Site icon Vistara News

Weather Report: ವೀಕೆಂಡ್‌ ಮೋಜಿಗೆ ಮಳೆ ಅಡ್ಡಿ; ಕರಾವಳಿ, ಚಿಕ್ಕಮಗಳೂರು, ಹಾಸನದಲ್ಲಿ ಇನ್ನೆರಡು ದಿನ ಮಳೆ ಅಬ್ಬರ

rain in karnataka

ಬೆಂಗಳೂರು: ನೀವೇನಾದರೂ ಸಾಲು ಸಾಲು ರಜೆ ಇದೆಯಲ್ಲ, ವೀಕೆಂಡ್‌ನಲ್ಲಿ ಔಟಿಂಗ್‌ (Weekend Plans) ಹೋಗಬೇಕು ಎಂದು ಪ್ಲ್ಯಾನ್‌ ಮಾಡಿಕೊಂಡಿದ್ದರೆ ಮತ್ತೊಮ್ಮೆ ಯೋಚನೆ ಮಾಡಿ. ಯಾಕೆಂದರೆ ಏ. 8-9ರಂದು ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಚಿಕ್ಕಮಗಳೂರು, ಕೊಡಗಿನಲ್ಲಿ ಮಳೆಯಾಗುವ (Rain News) ಮುನ್ಸೂಚನೆಯನ್ನು ಹವಾಮಾನ ಇಲಾಖೆ (Weather Report) ನೀಡಿದೆ.

ಕರಾವಳಿಯ, ಬಾಗಲಕೋಟೆ, ಬೆಳಗಾವಿ, ಬೀದರ್‌, ಗದಗ ಹಾಗೂ ಹಾವೇರಿ, ವಿಜಯಪುರ, ಧಾರವಾಡ, ಬಳ್ಳಾರಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಹಾಗೂ ಚಿತ್ರದುರ್ಗ, ದಾವಣಗೆರೆ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಗುಡುಗು ಮುನ್ನೆಚ್ಚರಿಕೆ

ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ. ಜತೆಗೆ ಉತ್ತರಒಳನಾಡಿನಲ್ಲೂ ಮಳೆ ಅಬ್ಬರ ಮುಂದುವರಿಯಲಿದ್ದು, ಬಾಗಲಕೋಟೆ, ಬೆಳಗಾವಿ, ಬೀದರ್‌, ಗದಗ ಹಾಗೂ ಹಾವೇರಿ, ವಿಜಯಪುರ, ಧಾರವಾಡದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬಳ್ಳಾರಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಹಾಗೂ ಚಿತ್ರದುರ್ಗ, ದಾವಣಗೆರೆಯಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಬೆಂಗಳೂರು ನಗರಕ್ಕಿಲ್ಲ ಮಳೆ ಅಲರ್ಟ್‌

ರಾಜಧಾನಿ ಬೆಂಗಳೂರಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮುಂಜು ಮುಸುಕುವ ಸಾಧ್ಯತೆ ಇದೆ. ಯಾವುದೇ ಮಳೆಯ ಮುನ್ಸೂಚನೆ ಇಲ್ಲ. ಗರಿಷ್ಠ ಉಷ್ಣಾಂಶ 34 ಹಾಗೂ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ಎಲ್ಲೆಲ್ಲಿ ಮಳೆ ಅಬ್ಬರ

ಗುರುವಾರದಂದು ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಹಾಗೂ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಬೀದರ್‌ನ ಮಂತಾಳದಲ್ಲಿ 7 ಸೆಂ.ಮೀ ಮಳೆಯಾಗಿದ್ದು, ಕಲಬುರಗಿಯ ಕಮಲಾಪುರ, ಯಡ್ರಾಮಿ, ಬಾಗಲಕೋಟೆಯ ಬಾದಾಮಿಯಲ್ಲಿ ತಲಾ 5 ಸೆಂ.ಮೀ ಮಳೆ ಸುರಿದಿದೆ. ಇತ್ತ ಆಳಂದ, ಕಳಸದಲ್ಲಿ ತಲಾ 4 ಸೆಂ.ಮೀ ಹಾಗೂ ಗಟ್ಟೂರು, ವಿಜಯಪುರ, ಅಲಮಟ್ಟಿ, ಚಿಕ್ಕಮಗಳೂರು ತಲಾ 3 ಸೆಂ.ಮೀ, ಹುಮನಾಬಾದ್, ಖಜೂರಿ ತಲಾ 2 ಸೆಂ.ಮೀ ಮಳೆಯಾಗಿದೆ.

ಇದನ್ನೂ ಓದಿ: ಕೆಂಪು ಬಣ್ಣದ ದೊಡ್ಡ ಹಸುವನ್ನು ನುಂಗಿದ ಹೆಬ್ಬಾವು; ಧೈರ್ಯವಿದ್ದವರು ಮಾತ್ರ ಈ ವಿಡಿಯೊ ನೋಡಿ!

ಕುಂದಗೋಳ, ಯಡವಾಡ, ಕೆಂಭಾವಿ, ಕಲಬುರಗಿ, ಜೇವರ್ಗಿ, ಬಾಗಲಕೋಟೆ, ಎನ್.ಆರ್.ಪುರದಲ್ಲಿ ತಲಾ 1 ಸೆಂ.ಮೀ ಮಳೆಯಾಗಿರುವ ವರದಿ ಆಗಿದೆ. ಇತ್ತ ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 40.4 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

Exit mobile version