ಹೊಸಪೇಟೆ: ರಾಜ್ಯದಲ್ಲಿ ಕಾಂಗ್ರೆಸ್ (Congress) ಪರ ಅಲೆ ಇದೆ. ಯಾರೂ ಏನೇ ಹೇಳಲಿ 130ಕ್ಕೂ ಅಧಿಕ ಸ್ಥಾನ ಗೆದ್ದು ಅಧಿಕಾರಕ್ಕೆ ಬರಲಿದ್ದೇವೆ. ಬಡವರ ಪರ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕು ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಪ್ರಚಾರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ, ನನ್ನ 40 ವರ್ಷಗಳ ರಾಜಕೀಯ ಅನುಭವದಲ್ಲಿ ಇಂಥ ಭ್ರಷ್ಟ ಸರ್ಕಾರ ನಾನು ಎಂದಿಗೂ ನೋಡಿಲ್ಲ. ವಿಧಾನಸೌಧದ ಗೋಡೆಗಳು ಕೂಡ ಲಂಚ, ಲಂಚ ಎಂದು ಪಿಸುಗುಡುತ್ತಿವೆ. ಬಸವರಾಜ ಬೊಮ್ಮಾಯಿಯಷ್ಟು ಭ್ರಷ್ಟ ಮುಖ್ಯಮಂತ್ರಿಯನ್ನು ನಾನು ನೋಡಿಲ್ಲ. ಈಗ ನನ್ನ ಹೇಳಿಕೆ ಟ್ವಿಸ್ಟ್ ಮಾಡಿದ್ದಾರೆ. ನನ್ನನ್ನು ಲಿಂಗಾಯತ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ. ನಾನು ಲಿಂಗಾಯತ ವಿರೋಧಿಯಲ್ಲ. ನಾನು ಲಿಂಗಾಯತರಿಗೆ ಅಪಾರ ಗೌರವ ನೀಡುತ್ತೇನೆ. ಲಿಂಗಾಯತರ ನಾಯಕರ ಬಗ್ಗೆಯೂ ಗೌರವ ಇದೆ ಎಂದರು.
ಇದನ್ನೂ ಓದಿ: Karnataka Election 2023: 80 ವರ್ಷ ದಾಟಿದವರಿಂದ ಏ.29ರಿಂದಲೇ ಮನೆಯಿಂದ ಮತದಾನ; ಗೌಪ್ಯತೆಗೇನು ಕ್ರಮ?
ಈ ದೇಶದಲ್ಲಿ ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರನ್ನೇ ಬಿಟ್ಟಿಲ್ಲ. ನನ್ನ ಮೇಲೂ ಅದೇ ರೀತಿ ಮಾಡುತ್ತಿದ್ದಾರೆ. ನಾನು ಯಾವತ್ತೂ ಸಾಮಾಜಿಕ ನ್ಯಾಯ ಪರಿಪಾಲನೆ ಮಾಡುತ್ತೇನೆ. ಬಸವಣ್ಣನವರು ನುಡಿದಂತೆ ನಡೆದಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾನು ನಡೆಯುತ್ತಿರುವೆ. ಅವರ ಅನುಯಾಯಿ ಆಗಿದ್ದು, ಬಸವ ತತ್ವ ಪಾಲನೆ ಮಾಡುತ್ತಿರುವೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಸಾಲಮನ್ನಾ ಮಾಡಿಲ್ಲ. ರೈತರ ಸಾಲಮನ್ನಾ ಮಾಡಿದರೆ, ದೇಶ ದಿವಾಳಿಯಾಗುತ್ತದೆ ಎಂದು ಹೇಳಿದ್ದಾರೆ. ಆದರೆ, ಬಂಡವಾಳಶಾಹಿಗಳ ಹಾಗೂ ಶ್ರೀಮಂತರ 12 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮನುಷ್ಯತ್ವ ಇಲ್ಲದ ಪ್ರಧಾನಿಯಾಗಿದ್ದಾರೆ. ರೈತರ ಸಾಲಮನ್ನಾ ಮಾಡದೆ ಶ್ರೀಮಂತರ ಸಾಲ ಮನ್ನಾ ಮಾಡಿದ್ದಾರೆ ಎಂದು ದೂರಿದರು.
