Site icon Vistara News

Opposition Leader: ಕಾಂಗ್ರೆಸ್ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡುತ್ತೇವೆ: ಬಿ.ವೈ. ವಿಜಯೇಂದ್ರ

BY Vijayendra

ಬೆಂಗಳೂರು: ಬಹು ನಿರೀಕ್ಷಿತ ವಿಪಕ್ಷ ನಾಯಕನ ಆಯ್ಕೆ ಮಾಡಲಾಗಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಸರ್ವಾನುಮತದಿಂದ ಹಿರಿಯ ಶಾಸಕ, ಮಾಜಿ ಡಿಸಿಎಂ ಅಶೋಕ್ ಅವರನ್ನು ವಿಪಕ್ಷ ನಾಯಕರಾಗಿ ಆಯ್ಕೆ‌ಮಾಡಲಾಗಿದ್ದು, ರಾಜ್ಯದ ಬಿಜೆಪಿ ಅಧ್ಯಕ್ಷನಾಗಿ ಅಶೋಕ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ದಿನದಲ್ಲಿ ನಾನು, ಅಶೋಕ್ ಅವರು ಒಗ್ಗಟ್ಟಾಗಿ ಬಡವರ ವಿರೋಧಿ, ರೈತ ವಿರೋಧಿಯಾದ ಕಾಂಗ್ರೆಸ್ ಸರ್ಕಾರದ ವಿರುದ್ಧ ಸದನದ ಒಳಗೆ, ಹೊರಗೆ ಜನರ ಧ್ವನಿಯಾಗಿ ಕಿವಿ ಹಿಂಡುವ ಕೆಲಸ ಮಾಡುತ್ತೇವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಆರ್‌.ಅಶೋಕ್‌ ಅವರನ್ನು ಆಯ್ಕೆ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮೆಲ್ಲರ ಗುರಿ ಲೋಕಸಭಾ ಚುನಾವಣೆ. 28ಕ್ಕೆ 28 ಕ್ಷೇತ್ರ ಗೆಲ್ಲುವ ಮೂಲಕ ದೇಶದ ಪ್ರಧಾನಮಂತ್ರಿ ಆಗಲು ನರೇಂದ್ರ ಮೋದಿ ಅವರಿಗೆ ಸಹಕಾರ ಕೊಡುತ್ತೇವೆ. ಸರ್ಕಾರದ ಆಡಳಿತ ವೈಖರಿಯನ್ನು ವಿಪಕ್ಷ ಮಾತ್ರವಲ್ಲ. ರಾಜ್ಯದ ಜನರೂ ವಿರೋಧ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜನ‌ರು ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ | Opposition Leader : ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಆರ್.‌ ಅಶೋಕ್‌ ಆಯ್ಕೆ; ಬಿಎಸ್‌ವೈ ಮೇಲುಗೈ

ನಮ್ಮದು ಜಾತಿ ರಾಜಕಾರಣ ಅಲ್ಲ: ಆರ್‌.ಅಶೋಕ್

ಬಿಜೆಪಿ ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ. ಜನ ನಮಗೆ ಹಿಂದುತ್ವದ ಬ್ರ್ಯಾಂಡ್ ಕೊಟ್ಟಿದ್ದಾರೆ. ಅದನ್ನು ಸ್ವೀಕರಿಸಿ ನಾವೂ ಮುನ್ನಡೆಯುತ್ತಿದ್ದೇವೆ‌. ನಮ್ಮದು ಜಾತಿ ರಾಜಕಾರಣ ಅಲ್ಲ. ದೇಶ ಮೊದಲು ಅನ್ನೋದು. ಇದರಲ್ಲಿ ಜಾತಿ ಅನ್ನೋದು ಬರೋದಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಹೇಳಿದ್ದಾರೆ.

ಉದುರಿ ಹೋಗಲು ನಾನು ಸಿದ್ದರಾಮಯ್ಯ ತರ ಎಲ್ಲಾ ಪಕ್ಷ ನೋಡಿಕೊಂಡು ಬಂದಿಲ್ಲ. ನನ್ನದು ಒಂದೆ ಪಾರ್ಟಿ, ಒಂದೇ ಧ್ಯೇಯ. ಸಿದ್ದರಾಮಯ್ಯ ತರ ಜೆಡಿಎಸ್‌ನಲ್ಲಿ ಒಂದು, ಕಾಂಗ್ರೆಸ್‌ನಲ್ಲಿ ಒಂದು, ಪ್ರಗತಿ ಪರ, ಅದಕ್ಕೂ ಮೊದಲು ಇಂಡಿಪೆಂಡೆಂಟ್ ಆಗಿ ಸ್ಪರ್ಧಿಸಿಲ್ಲ. ನಾನು ಗಟ್ಟಿ, ತರಗೆಲೆ ಅಲ್ಲ ಎಂದು ಕಾಂಗ್ರೆಸ್ ಟ್ವೀಟ್‌ಗೆ ಠಕ್ಕರ್ ನೀಡಿದರು.

