ಬೆಂಗಳೂರು: ಮುಂದಿನ 24 ಗಂಟೆಯೊಳಗೆ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಒಂದೆರಡು ಸ್ಥಳಗಳಲ್ಲಿ ಗುಡುಗು ಸಹಿತ ಭಾರಿ (Rain News) ಮಳೆಯಾಗಲಿದೆ. ಕರಾವಳಿಯ ಕೆಲವು ಕಡೆಗಳಲ್ಲಿ ತುಂತುರು ಮಳೆಯ (Weather report) ಸಿಂಚನವಾಗಲಿದೆ.
ಮೈಸೂರು, ಚಾಮರಾಜನಗರದಲ್ಲಿ ಅಬ್ಬರದ ಮಳೆ
ದಕ್ಷಿಣ ಒಳನಾಡಿನ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಭಾಗಗಳಲ್ಲಿ ಚದುರಿದಂತೆ ಅಲ್ಲಲ್ಲಿ ತುಂಬಾ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಕಡೆ ಹಗುರ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 31 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಇದನ್ನೂ ಓದಿ: Self Harming : 12ನೇ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ; ಕಾರಣವಾಯ್ತಾ ಮಾನಸಿಕ ಖಿನ್ನತೆ
ಮಲೆನಾಡಲ್ಲಿ ತುಂತುರು ಮಳೆ
ಮಲೆನಾಡಿನ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಅಲ್ಲಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಉತ್ತರ ಒಳನಾಡಿನ ಬಳ್ಳಾರಿ, ವಿಜಯನಗರ, ಗದಗ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಚದುರಿದಂತೆ ಮಳೆಯಾಗಲಿದೆ. ಬೇರೆಡೆ ಹಗುರವಾದ ಮಳೆಯಾಗುವ ಸಾಧ್ಯತೆಯಿದೆ.
ವಿಜಯನಗರದಲ್ಲಿ ಮಳೆ ಸಿಂಚನ
ಮಂಗಳವಾರ ವಿಜಯನಗರದಾದ್ಯಂತ ಮಳೆಯಾಗಿದೆ. ಬಿಸಿಲಿನಿಂದ ಬಸವಳಿದಿದ್ದ ಧರೆಗೆ ವರುಣ ತಂಪೆರೆದಿದ್ದಾನೆ. ಹೊಸಪೇಟೆ ಸುತ್ತಮುತ್ತ ಕೆಲವು ಗ್ರಾಮಗಳಲ್ಲಿ ಮಳೆ ಸುರಿದಿದೆ. ಕಳೆದ 15 ದಿನದಿಂದ ಮಳೆರಾಯ ಕಣ್ಮರೆ ಆಗಿದ್ದರಿಂದ ಬಿಸಿಲಿನ ತಾಪಕ್ಕೆ ಹೊಸಪೇಟೆ ಮಂದಿ ಸುಸ್ತಾಗಿದ್ದರು. ಇತ್ತ ಮಳೆ ಬಾರದೆ ಒಣ ಬೇಸಾಯ ಬೆಳೆಗಳು ಒಣಗುತ್ತಿದ್ದವು. ಮಳೆ ಬಂದ ಕಾರಣಕ್ಕೆ ರೈತರು ಕೊಂಚ ಸಮಾಧಾನ ತಂದಿದೆ.
ನೈರುತ್ಯ ಮುಂಗಾರು ಸೋಮವಾರ ರಾಜ್ಯದಲ್ಲಿ ದುರ್ಬಲವಾಗಿದ್ದರೂ, ಕರಾವಳಿ ಮತ್ತು ಒಳನಾಡಿನ ಒಂದೆರಡು ಸ್ಥಳಗಳಲ್ಲಿ ಮಳೆಯಾಗಿದೆ. ಮಂಚಿಕೆರೆ (ಉತ್ತರ ಕನ್ನಡ ಜಿಲ್ಲೆ), ಗದಗ ಅಡಕಿ, ಕಮಲಾಪುರ (ಕಲಬುರಗಿ ಜಿಲ್ಲೆ), ಮಂಡಗದ್ದೆ (ಶಿವಮೊಗ್ಗ ಜಿಲ್ಲೆ) ತಲಾ 2 ಸೆಂ.ಮೀ ಮಳೆಯಾಗಿದೆ. ಕ್ಯಾಸಲ್ ರಾಕ್ (ಉತ್ತರ ಕನ್ನಡ ಜಿಲ್ಲೆ), ಗುಂಜಿ, ಸೇಡಬಲ್ (ಎರಡೂ ಬೆಳಗಾವಿ ಜಿಲ್ಲೆ), ಸೇಡಂ, ಚಿತ್ತಾಪುರ (ಎರಡೂ ಕಲಬುರ್ಗಿ ಜಿಲ್ಲೆ), ಮುದಗಲ್ (ರಾಯಚೂರು ಜಿಲ್ಲೆ), ಸಂಡೂರು (ಬಳ್ಳಾರಿ ಜಿಲ್ಲೆ), ಶಿವಮೊಗ್ಗ, ಕೊಟ್ಟಿಗೆಹಾರ (ಚಿಕ್ಕಮಗಳೂರು ಜಿಲ್ಲೆ) ತಲಾ 1 ಸೆಂ.ಮೀ ಮಳೆಯಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