ಬೆಂಗಳೂರು: ಬೆಳಗ್ಗೆ ಬಿಸಿಲಿದ್ದರೆ, ಮಧ್ಯಾಹ್ನದ ಹೊತ್ತಿಗೆ ಮೋಡ ಕವಿದ ವಾತಾವರಣ, ಸಂಜೆಯಾದರೆ ಹಿಡಿದುಕೊಳ್ಳುವ ಮಳೆ. ಹೀಗೆ ಗಳಿಗೆಗೊಂದು ವಾತಾವರಣಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಸೋಮವಾರವೂ ವಿವಿಧ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಗುಡುಗು, ಮಿಂಚಿನ ಮಳೆಯಾಗುವ (Weather report) ಸಾಧ್ಯತೆ ಇದೆ.
ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಗುಡುಗು, ಮಿಂಚಿನೊಂದಿಗೆ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಕರಾವಳಿ ತೀರದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಈ ಸಮಯದಲ್ಲಿ ಗಾಳಿ ವೇಗವೂ ಗಂಟೆಗೆ 30-40 ಕಿ.ಮೀ ಬೀಸಲಿದೆ. ಹೀಗಾಗಿ ಇಂತಹ ವಾತಾವರಣದಲ್ಲಿ ಮೀನುಗಾರಿಕೆಗೆ ಇಳಿಯುವುದರಿಂದ ಅಪಾಯ ಜಾಸ್ತಿ ಇರಲಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಉತ್ತರ ಕನ್ನಡ ಮಂದಿಗೆ ಸೋಮವಾರ ಬೆಳಗ್ಗೆ ಹೊನ್ನಾವರ, ಕುಮಟಾ, ಭಟ್ಕಳ, ಕಾರವಾರ ಭಾಗದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುತ್ತಿದೆ.
ಇತ್ತ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಕೆಲವು ಜಿಲ್ಲಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದ್ದರೆ, ಗರಿಷ್ಠ ಉಷ್ಣಾಂಶವು ಏರಿಕೆ ಆಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮತ್ತು ಕರಾವಳಿಯ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ 3-4 ಡಿಗ್ರಿ ಸೆಲ್ಸಿಯಸ್ ಹಾಗೂ ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ.
ಕಳೆದೊಂದು ವಾರದಿಂದ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ತಾಪಮಾನ ಏರಿಕೆ ಕಂಡಿದೆ. ಈ ತೀವ್ರವಾದ ಬಿಸಿಲಿಗೆ ಹೆಚ್ಚು ಸಮಯ ಮೈ ಒಡ್ಡಿದ್ದರೆ ಅಪಾಯ ಕಟ್ಟಿಟ್ಟಬುತ್ತಿ ಎಂದು ವೈದ್ಯರು ಸೂಚಿಸಿದ್ದಾರೆ. ಮುಂಬರುವ ದಿನಗಳಲ್ಲಿ ತಾಪಮಾನ ಇನ್ನಷ್ಟು ಏರಿಕೆ ಆಗುವ ಸಾಧ್ಯತೆ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹೊರಗೆ ಹೋಗಲು ಯಾವುದು ಬೆಸ್ಟ್ ಟೈಂ?
ಗಳಿಗೆಗೊಂದು ವಾತಾವರಣ ಇರುವುದರಿಂದ ನೋಡಿಕೊಂಡು ಹೊರಗೆ ಓಡಾಡಿ. ಸುಡು ಬಿಸಿಲಿನ ಕಾರಣಕ್ಕೆ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆ ತನಕ ಹೊರಗೆ ಹೋಗಬೇಡಿ. ಇದು ಇನ್ನಷ್ಟು ದೇಹವನ್ನು ಆಯಾಸಕ್ಕೆ ದೂಡುತ್ತದೆ. ಏನೇ ಕೆಲಸ ಇದ್ದರೂ ಬೆಳಗ್ಗೆ 11 ಗಂಟೆಯೊಳಗೆ, 4 ಗಂಟೆ ನಂತರ ಮಾಡಿಕೊಳ್ಳುವುದು ಉತ್ತಮ. ಒಂದು ವೇಳೆ ಹೋಗಲೇಬೇಕಾದ ಪರಿಸ್ಥಿತಿ ಇದ್ದರೆ, ತಲೆಗೆ ಟೋಪಿ ಅಥವಾ ಕೊಡೆ ಹಿಡಿದು ಬಿಸಿಲಿನಿಂದ ರಕ್ಷಣೆ ಪಡೆಯಬಹುದು. ಮಳೆ ಇದ್ದರೂ ಕೂಡ ಧಗೆ ಮಾತ್ರ ಹೆಚ್ಚಾಗಿ ಇರಲಿದೆ. ದೇಹವನ್ನು ನಿರ್ಜಲಿಕರಣ ಆಗದಂತೆ ನೋಡಿಕೊಳ್ಳಲು ನೀರು, ಮಜ್ಜಿಗೆ, ಎಳನೀರು, ಹಣ್ಣಿನ ಜ್ಯೂಸ್ ಕುಡಿಯುವುದು ಒಳಿತು.
ಇದನ್ನೂ ಓದಿ: Mansoon Health Tips : ಮಳೆಗಾಲದಲ್ಲಿ ವೈರಲ್ ಸೋಂಕು ತಡೆಯುವುದು ಹೇಗೆ?
ಪ್ರಮುಖ ನಗರಗಳಲ್ಲಿನ ಇಂದಿನ ಹವಾಮಾನ ಹೀಗಿದೆ
ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್)
ಕಲಬುರಗಿ: 42 ಡಿ.ಸೆ – 28 ಡಿ.ಸೆ
ಗದಗ: 37 ಡಿ.ಸೆ – 23 ಡಿ.ಸೆ
ಚಿತ್ರದುರ್ಗ: 35 ಡಿ.ಸೆ – 23 ಡಿ.ಸೆ
ಬೆಳಗಾವಿ: 36 ಡಿ.ಸೆ – 21 ಡಿ.ಸೆ
ಕಾರವಾರ: 36 ಡಿ.ಸೆ – 27 ಡಿ.ಸೆ
ಮಂಗಳೂರು: 35 ಡಿ.ಸೆ – 26 ಡಿ.ಸೆ
ಹೊನ್ನಾವರ: 34 ಡಿ.ಸೆ- 25 ಡಿ.ಸೆ
ಬೆಂಗಳೂರು ನಗರ: 33 ಡಿ.ಸೆ – 22 ಡಿ.ಸೆ
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