ಜಾರಕಿಹೊಳಿ, ಯತ್ನಾಳ್ ಮನೆಗೆ ನಮ್ಮ ವೀಕ್ಷಕರು ತೆರಳಿ ಅಭಿಪ್ರಾಯ ಪಡೆದಿದ್ದಾರೆ. ಎಲ್ಲರ ಅಭಿಪ್ರಾಯ ಪಡೆದು ಘೋಷಣೆ ಮಾಡಿದ್ದಾರೆ. ಪಕ್ಷದೊಳಗೆ ಡೆಮಾಕ್ರಸಿ ಇದೆ. ಜನಾಭಿಪ್ರಾಯ ಇದ್ದಾಗ ಅದನ್ನೇ ಡೆಮಾಕ್ರಸಿ ಎನ್ನುತ್ತಾರೆ ಎಂದರು.

ನನ್ನನ್ನು ವಿಪಕ್ಷ ನಾಯಕನಾಗಿ ಆಯ್ಕೆ ಮಾಡಲಾಗಿದೆ. ನಾನೊಬ್ಬನೇ ನಾಯಕ ಅಲ್ಲ. ಇರುವ 66 ಶಾಸಕರೂ ವಿಪಕ್ಷ ನಾಯಕರೇ. ಈಗ ನಮ್ಮ‌ ಜತೆ ಜೆಡಿಎಸ್ ಕೂಡ ಸೇರಿದೆ. ಎನ್‌ಡಿಎ ಭಾಗವಾಗಿ ಜೆಡಿಎಸ್‌ (JDS Karnataka) ಕಾರ್ಯನಿರ್ವಹಿಸುತ್ತದೆ. ನಾವೆಲ್ಲರೂ ಸೇರಿ 84 ಜನ ಶಾಸಕರಾಗಿದ್ದೇವೆ. ನಮ್ಮ ಮೊದಲ ಆದ್ಯತೆ ಭ್ರಷ್ಟಾಚಾರದ ಕಾಂಗ್ರೆಸ್ ಸರ್ಕಾರವನ್ನು (Congress Government) ತೊಲಗಿಸೋದು. ನಿಮ್ಮೆಲ್ಲರ ಸಹಕಾರ ಬೇಕು. ಆರು ತಿಂಗಳ ಈ ಭ್ರಷ್ಟಾಚಾರದ ಸರ್ಕಾರವನ್ನು ಕಿತ್ತೊಗೆಯೋಣ ಎಂದು ನೂತನ ಪ್ರತಿಪಕ್ಷ ನಾಯಕ (Opposition Leader) ಆರ್.‌ ಅಶೋಕ್‌ (R Ashok) ಗುಡುಗಿದರು.

ನಮಗೆ ಚಾಲೆಂಜ್ ಇರೋದು ವಿಧಾನಸಭೆಯ ಒಳಗೆ. ಕಾಂಗ್ರೆಸ್ ಸರ್ಕಾರ ಬಂದ ಆರಂಭದಿಂದಲೇ ಭ್ರಷ್ಟಾಚಾರದ ಅಂಗಡಿ ಓಪನ್ ಮಾಡಿದ್ದಾರೆ. ಟ್ರಾನ್ಸ್‌ಫರ್ ದಂಧೆಯನ್ನು ಶುರು ಮಾಡಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್‌ ಪರ ಇರುವವರು ಸಿಎಂ ಬದಲಾವಣೆ ಎಂದು ಹೇಳುತ್ತಾರೆ. ಸಿಎಂ ಸಿದ್ದರಾಮಯ್ಯ ಪರ ಇರುವವರು ಅವರೇ ಪೂರ್ಣಾವಧಿ ಸಿಎಂ ಎಂದು ಹೇಳುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ | ಸರ್ಕಾರ ನನ್ನ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊರಟಿದೆ, ಇದಕ್ಕೆಲ್ಲ ಜಗ್ಗಲ್ಲ ಎಂದ ಎಚ್‌ಡಿಕೆ

ಸಿಎಂ ಪುತ್ರನಿಂದ ವರ್ಗಾವಣೆ ದಂಧೆ

ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ನಿರತವಾಗಿ ಸ್ವತಃ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಟ್ರಾನ್ಸ್‌ಫರ್ ದಂಧೆಯಲ್ಲಿ ಮುಳುಗಿದ್ದಾರೆ. ಈ ಸರ್ಕಾರದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ಅಲ್ಲದೆ, ಗ್ಯಾರಂಟಿ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಎರಡು ತಿಂಗಳು ಮಹಿಳೆಯರ ಖಾತೆಗೆ ಹಣ ಹಾಕಿದರು. ಆನಂತರ ನಿಲ್ಲಿಸಿ ಬಿಟ್ಟರು ಎಂದು ಆರ್.‌ ಅಶೋಕ್‌ ಆಕ್ರೋಶ ಹೊರಹಾಕಿದರು.

Exit mobile version