಮಾಡಿತ್ತು. ಮೊದಲಿಗೆ ಮುಖ್ಯಮಂತ್ರಿ ಸಚಿವಾಲಯದಲ್ಲಿ ಉದ್ಯೋಗ ನೀಡಲಾಗಿತ್ತು. ಗ್ರೂಪ್‌ ಸಿ ಹುದ್ದೆಗೆ ನೇಮಕಗೊಳಿಸಿ, 30,350 ರೂ. ವೇತನ ನಿಗದಿಪಡಿಸಲಾಗಿತ್ತು. ನಂತರ ನೂತನ ಕುಮಾರಿ ಅಪೇಕ್ಷೆ ಮೇರೆಗೆ ದಕ್ಷಿಣ ಕ‌ನ್ನಡ ಜಿಲ್ಲಾಡಳಿತ ಕಚೇರಿಯ ಪ್ರಾಕೃತಿಕ ವಿಕೋಪ ವಿಭಾಗದಲ್ಲಿ ಕೆಲಸ ಮಾಡಲು ಅನುಮತಿ ನೀಡಲಾಗಿತ್ತು.

ಈ ಹುದ್ದೆಯ ಅವಧಿಯು ಈ ಹಿಂದಿನ ಮುಖ್ಯಮಂತ್ರಿಗಳ ಪದಾವಧಿಯವರೆಗೆ ಅಥವಾ ಮುಂದಿನ ಆದೇಶದವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ನೇಮಿಸಲಾಗಿತ್ತು. ಈಗ ಹೊಸ ಸರ್ಕಾರ ರಚನೆಯಾಗಿರುವುದರಿಂದ ಕೆಲಸದ ಅವಧಿ ಮುಕ್ತಾಯವಾಗಿತ್ತು. ಹೀಗಾಗಿ ಪ್ರವೀಣ್ ನೆಟ್ಟಾರು (Praveen Nettaru) ಪತ್ನಿ ನೂತನ ಕುಮಾರಿಯನ್ನು ಕೆಲಸದಿಂದ ವಜಾ ಮಾಡಲಾಗಿತ್ತು.

2022ರ ಸೆ. 22ರಂದು ಗುತ್ತಿಗೆ ಆಧಾರದಲ್ಲಿ ಗ್ರೂಪ್ ಸಿ ಹುದ್ದೆಗೆ ನೇಮಕ ಮಾಡಲಾಗಿತ್ತು. ಹೊಸ ಸರ್ಕಾರ ಬಂದ ಕೂಡಲೇ ನೆಟ್ಟಾರ್ ಪತ್ನಿಯನ್ನು ಕೆಲಸದಿಂದ ವಜಾ ಮಾಡಿದ್ದರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಸಿದ್ದರಾಮಯ್ಯ ಸರ್ಕಾರ ಈಗ, ನೂತನ ಕುಮಾರಿ ಮರು ನೇಮಕಕ್ಕೆ ನಿರ್ಧರಿಸಿದೆ.

Exit mobile version