Site icon Vistara News

Weather Report | ರಾಜ್ಯದಲ್ಲಿ ಇನ್ನೂ 2 ದಿನ ಗುಡುಗು ಸಹಿತ ಭಾರಿ ಮಳೆ ಮುನ್ಸೂಚನೆ; ಮಲೆನಾಡು, ಕರಾವಳಿಯಲ್ಲಿ ಇರಲಿದೆ ಅಬ್ಬರ

weather report rain news

ಬೆಂಗಳೂರು: ರಾಜ್ಯದಲ್ಲಿ ಮಾಂಡೌಸ್‌ ಚಂಡಮಾರುತದ ಪರಿಣಾಮವಾಗಿ ಮಳೆ ಅಬ್ಬರ ಮುಂದುವರಿಯಲಿದೆ. ಮುಂದಿನ 24 ಗಂಟೆಯಲ್ಲಿ 4 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆಯನ್ನು (Weather Report) ಹವಾಮಾನ ಇಲಾಖೆ ನೀಡಿದೆ.

ಇತ್ತ ಕರಾವಳಿ ತೀರದಲ್ಲಿ ಬಿರುಗಾಳಿಯ ವೇಗವು ಪ್ರತಿ ಗಂಟೆಗೆ 40- 45 ಕಿ.ಮೀ ಇರಲಿದ್ದು, ಇದು 55 ಕಿ.ಮೀ.ವರೆಗೂ ತಲುಪುವ ಸಾಧ್ಯತೆ ಇದೆ. ಹೀಗಾಗಿ ಮೀನುಗಾರರು ಈ ಅವಧಿಯಲ್ಲಿ ಸಮುದ್ರಕ್ಕೆ ತೆರಳದಂತೆ ಸೂಚಿಸಲಾಗಿದೆ.

ರಾಜ್ಯಾದ್ಯಂತ ಗುಡುಗು ಸಹಿತ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನ ಧಾರಾಕಾರ ಮಳೆಯಾಗಲಿದೆ.

ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಜಿಟಿಜಿಟಿ ಮಳೆಯಿಂದಾಗಿ ಧಾರಾಕಾರ ಮಳೆಯಾಗಲಿದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕಿನಿಂದ ಕೂಡಿರಲಿದೆ. ಗರಿಷ್ಠ ಉಷ್ಣಾಂಶ 23 ಮತ್ತು ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇದನ್ನೂ ಓದಿ | Cyclone Mandous‌ | ರಾಜ್ಯದಲ್ಲಿ ಮಾಂಡೌಸ್ ಚಂಡಮಾರುತ ಎಫೆಕ್ಟ್, ಬೆಂಗಳೂರಿನಲ್ಲಿ ಮಲೆನಾಡಿನ ವಾತಾವರಣ

ಎಲ್ಲೆಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆಯಾಗಿದೆ?
ಕಳೆದ ೨೪ ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ ಬಿದ್ದ ಮಳೆ ಪ್ರಮಾಣದ ವಿವರ ಇಲ್ಲಿದೆ. ಕೋಲಾರದಲ್ಲಿ ವರುಣ ಅಬ್ಬರಿಸಿದ್ದು 8 ಸೆಂ.ಮೀ ಮಳೆಯಾಗಿದೆ. ಚಿಂತಾಮಣಿ, ರಾಯಲ್ಪಾಡು ತಲಾ 7 ಸೆಂ.ಮೀ ಹಾಗೂ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಾಲೂರು ತಲಾ 6 ಹಾಗೂ ಹೊಸಕೋಟೆ, ಗೌರಿಬಿದನೂರು, ದೇವನಹಳ್ಳಿ ತಲಾ 5 ಹಾಗೂ ಬೆಂಗಳೂರು ನಗರ, ಯಲಹಂಕ, ಮಧುಗಿರಿ, ಪಾವಗಡ ಸೇರಿ ಚಿಕ್ಕಬಳ್ಳಾಪುರ, ತೊಂಡೇಭಾವಿಯಲ್ಲಿ ತಲಾ 4 ಸೆಂ.ಮೀ ಮಳೆಯಾಗಿದೆ.

ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣ, ಹೆಸರಘಟ್ಟ, ಗೋಪಾಲ್ ನಗರ, ದೊಡ್ಡಬಳ್ಳಾಪುರ, ತುಮಕೂರು, ವೈ.ಎನ್.ಹೊಸಕೋಟೆ, ಕುಡತಿನಿ, ಚಿತ್ರದುರ್ಗ, ನಾಯಕನಹಟ್ಟಿ ತಲಾ 3 ಹಾಗೂ ಎಲೆಕ್ಟ್ರಾನಿಕ್ ಸಿಟಿ, ಸಿರಾ, ತಿಪಟೂರು, ಹಿರಿಯೂರು, ರಾಮನಗರ, ಮಾಗಡಿ, ಗುಬ್ಬಿ, ಬುಕ್ಕಪಟ್ಟಣ, ಕೊಟ್ಟೂರು ತಲಾ 2 ಸೆಂ.ಮೀ ಮಳೆಯಾಗಿದೆ.

ಮಾನ್ವಿ, ಕುರ್ಡಿ, ಹಗರಿಬೊಮ್ಮನಹಳ್ಳಿ, ಹೊಸದುರ್ಗ, ಬಿ ದುರ್ಗ, ಪರಶುರಾಂಪುರ, ಕೃಷ್ಣರಾಜಸಾಗರ, ಶ್ರೀರಂಗಪಟ್ಟಣ, ದಾವಣಗೆರೆ, ಚನ್ನಗಿರಿ, ಹರಪನಹಳ್ಳಿ, ಹೊನ್ನಾಳಿ, ಚಾಮರಾಜನಗರ, ಮಂಡ್ಯ, ಶಿವಮೊಗ್ಗ, ಮಿಡಿಗೇಶಿ, ಕುಣಿಗಲ್ , ಶ್ರವಣಬೆಳಗೊಳ, ಹೆಸರಘಟ್ಟ, ಮೈಸೂರು, ಶೃಂಗೇರಿ, ಜಯಪುರ, ಅಜ್ಜಂಪುರ ತಲಾ 1 ಸೆಂ.ಮೀ ಮಳೆಯಾಗಿದೆ. ದಾವಣಗೆರೆಯಲ್ಲಿ ಕನಿಷ್ಠ ಉಷ್ಣಾಂಶ 13.8 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ಇದನ್ನೂ ಓದಿ | Cyclone Mandous‌ | ಚಂಡಮಾರುತ ಎಫೆಕ್ಟ್: ಮಲೆನಾಡಾದ ಬಿಸಿಲನಾಡು ಕೊಪ್ಪಳ, ವಿಜಯನಗರ: ಎಲ್ಲೆಡೆ ಶೀತಗಾಳಿ, ಮಳೆ

Exit mobile version