ಪರಮೇಶ್ವರ ನಾಯ್ಕ ಗೆಲ್ಲಿಸಿ
ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ್ ಅವರನ್ನು ಎರಡು ಬಾರಿ ಗೆಲ್ಲಿಸಿದ್ದೀರಿ. ಪರಮೇಶ್ವರ ನಾಯ್ಕ್ ಕ್ಷೇತ್ರದ ಯಾವುದೇ ಸಮಾಜವನ್ನು ಕಡೆಗಣಿಸಿಲ್ಲ. ನಾನು ಸಿಎಂ ಆಗಿದ್ದಾಗ ಮಂತ್ರಿ ಆಗಿದ್ದರು, ಬಹಳ ದಕ್ಷತೆಯಿಂದ ಕೆಲಸ ಮಾಡಿದ್ದಾರೆ. ಜನಪರ ಕಾಳಜಿ ಇರುವಂತಹ ರಾಜಕಾರಣಿಯಾಗಿರುವ ನಮ್ಮ ಅಭ್ಯರ್ಥಿ ಪರಮೇಶ್ವರ ನಾಯ್ಕ್ ಅವರನ್ನು ಗೆಲ್ಲಿಸಬೇಕು ಅಂತ ಹೂವಿನ ಹಡಗಲಿ ಮತದಾರರಿಗೆ ಮನವಿ ಮಾಡಿದರು.
165 ಭರವಸೆಗಳಲ್ಲಿ 158 ಭರವಸೆ ಈಡೇರಿದ್ದೇವೆ
2013ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ 165 ಭರವಸೆಗಳನ್ನು ಕೊಟ್ಟಿದ್ದೆವು. ಅದರಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಜತೆಗೆ 30 ಜನಪರ ಕಾರ್ಯಕ್ರಮಗಳನ್ನು ಕೊಟ್ಟಿದ್ದೇವೆ. ವಿಧಾನಸೌಧದಲ್ಲಿ ಲಂಚ ಹೊಡೆಯೋದು ಕಡಿಮೆ ಮಾಡಿ ಎಂದು ಯಡಿಯೂಪ್ಪ ಅವರಿಗೆ ಸಲಹೆ ಕೊಟ್ಟಿದ್ದೆ. ಆದರೆ, ಅವರು ಲಂಚ ಪಡೆಯೋದು ಕಡಿಮೆ ಮಾಡಲಿಲ್ಲ. ಹಾಗಾಗಿ ಏಳು ಕೆಜಿ ಅಕ್ಕಿ ಬದಲಿಗೆ, ನಾಲ್ಕು ಕೆಜಿ ಅಕ್ಕಿ ಕೊಡುತ್ತಿದ್ದಾರೆ. ಅವರು ಲಂಚ ಹೊಡೆಯೋದನ್ನು ಬಿಟ್ಟರೆ ಹತ್ತು ಕೆಜಿ ಅಕ್ಕಿ ಕೊಡಬಹುದು ಎಂದು ಸದನದಲ್ಲೇ ಹೇಳಿಕೆ ನೀಡಿದ್ದೆ ಎಂದು ದೂರಿದರು.
ಬಿಜೆಪಿ ಸರ್ಕಾರ ಒಂದೇ ಒಂದು ಮನೆ ಕಟ್ಟಿಸಲಿಲ್ಲ. ನಾಲ್ಕು ವರ್ಷದಿಂದ ಸುಳ್ಳು ಹೇಳಿಕೊಂಡು ತಿರುಗಾಡಿದರು. ನಾವು ಕಟ್ಟಿಸಿದ ಮನೆಗಳ ಬಿಲ್ ಕೂಡ ಪಾವತಿ ಮಾಡಲಿಲ್ಲ. ಜನರು ಸೂರಿಲ್ಲದೆ ನಲಗುವಂತಾಗಿದೆ. ಈ ಹಿಂದೆ 158 ಕೋಟಿ ರೂ. ಖರ್ಚು ಮಾಡಿ ಜಾತಿ ಗಣತಿ ಮಾಡಿಸಿದ್ದೇವೆ. ಜಾತಿ ಗಣತಿ ಮೂಲಕ ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಗೊತ್ತಾಗಲಿದೆ. ಆ ವರದಿಯನ್ನು ಬಿಜೆಪಿ ಸರ್ಕಾರ ಅಂಗೀಕರಿಸಿಲ್ಲ. ಕುಮಾರಸ್ವಾಮಿಯವರು ಜಪ್ಪಯ್ಯ ಅಂದರೂ ಒಪ್ಪಿಲ್ಲ. ನಾವು ಅಧಿಕಾರಕ್ಕೆ ಬಂದರೆ, ಜಾತಿ ಗಣತಿ ಅಂಗೀಕರಿಸಿ, ಅದರ ಆಧಾರದ ಮೇಲೆ ಅಭಿವೃದ್ಧಿ ಪರ ಯೋಜನೆ ಜಾರಿ ಮಾಡುತ್ತೇವೆ ಎಂದರು.
