Site icon Vistara News

Weather Report : ಅಂತೂ ಧರೆಗೆ ಅಪ್ಪಳಿಸಿದ ಮಳೆ; ನಾಳೆ 20 ಜಿಲ್ಲೆಗಳಲ್ಲಿ ವರ್ಷಧಾರೆ

Rain Image

ಬೆಂಗಳೂರು: ಕರಾವಳಿ ಭಾಗದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುತ್ತಿದ್ದು, ಮಲೆನಾಡು, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲೂ ಗುಡುಗು ಸಹಿತ ಭಾರಿ ಮಳೆಯಾಗುವ (Rain News) ಎಚ್ಚರಿಕೆಯನ್ನು ಹವಾಮಾನ ಇಲಾಖೆ (Weather report) ನೀಡಿದೆ. ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ (Rain Alert) ಸಾಧ್ಯತೆಯಿದೆ.

ಕರಾವಳಿ ಭಾಗವಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ನೀಡಲಾಗಿದ್ದು, ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಮಲೆನಾಡು ಭಾಗವಾದ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಮತ್ತು ಕೊಡಗಿನಲ್ಲಿ ಅಬ್ಬರದ ಮಳೆಯಾಗಲಿದೆ.

ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ವ್ಯಾಪಕದಿಂದ ಲಘು ಮಳೆಯಾಗಲಿದ್ದು, ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯಾಗಲಿದೆ. ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಗುಡುಗು, ಸಿಡಿಲಿನ ಮಳೆಯಾಗುವ ಸಾಧ್ಯತೆ ಇದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಗುಡುಗು ಜತೆಗೆ ಕೆಲವು ಭಾರೀ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಹಲವೆಡೆ ಬಿರುಗಾಳಿ ಸಹಿತ ಭಾರಿ ಮಳೆ

ಜು.3ರ ಸಂಜೆ ಹೊತ್ತಿಗೆ ವಿವಿಧ ಜಿಲ್ಲೆಗಳಲ್ಲಿ ಬಿರುಗಾಳಿ ಧಾರಾಕಾರ ಮಳೆಯಾಗಿದೆ. ಮಳೆಯಿಲ್ಲದೆ ಕಂಗಾಲಾಗಿದ್ದ ಜನರು ನಿಟ್ಟುಸಿರು ಬಿಡುವಂತಾಗಿದೆ. ಮಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ಪಂಪ್ವೆಲ್ ವೃತ್ತ ಜಲಾವೃತಗೊಂಡಿತ್ತು.

Rainfall in Bengaluru

ಪಂಪ್ವೆಲ್ ಫ್ಲೈಓವರ್ ಅಡಿಭಾಗದಲ್ಲಿ ನೀರು ಹರಿದು ಹೋಗದೆ ಸಂಪೂರ್ಣ ಜಲಾವೃತದಿಂದಾಗಿ ವಾಹನ ಸಂಚಾರಕ್ಕೆ ತೊಡಕುಂಟಾಗಿತ್ತು. ಪರಿಣಾಮ ರಸ್ತೆಯಲ್ಲಿ ಸಾಲುಗಟ್ಟಿ ವಾಹನಗಳು ನಿಂತಿದ್ದವು. ಕಳೆದ ಎರಡು ಗಂಟೆಯಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ.

Rainfall in Bengaluru

ಮುಂಗಾರು ಮಳೆ ಇಲ್ಲದೆ ಕಂಗಲಾಗಿದ್ದ ಕೊಪ್ಪಳ ಮಂದಿಗೆ ವರುಣ ಕೃಪೆ ತೋರಿದ್ದಾನೆ. ಸತತ ಒಂದು ಗಂಟೆ ತನಕ ಗುಡುಗು, ಬಿರುಗಾಳಿ ಸಹಿತ ಅಬ್ಬರದ ಮಳೆಯಾಗುತ್ತಿದೆ. ಕೊಪ್ಪಳ ನಗರದ ಟಾಂಗಾಕೂಟದ ಬಳಿ ಚರಂಡಿ ವ್ಯವಸ್ಥೆ ಸರಿ ಇಲ್ಲದ ಕಾರಣದಿಂದಾಗಿ ಭಾರಿ ಮಳೆಗೆ ಚರಂಡಿ ನೀರು ರಸ್ತೆಯ ಮೇಲೆ ಹರಿದಿತ್ತು. ಇದರಿಂದಾಗಿ ವಾಹನ ಸವಾರರು ಪರದಾಡಬೇಕಾಯಿತು.

