ಬೆಂಗಳೂರು: ಕರ್ನಾಟಕದ ಕರಾವಳಿ ಭಾಗದಲ್ಲಿ ಗುಡುಗು ಸಹಿತ ಭಾರಿ (Rain News) ಮಳೆಯಾಗುತ್ತಿದ್ದು, ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಹವಾಮಾನ ಇಲಾಖೆ (weather report) ಮುನ್ಸೂಚನೆಯನ್ನು ನೀಡಿದೆ.
ಕರಾವಳಿ, ದಕ್ಷಿಣ ಒಳನಾಡು ಪ್ರವೇಶಿಸಿದ್ದ ಮುಂಗಾರು ಇದೀಗ ರಾಜ್ಯ ಎಲ್ಲ ಭಾಗಗಳಲ್ಲೂ ಪ್ರವೇಶಿಸಿದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗುಡುಗು, ಮಿಂಚಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕಡಲ ತೀರದಲ್ಲಿ ಬಿರುಗಾಳಿಯು ಗಂಟೆಗೆ 40-50 ಕಿ.ಮೀ ನಿಂದ 55 ಕಿ.ಮೀ ವೇಗದಲ್ಲಿ ಬೀಸಲಿದೆ. ಹೀಗಾಗಿ ಈ ಸಮಯದಲ್ಲಿ ಮೀನುಗಾರಿಕೆಗೆ ಇಳಿಯದಂತೆ ಸೂಚನೆ ನೀಡಲಾಗಿದೆ.
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಜಿಲ್ಲೆಗಳಾದ ಬೀದರ್, ಕಲಬುರಗಿ, ಯಾದಗಿರಿ, ಧಾರವಾಡ, ಬೆಳಗಾವಿ, ರಾಯಚೂರು, ಹಾವೇರಿ, ಗದಗ, ಬಾಗಲಕೋಟೆ ಸೇರಿದಂತೆ ಬಳ್ಳಾರಿ, ವಿಜಯಪುರ, ಕೊಪ್ಪಳ ಮತ್ತು ವಿಜಯನಗರದಲ್ಲೂ ಮಳೆಯ ಅಬ್ಬರ ಇರಲಿದೆ.
ಮಲೆನಾಡಿನ ಭಾಗವಾದ ಶಿವಮೊಗ್ಗ ಜಿಲ್ಲೆಯಾದ್ಯಂತ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹಾಸನ, ಚಿಕ್ಕಮಗಳೂರು ಮತ್ತು ಕೊಡಗಿನಲ್ಲಿ ಗುಡುಗು ಇರಲಿದ್ದು, ಸಾಧಾರಣ ಮಳೆಯಾಗಲಿದೆ. ಬೆಂಗಳೂರಿನ ವ್ಯಾಪ್ತಿಯಲ್ಲಿ ಗುಡುಗು ಇರಲಿದ್ದು ಜಿಟಿಜಿಟಿ ಮಳೆಯ ಜತೆಗೆ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಜೂ.23 ರಂದು ಮುಂಗಾರು ಕರಾವಳಿಯಲ್ಲಿ ಚುರುಕಾಗಿದ್ದರೆ, ಉತ್ತರ ಒಳನಾಡಿನಲ್ಲಿ ಸಾಮಾನ್ಯವಾಗಿತ್ತು. ದಕ್ಷಿಣ ಒಳನಾಡಿನಲ್ಲಿ ದುರ್ಬಲವಾಗಿತ್ತು. ಕಾರವಾರದಲ್ಲಿ 14ಸೆಂ.ಮೀ ಮಳೆಯಾಗಿದ್ದರೆ, ಹೊನ್ನಾವರದಲ್ಲಿ 12 ಸೆಂ.ಮೀ ಮಳೆಯಾಗಿದೆ. ಇತ್ತ ಮಂಕಿ, ಕುಮಟಾದಲ್ಲಿ ತಲಾ 10 ಹಾಗೂ ಗೋಕರ್ಣ, ಶಿರಾಲಿಯಲ್ಲಿ ತಲಾ 9 ಸೆಂ.ಮೀ ಮಳೆಯಾಗಿರುವ ವರದಿ ಆಗಿದೆ.