ಇದನ್ನೂ ಓದಿ: ಬಳ್ಳಾರಿ ಜಿಲ್ಲೆ ಕ್ಷೇತ್ರ ಸಮೀಕ್ಷೆ : ಕಾಂಗ್ರೆಸ್, ಬಿಜೆಪಿ ಗೆಲುವಿನ ಮೇಲೆ ಪಕ್ಷಾಂತರಿಗಳ, ರೆಡ್ಡಿ ಪಕ್ಷದ ಎಫೆಕ್ಟ್
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಯಾರು ಎಷ್ಟೇ ವಿರೋಧ ಮಾಡಿದರೂ ಬಡವರ ಪರ ಕೆಲಸ ಮಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅಚ್ಛೇ ದಿನ್ ಆಯೆಗಾ ಅಂದ್ರು, ಅಚ್ಛೇ ದಿನ್ ಬಂತಾ? ಮೋದಿ ಅವರು ದೇಶದ ಜನಕ್ಕೆ ಯಾಕೆ ಸುಳ್ಳು ಹೇಳಿದರು. ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಅಂದರು. ಆದರೆ, ರೈತರು ಸಾಲ ದುಪ್ಪಟ್ಟಾಯ್ತು, ರೈತರ ಒಂದು ರೂಪಾಯಿ ಕೂಡ ಸಾಲ ಮನ್ನಾ ಮಾಡಲಿಲ್ಲ ಎಂದರು.
ಸಿಎಂ ಬೊಮ್ಮಾಯಿ ಇಡೀ ರಾಜ್ಯಕ್ಕೆ ಕಳಂಕ ತಂದಿದ್ದಾರೆ
ಲಿಂಗಾಯತ ಸಮುದಾಯದಲ್ಲಿ ನಿಜಲಿಂಗಪ್ಪ, ಎಸ್.ಆರ್ ಕಂಠಿ, ಜೆ.ಎಚ್. ಪಟೇಲ್ ಪ್ರಾಮಾಣಿಕ ಸಿಎಂ ಆಗಿದ್ದರು. ಸಿಎಂ ಬೊಮ್ಮಾಯಿ ಇಡೀ ರಾಜ್ಯಕ್ಕೆ ಕಳಂಕ ತಂದಿದ್ದಾರೆ. ಭ್ರಷ್ಟ ಸರ್ಕಾರ ನಡೆಸುತ್ತಿದ್ದಾರೆ. ಈಗ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.
ತಾಲೂಕು ಕಚೇರಿಯಿಂದ ಹಿಡಿದು ವಿಧಾನಸೌಧವರೆಗೆ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಫೋಟೋ ಇಡಬೇಕು ಅಂತ ಆದೇಶ ಮಾಡಿದ್ದೆ. ಕಿತ್ತೂರು ಚೆನ್ನಮ್ಮ ಜಯಂತಿಗೆ ಆದೇಶ ಮಾಡಿರುವೆ ಎಂದರು.
ಇದನ್ನೂ ಓದಿ: Karnataka Election : ಪ್ರಚಾರ ಕಣದಲ್ಲಿ ಡಿಶುಂ ಡಿಶುಂ, ಎದುರು ಸಿಕ್ಕರೆ ಕುಚುಕು ಫ್ರೆಂಡ್ಸ್!
ನಾಲ್ಕು ಗ್ಯಾರೆಂಟಿಗಳನ್ನು ರಾಜ್ಯದ ಜನಕ್ಕೆ ಕೊಟ್ಟಿದ್ದೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೊದಲ ತಿಂಗಳಿನಲ್ಲೇ ಜಾರಿಗೆ ತರುತ್ತೇವೆ. ಹೂವಿನ ಹಡಗಲಿಯಲ್ಲಿ ಕಾಂಗ್ರೆಸ್ ಬಿಜೆಪಿಗೆ ಫೈಟ್ ಇದೆ. ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ. ಬಿಜೆಪಿ ಅಂದರೆ ದುಡ್ಡು, ಲೂಟಿ ಹೊಡೆದಿದ್ದಾರೆ. ಆಪರೇಷನ್ ಕಮಲ ಮಾಡಿ ಲೂಟಿ ಹೊಡೆದ ಹಣ ಹಂಚುತ್ತಾರೆ. ಮತದಾರರು ಅದ್ಯಾವ ಆಮಿಷಕ್ಕೂ ಒಳಗಾಗಬೇಡಿ ಎಂದರು.
ಈ ವೇಳೆ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ, ಮುಖಂಡರಾದ ಅಲ್ಲಂ ವೀರಭದ್ರಪ್ಪ, ಸಿರಾಜ್ ಶೇಖ್, ಬಿ.ವಿ. ಶಿವಯೋಗಿ, ಅರಸಿಕೆರೆ ಕೊಟ್ರೇಶ್, ಗುರುವಿನ ಕೊಟ್ರಯ್ಯ, ಕೆ.ಎಂ.ಹಾಲಪ್ಪ, ವಸಂತ್, ದೂದಾ ನಾಯ್ಜ, ಮಧು ನಾಯ್ಕ, ಮಹೇಂದ್ರ, ಪಿ. ಟಿ.ಭರತ್, ಶಶಿಧರ ಪೂಜಾರ ಮತ್ತಿತರರಿದ್ದರು.