ಬಿಸಿಲಿನ ಬಸವಳಿದಿದಿದ್ದ ಧರೆಗೆ ವರುಣ ತಂಪೆರೆದಿದ್ದಾನೆ. ವಿಜಯನಗರದ ಹೊಸಪೇಟೆ, ಹಂಪಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಡುಗು, ಸಿಡಿಲು ಸಮೇತ ಮಳೆಯಾಗುತ್ತಿದೆ. ವರುಣನ ಆಗಮನದಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕತ್ತಲು ಕವಿದಂತೆ ಮಳೆಯಾಗುತ್ತಿದೆ. ವಿಜಯನಗರದ ಹೊಸಪೇಟೆಯಲ್ಲಿ ಭಾರಿ ಮಳೆಗೆ ದನದ ಕೊಟ್ಟಿಗೆಗೆ ನೀರು ನುಗ್ಗಿದೆ.

ಕೊಟ್ಟಿಗೆ ಜಾಗವೆಲ್ಲ ನೀರುಪಾಲು

ಒಂದು ಕಡೆ ಮಳೆ ನೀರಲ್ಲೇ ಜಾನುವಾರುಗಳು ನಿಂತಿದ್ದರೆ, ಅವುಗಳಿಗೆ ತಂದಿದ್ದ ಮೇವು ನೀರುಪಾಲಾಗಿದೆ. ಹೊಸಪೇಟೆ ತಾಲೂಕಿನ ಹಂಪಿ ರಸ್ತೆಯ ಎರಡನೇ ವಾರ್ಡ್‌ನ ಹನುಮೇಶ್ ಎಂಬುವವರಿಗೆ ಸೇರಿದ್ದಾಗಿದ್ದು, ಪ್ರತಿ ಬಾರಿ ಮಳೆ ಬಂದಾಗ ನಮಗೆ ಗೋಳು ತಪ್ಪೋದಿಲ್ಲ ಎಂದಿದ್ದಾರೆ.

ಇತ್ತ ರಾಜಧಾನಿ ಬೆಂಗಳೂರಿನ ಹಲವೆಡೆ ಭಾರಿ ಮಳೆಯಾಗಿದೆ. ಮಲ್ಲತಹಳ್ಳಿ, ಬೆಂಗಳೂರು ವಿವಿ, ಮೈಸೂರು ರಸ್ತೆ ಹಾಗೂ ಶಿವಾಜಿನಗರ, ವಿಧಾನಸೌಧ, ಕಬ್ಬನ್‌ ಪಾರ್ಕ್‌ ಸುತ್ತಮುತ್ತ ಧಾರಾಕಾರ ಮಳೆಯಾಗಿದೆ. ಮಳೆಯಿಂದಾಗಿ ನಾಗರಭಾವಿ ರಸ್ತೆ ಹೊಳೆಯಂತಾಗಿತ್ತು. ನೀರು ತುಂಬಿದ ರಸ್ತೆಯಲ್ಲಿ ವಾಹನ ಸವಾರರು ಪರದಾಡಿದರು. ನದಿಯಂತಾದ ರಸ್ತೆಯಲ್ಲೇ ವಾಹನ ಚಲಾಯಿಸಿದರೆ ಕೆಲವರು ಸೈಲೆನ್ಸರ್‌ಗೆ ನೀರು ಹೋಗುತ್ತದೆ ಎಂದು ರಸ್ತೆ ಬದಿಯಲ್ಲಿ ನಿಂತಿದ್ದರು.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version