ಮನೆಗಳಿಗೆ ನುಗ್ಗುತ್ತಿರುವ ಕಲ್ಲು ಮಿಶ್ರಿತ ನೀರು
ಕರಾವಳಿಯಲ್ಲಿ ಭರ್ಜರಿ ಮಳೆಯಾಗುತ್ತಿದ್ದು, ನಿರಂತರ ಮಳೆಗೆ ಕಾರವಾರದ ಬೈತಖೋಲ ಗುಡ್ಡದಿಂದ ಮನೆಗಳಿಗೆ ನೀರು ನುಗ್ಗುತ್ತಿದೆ. ಧಾರಾಕಾರ ಮಳೆಗೆ ಗುಡ್ಡದಿಂದ ಹಳ್ಳದಂತೆ ನೀರು ಹರಿಯುತ್ತಿದೆ. ಇತ್ತ ಕೆಲ ತಿಂಗಳ ಹಿಂದೆ ರಸ್ತೆ ನಿರ್ಮಾಣಕ್ಕಾಗಿ ಗುಡ್ಡ ಕೊರೆಯಲಾಗಿದೆ. ಆದರೆ ಭಾರೀ ಮಳೆಗೆ ಗುಡ್ಡ ಕೊರೆದ ಪ್ರದೇಶ ಕುಸಿಯುವ ಭೀತಿ ಹೆಚ್ಚಾಗಿದೆ. ಗುಡ್ಡ ಕೊರೆದ ಕಾರಣಕ್ಕೆ ಮನೆಗಳಿಗೆ ನೀರು ನುಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇತ್ತ ಜೆಸಿಬಿ ಮೂಲಕ ರಸ್ತೆಗೆ ಕುಸಿದು ಬೀಳುತ್ತಿರುವ ಕಲ್ಲುಗಳನ್ನು ಅಧಿಕಾರಿಗಳು ತೆರವು ಮಾಡುತ್ತಿದ್ದಾರೆ. ಮುಂದೆ ಮಳೆ ಹೆಚ್ಚಾದರೆ ಅವಘಡ ಎದುರಾಗುವ ಆತಂಕದಲ್ಲಿ ನಿವಾಸಿಗಳು ದಿನದೂಡುತ್ತಿದ್ದಾರೆ.
ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ
ಜೂನ್ 24ರಂದು ಯಾದಗಿರಿ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ. ಶಹಾಪುರದಲ್ಲಿ ವರುಣನ ಆರ್ಭಟ ಜೋರಾಗಿತ್ತು. ಇತ್ತ ತಾಪಮಾನ ಏರಿಕೆಯಿದ್ದ ಕಂಗಲಾಗಿದ್ದ ಬೆಳಗಾವಿ ಜನತೆಗೆ ವರುಣ ತಂಪೆರೆದಿದ್ದಾನೆ. ಕಳೆದ ಅರ್ಧ ಗಂಟೆಯಿಂದ ಮಳೆಯ ಸಿಂಚನವಾಗಿದ್ದು, ವಾತಾವರಣ ಕೂಲ್ ಆಗಿದೆ. ಬಾಗಲಕೋಟೆಯ ವಿದ್ಯಾಗಿರಿ, ನವನಗರ ಸೇರಿ ಕೆಲವು ಕಡೆಗಳಲ್ಲಿ ತುಂತುರು ಮಳೆಯಾಗಿದೆ.
ಇದನ್ನೂ ಓದಿ: Rain News: ಮಳೆಗಾಗಿ ಮುಸ್ಲಿಮರಿಂದ ಕಣ್ಣೀರ ಪ್ರಾರ್ಥನೆ; ಇಂದು ಮಳೆಯಾಗದಿದ್ದರೆ ನಾಳೆಯೂ ಅಲ್ಲಾಗೆ ಮೊರೆ
ರೇಷ್ಮೆನಾಡು ರಾಮನಗರದಲ್ಲಿ ವರುಣ ಅಬ್ಬರಿಸುತ್ತಿದ್ದಾನೆ. ಸಂಜೆ ವೇಳೆಗೆ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತ್ತು. ವಾಹನ ಸವಾರರ ಪರದಾಟಬೇಕಾಯಿತು, ಮತ್ತೊಂದು ಕಡೆ ಕೆಲಸ ಮುಗಿಸಿ ಮನೆಗೆ ಹೋಗಬೇಕಾದವರು ಮಳೆಗೆ ಸಿಕ್ಕಿಹಾಕಿಕೊಂಡರು. ರಾಯಚೂರಿನ ಮಸ್ಕಿ, ಸಿಂಧನೂರು, ಲಿಂಗಸಗೂರು ಭಾಗದಲ್ಲಿ ಎರಡು ಗಂಟೆಗಳ ಕಾಲ ವಿಪರೀತ ಮಳೆಯಾಗುತ್ತಿದೆ. ವರುಣನ ಆಗಮನದಿಂದ ರೈತರ ಮುಖದಲ್ಲಿ ಸಂತಸ ಮೂಡಿದೆ. ಕೆಲ ತಿಂಗಳಿಂದ ಮಳೆ ಬಾರದೆ ರೈತರು ಕಂಗಲಾಗಿದ್ದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